Statue of Liberty……

ಸ್ವಾತಂತ್ರ್ಯ ದೇವತೆಯ ಪ್ರತಿಮೆಯನ್ನು ಸಾಂಕೇತಿಕವಾಗಿ ನಿರ್ಮಿಸಿ ಅದರ ಮೂಲಕ ವಿಶ್ವಕ್ಕೆ ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನವ ಹಕ್ಕುಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮಾರ್ಗದರ್ಶಕವಾಗಿದ್ದ ಅಮೆರಿಕ, ತನ್ನೆಲ್ಲಾ ಶ್ರೀಮಂತಿಕೆ, ದುರಹಂಕಾರ, ದೌರ್ಬಲ್ಯಗಳ ನಡುವೆಯೂ ವಿಶ್ವದ ದೊಡ್ಡಣ್ಣನಂತೆ ಕಾರ್ಯ ನಿರ್ವಹಿಸುತ್ತಿತ್ತು.

ಶೋಷಣೆ ಮುಕ್ತ – ಸಮ ಸಮಾಜದ ಮಾರ್ಕ್ಸ್ ಸಿದ್ದಾಂತದ ಆಧಾರದ ಮೇಲೆ ಸುಮಾರು 140 ಕೋಟಿಗೂ ಹೆಚ್ಚು ಮಾನವ ಸಂಪನ್ಮೂಲಗಳನ್ನು ನಿಯಂತ್ರಿಸಿ, ಸಮಾನತೆಯ ಹೆಸರಿನಲ್ಲಿ ಶಿಸ್ತಿನ ನೆಪದಲ್ಲಿ ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳನ್ನು ಬಹಿರಂಗವಾಗಿಯೇ ಹತ್ತಿಕ್ಕಿ ತನ್ನ ಪರಿಶ್ರಮದ ಮೂಲಕ ಇಂದು ದೊಡ್ಡಣ್ಣ ಅಮೆರಿಕ ಎದುರಿಗೆ ಸವಾಲು ಎಸೆದಿರುವ ಚೀನಾ ಮತ್ತೊಂದು ಕಡೆ.

ಶೀತಲ ಸಮರದ ನಂತರ ವಿಭಜನೆ ಹೊಂದಿ ತನ್ನ ಶಕ್ತಿ ಸ್ವಲ್ಪ ಮಟ್ಟಿಗೆ ಕುಂದಿದ್ದರು ಈಗಲೂ ಅಮೆರಿಕಾಗೆ ಸವಾಲು ಎಸೆಯುವಷ್ಟು ಬಲಾಡ್ಯವಾಗಿಯೇ ಮುಂದುವರೆದಿರುವ ರಷ್ಯಾ.

ತನ್ನ ತೈಲ ಶ್ರೀಮಂತಿಕೆಯ ಮೇಲೆ ಅಮೆರಿಕದ ನೆರಳಲ್ಲಿ ತನ್ನದೇ ರೀತಿಯ ಆಡಳಿತ ನಡೆಸುತ್ತಿರುವ ಕೆಲವು ಅರಬ್ ರಾಷ್ಟ್ರಗಳು ಮತ್ತು ಅಲ್ಲಿಯೇ ಆಂತರಿಕ ಕಲಹಗಳಿಂದ ಜರ್ಝರಿತವಾಗಿ ಪ್ರಜಾಪ್ರಭುತ್ವವೂ ಅಲ್ಲದ , ಕಮ್ಯುನಿಸಂಗೂ ಒಗ್ಗದ ಇನ್ನೊಂದಿಷ್ಟು ಇಸ್ಲಾಂ ರಾಷ್ಟ್ರಗಳು,

ಕಗ್ಗತ್ತಲೆಯ ಖಂಡ ಎಂದು ಕರೆಯಲ್ಪಡುತ್ತಿದ್ದ ಆಫ್ರಿಕಾದ ದೇಶಗಳು ಬಡತನ ಹಿಂಸೆ ಅಜ್ಞಾನಗಳ ಜೊತೆ ಸೆಣಸುತ್ತಾ ವಿದೇಶಿ ದಾಳಿಕೋರರ ಪ್ರಭಾವದಿಂದಾಗಿ ಅತ್ತ ಸ್ವಂತಿಕೆಯನ್ನೂ ಉಳಿಸಿಕೊಳ್ಳದೆ ದೊಡ್ಡ ಮಟ್ಟದ ಅಭಿವೃದ್ಧಿಯನ್ನು ಸಾಧಿಸದೆ ಹೇಗೋ ಉಸಿರಾಡುತ್ತಿವೆ.

ಆಸ್ಟ್ರೇಲಿಯಾ – ನ್ಯೂಜಿಲೆಂಡ್ ಮತ್ತು ಯುರೋಪಿಯನ್ ದೇಶಗಳು ವಿಶ್ವ ಯುದ್ಧಗಳ ನಂತರ ಒಂದಷ್ಟು ನಾಗರಿಕ ಪ್ರಜ್ಞೆಯ ರಾಷ್ಟ್ರಗಳಾಗಿ ಸಮಾಧಾನಕರ ಜೀವನ ಶೈಲಿಯನ್ನು ರೂಪಿಸಿಕೊಂಡಿದ್ದವು.

ಜಪಾನ್ ಕೊರಿಯಾ ವಿಯಟ್ನಾಂ ಗಳು ಮಧ್ಯಮ ಮಾರ್ಗದ ಶ್ರಮಜೀವಿಗಳ ದೇಶಗಳು. ಬ್ರೆಜಿಲ್, ಅರ್ಜೆಂಟೈನಾ, ಮೆಕ್ಸಿಕೊ ದೇಶಗಳು ಸಹ ಇದೇ ಗುಂಪಿಗೆ ಸೇರುತ್ತವೆ. ಆದರೆ ಇಲ್ಲಿ ಬಡತನ ಮತ್ತು ಅಪರಾಧಗಳು ಸ್ವಲ್ಪ ಹೆಚ್ಚು.

ಇವುಗಳ ಮಧ್ಯೆ ತನ್ನ ಅಲಿಪ್ತ ನೀತಿಯನ್ನು ಅನುಸರಿಸಿಕೊಂಡು ವೇಗವಾಗಿ ಬೆಳೆಯುತ್ತಿದ್ದ ಭಾರತ ಕಳೆದ ಆರು ವರ್ಷಗಳಿಂದ ನಡೆ ನುಡಿಗಳಲ್ಲಿ ಆಕ್ರಮಣಕಾರಿಯಾಗಿ ನಾವು ಸಹ ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗುವ ಸಾಮರ್ಥ್ಯ ಇದೆ ಎಂದು ಹೇಳಿಕೊಂಡು ಮುನ್ನುಗ್ಗುತ್ತಿತ್ತು.

ವಿಶ್ವದ ಈ ಆಡಳಿತಾತ್ಮಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ನೀವು ಯಾವುದೇ ಸಿದ್ದಾಂತಗಳ ದಾಸರಾಗಿರಬಾರದು. ಒಂದು ಸಿದ್ದಾಂತದ ಬಗ್ಗೆ ಒಲವು ಇರಬಹುದು ಆದರೆ ಅದರ ಅಂಧಾಭಿಮಾನಿಯಾಗಿರಬಾರದು.

ನೀವು ಬಲಪಂಥೀಯ ಹಿನ್ನೆಲೆಯ ಬಂಡವಾಳಶಾಹಿ ವ್ಯವಸ್ಥೆಯ ಪ್ರತಿಪಾದಕರಾಗಿದ್ದರೆ ರಷ್ಯಾ ಚೀನಾ ಮುಂತಾದ ದೇಶಗಳು ನಿಮಗೆ ಶತ್ರು ದೇಶಗಳಂತೆ ಕಾಣಿಸುತ್ತವೆ. ಅದರ ಒಳ್ಳೆಯ ಅಂಶಗಳಿಗಿಂತ ಕೆಟ್ಟ ಘಟನೆಗಳೇ ನಿಮಗೆ ಒಂದು ಉದಾಹರಣೆಯಾಗಿರುತ್ತದೆ.
ನೀವು ಕಾರ್ಲ್ ಮಾರ್ಕ್ಸ್ ನ ಕಮ್ಯುನಿಸಂ, ಚೆಗುವಾರ, ಕ್ಯಾಸ್ಟ್ರೋ, ಲೆನಿನ್, ಸ್ಟಾಲಿನ್ ಗಳ ಅಭಿಮಾನಿಗಳಾಗಿದ್ದರೆ ಬಂಡವಾಳಶಾಹಿ ವ್ಯವಸ್ಥೆಯ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ನಿಮಗೆ ‌ಅತ್ಯಂತ ಕೆಟ್ಟ ದೇಶಗಳಂತೆ ಕಾಣಿಸುತ್ತವೆ.

ಹಾಗೆಯೇ ನೀವು ಇಸ್ಲಾಂ ಧರ್ಮದ ಗಾಢ ನಂಬಿಕೆಯ ಪಂಥದವರಾದರೆ ಸಹಜವಾಗಿ ಅಮೆರಿಕದ ಇಸ್ರೇಲ್ ಗಳು ನಿಮ್ಮ ಶತ್ರುಗಳಂತೆಯೇ ಭಾವಿಸುವಿರಿ.

ಹಿಂದೂ ಧರ್ಮದ ನಂಬಿಕೆಯ ಕಟ್ಟಾ ಪ್ರತಿಪಾದಕರುಗಳಿಗೆ ಇಸ್ಲಾಂ ರಾಷ್ಟ್ರಗಳು ಮೆಚ್ಚುಗೆಯಾಗಲಾರವು. ಅದನ್ನು ದ್ವೇಷಿಸುತ್ತಾರೆ.

ಆದ್ದರಿಂದ ಭೂಮಂಡಲದ ಹಿತದೃಷ್ಟಿಯಿಂದ ಮತ್ತು ಮನುಷ್ಯ ಜನಾಂಗದ ಜೀವನಮಟ್ಟದ ಆಧಾರದಲ್ಲಿ ಯಾವ ವ್ಯವಸ್ಥೆ ಉತ್ತಮ ಎಂಬುದನ್ನು ವಾಸ್ತವ ನೆಲೆಯಲ್ಲಿ ಗ್ರಹಿಸಬೇಕಿದೆ. ಆ ಪೂರ್ವಾಗ್ರಹವನ್ನು ಮೆಟ್ಟಿ ನಿಂತಲ್ಲಿ ನಮಗೆ ವಿಶ್ವದ ರಾಜಕೀಯ ಚರ್ಚಿಸಲು‌ ಸಾಧ್ಯ.

ಇದೀಗ ಕೊರೋನಾ ವೈರಸ್ ವಿಶ್ವದ ಒಂದಷ್ಟು ‌ರಾಜಕೀಯ ಮತ್ತು ‌ಆರ್ಥಿಕ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವ ಸಾಧ್ಯತೆ ಇದೆ. ಮುಖ್ಯವಾಗಿ ಅಮೆರಿಕ ಯೂರೋಪ್ ಚೀನಾ ಮತ್ತು ಭಾರತದ ಮೇಲೆ ಇದರ ಪರಿಣಾಮ ಹೆಚ್ಚಾಗಿರುತ್ತದೆ. ಯೂರೋಪಿಯನ್ ದೇಶಗಳು, ಇಸ್ರೇಲ್, ಯುಎಇ, ಆಸ್ಟ್ರೇಲಿಯಾ ಹೆಚ್ಚು ಕಡಿಮೆ ಅಮೆರಿಕದ ನಿಲುವನ್ನು ಬೆಂಬಲಿಸುತ್ತದೆ. ಆಫ್ರಿಕಾ ತಟಸ್ಥ ನಿಲುವು ಹೊಂದಬಹುದು ಅಥವಾ ಅಲ್ಲಿಯೂ ಇಬ್ಬಾಗವಾಗಿ ಕೆಲವು ದೇಶಗಳು ಅಮೆರಿಕಾವನ್ನು ವಿರೋಧಿಸಬಹುದು.

ವೈಯಕ್ತಿಕವಾಗಿ ಭಾರತ ಚೀನಾ ಅಮೆರಿಕ ಈ ಮೂರು ದೇಶಗಳ ‌ಮುಖ್ಯಸ್ಥರ ಗುಣ ಸ್ವಭಾವಗಳು ಸಹ ಹೇಗೆ ಅವುಗಳ ವಿದೇಶಾಂಗ ನೀತಿಯ ಮೇಲೆ ಪರಿಣಾಮ ಬೀರುತ್ತಿವೆ‌ ಎಂಬುದನ್ನು ಗಮನಿಸಿದರೆ….

ಅಮೆರಿಕದ ಈಗಿನ ಅಧ್ಯಕ್ಷರು ಸ್ವಲ್ಪ ವಾಚಾಳಿ, ವ್ಯಾಪಾರಿ ಮನೋಭಾವ, ಹಣ ಮತ್ತು ಶ್ರೀಮಂತಿಕೆಯ ಒಂದಷ್ಟು ಅಹಂ, ದುಡುಕು ಸ್ವಭಾವ ಮತ್ತು ಅಮೆರಿಕ ದೇಶದ ಸಂವಿಧಾನದ ಮೂಲ ಆಶಯಗಳನ್ನು ನಿರ್ಲಕ್ಷಿಸುವ ರೀತಿಯಲ್ಲಿ ಕಾಣುತ್ತಾರೆ. ನಾನೇ ಬಲಾಢ್ಯ ಎನ್ನುವ ರೀತಿಯಲ್ಲಿ ಎಲ್ಲವನ್ನೂ ನಿರ್ಧರಿಸುತ್ತಾರೆ.

ಚೀನಾದ ಅಧ್ಯಕ್ಷ ಮಾಧ್ಯಮಗಳ ದೃಷ್ಟಿಯಿಂದ ಮೌನಿಯಂತೆ ಕಂಡರೂ ಮಹತ್ವಾಕಾಂಕ್ಷಿಯಂತೆ ಲೆಕ್ಕಾಚಾರ ಹೆಣೆಯುತ್ತಾರೆ. ಅಲ್ಲಿನ ‌ಸಂವಿಧಾನ ತಿದ್ದುಪಡಿ ಮಾಡಿ ಅಜೀವ ಅಧ್ಯಕ್ಷ ಸ್ಥಾನ ಪಡೆದಿದ್ದಾರೆ. ಪ್ರತಿ ನಡೆಯಲ್ಲೂ ಅಮೆರಿಕವನ್ನು ಹಿಂದಿಕ್ಕುವ ಕಾರ್ಯತಂತ್ರ ಹೊಂದಿದ್ದಾರೆ. ಒಳಗೊಳಗೆ ಏನೋ ಲೆಕ್ಕಾಚಾರ ಇರುವಂತೆ ಮೇಲ್ನೋಟಕ್ಕೆ ಕಾಣುತ್ತಾರೆ. ಇತರ ‌ದೇಶಗಳ ಮುಖ್ಯಸ್ಥರಂತೆ ಇವರ ಬಗ್ಗೆ ಹೆಚ್ಚಿನ ಮಾಹಿತಿ ಸಾಮಾನ್ಯರಾದ ನಮಗೆ ಸಿಗುವುದಿಲ್ಲ.

ಇನ್ನು ಭಾರತದ ಪ್ರಧಾನಿಯವರು ಈ ಇಬ್ಬರ ನಡುವಿನ ವ್ಯಕ್ತಿತ್ವದವರು. ಮಹತ್ವಾಕಾಂಕ್ಷಿಯೂ ವಾಚಾಳಿಯೂ ವ್ಯಾಪಾರಿ ಮನೋಭಾವದವರು ಮತ್ತು ಮುದ್ದು ಹೌದು, ಪೆದ್ದು ಹೌದು. ಅಮೆರಿಕ ಮತ್ತು ಚೀನಾ ವಾಸ್ತವವಾಗಿ ಈಗಾಗಲೇ ಬಲಾಢ್ಯ ಶಕ್ತಿಗಳು. ಖಂಡಿತ ಭಾರತ ಅವುಗಳಿಗಿಂತ ಬಹಳ ಕೆಳಗಿದೆ. ಆದರೆ ಇವರು ತಮ್ಮ ಮೇಲ್ನೋಟದ ಧೈರ್ಯದಿಂದ ತಮ್ಮನ್ನೇ ಬೂಸ್ಟ್ ಮಾಡಿಕೊಂಡು ಭಾರತದ ಶಕ್ತಿಯನ್ನು ತೋರಿಸಲು ಶ್ರಮಿಸುತ್ತಿದ್ದಾರೆ.

ಕೊರೋನಾ ನಂತರದ ದಿನಗಳಲ್ಲಿ ಈ ದೇಶಗಳು ನಿಜವಾದ ಅಗ್ನಿಪರೀಕ್ಷೆಗೆ ಒಳಪಡುತ್ತವೆ. ಕೊರೋನಾ ಯಾವ ದೇಶಕ್ಕೆ ಎಷ್ಟು ಹೊಡೆತ ಕೊಡುತ್ತದೆ ಎಂಬುದರ ಮೇಲೆ ಇದು ಅವಲಂಬಿಸಿದೆ.

ಆದಷ್ಟು ಬೇಗ ಚೇತರಿಸಿಕೊಂಡರೆ ಅಂತಹ ದೊಡ್ಡ ಬದಲಾವಣೆ ಆಗುವುದಿಲ್ಲ. ಆದರೆ ತೀವ್ರ ಹೊಡೆತ ಅಮೆರಿಕ ಅಥವಾ ಚೀನಾಕ್ಕೆ ಬಿದ್ದರೆ ಅದರಲ್ಲಿ ಒಂದು ದೇಶ ಇನ್ನೊಂದು ದುರ್ಬಲ ದೇಶದ ಮೇಲೆ ದಬ್ಬಾಳಿಕೆ ಮಾಡಲು ಪ್ರಾರಂಭಿಸುತ್ತದೆ.
ಆಗ ಯುದ್ಧದ ಸನ್ನಿವೇಶ ಸೃಷ್ಟಿಯಾಗುವುದು ಖಚಿತ.

ಏನೇ ಆಗಲಿ ಮನುಷ್ಯ ಜನಾಂಗದ ಉಳಿವಿಗಾಗಿ, ವ್ಯಕ್ತಿ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿದು ಸಮ ಸಮಾಜದ ಏಳಿಗೆಗಾಗಿ ತಮ್ಮ ಶಕ್ತಿಯನ್ನು ಬಳಸುವ ರಾಷ್ಟ್ರಗಳು ವಿಶ್ವದ ನಾಯಕತ್ವ ವಹಿಸಲಿ ದುರಹಂಕಾರಿ ದಬ್ಬಾಳಿಕೆಯ ರಾಷ್ಟ್ರಗಳಿಗೆ ಕೊರೋನಾ ವೈರಸ್ ಪಾಠ ಕಲಿಸಲಿ

Leave a Reply

Your email address will not be published. Required fields are marked *

Related Post

ಕೊರೋನಾ ವೈರಸ್ ಸೃಷ್ಟಿಸಿದ ಮಾನಸಿಕ ತಲ್ಲಣಗಳುಕೊರೋನಾ ವೈರಸ್ ಸೃಷ್ಟಿಸಿದ ಮಾನಸಿಕ ತಲ್ಲಣಗಳು

ಕೃಷಿ ಭೂಮಿಯನ್ನು ಬಿಡದೆ 30/40 ಸೈಟ್ ಗಳಾಗಿ ಸ್ಕೇರ್ ಫೀಟ್ ಲೆಕ್ಕದಲ್ಲಿ ಹಂಚಿಕೊಂಡೆವು. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಒಂದು ಚದರ ಅಡಿಗೆ ಮಾರುಕಟ್ಟೆ ದರದಲ್ಲಿ ಸುಮಾರು 50000 ಇದೆಯಂತೆ……. 500/510/520/530 ರೂಪಾಯಿಗಳ ದರದಲ್ಲಿ ಒಂದು ಗ್ರಾಂಗೆ ಒಂದು ವರ್ಷದ ಅವಧಿಯಲ್ಲಿ ಏರಿಕೆಯಾಗುತ್ತಿತ್ತು ಹಳದಿ ಲೋಹ ಚಿನ್ನ .

ಧರ್ಮಗಳು ಪವಿತ್ರವಲ್ಲ.ಧರ್ಮಗಳು ಪವಿತ್ರವಲ್ಲ.

ಧರ್ಮಗಳು ಪವಿತ್ರವಲ್ಲ.ಧರ್ಮಗಳ ಒಳತಿರುಳು ಪವಿತ್ರ.(ಇದು ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ) ಧರ್ಮದ ಅಂಧಾಭಿಮಾನದಿಂದ ಹೊರಬರದ ಹೊರತು ದೇಶದ ಅಥವಾ ಜಗತ್ತಿನ ಯಾವ ಸಮುದಾಯವು ಮನುಜ ಪ್ರೀತಿಯನ್ನು ಕಾಣಲು ಸಾಧ್ಯವಿಲ್ಲ.ಹುಟ್ಟುವಾಗ ಬೆತ್ತಲೆ!ಹೋಗುವಾಗ ಬೆತ್ತಲೆ!ಈ ನಡುವೆ ಒಳಿತನ್ನು ಬಯಸುತ್ತ ಆನಂದದಿಂದ ಎಲ್ಲೋ ಇರುವ ಸ್ವರ್ಗವನ್ನು ಕಾಣದೆ ಇಲ್ಲೇ ಇರುವ ನಿಸರ್ಗವನ್ನು ಕಾಣಿ. ಈ

ಹುಚ್ಚರ ಸಂತೆಯಲ್ಲಿ ನಿನ್ನನ್ನು ನಿಲ್ಲಿಸಿ ಎಲ್ಲರಿಗೂ ಹೇಳಬೇಕಿದೆಹುಚ್ಚರ ಸಂತೆಯಲ್ಲಿ ನಿನ್ನನ್ನು ನಿಲ್ಲಿಸಿ ಎಲ್ಲರಿಗೂ ಹೇಳಬೇಕಿದೆ

ಬುದ್ಧ ಪೌರ್ಣಮಿಯ ಬೆಳಕಿನಲ್ಲಿ ಮನುಷ್ಯನ ಮೆದುಳಿಗೆ ಕೈ ಹಾಕಿದ ಗೌತಮ ಬುದ್ಧನನ್ನೇ ಹುಡುಕುತ್ತಾ………… ಸಿಗ್ಮಂಡ್ ಫ್ರಾಯ್ಡ್ ಎಂಬುವವನನ್ನು ಪ್ರಖ್ಯಾತ ಮನಶಾಸ್ತ್ರಜ್ಞ ಎಂದು ಕರೆಯಲಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಹಿನ್ನಲೆಯ ಆತನ ವಿಚಾರಗಳು ವಿಶ್ವವ್ಯಾಪಿ ಮನ್ನಣೆ ಪಡೆದಿವೆ. ಆದರೆ,ಭಾರತದ ಸಂಸ್ಕೃತಿಯ ಹಿನ್ನೆಲೆಯಲ್ಲಿಖ್ಯಾತ ಮನಃಶಾಸ್ತ್ರಜ್ಞ ಯಾರಿರಬಹುದು ? ನನ್ನ ದೃಷ್ಟಿಯಲ್ಲಿ ಅದು ಸಿದ್ದಾರ್ಥನೆಂಬ