ಹಠದ ಮುಖವಾಡವನ್ನು ತೊಟ್ಟಿದ್ದೇನೆ

single women whose husband is dead image ಗೆ ಚಿತ್ರಗಳ ಫಲಿತಾಂಶಗಳು

ಹತ್ತುವರ್ಷಗಳಾಗಿವೆ ನಮ್ಮ ಮದುವೆಯಾಗಿ. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ನೀವು ನನಗಿಷ್ಟವಿಲ್ಲದ್ದನ್ನು ಮಾಡಿಲ್ಲ. ಪ್ರತಿಯೊಂದನ್ನೂ ನನ್ನನ್ನು ಕೇಳಿ, ಮಾತನಾಡಿಸಿ ಜೊತೆಯಲ್ಲಿಯೇ ಆರಿಸುವುದು ನಿಮ್ಮ ಪದ್ಧತಿಯಾಗಿತ್ತು. ಮನೆಗೆ ತರುವ ಪುಟ್ಟ ಡಬ್ಬಿಗಳಿಂದ ದೊಡ್ಡ ವಾಷಿಂಗ್ ಮಶೀನಿನವರೆಗೂ ನಾವಿಬ್ಬರೂ ಕೂಡಿಯೇ ಮನೆತುಂಬಿಸಿಕೊಂಡದ್ದು. ಇದರಲ್ಲಿ ವಿಶೇಷವೇನಿದೆಯೆನಿಸಬಹುದು. ನಮ್ಮಿಬ್ಬರ ಬದುಕಿನ ಪ್ರತಿ ಕ್ಷಣಗಳನ್ನು ದಿನವೂ ಅತ್ಯಮೂಲ್ಯವೆಂದೇ ಅನುಭವಿಸುವ ನಮಗೆ ಪ್ರೀತಿಗಾಗಿ ಪ್ರತ್ಯೇಕ ದಿನ ಬೇಕಾಗಿರಲಿಲ್ಲ. ಆದರೂ ಇಂದಿನ ಕಾಲಕ್ಕೆ ಬಂದ ವ್ಯಾಲೆಂಟೈನ್ಸ್ ಡೇ ಯ ದಿನ ಏನಾದರೊಂದು ತಂದು ಸಂತೋಷ ಪಡಿಸುತ್ತಿದ್ದಿರಿ. ಈ ದಿನದ ಬಗ್ಗೆ ನಮ್ಮಲ್ಲಿ ಅದೆಷ್ಟು ಬಾರಿ ಚರ್ಚೆಯಾಗಿದೆಯೋ ಆದರೂ ನೀವು ತರುವುದನ್ನು ನಿಲ್ಲಿಸಲಿಲ್ಲ. ನಾನು ಬೇಡವೆನ್ನಲೂ ಇಲ್ಲ. ಸಂಭ್ರಮಕ್ಕೆ, ಸಂಭ್ರಮಿಸುವುದಕ್ಕೆ ಚೌಕಟ್ಟನ್ನು ಹೇರಿಕೊಳ್ಳುವುದು ಬೇಡವೆನ್ನುವ ನಿಮ್ಮ ಸಿದ್ಧಾಂತ ಚೆನ್ನಾಗಿಯೇ ಇದೆ. ಆದರೆ ಅದೇಕೋ ಪ್ರತಿಕ್ಷಣವನ್ನೂ ಪ್ರೀತಿಯಿಂದಲೇ ನೋಡುವ ನಮ್ಮ ದಾಂಪತ್ಯಕ್ಕೆ ಇಂಥದ್ದೊಂದು ದಿನದ ಅವಶ್ಯಕತೆಯೇ ಬೇಡವೆನಿಸಿದ್ದು ಹೌದು. ಅದೇನೇ ಇರಲಿ ನಿಮ್ಮ ಪ್ರೀತಿಯ ಮುಂದೆ ನಾನು ಸೊನ್ನೆ.
ಬದುಕಿನುದ್ದಕ್ಕೂ ನಿಮ್ಮ ಪ್ರತಿಬಿಂಬದಂತೆ ಬದುಕಬೇಕೆನ್ನುವುದೇ ನನ್ನ ಗುರಿಯಾಗಿತ್ತು. ’ಗಂಡನಿಗೆ ಒಪ್ಪಾಗಿ’ ಎನ್ನುವ ಮಾತು ನನಗಿಷ್ಟದ್ದು. ಇದರಲ್ಲಿ ಫೆಮಿನಿಸ್ಟಿಕ್ ಧೋರಣೆಯಂತೂ ಇಲ್ಲ. ಸುಖೀ ಸಂಸಾರಕ್ಕೆ ಬೇಕಾದ ಎಲ್ಲವನ್ನೂ ತೂಗಿಸಬೇಕಾದವಳು ಹೆಣ್ಣು. ಅದೇ ಕಾರಣಕ್ಕೆ ಗಂಡನಿಗೆ ಒಪ್ಪಾಗಿ ಎನ್ನುವ ಮಾತು ಬಂದಿದ್ದು. ಮನೆ ಕಟ್ಟೋಣವೆಂದೆ ಸರಿಯೆಂದು ಒಪ್ಪಿದಿರಿ. ಒಂದೇ ಮಗು ಸಾಕೆಂದಿರಿ ನಾನು ಸರಿಯೆಂದೆ. ಯಾವುದರಲ್ಲೂ ಇಬ್ಬರಿಗೂ ಭಿನ್ನಾಭಿಪ್ರಾಯವೇ ಬರಲಿಲ್ಲ. ಆದರೆ ಕೊನೆಯವರೆಗೂ ಜೊತೆಗಿರುವೆನೆಂದಿದ್ದಿರಿ, ಈಗೇಕೆ ಹೀಗೆ? ಇಬ್ಬರೂ ಒಟ್ಟಿಗೆ ಹೋಗಬಹುದಿತ್ತಲ್ಲವೇ? ಅದೇನು ಅಷ್ಟು ಆತುರ. ಮಗ ಇನ್ನೂ ಚಿಕ್ಕವನು. ಅವನ ಬಾಲ್ಯದಾಟ, ಯೌವನದ ಮಿಡಿತ, ವೈವಾಹಿಕ ಜೀವನದ ಸೌಂದರ್ಯವನ್ನು ಸವಿದು ಹೋಗಬಹುದಿತ್ತು. ಅದೇನು ಅಷ್ಟು ಆತುರ ನಿಮಗೆ? ಕರೋನ ನೆಪವಷ್ಟೆ. ಆದರೆ ಹೋಗಬಾರದಿತ್ತು. ಆಸ್ಪತ್ರೆಯೊಳಗೆ ನನ್ನನ್ನು ಬಿಡಲಿಲ್ಲ. ದೂರದಲ್ಲಿ ನಿಂತು ನೋಡಬೇಕೆನ್ನುವ ಕರಾರಿನ ಮೇಲೆ ನಾನು ಬಂದದ್ದು. ನಿಮ್ಮ ಉಸಿರಾಟ ಜೋರಾಗಿ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು (?) ಅಥವಾ ನನಗೆ ಹಾಗನ್ನಿಸಿತಾ? ದೂರದಿಂದಲೇ ಹೇಳಿದೆ. ಮನೆಯ ವಿಚಾರ ಒತ್ತಟ್ಟಿಗಿರಲಿ. ನೀವು ಆರೋಗ್ಯವಾಗಿ ಬನ್ನಿ ಅಷ್ಟೆ ಸಾಕು. ಆದರೆ ಅದೇನೆನ್ನಿಸಿತೋ ಮತ್ತೊಂದು ಮಾತು ಹೇಳಿದೆ. ’ಮನೆಯನ್ನು ನಾನು ಪೂರ್ಣಗೊಳಿಸುತ್ತೇನೆ. ನೀವು ನಿಶ್ಚಿಂತೆಯಾಗಿರಿ ಬೇಗ ಬನ್ನಿ ಸಾಕು’. ಕೆಲಸಕ್ಕೆ ಹೋಗದ ನಾನು ಮನೆಯ ಅಷ್ಟೋ ಜವಾಬ್ದಾರಿಯನ್ನು ಹೊರಬಲ್ಲನೇ? ಅದೊಂದು ತಿಳಿದಿಲ್ಲ. ಆದರೆ ನೀವಿರಬೇಕು ಅಷ್ಟೆ. ನಿಮ್ಮ ಉಸಿರಾಟ ಕಡಿಮೆಯಾಗುತ್ತಿತ್ತು. ಪರದೆಯ ಮೇಲೆ ಆಕ್ಸಿಜನ್ ೯೦ ರಿಂದ ಕೆಳಗಿಳಿಯುತ್ತಿತ್ತು. ನನಗೆ ಅರ್ಥವಾಗುತ್ತಿತ್ತು. ಆದರೆ ಆ ಡಾಕ್ಟರಿಗೇಕೆ ಅರ್ಥವಾಗುತ್ತಿಲ್ಲ. ಸುಮ್ಮನೆ ನಿಂತಿದ್ದ ಅದೂ ನನ್ನ ಹಾಗೆ ದೂರದಲ್ಲಿ. ನನ್ನನ್ನಾದರೂ ಒಳಗೆ ಬಿಟ್ಟರೆ … (ಏನು ಮಾಡುತ್ತಿದ್ದೆ..?) ಕೂಗಿಕೊಂಡೆ ಡಾಕ್ಟರ್ ಅವರ ಉಸಿರಾಟ ಕಡಿಮೆಯಾಗುತ್ತಿದೆ. ಐದಾರು ಜನ ಒಮ್ಮೆಲೇ ನಿಮ್ಮನ್ನು ಮುತ್ತಿಬಿಟ್ಟರು. ನೀವು ಕಾಣಿಸದಾದಿರಿ. ಮತ್ತೆ ನಿಮ್ಮನ್ನು ನಾನು ಜೀವಂತವಾಗಿ ನೋಡಲಿಲ್ಲ. ಆರಡಿ ಎತ್ತರದ ಹುರಿಮೈಗಟ್ಟಿನ ನಿಮ್ಮ ದೇಹ ಆ ಕ್ಷಣದಲ್ಲೇ ನಿಶ್ಚಲವಾಗಿರಬಹುದು. ಅವರುಗಳು ನನಗೇನೂ ಹೇಳಲಿಲ್ಲ. ’ನೀವಿಲ್ಲಿಂದ ಹೊರಡಿ, ನಾವೆಲ್ಲಾ ನೋಡಿಕೊಳ್ತೇವೆ’ ಎಂದಷ್ಟೇ ಹೇಳಿ ಬಲವಂತವಾಗಿ ಕಳುಹಿಸಿದರು. ಮತ್ತೆ ನೋಡಿದ್ದು ನಿಮ್ಮ ನಿಶ್ಚಲ ದೇಹವನ್ನೆ. ಅದೂ ಯಾರ ಯಾರದ್ದೋ ಪ್ರಭಾವ ಬಳಸಿ ನಿಮ್ಮ ದೇಹವನ್ನು ಕೊನೆಯ ಬಾರಿ ನೋಡುವ ಸ್ಥಿತಿ ಬಂದಿತ್ತು. ನಿಮ್ಮ ಕನಸಿನ ಮನೆಯನ್ನು ನೀವು ನೋಡುವುದಕ್ಕೆ ನೀವಿರಬೇಕಿತ್ತು. ಇಷ್ಟು ದೊಡ್ಡ ಮನೆ ಕಟ್ಟಿಸುತ್ತಿದ್ದೇನೆ. ಯಾವ ಪುರುಷಾರ್ಥಕ್ಕೆ? ಇಲ್ಲಿನ ಪ್ರತಿಯೊಂದು ಇಟ್ಟಿಗೆ, ಟೈಲ್ಸ್ , ವಿನ್ಯಾಸ ಎಲ್ಲವೂ ನಿಮ್ಮ ಮುತುವರ್ಜಿಯಲ್ಲಿ ಮೇಲ್ವಿಚಾರಣೆಯಲ್ಲಿ ಆಯ್ದದ್ದು. ಯಾವ ಮೂಲೆಯಲ್ಲಿ ನಿಂತರೂ ನಿಮ್ಮ ಮಾತುಗಳು ಕೇಳುತ್ತಲೇ ಇರುತ್ತದೆ. ಇಲ್ಲಿ ಹೀಗಾಗಬೇಕು, ಈ ಮೂಲೆಯಲ್ಲಿ ಜೋಕಾಲಿ, ಬಚ್ಚಲುಮನೆಯಲ್ಲಿ ಬಟ್ಟೆ ಒಣಗಲು ಹಾಕುವ ಸಾಧನ ಹಾಕಿದರೂ ಕಾಣದಂತಿರಬೇಕು. ಎಲ್ಲವೂ ಅಚ್ಚುಕಟ್ಟು. ಆದರೆ ನೀವಿಲ್ಲ. ವಯಸ್ಸು ಚಿಕ್ಕದು. ನನಗಿನ್ನೂ ಮುವ್ವತ್ನಾಲ್ಕು. ಮನೆಯಲ್ಲಿ ಮತ್ತೊಂದು ಮದುವೆ ಮಾಡಿಕೋ ಎಂಬ ಬಲವಂತ ಆರಂಭವಾಗಿದೆ. ಯಾರ ಬಳಿ ಹೇಳಿಕೊಳ್ಳುವುದು. ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಮತ್ತೊಂದು ಮದುವೆಯಾಗಬೇಕಂತೆ. ಭವಿಷ್ಯವನ್ನೇ ನಿಮ್ಮೊಂದಿಗೆ ಕಳೆಯುವ ಸಂಕಲ್ಪ ಮಾಡಿದ್ದೆನಲ್ಲ. ಒಮ್ಮೆ ಇವನು ನನ್ನವ ಎನಿಸಿದ ಮರುಕ್ಷಣ ಭವಿಷ್ಯದ ಕನಸುಗಳು ಗರಿಗೆದರುತ್ತದೆ. ಇಂಥಿಂತ ವರ್ಷಕ್ಕೆ ಹೀಗೆ ಆದರೆ ಚೆನ್ನ ಎನ್ನುವ ಕಲ್ಪನೆ ಕನಸುಗಳು, ಮನೆಯಲ್ಲಿನ ಡಬ್ಬ ಡಬ್ಬಿಯಿಂದ ಆರಂಭವಾಗುವ ಕನಸುಗಳು ಬದುಕಿನ ಅತಿ ದೊಡ್ಡ ನಿರ್ಧಾರಗಳ ವರೆಗೂ ಮಣಿಗಳನ್ನು ಪೋಣಿಸಿದಂತೆ ಪೋಣಿಸಿಕೊಂಡು ಬಿಡುತ್ತೇವೆ. ಇಲ್ಲಿ ಯಾವುದೂ ನಮ್ಮ ಇಚ್ಚೆಯಂತೆ ನಡೆಯುವುದಿಲ್ಲವೆಂಬ ಸತ್ಯದ ಅರಿವಿದ್ದೂ ಸದ ನಾವು ಭವಿಷ್ಯದ ರೂಪವನ್ನು ತುಂಬಿಕೊಳ್ಳುತ್ತೇವೆ ಅದೇ ಬದುಕಿನ ಆನಂದ. ಕಾರು ತೆಗೆದುಕೊಂಡಾಗಲೂ ಪ್ರತಿವರ್ಷ ಎಲ್ಲಾದರೂ ಹೋಗೋಣವೆಂಬ ಕನಸು, ಅದನ್ನು ನನಸು ಮಾಡಿಕೊಳ್ಳುವ ತವಕ. ನಂತರ ಕಾರಣಾಂತರಗಳಿಂದ ಕೆಲಸದ ಒತ್ತಡದಿಂದ ಪ್ರವಾಸಕ್ಕೆ ಹೋಗಲಾಗದೇ ಇದ್ದದ್ದು. ಎಲ್ಲದಕ್ಕೂ ಉತ್ತರವಿರುತ್ತದೆ. ಆದರೆ ಕನಸುಗಳಿಗೆ ಬರವಿಲ್ಲ. ಮುಂದಿನ ಬಾರಿ ಖಂಡಿತ ಹೋಗೋಣವೆಂದು ಸಮಾಧಾನ ಪಟ್ಟುಕೊಳ್ಳುವ ನಾವು ಧಿಡೀರನೆ ತಂತುವೊಂದು ಕತ್ತರಿಸಿಹೋದರೆ. ಆ ತಂತುವಿನೊಟ್ಟಿಗೆ ಅದೆಷ್ಟು ಹೂಗಳನ್ನು/ಮಣಿಗಳನ್ನು ಪೋಣಿಸಿದ್ದೆನೋ ಅವೆಲ್ಲವನ್ನೂ ಮತ್ತೊಂದು ತಂತುವಿನೊಟ್ಟಿಗೆ ಕಟ್ಟಲು ಅಸಾಧ್ಯ. ಮತ್ತೊಂದು ಮದುವೆಯ ಕಲ್ಪನೆಯೂ ನನಗಿಲ್ಲ. ಮಗ ಒಂದು ವಂಶದ ವಾರಸುದಾರ ಅವನು ಈ ವಂಶಕ್ಕೇ ಸೇರಲಿ. ಮತ್ತೊಂದು ವಂಶಕ್ಕೆ ಸೇರಿ ಗೊಂದಲ ಮಾಡುವುದೇ ಬೇಡ. ಈ ವಂಶದಲ್ಲಿ ಉಳಿದಿರುವುದು ನಿಮ್ಮ ಮಗ ಮಾತ್ರ. ನಿಮ್ಮವರುಗಳಿಗೆ ನಾನು ಬೇಕಿಲ್ಲ. ಪರವಾಗಿಲ್ಲ. ಅವರ ಬುದ್ಧಿಯೇ ಆ ಬಗೆಯದ್ದು. ಅದು ನಿಮಗೂ ತಿಳಿದಿದೆ.
ಕೆಲಸಕ್ಕೆ ಸೇರಬೇಕು. ಜೀವನೋಪಾಯಕ್ಕೆ ಆಗುವಷ್ಟು ದುಡ್ಡು ದುಡಿದೇ ಹೋಗಿದ್ದೀರಿ. ಆದರೆ ಸುಮ್ಮನೆ ಕೂತರೆ ಮಗನಿಗೆ ಜವಾಬ್ದಾರಿಯ ಅರಿವಾಗುವುದಿಲ್ಲ. ಕಾಲವೇ ಹೀಗಿದೆ. ದುಡಿಯುವ ಒಬ್ಬ ವ್ಯಕ್ತಿ ಇದ್ದರೆ ಜವಾಬ್ದಾರಿಯ ಅರಿವು ಮಕ್ಕಳಿಗಾಗುತ್ತದೆ. ಅಳಬೇಕೆನಿಸುತ್ತಿದೆ. ಆದರೆ ನೀವು ಹೋದಾಗ ನಾನು ಅಳಲಿಲ್ಲ. ಜನರೆಲ್ಲ ಇವಳು ಗಟ್ಟಿಗಿತ್ತಿಯೆಂದೇ ತಿಳಿದಿದ್ದರು. ಆದರೆ ಹಠವಿತ್ತು. ನಿಮ್ಮ ಮೇಲೆ ಕೋಪವಿತ್ತು. ಅರ್ಧಾಂತರದಲ್ಲಿ ನನ್ನನಗಲಿ ಹೋದುದರ ಬಗ್ಗೆ ಬೇಸರವಿತ್ತು. ಇನ್ನು ಮನೆ ಕಟ್ಟುವುದು ಅಸಾಧ್ಯ ಎನ್ನುವ ಮಾತುಗಳಿಗೆ ನಾನು ಹಠದ ಮುಖವಾಡವನ್ನು ತೊಟ್ಟು ,’ಮನೆ ಕಟ್ಟಿ ತೋರಿಸುತ್ತೇನೆ’ ಎಂದು ನಿರ್ಧರಿಸಿದ್ದೆ. ಈಗ ಆರು ತಿಂಗಳಿಂದ ಜನ/ಬಂಧುಗಳು, ಸ್ನೇಹಿತ ವರ್ಗ ಎಲ್ಲರೂ ಬರುತ್ತಿದ್ದಾರೆ, ನಾನು ಅಳಬೇಕು. ಅನ್ಯಾಯವಾಗಿದೆಯೆಂದು ಅವರು ಕರುಣೆ ತೋರಿಸುತ್ತಾರೆ. ನಾನು ಹನಿಗಣ್ಣಾಗಿ ಸೆರಗಲ್ಲಿ ಕಣ್ಣುಜ್ಜಿ ಕೂರಬೇಕು. ಒಮ್ಮೊಮ್ಮೆ ಭೀಕರ ಭವಿಷ್ಯವನ್ನು ನೆನದು ಅಳು ಬಂದದ್ದೂ ಉಂಟು. ಮಗನಿಗೆ ಉತ್ತಮ ಸಂಸ್ಕಾರ ಕೊಟ್ಟು ಗೃಹಸ್ಥಾಶ್ರಮವನ್ನು ಕೊಡಿಸಿ ಒಂದೇ ವರ್ಷದಲ್ಲಿ ನಿಮ್ಮೊಡನೆ ಬಂದು ಬಿಡುವ ನಿರ್ಧಾರವನ್ನೂ ಮಾಡಿದ್ದೇನೆ. ಅದೂ ಈ ಕ್ಷಣದ ನಿರ್ಧಾರವೇ ಆಗಿದೆ. ಸಿಂಗಲ್ ಪೇರೇಂಟಿಂಗ್ ಕಷ್ಟ ಈಗೀಗ ಅರ್ಥವಾಗುತ್ತಿದೆ. ಸಾವು ತಾನಾಗೇ ಬಂದರೆ ಸುಖ, ನಾವಾಗೇ ತೆಗೆದುಕೊಳ್ಳುವುದು ಅಸುಖ ಮತ್ತು ಪಾಪ. ನಾನು ಬದುಕುತ್ತೇನೆ ಮತ್ತು ಮಗನನ್ನು ದೇಶಹಿತಕ್ಕಾಗುವಂತೆ ಬೆಳೆಸುತ್ತೇನೆ. ನಿಮ್ಮ ಆಶೀರ್ವಾದವಿರಲಿ.
ನಿಮ್ಮವಳು
ಪ್ರಜ್ಞಾ

PC Google

5 thoughts on “ಹಠದ ಮುಖವಾಡವನ್ನು ತೊಟ್ಟಿದ್ದೇನೆ”

 1. Ganapathi Bhat says:

  Very emotional and heart touching 💟💟

 2. satish joshi says:

  very interesting way of storytelling. Will read all the articles and especially stories.
  All the best.

  1. ksraghavendranavada says:

   Thanks sir

 3. A very talented writer. But the story is heart rending . I cried involuntarily. I wanted to circulate
  the story in my whatsapp group for its literary quality. But I did not do so because I didn’t want others to cry as I did

  1. ksraghavendranavada says:

   Thanks for the reply

Leave a Reply

Your email address will not be published. Required fields are marked *

Related Post

ಕೊಡಲಿಯೊಳಗಿನ ಕಾವುಕೊಡಲಿಯೊಳಗಿನ ಕಾವು

ಎ೦ಥ ಮಾತನ್ನಾಡಿಬಿಟ್ಟ ಅಪ್ಪ,ಮಗನಿಗೆ, ತನ್ನ ತಾಯಿಯನ್ನೇ ಕೊ೦ದುಬಿಡು ಅ೦ದುಬಿಟ್ಟನಲ್ಲ.ಅಮ್ಮನಾದರೂ ಹೇಳಬಾರದೇ ಏನಾಯಿತೆ೦ದು, ಪತಿಗೆ ತಕ್ಕ ಸತಿಯೆನೆಸಿಕೊಳಬೇಕೆ೦ಬ ಅತಿಯಾದ ಬಯಕೆಯಿತ್ತೇ ಅಮ್ಮನಲ್ಲಿ? ಛೆ! ಅಮ್ಮ ಎ೦ದಿಗೂ ಹಾಗೆ ನಡೆದುಕೊಳ್ಳಲಿಲ್ಲ.ಹಗಲಿರುಳೂ ಅಪ್ಪನಿಗಾಗಿ ದುಡಿದು ಬಳಲಿಬಿಟ್ಟಿದ್ದಳು, ಅಮ್ಮ. ಕೊಟ್ಟಿಗೆಯಲ್ಲಿನ ಅಷ್ಟೂ ಗೋವುಗಳಿಗೆ ಮೇವು ಹಾಕಿ,ಮೇವು ಹಾಕಲು ಶಿಷ್ಯರಿದ್ದರೂ ಕೂಡ ಅಮ್ಮ ಅವರ ಜೊತೆ

“ಅರುಣರಾಗ“ (ಕಥೆ)“ಅರುಣರಾಗ“ (ಕಥೆ)

೧ “ಅಗ್ನಿಮೀಳೇ ಪುರೋಹಿತ೦ ಯಜ್ಞಸ್ಯ ದೇವ ಮೃತ್ವಿಜ೦“…. ನಿಧಾನವಾಗಿ ದೇವರ ಮನೆಯಿ೦ದ ಕೇಳಿ ಬರುತ್ತಿದ್ದ ಮ೦ತ್ರದಿ೦ದಲೇ ನನಗೆ ಗೊತ್ತಾಗಿ ಹೋಯಿತು. ರಾಯರು ಮನೆಯಲ್ಲಿಯೇ ಇದ್ದಾರೆ೦ದು. ಮು೦ದಡಿಯಿಡುತ್ತಿದ್ದ  ಕಾಲನ್ನು ಹಿ೦ದೆಗೆದೆ. ಕರೆಗ೦ಟೆ ಒತ್ತು ವುದೇ ಬೇಡವೇ ಎ೦ಬ ಸ೦ದೇಹ… ಸ್ವಲ್ಪ ಹೊತ್ತು ಕಾಯೋಣವೆ೦ದು. ನಿರ್ಮಾಲ್ಯ ಸ್ನಾನ.. ಅಲ೦ಕಾರ.. ನೈವೇದ್ಯ ಮ೦ಗಳಾರತಿ..

ರೆಕ್ಕೆರೆಕ್ಕೆ

ಟೇಬಲ್ಲಿನ ಮೇಲಿದ್ದ ಪತ್ರವನ್ನು ಅವನು ದಿಟ್ಟಿಸತೊಡಗಿದ್ದ, ಜ್ಞಾನವಿಭು, ಸಣ್ನಗಿನ ದೇಹದ ಅವನಿಗೆ ಯಾವುದೇ ಬಟ್ಟೆ ಹಾಕಿದರೂ ಅದು ಮೊಳೆಗೆ ನೇತುಹಾಕಿದ ಶರ್ಟಿನಂತೆಯೇ ಕಾಣುತ್ತಿತ್ತು. ಕೂದಲಲ್ಲಿ ಹೊಟ್ಟು ಹೆಚ್ಚಾಗಿ ಹುಬ್ಬಿನ ಮೇಲೆಲ್ಲಾ ಇಳಿದಿರುತ್ತಾ , ಪೌಡರ್ ಚಿಮುಕಿಸಿದಂತೆ ಕಾಣುತ್ತಿತ್ತು. ಆಗಾಗ ಕುತ್ತಿಗೆಯ ಹಿಂದೆ ತುರಿಸಿಕೊಳ್ಳುತ್ತಾ ತನ್ನ ಕತ್ತನ್ನು ಹಿಂದಕ್ಕೂ ಮುಂದಕ್ಕೂ