ಅನುಭವಿಸಿದ್ದು ಸಂಪೂರ್ಣ ಭರತವರ್ಷ..!!

ಎಲ್ಲವದನ್ನೂ ಬಿಟ್ಟು ಹೊರಟಿದ್ದರಲ್ಲ..!!

ಪಾಂಡವರು , ಅದೊಂದು ಮಹಾ ಪ್ರಸ್ಥಾನ..!

 

ಹುಟ್ಟಿದ್ದು ಶಕುನಿಯಿಂದ,, ಮುಗಿದದ್ದು ಕೃಷ್ಣನಿಂದ

ಖಾಂಡವವನ ದಹನ..ತಕ್ಷಕನ ಪರಿಪಾಟಲು

ಕೊನೆಗೊಂದು  ರಾಜಸೂಯ ಯಾಗ…

ತುಂಬಿದ ಸಭೆಯಲ್ಲೊಮ್ಮೆ ಬಿದ್ದವನನ್ನು ಕಂಡು

ನಕ್ಕಿದ್ದೇ ನೆಪವಾಯ್ತಲ್ಲ.. ಸುಯೋಧನನಿಗೆ,,

ಜೊತೆಗಿದ್ದ ಮಾವ ಶಕುನಿ,, ಮಿತ್ರ  ಅಂಗರಾಜ!!

ಕೊನೆಗೆ ಧರ್ಮರಾಯ.. ಎಲ್ಲರೂ ಸೇರಿಯೇ ಬರೆದರಲ್ಲ

ಶೀಲದ ಹರಾಜಿಗೊಂದು ಮುನ್ನುಡಿ..!!

 

ಅಬ್ಬಬ್ಬಾ.. ಅದೇನು ? ಕುಲವಧುವಿನ ವಸ್ತ್ರಾಪಹರಣ,,!

ಆಡಿದ್ದು ಗಂಡಂದಿರು,, ಅನುಭವಿಸಿದ್ದು ಇವಳು.. !

ತಾನೇ ಪರರ ಪಾಲು.!  ಧರ್ಮಾಚರಣೆಯ ಕುರುಡು ಪ್ರಲಾಪ !

ಆದರೂ  ಹೆಂಡತಿಯನ್ನು ಪಣಕ್ಕಿಡಲು ಅವ ಸ್ವತಂತ್ರನಂತೆ.. !

ಇದು ಧರ್ಮರಾಯನದ್ದೇ ಮಾತು..

ಸ್ವಂತ ಚಟಗಳಿಗೆ ಧರ್ಮದ ಲೇಪನ!!

 

ಅದೆಂಥ ಯುದ್ಧ !.. ಅವರದ್ದು ಹನ್ನೊಂದು..

ಜೊತೆಗೊಂದು ಅಕ್ಷೋಹಿಣಿಯ ನಾರಾಯಣೀ ಸೇನೆ !

ಇವರದ್ದು ಏಳು.. ಜೊತೆಗೊಬ್ಬ ನಿಶಸ್ತ್ರೀ ಕೃಷ್ಣ..!

ಎಲ್ಲರೂ ಮುಗಿದರಲ್ಲ.. ಪಿತಾಮಹ , ಗುರು, ಮಿತ್ರ, ಶತ್ರು

ಪಿತೃಗಳು, ಅಬ್ಬಬ್ಬಾ ಕೊನೆಗೆ ಮಕ್ಕಳೂ, ಮರಿಮಕ್ಕಳೂ

ಸ0ಫೂರ್ಣ ಕುರುವಂಶವೇ ಮಲಗಿತಲ್ಲ.!!

 

ಯಾರ ತಪ್ಪಿಗೆ ಯಾರಿಗೆ ಶಿಕ್ಷೆ ? ನಕ್ಕವರ್ಯಾರೋ ?

ಆಡಿದವರ್ಯಾರೋ ? ಅನುಭವಿಸಿದ್ದು ಸಂಪೂರ್ಣ ಭರತವರ್ಷ..!!

ಮತ್ತದೇ ನಗು.. ಶ್ರೀ ಕೃಷ್ಣನ  ಮುಗುಳು ನಗು..!

ಎಲ್ಲರಿಗಿಂತೂ ಮುಂದಿದ್ದನಲ್ಲ..  ಕಿಲಾಡಿ ಕೃಷ್ಣ..!

ಧರ್ಮರಾಯ ಧರ್ಬೆಯಾದರೆ.. ಕೃಷ್ಣ ಪುರೋಹಿತನಾದ..

ಮತ್ತದೇ ಸ್ನಿಗ್ಧ ನಗು ಎಲ್ಲವನ್ನೂ ಮುಗಿಸಿ, ಮಲಗಿಸಿ ಬಿಟ್ಟಿತು,!!

 

ಇಷ್ಠಾದರೂ ನಾವದರಿಂದ ಪಾಠ ಕಲಿಯಲಿಲ್ಲ..

ಇನ್ನೂ ಬೇಕು ರಕ್ತ,,, ಬೇಕೇ ಬೇಕು ಯುದ್ಧ,,!

ನಾವೆಲ್ಲ ರಕ್ತಪಿಪಾಸುಗಳಾಗಿದ್ದೇವೆ..!!

ಧರ್ಮದೊಳಗೇ ಇದ್ದೇವೆ..  ಮಾಡಬಾರದ್ದನ್ನು

ಮಾಡುತ್ತಿದ್ದೇವೆ.. ಅಂದು ಯುಗಪುರುಷ ಕೃಷ್ಣನಿದ್ದ..!

ಇಂದ್ಯಾರು ಬರುವವರು ? ನಾವೇ ನಮ್ಮ ಮೃತ್ಯುವಾಗಿರುವಾಗ

ಇನ್ಯಾರು ಬಂದಾರು?.. ಇನ್ಯಾರು ಬಂದಾರು..?

This entry was posted in ಕವನ and tagged , , , , , , , , , , , , , . Bookmark the permalink.

0 Responses to ಅನುಭವಿಸಿದ್ದು ಸಂಪೂರ್ಣ ಭರತವರ್ಷ..!!

  1. ‘ಧರ್ಮಾಚರಣೆಯ ಕುರುಡು ಪ್ರಲಾಪ’ ಇಂದಿಗೂ ನಾವು ಮುಂದುವರೆಸಿದ್ದೇವೆ. ಮಹಾಭಾರತದ ಚಿತ್ರಣ ಚಿಕ್ಕ ಕವಿತೆಯಲ್ಲಿ ಪ್ರಸ್ತುತ ಮಾಡುವ ಪ್ರಯತ್ನ ಪ್ರಭಾವಿಯಾಗಿ ಮೂಡಿದೆ.

Leave a Reply

Your email address will not be published. Required fields are marked *