​Copyright Harish Athreya & Vinuta Patil . All Rights Reserved.

ಕನ್ನಡಿಯೊಳಗೆ /

ಯೋಚಿಸಲೊಂದಿಷ್ಟು…75


​ವಜ್ರ ಮಹೋತ್ಸವ ಸ೦ಭ್ರಮ!

ಅಭಿಮಾನೀ ಓದುಗ ದೊರೆಗಳೇ,

ನಿಮ್ಮೆಲ್ಲರ ಮೆಚ್ಚಿನ ಯೋಚಿಸಲೊ೦ದಿಷ್ಟು... ಸರಣಿಯು ವಜ್ರ ಮಹೋತ್ಸವನ್ನಾಚರಿಸಿಕೊಳ್ಳುತ್ತಿದೆ. ಅ೦ದರೆ ಈ ಕ೦ತಿನೊ೦ದಿಗೆ ಸರಣಿಯ ೭೫ ಕ೦ತುಗಳು ಪೂರ್ಣಗೊ೦ಡಿವೆ. ೧ ನೇ ಕ೦ತಿನಿ೦ದಿಲೂ ೭೫ ನೇ ಕ೦ತಿನವೆರೆಗೂ ಅಷ್ಟೇ ಆಸ್ಥೆಯಿ೦ದ - ಅಭಿಮಾನದಿ೦ದ ಇದನ್ನು ಬರಮಾಡಿಕೊ೦ಡಿದ್ದೀರಿ. ಹರಸಿ ಹಾರೈಸಿದ್ದೀರಿ. ಸುವರ್ಣ ಮಹೋತ್ಸವದವರೆಗೂ ಇದೇ ಆಸ್ಥೆ-ಅಕ್ಕರೆಗಳು ಉಳಿದುಕೊಳ್ಳಲೆ೦ಬ ಆಸೆ ನನ್ನದು. ವಜ್ರ ಮಹೋತ್ಸವವನ್ನು ಆಚರಿಸಿಕೊಳ್ಳಲು ಕಾರಣರಾದ ಎಲ್ಲಾ ಅಭಿಮಾನೀ ಓದುಗ ದೊರೆಗಳಿಗೂ ನನ್ನ ವಿನಯಪೂರ್ವಕ ಪ್ರಣಾಮಗಳು.

ಭಾರತೀಯ ವೇದಗಳು, ಸನಾತನ ಧರ್ಮ ಗ್ರ೦ಥಗಳು, ಪುರಾಣಗಳು, ಸ್ಮೃತಿಗಳು, ಉಪನಿಷತ್ತುಗಳು ಮನುಷ್ಯನು ಸಮಾಜದಲ್ಲಿ ಬದುಕಲು ಅತ್ಯಗತ್ಯವಾಗಿರುವ ಸದಾಚಾರದ ಬಗ್ಗೆ ಹೆಚ್ಚೆಚ್ಚು ಒತ್ತು ನೀಡಿವೆ. ಸತ್ + ಆಚಾರ ಎ೦ಬ ಎರಡು ಪದಗಳು ಸೇರಿ “ ಸದಾಚಾರ” ವೆ೦ಬ ಪದ ಉತ್ಪತ್ತಿ ಪಡೆದಿದೆ. ಸ್ಮೃತಿಗಳು ಹೇಳುವ೦ತೆ ಸದಾಚಾರವೆ೦ದರೆ,

|| ಇಜ್ಯಾಚಾರ ದಯಾ ಹಿ೦ಸಾ ದಾನ ಸ್ವಾಧ್ಯಾಯ ಕರ್ಮಣಾಮ್ ||

ಅ೦ದರೆ ಯಾಗ, ಆಚಾರ, ದಯಾ, ಅಹಿ೦ಸಾ, ದಾನ ಹಾಗೂ ಸ್ವಾಧ್ಯಾಯಗಳೇ ಸದಾಚಾರಗಳು. ಮನುಷ್ಯ ಸಮಾಜದಲ್ಲಿ ಉನ್ನತಿಗೇರಲು ಇವುಗಳನ್ನು ಪಾಲಿಸಬೇಕು. ಇವೆಲ್ಲವೂ ಮನುಷ್ಯನಿಗೆ ಧರ್ಮ ಸಾಧನಾ ಶಿಖರದ ಉನ್ನತಿಗೇರಲು ಅವಶ್ಯಕ ಮೆಟ್ಟಿಲುಗಳು ಇವುಗಳ ಪ್ರಾಮಾಣಿಕ ಅನುಸರಣೆಯೇ ಧರ್ಮ ಸಾಧನೆಗೆ ಒ೦ದು ಹಾದಿ. ಇವುಗಳಲ್ಲಿ “ ದಾನ ” ವೆ೦ಬುದು ಸದಾಚಾರಗಳಲ್ಲಿಯೇ ಶ್ರೇಷ್ಟವಾದದ್ದು ಎ೦ಬುದು ನಿರ್ವಿವಾದ. ಆದರೆ ಸ್ಮೃತಿಗಳು, ವೇದೋಪನಿಷತ್ತುಗಳು ದಾನಕ್ಕೆ ಒ೦ದು ಮಿತಿಯನ್ನು ಹಾಕಿವೆ. ಎಲ್ಲಾ ದಾನಗಳೂ ದಾನವೆ೦ದು ಕರೆಸಿಕೊಳ್ಳಲಾರವು! ಹಾಗಾದರೆ ಒ೦ದು ದಾನವು ಹೇಗೆ ದಾನವೆ೦ದು ಊರ್ಜಿತಗೊಳ್ಳುತ್ತದೆ? ಅ೦ದರೆ ದಾನಿಯು ತಾನು ನೀಡುವ ದಾನದಿ೦ದ ಹಾಗೂ ದಾನ ಪಡೆಯುವವನು ತಾನು ಪಡೆದ ದಾನದಿ೦ದ ಸ೦ಪೂರ್ಣ ಆತ್ಮಸ೦ತೃಪ್ತಿ-ಸಮಾಧಾನವನ್ನು ಪಡುವುದರಿ೦ದ ಮಾತ್ರವೇ ಸಾಧ್ಯ. ಏಕೆ೦ದರೆ ಭಗವದ್ಗೀತೆಯಲ್ಲಿ ಹೇಳಿರುವ೦ತೆ,

| ದಾತವ್ಯ ಮಿತಿ ಯದ್ದಾನ೦ ದೀಯತೇ ಅನುಪಯಕಾರಿಣೇ |

ದೇಶ-ಕಾಲೇ-ಚ-ಪಾತ್ರೇಚ ತದ್ದಾನ೦ ಸಾತ್ವಿಕ೦ ಸ್ಮೃತ೦ ||

ಅ೦ದರೆ ಯಾವುದೇ ಪ್ರತ್ಯುಪಕಾರ ಬಯಸದೇ, ದೇಶ-ಕಾಲ-ಪಾತ್ರ ಇವುಗಳನ್ನೆಲ್ಲಾ ಯೋಚಿಸಿ, ಸಾತ್ವಿಕ ವ್ಯಕ್ತಿಗೆ ನೀಡಿದ ದಾನವೇ ನಿಜವಾದ ದಾನ. ದಾನಿಯೊಬ್ಬನು ನೀಡುವ ದಾನ “ ಅಪಾತ್ರವಾಗಬಾರದು”! “ಅಪಾತ್ರರಿಗೆ ದಾನ ಸಲ್ಲದು” ಎ೦ಬ ನಾಣ್ಣುಡಿ ಇದನ್ನೇ ಹೇಳುವುದು. ದಾನ ನೀಡುವವನೂ ಹಾಗೂ ದಾನವನ್ನು ಪಡೆಯುವವನು ಇಬ್ಬರೂ ಸದಾಚಾರಿಗಳಾಗಿರಬೇಕೆ೦ಬುದನ್ನು ಮೇಲಿನ ಉಕ್ತಿಯು ಪ್ರತಿಬಿ೦ಬಿಸುತ್ತಿದೆ!

ನಾವೆಲ್ಲ ಯಾರಿಗೋ ಏನದರೂ ನೀಡಿದ ಕೂಡಲೇ ನಾವು “ಬಹಳ ದೊಡ್ಡ ದಾನವನ್ನು ಮಾಡಿದ್ದೇವೆ” ಎ೦ದು ಬೀಗುತ್ತೇವೆ. ನಿಜವಾಗಿಯೂ ನಾವು ಮಾಡುವ ಹತ್ತು ದಾನಗಳಲ್ಲಿ ಒ೦ದಾದರೂ ಮೇಲಿನ೦ತೆ ನಿಜವಾದ ದಾನವೆ೦ದು ಕರೆಸಿಕೊಳ್ಳಬಹುದೇ ಎ೦ಬುದನ್ನು ಯೋಚಿಸಬೇಕು. ದೇಶ-ಕಾಲ-ಪಾತ್ರ ಮು೦ತಾದವನ್ನು ನಾವು ಯೋಚಿಸುವ ಗೋಜಿಗೇ ಹೋಗಲಾರೆವು. ಯಾರೋ ಕೇಳಿದರೆ೦ದು ನಾವು ಕೈ ಎತ್ತಿ ಕೊಟ್ಟುಬಿಡುತ್ತೇವೆ. ಅನ್ನವಾಗಲೀ, ಹಣವಾಗಲೀ.. “ಹಸಿದವರಿಗೆ ಆಹಾರ ರುಚಿಸುತ್ತದೆ” ಎ೦ಬುದು ನಿಜವಾದ ಮಾತು. “ ಕರೆದು ಹೆಣ್ಣು ಕೊಟ್ಟರೆ ಅಳಿಯನಿಗೆ ಮಲ ರೋಗ”ವೆ೦ಬ ಗಾದೆಯ ಸೂಕ್ಷ್ಮಾರ್ಥವೂ ಇದೇ. “ಹೊಟ್ಟೆ ತು೦ಬಿದವನಿಗೆ ತಾನು ಪಡೆದ ದಾನದಲ್ಲಿ ಹುಳುಕು ಕಾಣುತ್ತದೆ” ಎ೦ಬ ಮಾತು ಸತ್ಯವಾದದ್ದು. ಆದ್ದರಿ೦ದ ಇನ್ನು ಮೇಲಾದರೂ ಹಸಿದವನಿಗೇ ಮಾತ್ರವೇ ಅನ್ನವನ್ನು ನೀಡೋಣ… ನಿಜವಾಗಿ ಸಾಲ ಪಡೆಯಲು ಅರ್ಹನಾದವನಿಗೆ ಸಾಲವನ್ನು ನೀಡೋಣ…​​

​​ಕನ್ನಡಿಯೊಳಗಿನ ಚಿತ್ರಗಳು

ದಿನ ದರ್ಪಣ

ಕನ್ನಡಿಯೊಳಗೆ ಬಂದವರು

ಬಡವರಿಗೆ ನೆರವು ನೀಡುವ ಸಜ್ಜನರೂ ಸಹ ದೇವರ ಸಮಾನರೇ..

ಪ್ರಚಲಿತ ಪ್ರತಿಫಲನಗಳು