​Copyright Harish Athreya & Vinuta Patil . All Rights Reserved.

​​ಕನ್ನಡಿಯೊಳಗಿನ ಚಿತ್ರಗಳು

ಕನ್ನಡಿಯೊಳಗೆ /

ದಿನ ದರ್ಪಣ

ಕನ್ನಡಿಯೊಳಗೆ ಬಂದವರು

ಬಡವರಿಗೆ ನೆರವು ನೀಡುವ ಸಜ್ಜನರೂ ಸಹ ದೇವರ ಸಮಾನರೇ..

ಲೋಕಾಭಿರಾಮ


    ಯಾಕೋ ಅಮ್ಮ ತಾನು ಹೋದದ್ದಲ್ಲದೆ ನನ್ನೊಳಗನ್ನು ಹೊತ್ತುಕೊಂಡು ಹೋಗಿದ್ದಾಳಿರಬೇಕು.ಅಮ್ಮ ನಮ್ಮನ್ನ ಬಿಟ್ಟು ಹೋದಮೇಲೆ ಕಾಲದ ಕನ್ನಡಿಯಲ್ಲಿ ನೂತನ ಬಿಂಬಗಳ ಪ್ರಕಾಶನ ಕಡಿಮೆ ಆಗುತ್ತಾ ಹೋಯಿತು. ನನ್ನ ಸೊಮಾರಿತನಕ್ಕೆ ಅಮ್ಮನು ಒಂದು ನೆಪವಾದಳು ಎನ್ನಿ. ಆದರೂ ಇತ್ತೀಚಿನ ವರ್ಷಗಳಲ್ಲಿ ನಿಯಮಿತವಾಗಿ ಬರೆಯಲು ಆಗದಿರಲು ಆಗಾಗ ಒತ್ತರಿಸಿಕೊಂಡು ಬರುವ ಅಮ್ಮನ ನೆನಪು, ಕೆಲಸದಲ್ಲಿನ ಒತ್ತಡ ಸಮಯಾಬಾವ ಅನಾಸಕ್ತಿಗಳು ಕಾರಣವಾಗಿವೆ. ಆದ್ದರಿಂದ ಮೊದಲು ನನ್ನ ಓದುಗ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸುತ್ತಿದ್ದೇನೆ. ನಿಮ್ಮ ಪ್ರೀತಿಯ ಕಾಲದ ಕನ್ನಡಿ ತನ್ನ ಸ್ವಂತ ಮನೆಯನ್ನ ಕಾಣುತ್ತಿದೆ. ಅಂದ್ರೆ ಕಾಲದ ಕನ್ನಡಿ ತನ್ನ ಸ್ವಂತ 
 DOMAIN  ನಲ್ಲಿ ಪ್ರಕಾಶಿಸಲು ಕೊನೆಯ ಹಂತದಲ್ಲಿದೆ. ಗೆಳೆಯ ಹರೀಶ್ ಆತ್ರೆಯ  http://www.kaladakannadi.com  ನ ಅಸ್ತಿತ್ವ ಮತ್ತು ನಿರ್ವಾಹಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನಿಮ್ಮ ನಿಮ್ಮ ಮನೆಗೆ ಬಂದು ಕನ್ನಡಿ ನೋಡಲು ಅಂದ್ರೆ ಕಾಲದ ಕನ್ನಡಿ ಯಲ್ಲಿ ಪ್ರತಿ ಬಿಂಬವ ಕಾಣಲು ನಿಮ್ಮನ್ನು ತಡೆಯುವವರು ಯಾರು? 
    ಇನ್ನಾದರೂ ಕರ್ನಾಟಕ ಬಿ.ಜೆ.ಪಿ ಎಚ್ಚೆತ್ತು ಕೊಳ್ಳದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಮಕಾಡೆ ಮಲಗುವುದನ್ನ ಮೋದಿ-ಶಾ ಜೋಡಿಯಾಗಲಿ, ಆರ್.ಎಸ್.ಎಸ್ ಆಗಲೀ ಯಾರು ತಡೆಯಲಾರರು. ಹುಂಬ ಸಿದ್ದಣ್ಣನನ್ನ ಅಡ ಕತ್ತರಿಯಲ್ಲಿ ಸಿಲುಕಿಸಿ ಅಡಿಕೆ ತುಂಡು ಮಾಡುವ ಹಾಗೆ ಬಕಾಬೋರಲು ಮಾಡುವ ಎಷ್ಟೆಲ್ಲಾ ಅವಕಾಶಗಳು ಮನೆಯ ಕದವನ್ನು ತಟ್ಟಿದರು ಎದ್ದು ಬಂದು ಬಾಗಿಲು ತೆಗೆಯೋದಿರಲಿ, ಎದ್ದು ಹಾಸಿಗೆ ಮಡಿಚಲಿಕ್ಕೆ ಆಗ್ತಾಇಲ್ಲಾ....ಯಡಿಯೂರಪ್ಪ ಒಂದೆರೆಡು ಬಾರಿ ಗುಡುಗಿದರೂ ಮಳೆ ಬರಲಿಲ್ಲ. ಈಶ್ವರಪ್ಪ ಇನ್ನೂ ರಾಯಣ್ಣ ಬ್ರಿಗೇಡ್ನ ಪೇಚಾಟದಲ್ಲಿಯೇ ತಲೆ ಕೆರೆದು ಕೊಳ್ಳುತ್ತಿದ್ದಾರೆ. ಕೂದಲೂ ಉದುರಲಿಲ್ಲ, ಹೇನೂ ಸಾಯಿಲಿಲ್ಲ. ಯಾಕೋ ಭಾ.ಜ.ಪ ಯಡಿಯುರಪ್ಪನವರ ನೇತ್ರತ್ವದಲ್ಲಿ ಮತ್ತೋಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಏರುವ ಲಕ್ಷಣಗಳು ಮಾಯಾವಾಗುತ್ತಿದೆ ಎಂಬುದು ಕಾಲದ ಕನ್ನಡಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೂ ಇನ್ನೂ ಒಂದು ವರ್ಷ ಇದೆ ಎನ್ನವುದು ಆಶಾ ಬಾವನೆಯನ್ನ ಉಂಟುಮಾಡಿದರೂ, ಕಳೆದು ಹೋಗಿರುವ ಶೋಭಕ್ಕ, ಅಶೋಕ, ಸುರೇಶ್ ಕುಮಾರ್, ಗುಮ್ಮನ ಗುಸುಗನಂತಿರುವ ಅನಂತ್ ಕುಮಾರ್ ಎಲ್ಲರೂ ಕಾರ್ಯಕರ್ತರಲ್ಲಿ ಕೇವಲ ನಿರಾಸೆಯನ್ನೇ ಉಂಟುಮಾಡುತ್ತಿದ್ದಾರೆ. 
    ಈ ಸಲದ ರಜದ ಆರಂಭದಲಿಯೇ ಶೇಷು ಸಿಧ್ದಿ ಸಮಾಧಿ ಯೋಗದ ಮಕ್ಕಳ ಶಿಬಿರಕ್ಕೆ ಹೋಗಿದ್ದ. ಆದ್ರೂ ಮನೆ ತುಂಬಾ ಗಲಗಲ. ಬಬ್ಲುಗೆ ಜೊತೆಯಾಗಿ ಅಪರೂಪದ ಸೊಸೆ ವೈಷ್ಣವಿ ಬಂದಿದದಳು. ಮೊದಲನೆ ಬಾರಿಗೆ ರಜಾ ದಿನಗಳನ್ನು ಅವಳೊಂದಿಗೆ ಕಳೆಯುವ ಖುಷಿ ಬಬ್ಲು ಮತ್ತು ಶೇಷುಗೆ. ಹೋದ ವಾರ ಎಲ್ಲಾ ಸೇರಿ ಶಿವಮೊಗ್ಗದ ಸಕ್ರೆಬೈಲಿಗೆ ಹೋಗಿ ಆನೆಗಳೊಂದಿಗೆ ಆಟ ಆಡಿದೆವು. ಶಿವಮೊಗ್ಗ –ಭದ್ರಾವತಿ ರಸ್ತಿಯ ಮಧ್ಯೆ ಇರುವ ನಿದಿಗೆಯ ಹಳೆಯ ಕೆರೆಯ ಸಂಪೂರ್ತ ಹೂಳನ್ನ ಎತ್ತಿ ಅಲ್ಲಿ ಬೇಸಗೆ ರಜಾ ಕಳೆಯಲು ಬೋಟಿಂಗ್ ವ್ಯವಸ್ತೆಯನ್ನ ಯಾರೋ ಖಾಸಗಿಯವರು ಮಾಡಿದ್ದಾರೆ. ವೈಷು, ಪಿಂಕಿ, ಶೇಷು , ಬಬ್ಲಿ ಎಲ್ಲಾ ಮಜಾ ಮಾಡಿದ್ದೋ ಮಾಡಿದ್ದು, 1995ರ ನನ್ನ ಸಹಪಾಠಿಗಳನ್ನ ಭೇಟಿ ಆದದ್ದು ಆಯ್ತು. ಮಾರನೆ ದಿನ ಕ್ಯಾತನಮಕ್ಕಿಯ ಇಳೆಯ ಮೇಲೆ ಸೂರ್ಯಾಸ್ಥದ ಸವಿಯನ್ನ ಅನುಭವಿಸಿದ್ದಾಯ್ತು. ಒಟ್ಟಾರೆ ಅದ್ಭುತವಾದ ಅಪರೂಪದ ಆನಂದವನ್ನ ಅನುಭವಿಸಿದೆವು. 
    ಈ ಸಲ ಆರ್.ಸಿ.ಬಿ. ಯವರು ಆಡುತ್ತಿರುವುದನ್ನ ಗಮನಿಸುತ್ತಿದ್ದರೆ ಲೀಗ್ ಹಂತದಲ್ಲಿಯೇ ಅವರ ಸ್ಪರ್ಧೆ ಮುಗಿಯುವ ಹಾಗೇ ಕಾಣುತ್ತದೆ.
     ಸರಕಾರ ಆರಂಭಿಸಲು ಯತ್ನಿಸುತ್ತಿರುವ ಇಂದಿರಾ ಕ್ಯಾಂಟೀನ್ ಯೋಜನೆಗೆ ಬಾಲಗ್ರಹ ಹಿಡಿದಿರುವಂತೆ ಕಾಣುತ್ತಿದೆ. ಕಡಿಮೆ ದರಕ್ಕೆ ಆಹಾರವನ್ನ ಒದಗಿಸಲು ಇಸ್ಕಾನ್ ತಯಾರಿಲ್ಲ. ಕ್ಯಾಂಟೀನ್‍ಗಳನ್ನು ಆರಂಭಿಸಿ ಮುಂದಿನ ಚುನಾವಣೆಯ ಹೊತ್ತಿಗೆ ಮತ್ತಷ್ಟು ಗಟ್ಟಿಯಾಗಲೂ ಹವಣಿಸಿದ ಸಿದ್ದಣ್ಣ ಮತ್ತಿನ್ಯಾವ ಚೀಪ್ ಐಡಿಯಾಕ್ಕೆ ಮನಸೋಲುತ್ತಾರೋ? ಸ್ವತ: ಸಿದ್ದಣ್ಣಂಗೂ ಗೊತ್ತಿಲ್ಲ. ರಾಜ್ಯದ ಶ್ರಮಿಕ ವರ್ಗವನ್ನ ಸಂಪೂರ್ಣ ಸೋಮಾರಿಗಳನ್ನಾಗಿ ಬದಲಾಯಿಸಿದ ಶ್ರೇಯಸ್ಸು ಸಿದ್ದಣ್ಣನವರದು. ಇನ್ನೂ ಒಂದು ವರ್ಷದಲ್ಲಿ ರಾಜ್ಯವನ್ನ ಯಾರಿಗೆ ಅಡವಿಡುತ್ತಾರೋ? ಎನ್ನುವುದು ಕಾಲದ ಕನ್ನಡಿಗೆ ಉತ್ತರ ಸಿಗದ ಪ್ರಶ್ನೆಯಾಗಿ ಕಾಡುತ್ತಲೇ ಇದೆ. 
    ಮೀಸಲಾತಿ ಯನ್ನ 72% ಗೆ ಏರಿಸುವ ಸಿದ್ದರಾಮಯ್ಯನವರ ಇತ್ತೀಚಿನ ಮಾತುಗಳು ಮತ್ತು ಅವುಗಳ ಸಮರ್ಥನೆ ಅವರು ಎತ್ತ ಸಾಗುತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿವೆ. ವಿಚಾರ ಇಷ್ಟೇ! ಕೇವಲ ಅಹಿಂದ ವರ್ಗದವರನ್ನು ಮಾತ್ರವೇ ಓಲೈಸುವಂತಃ ದುಸ್ಥಿತಿ, ಅಹಿಂದ ಮತ ಬ್ಯಾಂಕನ್ನ ಗಟ್ಟಿಗೊಳಿಸಿ ಕೊಳ್ಳಲೇಬೇಕಾದ ದರ್ದು ಸಿದ್ದರಾಮಯ್ಯನವರಂತಃ "ಸಮಾಜವಾದಿಯ" ಜರುರತ್ತಾಗಿರುವುದು ರಾಜಕೀಯದ ವಿಡಂಬನೆಯೋ ಸಮಾಜವಾದದ ಅವನತಿಯೋ? ಗೋರಿಯೊಳಗಿನ ಲೋಹಿಯಾ ಆತ್ಮ ಬಿಕ್ಕಳಿಸುತ್ತಿರುವುದು ಕಾಲದ ಕನ್ನಡಿಗೆ ಕೇಳಿಸುತ್ತಿದೆ. ಕುಂದಾಪುರದ ಶ್ರೀ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವರು ನಮ್ಮ ಕುಲದೇವರು. ಮೊನ್ನೆ ಮೂಲ ದೇವರು, ದೈವಗಳಿಗೆ ವರ್ಷಾವಧಿ ಪೂಜೆಯನ್ನ ಕೊಡಲು ಸಾಲಗ್ರಾಮಕ್ಕೆ ಹೋಗಿ, ಹಾಗೆಯೇ ಗಂಗೊಳ್ಳಿಯ ನಮ್ಮ ಅಕ್ಕ ( ಕಸಿನ್ ಸಿಸ್ಟರ್) ಆಯುರ್ವೇದ ವೈದ್ಯರಾದ ಡಾ|| ವೀಣಾ ಕಾರಂತರಲ್ಲಿಗೆ ಹೋಗಿ ವೈಷ್ಣವಿಯನ್ನು ಬಿಟ್ಟು, ಹಾಗೇ ಕಾಸರಗೋಡಿನ ಮಾವನ ಮನೆಗ ಹೋಗಿ ಬಂದೆ. ಎಲ್ಲ ಕಡೆ ವಿಪರೀತ ಬಿಸಿಲು. ಕುಂದಾಪುರದ ಹಾಗೂ ಗಂಗೊಳ್ಳಿಯಲ್ಲಿ ಉಷ್ಣತೆ 37 ಸಂಟಿಗ್ರೇಡ್ ದಾಟಿತ್ತು. ಕಾಸರಗೋಡಿನಲ್ಲಿ 33-35 ರವರೆಗೂ ಇತ್ತು. ಹೀಗೆ ಬಿಸಿಲು ಬಂದರೆ ನಮ್ಮ ಕಥೆ ಮುಗಿಯಿತು!! ಸಿಧ್ದಿ ಸಮಾಧಿ ಯೋಗದ ದೊಡ್ಡವ ಶಿಬಿರಕ್ಕೆ ನಾನು ಮಂಜುಳಾ ಇಬ್ಬರೂ ಹೋಗಿಬಂದೆವು. 3ದಿನ ಶಿಬಿರದಲ್ಲಿ ಕಳೆದಿದ್ದೇ ಗೊತ್ತಾಗಲಿಲ್ಲ.. ಮೈ-ಮನಸ್ಸು ಎರಡಕ್ಕೆ ಯಥೇಚ್ಛವಾಗಿ ಹುಮ್ಮಸ್ಸು ಮತ್ತು ಶಾಂತಿಯನ್ನ ತುಂಬಿಸಿಕೊಂಡು ಬಂದೆವು. ಮೈಸೂರಿಗೆ ಹೋಗಬೇಕು, ಸಿಕ್ಕಾಪಟ್ಟೆ ಕೆಲಸ ಇದೆ. ಮತ್ತದೇ ಹಣಕಾಸಿನ ವರ್ಷದ ಮುಕ್ತಾಯದ ಗಡಿಬಿಡಿ, ಸೋಮಾರಿತನ, ಅಮ್ಮನ ನೆನಪು, ಮಕ್ಕಳಾಟಿಕೆ!! 

ಕೊನೇ ಮಾತು: ಇನ್ನು ಕಾಲದ ಕನ್ನಡಿ ನಿಯಮಿತವಾಗಿ ಪ್ರತಿಫಲಿಸುತ್ತದೆ ಎಂಬ ಭರವಸೆಯನ್ನು ಹೊಸ ಮನೆಯ ಅಂಗಳದಲ್ಲಿ ನಿಂತು ಕೊಡುತ್ತಿದ್ದೇನೆ.... ಹೊಸ ಮನೆಯ ಅಲಂಕಾರದ ಜವಾಬ್ದಾರಿ ಹೆಚ್ಚಿದ್ದರೂ ಸಂಪದದ ಗೆಳೆಯ ಹರೀಶ್ ಆತ್ರೆಯ ಮತ್ತು ವಿನುತಾ ಪಾಟೀಲ್ ಸೊಗಸಾಗಿ ನಿರ್ವಹಿಸುತ್ತಾರೆಂಬ ಭರವಸೆ ಇದೆ. ಅದು ನನ್ನ ಸೌಭಾಗ್ಯ!! ಕಾಲದ ಕನ್ನಡಿ ನಿಮ್ಮದು..ನಿಮ್ಮ ಮನಸ್ಸಿನ ಭಾವನೆಗಳನ್ನ ಯಾರ ಹಂಗಿಗೂ ಒಳಗಾಗದಂತೆ ನಿಷ್ಟೂರವಾಗಿ ಹೇಳಲೇಬೇಕಾಗಿರುವುದನ್ನು ಹೇಳುವ, ಖಂಡಿಸಲೇ ಬೇಕಾಗಿರುವುದನ್ನು ಖಂಡಿಸುವ, ಹೊಗಳ ಬೇಕಾಗಿರುವುದನ್ನು ಹೊಗಳುವ ಜವಾಬ್ದಾರಿಯನ್ನ ನಿರ್ವಹಿಸುವ ನಿರ್ವಾಹಕ ಮಾತ್ರ ನಾನು!! ಮನೆ ನನ್ನದು! ಮನಸ್ಸು ನಿಮ್ಮದು!!