ಭವದ ಬೆಳಕಿನ ಭಗವದ್ಗೀತೆ – ೧

ಲೇಖಕರ ಪರಿಚಯ
ಶ್ರೀಮತಿ ಹೆಚ್ ಕೆ ಪ್ರಭಾರವರು ಸಂಸ್ಕೃತ ಕೋವಿದರು. ಅಭಿನಯದಲ್ಲಿ ಆಸಕ್ತಿ ಮತ್ತು ಸಾಹಿತ್ಯದ ಅಧ್ಯಯನದಲ್ಲಿ ನಿರತ ನಿರಂತರ ಓದುಗರು. ಬಿ ಎಸಿ ಪದವಿ ಮುಗಿಸಿದ ಪ್ರಭಾರವರಿಗೆ ಸಧ್ಯ ಅರವತ್ತೆರಡರ ಪ್ರಾಯ. ಮೂಲ ಹಾಸನದ ಹುಲುಗುಂಡಿ ಗ್ರಾಮದವರು, ತಂದೆ ಕೃಷ್ಣ ಅಯ್ಯಂಗಾರ್ ವೃತ್ತಿಯಲ್ಲಿ ಅಧ್ಯಾಪಕರಾಗಿದ್ದವರು. ತಾಯಿ ಸುಶೀಲಮ್ಮ. ತಾತ ಶ್ರೀನಿವಾಸ ಅಯ್ಯಂಗಾರ್ ಸಂಸ್ಕೃತದಲ್ಲಿ ವಿದ್ವಾಂಸರು, ಶ್ರೀಮತಿ ಪ್ರಭಾರವರಿಗೆ ಹಾಡುಗಳಲ್ಲಿ ಆಸಕ್ತಿ. ಅಧ್ಯಾತ್ಮ, ಚಿಂತನೆ, ಪುಸ್ತಕದ ಓದು ಅವರ ಮೂಲ ಗುಣ ಇದರೊಟ್ಟಿಗೆ ಸಂಘಟನಾ ಶಕ್ತಿ ಅವರ ಶಕ್ತಿ. ಸ್ಮೃತಿ ಮಹಿಳಾ ಸಮಾಜ (೧೬ ವರ್ಷದಿಂದ)ದ, ವಿಜಯನಗರದ ಸಂಘಟಕರು. ಪತಿ. ಹೆಚ್ ಜೆ ಕೃಷ್ಣಮೂರ್ತಿ ಯವರ ಒತ್ತಾಸೆಯಿಂದ ಅಧ್ಯಾತ್ಮದೆಡೆಗೆ ಒಲವು ಮತ್ತು ಇವರ ಪ್ರತಿಭೆಗೆ ಪ್ರೋತ್ಸಾಹ ದೊರಕಿರುವುದು ಅವರ ಹೆಮ್ಮೆ. ಅವರು ನಡೆಸುವ ಮಹಿಳಾ ಸಮಾಜ ಹಲವಾರು ಸ್ಪರ್ಧೆ, ಶೈಕ್ಷಣಿಕ ಕಾರ್ಯಕ್ರಮಗಳು, ವೃದ್ಧಾಶ್ರಮ, ಅನಾಥ ಮಕ್ಕಳಿಗೆ ಸಹಾಯ. ಹೆಲ್ತ್ ಕ್ಯಾಂಪ್ಸ್ ಗಳನ್ನು ಆಯೋಜಿಸಿದ್ದಾರೆ. ಈ ಎಲ್ಲ ಕಾರ್ಯವೂ ಸದಸ್ಯರ ಬೆಂಬಲದಿಂದಮಾತ್ರ ನನ್ನದೇನೂ ಇಲ್ಲವೆನ್ನುವ ಸೌಜನ್ಯ ಮತ್ತು ದೊಡ್ಡತನ ಪ್ರಭಾರವರದು.

 

ಶ್ರೀಮತಿ ಪ್ರಭಾರ ರೆಕಾರ್ಡಿಂಗ್ ಗಳನ್ನು ಲಿಪಿರೂಪಕ್ಕಿಳಿಸಿ ಮತ್ತು ಹೆಚ್ಚಿನಾಂಶಗಳನ್ನು ಸೇರಿಸಿ ಪ್ರಸನ್ನಗೊಳಿಸಿದ್ದು ಶ್ರೀಮತಿ ವಿನುತಾ ಪಾಟೀಲ್

 

ಕಾಲದ ಕನ್ನಡಿಯಲ್ಲಿ ಶ್ರೀಮತಿ ಪ್ರಭಾರವರ ಭಗವದ್ಗೀತಾ ದರ್ಪಣ ಕಾರ್ಯಕ್ರಮವನ್ನು ವಾಚನ ಮತ್ತು ಲೇಖನದ ಪಾಠ ನಡೆಯಲಿದೆ. ಭಗವದ್ಗೀತೆ ಆನೆಯಂತಹುದು, ಸಿಕ್ಕವನಿಗೆ ಸಿಕ್ಕಷ್ಟೇ ತತ್ತ್ವ. ಪ್ರತಿದಿನವೂ ಪ್ರತಿಕಾಲವೂ ಹೊಸತನ್ನೇ ಕೊಡುವ ಅಮೃತ ಭಗವದ್ಗೀತೆ.

ಶ್ರೀಮದ್ ಭಗವದ್ಗೀತೆ, ಇದೊಂದು ಪರಮ ರಹಸ್ಯದ ವಿಷಯ. ಇದನ್ನು ಪರಮ ಕೃಪಾಳುವಾದ ಭಗವಂತನಾದ ಶ್ರೀ ಕೃಷ್ಣನು ಅರ್ಜುನನ್ನು ನಿಮಿತ್ತವಾಗಿಟ್ಟುಕೊಂಡು ಎಲ್ಲ ಪ್ರಾಣಿಗಳ ಹಿತಕ್ಕಾಗಿ ಹೇಳಿದ್ದಾನೆ. ಆದರೆ ಭಗವಂತನಲ್ಲಿ ಶರಣಾಗಿ ಶ್ರದ್ಧಾ ಭಕ್ತಿಗಳ ಸಹಿತ ಇದರ ಅಭ್ಯಾಸ ಮಾಡುವವರು ಮಾತ್ರ ಇದರ ಪ್ರಭಾವವನ್ನು ತಿಳಿದುಕೊಳ್ಳಬಲ್ಲರು. ಆದುದರಿಂದ ತಮ್ಮ ಶ್ರೇಯಸ್ಸನ್ನು ಬಯಸುವವರು ಆದಷ್ಟು ಶೀಘ್ರವಾಗಿ ಅಜ್ಞಾನದ ನಿದ್ರೆಯಿಂದ ಎಚ್ಚೆತ್ತು ತಮ್ಮ ಮುಖ್ಯ ಕರ್ತವ್ಯವೆಂದು ತಿಳಿಯುತ್ತಾ ಶ್ರದ್ಧಾ ಭಕ್ತಿ ಸಹಿತ ಯಾವಾಗಲೂ ಇದರ ಶ್ರವಣ, ಮನನ, ಅಧ್ಯಯನ ಮತ್ತು ಅಧ್ಯಾಪನಗಳ ಮೂಲಕ ಅಭ್ಯಾಸ ಮಾಡುತ್ತ ಭಗವಂತನ ಆಜ್ಞಾನುಸಾರ ಸಾಧನೆಯಲ್ಲಿ ನಿರತರಾಗಬೇಕು. ಏಕೆಂದರೆ ಯಾರು ಶ್ರದ್ಧಾ ಭಕ್ತಿ ಸಹಿತ ಇದರ ಮರ್ಮವನ್ನು ತಿಳಿದುಕೊಳ್ಳಲು ಇದರ ಅಂತರಾಳವನ್ನು ಪ್ರವೇಶಿಸಿ ಯಾವಾಗಲೂ ಇದರ ಮನನ ಮಾಡಿಕೊಳ್ಳುತ್ತಾ ಭಗವಂತನ ಆಜ್ಞಾನುಸಾರ ಸಾಧನೆ ಮಾಡುವುದರಲ್ಲಿ ತತ್ಪರರಾಗಿರುತ್ತಾರೋ ಅವರ ಅಂತಃಕರಣದಲ್ಲಿ ಪ್ರತಿದಿವಸವೂ ಹೊಸ ಹೊಸ ಸದ್ಭಾವಗಳು ಉತ್ಪತ್ತಿಯಾಗುತ್ತಾವೆ. ಅವರು ಶುದ್ಧಾಂತಃಕರಣರಾಗಿ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯುತ್ತಾರೆ. ಅಲ್ಲದೇ ಇಹ ವ್ಯಾಪರದಲ್ಲೂ ಕೂಡ ಮನಸ್ಸಿನ ಸಮತೋಲನವನ್ನು ಸಾಧಿಸುತ್ತಾರೆ.

************************************************************************************************************************
ಧ್ಯಾನ ಶ್ಲೋಕ ೧
ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ,
ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್ |
ಅದ್ವೈತಾಮೃತವರ್ಷಿಣೀಂ ಭಗವತೀಂ ಅಷ್ಟಾದಶಾಧ್ಯಾಯಿನೀಮ್
ಅಂಬ ತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇಷಿಣೀಮ್
ಪದ ವಿಭಾಗ
ಓಂ ಪಾರ್ಥಾಯ ಪ್ರತಿ ಭೋದಿತಾಂ ಭಗವತಾ ನಾರಾಯಣೇನ ಸ್ವಯಂ ವ್ಯಾಸೇನ ಗ್ರಥಿತಾಂ ಪುರಾಣ ಮುನಿನಾ ಮಧ್ಯೇ ಮಹಾ ಭಾರತಂ ಅದ್ವೈತಾಂಮೃತ ವಷಿ೯ಣೀಂ ಭಗವತೀಂ ಅಷ್ಟಾದಶ ಅಧ್ಯಾಯಿನೀಂ ಅಂಬಾ ತ್ವಾಂ ಅನುಸಂದಧಾಮೀ ಭಗವದ್ಗೀತೇ ಭವತ್ ದ್ವೇಷಿಣೀಂ

ಪದಶಃ ಅರ್ಥ
ಸ್ವಯಂ ಭಗವತ = ಸ್ವಯಂ ಭಗವಂತನಾದ, ನಾರಾಯಣೇನ = ನಾರಾಯಣನಿಂದ ಅಥವಾ ಶ್ರೀ ಕೃಷ್ಣನಿಂದ, ಪಾರ್ಥಾಯ = ಅರ್ಜುನನಿಗೆ, ಪ್ರತಿ ಭೋದಿತಾಂ = ಉಪದೇಶಿಸಲ್ಪಟ್ಟದ್ದಾಗಿಯು, ಪುರಾಣ ಮುನಿನಾ ವ್ಯಾಸೇನ = ಮಹಷಿ೯ ವೇದವ್ಯಾಸರಿಂದ, ಮಹಾಭಾರತಂ = ಮಹಾಭಾರತದ, ಮಧ್ಯೇ = ಮಧ್ಯದಲ್ಲಿ, ಗ್ರಥಿತಾಂ = ಸೇರಿಸಲ್ಪಟ್ಟದ್ದಾಗಿಯೂ, ಅಷ್ಟಾದಶಾಧ್ಯಾಯಿನೀಂ = ಹದಿನೆಂಟು ಅಧ್ಯಾಯಗಳಿಂದ ಕೂಡಿದುದಾಗಿಯೂ, ಅದ್ವೈತಾ ಅಮೃತ ವಷಿ೯ಣೀಂ = ಅದ್ವೈತಾಮೃತವೆಂಬ ಮಳೆಯನ್ನು ಸುರಿಸುತ್ತಿರುವ, ಭವತ್ ದ್ವೇಷಿಣೀಂ = ಭವ ಕಮ೯ಗಳನ್ನು ಹೋಗಲಾಡಿಸುವ, ಅಂಬಾ ಭಗವದ್ಗೀತೆ = ಹೇ ಮಾತೆ ಭಗವದ್ಗೀತೆಯೇ, ತ್ವಾಂ = ನಿನ್ನನ್ನು, ಅನುಸಂದಧಾಮೀ = ಧ್ಯಾನಿಸುತ್ತೇನೆ.

ತಾತ್ಪರ್ಯ
ಸ್ವಯಂ ಭಗವಂತನಾದ ಶ್ರೀ ಕೃಷ್ಣನಿಂದ ಅರ್ಜುನನಿಗೆ ಉಪದೇಶಿಸಲ್ಪಟ್ಟದ್ದಾಗಿಯೂ, ಮಹರ್ಷಿ ವೇದವ್ಯಾಸರಿಂದ ಮಹಾಭಾರತದ ಮಧ್ಯದಲ್ಲಿ ಸೇರಿಸಲ್ಪಟ್ಟದ್ದಾಗಿಯೂ, ಹದಿನೆಂಟು ಅಧ್ಯಾಯಗಳಿಂದ ಕೂಡಿದುದಾಗಿಯೂ, ಅದ್ವೈತಾಮೃತವೆಂಬ ಮಳೆಯನ್ನು ಸುರಿಸುದುದಾಗಿಯೂ, ಭವ ಕರ್ಮಗಳನ್ನು ಹೋಗಲಾಡಿಸುವುದಾಗಿಯೂ ಇರುವ ಹೇ ಮಾತೆ ಭಗವದ್ಗೀತೆಯೇ ನಿನ್ನನ್ನು ಧ್ಯಾನಿಸುತ್ತೇನೆ.

ಧ್ಯಾನ ಶ್ಲೋಕ ೨

ನಮೋ‌sಸ್ತು ತೇ ವ್ಯಾಸ ವಿಶಾಲಬುದ್ಧೆ ಫುಲ್ಲಾರವಿಂದಾಯತಪತ್ರನೇತ್ರ |
ಯೇನ ತ್ವಯಾ ಭಾರತತೈಲಪೂರ್ಣಃ ಪ್ರಜ್ವಲಿತೋ ಜ್ಞಾನಮಯಃ ಪ್ರದೀಪಃ

ಪದ ವಿಭಾಗ
ನಮೋಃ ತು ತೇ ವ್ಯಾಸ ವಿಶಾಲ ಬುದ್ಧೇ ಪುಲ್ಲಾರವಿಂದಾಯತ ಪತ್ರ ನೇತ್ರ ಏನತ್ವಯಾ ಭಾರತತೈಲ ಪೂರ್ಣಃ ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ

ಪದಶಃ ಅರ್ಥ
ಪುಲ್ಲಾರವಿಂದಾಯತ ಪತ್ರ ನೇತ್ರ = ಅರಳಿದ ತಾವರೆಯ ಎಸಳಿನಂತೆ ಕಣ್ಣುಗಳುಳ್ಳ, ಅರವಿಂದ = ತಾವರೆ, ವಿಶಾಲ ಬುದ್ಧೇ = ವಿಶಾಲ ಬುದ್ಧಿಯ, ಭಾರತ ತೈಲ ಪೂರ್ಣಃ = ಭಾರತ ತೈಲದಿಂದ ತುಂಬಿರುವ, ಜ್ಞಾನಮಯ ಪ್ರದೀಪಃ = ಜ್ಞಾನ ದೀಪವನ್ನು, ಪ್ರಜ್ವಾಲಿತೋ = ಬೆಳಗಿದ, ತೇ ವ್ಯಾಸ = ವ್ಯಾಸನೇ ನಿನಗೆ, ನಮೋಸ್ತು = ನಮಸ್ಕಾರ.

ತಾತ್ಪರ್ಯ
ಅರಳಿದ ತಾವರೆಯ ಎಸಳಿನಂತೆ ಕಣ್ಣುಗಳುಳ್ಳ, ವಿಷಾಲವಾದ ಬುದ್ಧಿಯುಳ್ಳ, ಭಾರತ ತೈಲದಿಂದ ತುಂಬಿರತಕ್ಕಂತಹ ಜ್ಞಾನ ದೀಪವನ್ನು ಬೆಳಗಿದ ಹೇ ವ್ಯಾಸ ದೇವನೇ ನಿನಗೆ ನಮಸ್ಕಾರ. ಭಾರತದೇಶವೆನ್ನುವುದೇ ತೈಲವೆನ್ನುವುದು ಇಲ್ಲಿನ ಸ್ವಾರಸ್ಯ. ಯಾವ ಜ್ಞಾನದೀಪವನ್ನು ಬೆಳಗಲು ತೈಲವು ಅವಶ್ಯವೋ ಆ ತೈಲ ಭಾರತವೆಂಬ ದೇಶ. ಜ್ಞಾನದ ಬೆಳಕನ್ನು ಹೊತ್ತಿಸಿದವನು ಮಹರ್ಷಿ ವ್ಯಾಸನಾದರೆ, ನಮ್ಮ ಅಧ್ಯಯನ/ ಮನನ ಅನುಸರಣವೇ ಬತ್ತಿಯಂತೆ. ದೇಶದ ತೈಲವನೀಂಟಿ ಉರಿದು ಜ್ಞಾನದ ಬೆಳಕನ್ನು ಚೆಲ್ಲುವ ಪ್ರಯತ್ನವೇ ನಮ್ಮ ಬದುಕಿನ ಧ್ಯೇಯ

ಧ್ಯಾನ ಶ್ಲೋಕ ೩
ಪ್ರಪನ್ನಪಾರಿಜಾತಾಯ ತೋತ್ರವೇತ್ರೈಕಪಾಣಯೆ |
ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ

ಪದ ವಿಭಾಗ
ಪ್ರಪನ್ನ ಪಾರಿಜಾತಾಯ ತೋತೃ ವೇತೃ ಏಕಪಾಣಯೇ ಜ್ಞಾನ ಮುದ್ರಾಯ ಕೃಷ್ಣಾಯ ಗೀತಾಮೃತದು ಹೇ ನಮಃ

ಪದಶಃ ಅರ್ಥ
ಪ್ರಪನ್ನ ಪಾರಿಜಾತಯ = ಶರಣಾಗಿ ಬಂದವರಿಗೆ ಬೇಕಾದುದನ್ನು ದಯಪಾಲಿಸುವ, ತೋತೃ ವೇತೃ ಏಕಪಾಣಯೇ = ಚಾಟಿಯಿಂದ ಕೂಡಿದ ಬೆತ್ತವನ್ನು ಒಂದು ಕೈಯಲ್ಲಿಯೂ, ಜ್ಞಾನ ಮುದ್ರಾಯ = ಜ್ಞಾನ ಮುದ್ರೆಯನ್ನು ಧರಿಸಿರುವ, ಗೀತಾಮೃತದು ಹೇ = ಅಮೃತಕ್ಕೆ ಸಮಾನವಾದಂತಹ ಗೀತೆಯೆಂಬ ಹಾಲನ್ನು ಹಿಂಡುವ, ಕೃಷ್ಣಾಯ = ಕೃಷ್ಣನಿಗೆ, ನಮಃ = ನಮಸ್ಕಾರ

ತಾತ್ಪರ್ಯ
ಶರಣು ಬಂದವರಿಗೆ ಬೇಕಾದುದನ್ನು ದಯಪಾಲಿಸುವ, ಎಡಗೈಯಲ್ಲಿ ಚಾಟಿಯಿಂದ ಕೂಡಿದ ಬೆತ್ತವನ್ನು ಬಲಗೈಯಲ್ಲಿ ಜ್ಞಾನಮುದ್ರೆಯನ್ನು ಧರಿಸಿದ ಅಮೃತಕ್ಕೆ ಸಮಾನವಾದ ಗೀತೆ ಎಂಬ ಹಾಲನ್ನು ಹಿಂಡುವ ಗೋಪಾಲ ಕೃಷ್ಣನಿಗೆ ನಮಸ್ಕಾರ. ಇಲ್ಲಿ ಗೋಪಾಲಕನು ಕೃಷ್ಣ , ಇಡೀ ಭೂಮಂಡಲವನ್ನು ಕಾಯುವ ಕೆಲಸ ಅವನದೇ. ಕಾಮಧೇನುವಿನಂತಹ ಭಗವದ್ಗೀತೆಯನ್ನು ನಮಗೆ ಕುಡಿಯಲು ಕೊಡುತ್ತಿರುವವನು ಅವನೇ... ಎನ್ನುವುದು ಈ ಸಾಲಿನಲ್ಲಿರುವ ಸತ್ಯ  ಮತ್ತು ಸೌಂದರ್ಯ

ಧ್ಯಾನ ಶ್ಲೋಕ ೪
ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲ ನಂದನಃ|
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್

ಪದ ವಿಭಾಗ
ಸರ್ವೋಪ ನಿಷದಃ ಗಾವಃ ದುಘ್ಧಾ ಗೋಪಾಲ ನಂದನಃ
ಪಾರ್ಥೋ ವತ್ಸಃ ಸುಧೀಃ ಭೋಕ್ಥಾ ದುಘ್ಧಂ ಗೀತಾಮೃತಂ ಮಹತ

ಪದಶಃ ಅರ್ಥ
ಸರ್ವೋಪ ನಿಷದೋ = ಎಲ್ಲಾ ಉಪನಿಷತ್ತುಗಳು, ಗಾವಃ = ಗೋವುಗಳು, ಗೋಪಾಲ ನಂದನಃ = ಗೋಪಾಲ ನಂದನನು, ದೋಘ್ಧಾ = ಹಾಲು ಕರೆಯುವವನು,  ಪಾರ್ಥೋ = ಪಾರ್ಥನು, ವತ್ಸಃ = ಕರು, ಮಹತ್ ಗೀತಾಮೃತಂ ದುಘ್ಧಂ = ಮಹತ್ ಗೀತಾಮೃತವೇ ಹಾಲು, ಸುಧೀಃ ಭೋಕ್ಥಾ = ಅಮೃತ ಸಮಾನವಾದಂತಹ ಹಾಲನ್ನು ಅಂದರೆ ಗೀತೆಯನ್ನು, ಸುಧೀಃ = ಜ್ಞಾನಿಗಳು, ಭೋಕ್ಥಾ = ಕುಡಿಯುವುದು (ಕುಡಿಯಲ್ಪಡುತ್ತದೆ).

ತಾತ್ಪರ್ಯ
ಎಲ್ಲ ಉಪನಿಷತ್ತುಗಳು - ಗೋವುಗಳು, ಗೋಪಾಲ ನಂದನನು - ಹಾಲು ಕರೆಯುವವನು, ಪಾರ್ಥನು - ಕರು, ಮಹತ್ ಗೀತಾಮೃವೇ ಹಾಲು, ಜ್ಞಾನಿಗಳು ಅದನ್ನು ಕುಡಿಯುವರು.
************************************************************************************************************************
ಧ್ಯಾನ ಶ್ಲೋಕ ೫
ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ |
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್
ಪದ ವಿಭಾಗ
ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಂ ದೇವಕೀ ಪರಮಾನಂದಂ ಕೃಷ್ಣಂ ವಂದೇ ಜದ್ಗುರುಂ

ಪದಶಃ ಅರ್ಥ
ವಸುದೇವಸುತಂ = ವಸುದೇವನ ಮಗನು, ಕಂಸ ಚಾಣೂರ ಮರ್ದನಂ = ಕಂಸ ಚಾಣೂರರನ್ನು ಮರ್ದಿಸಿದವನು, ದೇವಕೀ ಪರಮಾನಂದಂ = ದೇವಕಿಗೆ ಪರಮಾನಂದವನ್ನು ಉಂಟುಮಾಡಿದವನು, ಜದ್ಗುರುಂ = ಜಗತ್ತಿಗೆ ಆಚಾರ್ಯನು ಆದ, ದೇವಂ ಕೃಷ್ಣಂ = ಶ್ರೀ ಕೃಷ್ಣ ದೇವನಿಗೆ, ವಂದೇ = ನಮಸ್ಕರಿಸುತ್ತೇನೆ.

ತಾತ್ಪರ್ಯ
ವಸುದೇವನ ಮಗನು ಕಂಸ, ಚಾಣೂರರನ್ನು ಮರ್ದಿಸಿದವನು, ದೇವಕೀ ದೇವಿಯ ಆನಂದ ವರ್ಧಕನು, ಜಗತ್ತಿಗೆ ಆಚಾರ್ಯನು ಆದ ಶ್ರೀ ಕೃಷ್ಣನಿಗೆ ನಮಸ್ಕಾರ.
************************************************************************************************************************
ಧ್ಯಾನ ಶ್ಲೋಕ ೬
ಭೀಷ್ಮದ್ರೋಣತಟಾ ಜಯದ್ರಥಜಲಾ ಗಾಂಧಾರನೀಲೋತ್ಪಲಾ
ಶಲ್ಯಗ್ರಾಹವತೀ ಕ್ರಪೇಣ ವಹನೀ ಕರ್ಣೇನ ವೇಲಾಕುಲಾ |
ಅಶ್ವತ್ಥಾಮವಿಕರ್ಣಘೋರಮಕರಾ ದುರ್ಯೋಧನಾವರರ್ತಿನೀ
ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ

ಪದ ವಿಭಾಗ
ಭೀಷ್ಮ ದ್ರೋಣ ತಟ ಜಯದ್ರಥ ಜಲಾ ಗಾಂಧಾರ ನೀಲೋತ್ಪಲಾ ಶಲ್ಯ ಗ್ರಾಹವತಿ ಕ್ರಪೇಣ ವಹನಿ ಕರ್ಣೇನ ವೇಲಾಕುಲಾ ಅಶ್ವಥ್ಥಾಮ ವಿಕರ್ಣ ಘೋರ ಮಕರಾ ದುರ್ಯೋಧನ ಆವರ್ತಿನಿ ಸ ಉತ್ತೀರ್ಣ ಖಲು ಪಾಂಡವೈಹಿ ರಣನದಿ ಕೈ ವರ್ತಕಃ ಕೇಶವಃ

ಪದಶಃ ಅರ್ಥ
ಭೀಷ್ಮ ದ್ರೋಣ ತಟ = ಭೀಷ್ಮ ದ್ರೋಣರು ದಡದಂತೆ, ಜಯದ್ರಥ ಜಲಾ = ಜಯದ್ರಥನು ನೀರಿನಂತೆ, ಗಾಂಧಾರ = ಶಕುನಿಯು, ನೀಲೋತ್ಪಲ = ಕಲ್ಲು ಬಂಡೆಯಂತೆ, ಶಲ್ಯ = ಶಲ್ಯನು, ಗ್ರಾಹವತಿ = ತಿಮಿಂಗಿಲದಂತೆ, ಕೃಪೇಣ = ಕೃಪನು, ವಹನಿ = ಪ್ರವಾಹದ ಸೆಳೆವಿನಂತೆ, ಕರ್ಣೇನ = ಕರ್ಣನು, ವೇಲಾಕುಲ = ಪ್ರಕ್ಷುಬ್ಧವಾದ ಪ್ರವಾಹದಂತೆ, ಅಶ್ವಥ್ಥಾಮ ವಿಕರ್ಣ = ಅಶ್ವಥ್ಥಾಮ ವಿಕರ್ಣರು, ಘೋರ ಮಕರ = ಭಯಂಕರವಾದ ಮೊಸಳೆಗಳಂತೆ, ದುರ್ಯೋಧನ = ದುರ್ಯೋಧನನು, ಆವರ್ತಿನಿ = ಸುಳಿಯಂತಿದ್ದ, ರಣನದಿ = ರಣನದಿಯು, ಸ ಪಾಂಡವೈಹಿ = ಆ ಪಾಂಡವರಿಂದ, ಉತ್ತೀರ್ಣಾಖಲು = ದಾಟಲ್ಪಟ್ಟಿತಷ್ಟೇ, ಕೇಶವಾಃ = ಕೇಶವನು, ಕೈ ವರ್ತಕ = ಅಂಬಿಗನು.

ತಾತ್ಪರ್ಯ
ಭೀಷ್ಮ ದ್ರೋಣರು ದಡದ ಹಾಗೆ, ಜಯದ್ರಥನು ನೀರಿನಂತೆ, ಶಕುನಿಯು ಕಲ್ಲು ಬಂಡೆಯಂತೆ, ಶಲ್ಯನು ತಿಮಿಂಗಿಲದಂತೆ, ಕೃಪನು ಪ್ರವಾಹದ ಸೆಳೆವಿನಂತೆ, ಕರ್ಣನು ಪ್ರಕ್ಷುಬ್ಧ ಪ್ರವಾಹದಂತೆ, ಅಶ್ವತ್ಥಾಮ, ವಿಕರ್ಣರು ಭಯಂಕರವಾದ ಮೊಸಳೆಗಳಂತೆ, ದುರ್ಯೋಧನನು ಸುಳಿಯಂತೆ ಇದ್ದ ರಣನದಿಯನ್ನು ಪಾಂಡವರು ದಾಟಿದರು. ಅಂಬಿಗನು ಶ್ರೀ ಕೃಷ್ಣನು.    ಈ ಸಾಲಿನಲ್ಲಿನ ವೈಶಿಷ್ಟ್ಯವನ್ನು ಗಮನಿಸಿ,  ಇಡೀ ಯುದ್ಧರಂಗವನ್ನು ನದಿಯೆಂದುಕೊಂಡರೆ ಭೀಷ್ಮ ದ್ರೋಣರು ದಡದ ಹಾಗೆ, ನೀರಿನಿಂದ ದೂರ ಆದರೆ ಆ ನದಿಯ ನೀರು ಅವರನ್ನು ತಾಕುತ್ತಲೇ ಇರುತ್ತದೆ. ಅವರು ತಟಸ್ಥ. ಜಯದ್ರಥನೋ ಹರಿವ ನೀರಿನಂತೆ ಹರಿದು ಹೋಗುವವನೇ... ಇನ್ನು ಶಕುನಿ, ಭಾವವಿಲ್ಲದೆ, ಬರಿಯ ದ್ವೇಷವನ್ನು ಮೋಸವನ್ನು ತುಂಬಿಕೊಂಡವನು, ಕಲ್ಲುಬಂಡೆಯಂತೆ ಎಲ್ಲವನ್ನೂ ನೋಡುತ್ತಿರುವವನು, ನದಿಯ ನೀರು ಅವನನ್ನೇನೂ ಮಾಡದು. ಕೊಚ್ಚಿಕೊಂಡೂ ಹೋಗದು. ಬಂಡೆಯ ಒಳಭಾಗವನ್ನಂತೂ ಅದು ಒದ್ದೆಯಾಗಿಸದು. ಸರಿಯಾದ ಶಿಲ್ಪಿ ಸಿಕ್ಕು ಅವನು ವಿಗ್ರಹವಾಗಿದ್ದಿದ್ದರೆ ಈ ಮಹಾಭಾರತವೇ ನಡೆಯುತ್ತಿರಲಿಲ್ಲವೇನೋ. ಶಲ್ಯನು ಎಲ್ಲವನ್ನೂ ನುಂಗಿದವನು, ಕರ್ಣನ ಸೇನಾಧಿಪತ್ಯದಲ್ಲಿ ಅದರ ವಿಸ್ತಾರದ ಅರಿವಾಗುತ್ತದೆ. ಯಾವ ಪಡೆಗೆ ಒತ್ತಾಸೆ ಕೊಡಬೇಕೆಂದಾಗ ಭೀಷ್ಮನಿಗಿಂತ ತಿಳಿದವರಾರಿದ್ದಾರೆಂದು ಭೀಷ್ಮನ ಪಕ್ಷವನ್ನು ಸೇರಿದ.(ನೆನಪಿಡಿ, ದುರ್ಯೋಧನನ ಪಕ್ಷವೆಂದಲ್ಲ) ಕೃಪನು ನೀರಿನ ಪ್ರವಾಹದ ಸೆಳವಿನ ಶಕ್ತಿ. . ಪ್ರವಾಹವೆಂದರೆ ಹರಿವು ಎಂದಷ್ಟೇ ಅರ್ಥ. ತನ್ನೊಟ್ಟಿಗೆ ಕರ್ಣನು ಗೊಂದಲದ ಪ್ರವಾಹ. ಎತ್ತ ಹೋಗಬೇಕೆಂದು ತಿಳಿಯದ ಗೊಂದಲದ ಗೂಡು. ಉಕ್ಕಿ ಹರಿಯುವುದಷ್ಟೇ ಗೊತ್ತು. ಆದರೆ ಸರಿಯಾದ ಗಮನವಿಲ್ಲದೆ ಹರಿಯುವುದು ವೃಥಾ ಶಕ್ತಿ. ಅಶ್ವತ್ಥಾಮ ವಿಕರ್ಣರು ಭಯಂಕರವಾದ ಮೊಸಳೆಗಳಂತೆ ಎನ್ನುತ್ತಾನೆ. ಮೊಸಳೆಗಳು ಉಭಯವಾಸಿಗಳು. ಅತ್ತ ನೀರಿನಲ್ಲಿಯೂ ಇತ್ತ ದಡದಲ್ಲಿಯೂ ಇರುವಂತಹುವು. ದಡದ ಮಹಾತ್ಮ್ಯ ಇಬ್ಬರಿಗೂ ಗೊತ್ತು ಆದರೆ ವಿಧಿಯಿಲ್ಲದೆ ನೀರಿನಲ್ಲಿ ಘೋರವಾದ ಯುದ್ಧಕ್ಕೆ ನಿಂತಿದ್ದಾರೆ. ದುರ್ಯೋಧನನು ಸುಳಿಯಂತೆ, ದಾಯಾದಿ ದ್ವೇಷವೆನ್ನುವ ಸುಳಿಯನ್ನು ಸೃಷ್ಟಿಸಿಕೊಂಡಿದ್ದಾನೆ ಅದರಲ್ಲಿ ಅವನೇ ಸಿಲುಕುತ್ತಿದ್ದಾನೆ. ಆ ಸುಳಿಯಿಂದ ಅವನಿಗೂ ಸುಖವಿಲ್ಲ ಲೋಕಲ್ಲೂ ಸುಖವಿಲ್ಲ. ನೀರು ಹರಿದರೆ ಸುತ್ತಲಿನ ಪಾತ್ರ ಫಲವತ್ತಾಗುತ್ತದೆ. ಅಲ್ಲೇ ತಿರುಗುತ್ತಾ ಇದ್ದರೆ ಅಪ್ರಯೋಜಕವಾಗುತ್ತದೆ. ಸುಳಿ ಮತ್ತೆ ಮತ್ತೆ ಋಣಾತ್ಮಕವಾದುದನು ಯೋಚಿಸುವುದರ ಸಂಕೇತ ಮತ್ತು ನಿರ್ವಾತದ ಸಂಕೇತ. ಇಂತಹ ವೈಚಿತ್ರಗಳುಳ್ಳ ನದಿಯನ್ನು ದಾಟಲು ಪಾಂಡವರು ಸಿದ್ಧರಾಗಿದ್ದಾರೆ ಮತ್ತು ದಾಟಿಸಲು ಭಗವಂತ ಕೃಷ್ಣನು ಸಿದ್ಧನಾಗಿದ್ದಾನೆ.

ಧ್ಯಾನ ಶ್ಲೋಕ ೭
ಪಾರಾಶರ್ಯವಚಃ ಸರೋಜಮಮಲಂ ಗೀತಾರ್ಥಗಂಧೋತ್ಕಟಮ್
ನಾನಾಖ್ಯಾನಕಕೇಸರಂ ಹರಿಕಥಾಸಂಬೋಧನಾಬೋಧಿತಮ್ |
ಲೋಕೆ ಸಜ್ಜನಷಟ್ಪದೈರಹರಹಃ ಪೇಪೀಯಮಾನಂ ಮುದಾ
ಭೂಯಾದ್ಭಾರತಪಂಕಜಂ ಕಲಿಮಲಪ್ರಧ್ವಂಸಿ ನಃ ಶ್ರೇಯಸೇ

ಪದ ವಿಭಾಗ
ಪಾರಾ ಶೈರ್ಯ ವಚಃ ಸರೋಜಂ ಅಮಲಂ ಗೀತಾರ್ಥ ಗಂಧೋತ್ಕಟಂ ನಾನಾಖ್ಯಾನಕ ಕೇಸರಂ ಹರಿಕಥಾ ಸಂಭೋಧನಾ ಭೋಧಿತಂ ಲೋಕೇ ಸಜ್ಜನ ಷಟ್ಪದೈಹಿ ಅಮರಃ ಪೇಪೀಯಮಾನಂ ಮುದಾ ಭೂಯಾದ್ ಭಾರತ ಪಂಕಜಂ ಕರಿಮಲ ಪ್ರಧ್ವಂಸಿ ನಹ ಶ್ರೇಯಸೇ

ಪದಶಃ ಅರ್ಥ
ಪಾರಾ ಶೈರ್ಯ ವಚಃ = ಪಾರಾಶರರ ಮಗ ವ್ಯಾಸರ ಮಾತುಗಳೆಂಬ, ಸರೋಜಂ = ಸರೋವರದಲ್ಲಿ ಹುಟ್ಟಿದ, ಅಮಲಂ = ನಿರ್ಮಲವಾದ, ಗೀತಾರ್ಥ ಗಂಧೋತ್ಕಟಂ = ಗೀತಾರ್ಥವೆಂಬ ಶ್ರೇಷ್ಠವಾದ ಗಂಧವುಳ್ಳ, ನಾನಾಖ್ಯಾನಕ ಕೇಸರಂ = ಅನೇಕ ಉಪಕಥೆಗಳೆಂಬ ಕೇಸರಗಳುಳ್ಳ, ಹರಿಕಥಾ ಸಂಭೋಧನಾ ಭೋಧಿತಂ = ಹರಿಕಥೆಯೆಂಬ ತಿಳಿವಿನಿಂದ ಅರಳಿದ, ಲೋಕೇ = ಜಗತ್ತಿನಲ್ಲಿ, ಸಜ್ಜನ ಷಟ್ಪದೈಹಿ = ಸಜ್ಜನರೆಂಬ ಭ್ರಮರಗಳಿಂದ, ಅಹರಹಃ = ಪ್ರತಿದಿನವೂ, ಪೇಪೀಯಮಾನಂ ಮುದಾ = ಸಂತೋಷದಿಂದ ಮಕರಂದವನ್ನು ಕುಡಿಯಲ್ಪಡುವ, ಕರಿಮಲ ಪ್ರಧ್ವಂಸಿ = ಕಲಿಯುಗದ ದೋಷವನ್ನು ಕಳೆಯುವ, ಭಾರತ ಪಂಕಜಂ = ಭಾರತವೆಂಬ ಕಮಲವು, ನಹ = ನಮಗೆ, ಶ್ರೇಯಸೇ = ಶ್ರೇಯಸ್ಸನ್ನು, ಭೂಯಾದ್ = ಉಂಟುಮಾಡಲಿ.

ತಾತ್ಪರ್ಯ
ವ್ಯಾಸರ ಮಾತುಗಳೆಂಬ ಸರೋವರದಲ್ಲಿ ಹುಟ್ಟಿದ, ನಿರ್ಮಲವಾದ, ಗೀತಾರ್ಥವೆಂಬ ಶ್ರೇಷ್ಠವಾದ ಗಂಧವುಳ್ಳ ಅನೇಕ ಉಪಕಥೆಗಳಿಂದ ಕೂಡಿದ ಕೇಸರಗಳುಳ್ಳ, ಹರಿಕಥೆಗಳೆಂಬ ತಿಳಿವಿನಿಂದ ಅರಳಿದ, ಜಗತ್ತಿನಲ್ಲಿ ಸಜ್ಜನರೆಂಬ ಭ್ರಮರಗಳಿಂದ ಅರಳಿದ ಯಾವಾಗಲೂ ಸಂತೋಷದಿಂದ ಮಕರಂದವನ್ನು ಕುಡಿಯಲ್ಪಡುವ, ಕಲಿಯುಗದ ದೋಷವನ್ನು ಕಳೆಯುವ, ಭಾರತವೆಂಬ ಕಮಲವು ನಮಗೆ ಶ್ರೇಯಸ್ಸನ್ನು ಉಂಟುಮಾಡಲಿ. ಕಲಿಯುಗವೆನ್ನುವುದು ಕೆಸರಾದರೂ ಅದರಲ್ಲಿ ಭಾರತವು ಕಮಲದಂತೆ ಶೋಭಾಯಮಾನವಾದದ್ದು.
************************************************************************************************************************
ಧ್ಯಾನ ಶ್ಲೋಕ ೮
ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾಂದಂ ಮಾಧವಂ

ಪದ ವಿಭಾಗ
ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ ಯತ್ ಕೃಪಾ ತಂ ಅಹಂ ವಂದೇ ಪರಮಾನಂದ ಮಾಧವಂ

ಪದಶಃ ಅರ್ಥ
ಯತ್ ಕೃಪಾ = ಯಾರ ಕೃಪೆಯೋ, ಮೂಕಂ = ಮೂಕನನ್ನು, ವಾಚಾಲಂ ಕರೋತಿ = ವಾಚಾಳಿಯನ್ನಾಗಿ ಮಾಡುವುದೋ, ಪಂಗುಂ = ಕುಂಟನನ್ನು, ಗಿರಿಂ = ಪರ್ವತವನ್ನು, ಲಂಘಯತೇ = ಹಾರುವಂತೆ ಮಾಡುತ್ತದೋ, ತಂ ಆಹ ಪರಮಾನಂದ ಮಾಧವಂ = ಪರಮಾನಂದ ಸ್ವರೂಪನಾದ ಮಾಧವನು ಅರ್ಥಾತ್ ಶ್ರೀ ಕೃಷ್ನನನ್ನು, ಅಹಂ = ನಾನು, ವಂದೇ = ನಮಸ್ಕರಿಸುತ್ತೇನೆ.

ತಾತ್ಪರ್ಯ
ಯಾರ ಕೃಪೆಯಿಂದ ಮೂಕನು ವಾಚಾಳಿಯಾಗುವನೋ, ಯಾರ ಕೃಪೆಯಿಂದ ಕುಂಟನು ಪರ್ವತವನ್ನು ದಾಟುವನೋ ಆ ಪರಮಾನಂದ ಸ್ವರೂಪನಾದ ಶ್ರೀ ಕೃಷ್ಣನನ್ನು ನಾನು ನಮಸ್ಕರಿಸುತ್ತೇನೆ. ಇಲ್ಲಿನ ಪ್ರತಿಯೊಂದು ಮಾತನ್ನೂ ಪದಶಃ ಅರ್ಥೈಸಿಕೊಳ್ಳುವುದಕ್ಕಿಂತ ಅದರಲ್ಲಿನ ಸ್ವಾರಸ್ಯವನ್ನು ಗಮನಿಸಿ. ಮೂಕನು ಎಂದರೆ ಅಜ್ಞಾನಿಯು ಜ್ಞಾನವನ್ನು ಹೊಂದುವನ್ನು.ಲೋಕವನ್ನು ತಿಳಿಯುವನು ಎನ್ನುವ ಅರ್ಥ ಇಲ್ಲಿನದು. ಕುಂಟನು ಎಂದರೆ ಲೌಕಿಕನು (ರಾಗದ್ವೇಷಾದಿಗಳು ಹಿಂದೆ ಎಳೆಯುತ್ತಿರಲಾಗಿ ಕುಂಟುತ್ತಾ ಸಾಗುವವನು) ಮೋಕ್ಷವೆನ್ನುವ ಪರ್ವತನ್ನು ಹತ್ತಲು ಉಪಕ್ರಮಿಸುವನು. ಈ ಎಲ್ಲಾ ಕಾರ್ಯಗಳನ್ನು ಮಾಡಲಿ ಪ್ರಚೋದಿಸುವವನು ಶ್ರೀಕೃಷ್ಣನು

ಧ್ಯಾನ ಶ್ಲೋಕ ೯
ಯಂ ಬ್ರಹ್ಮಾ ವರುಣೇಂದ್ರ ರುದ್ರ ಮರುತಃ ಸ್ತುನ್ವಂತಿ ದಿವ್ಯೈ ಸ್ತವೈಃ |
ವೇದೈಃ ಸಾಂಗಪದಕ್ರಮೋಪನಿಷದೈ ರ್ಗಾಯಂತಿ$ ಯಂ ಸಾಮಗಾಃ ||
ಧ್ಯಾನಾವಸ್ಥಿತ ತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ |
ಯಸ್ಯಾಂತಂ ನ ವಿದುಃ ಸುರಾಸುರಾ ಗಣಾ ದೇವಾಯ ತಸ್ಮೈ ನಮಃ

ಪದ ವಿಭಾಗ
ಯಂ ಬ್ರಹ್ಮಾ ವರುಣ ಇಂದ್ರ ರುದ್ರ ಮರುತಃ ಸ್ತುನ್ವಂತಿ ದಿವೈಹಿ ಸ್ತವೈಹಿ
ವೇದೈಹಿ ಸಾಂಗ ಪದಕ್ರಮ ಉಪನಿಷದೈಹಿ ಗಾಯಂತಿ ಯಂ ಸಾಮಗಾಃ
ಧ್ಯಾನಾ ವಸ್ಥಿತ ತದ್ಘತೇನ ಮನಸಾ ಪಷ್ಯಂತಿ ಯಂ ಯೋಗಿನಃ
ಯಸ್ಯಾಂತಂ ನ ವಿದುಃ ಸುರಾಸುರಾಗಣಾಃ ದೇವಾಯ ತಸ್ಮೈ ನಮಃ

ಪದಶಃ ಅರ್ಥ
ಯಂ = ಯಾರನ್ನು, ಬ್ರಹ್ಮಾ = ಬ್ರಹ್ಮ, ವರುಣ = ವರುಣ, ಇಂದ್ರ = ಇಂದ್ರ, ರುದ್ರಾ = ರುದ್ರ, ಮರುತಃ = ಮರುದ್ಗಣಗಳು, ದಿವೈಹಿ ಸ್ತವೈಹಿ = ದಿವ್ಯವಾದ ಸ್ತೋತ್ರಗಳಿಂದ, ಸ್ತುನ್ವಂತಿ = ಕೊಂಡಾಡುತ್ತಾರೋ, ಯಂ = ಯಾರನ್ನು, ವೇದೈಹಿ ಸಾಂಗ ಪದಕ್ರಮ ಉಪನಿಷದೈಹಿ, ಸಾಮಾಗಾಃ = ಋಷಿಗಳು, ಅಂಗ ಪದಕ್ರಮ ಉಪನಿಷತ್ತುಗಳಿಂದ ಕೂಡಿ, ಗಾಯಂತಿ = ಹಾಡುತ್ತಾರೋ, ಯಂ = ಯಾರನ್ನು, ಯೋಗಿನಃ = ಯೋಗಿಗಳು, ಧ್ಯಾನಾ ವಸ್ಥಿತ ತದ್ಘತೇನ ಮನಸಾ = ಧ್ಯಾನವಸ್ಥೆಯಲ್ಲಿ ಅವನಲ್ಲಿ ನೆಟ್ಟ ಮನಸ್ಸುಳ್ಳವರಾಗಿ ನೋಡುತ್ತಾರೋ, ಯಸ್ಯಾಂತಂ = ಯಾರ ಅಂತ್ಯವನ್ನು, ಸುರಾಸುರ ಗಣಾಃ = ಸುರಾಸುರರೂ ಕೂಡ, ನ ವಿದುಃ = ತಿಳಿಯಲಾರರೋ ಅಂತಹ, ದೇವಾಯ = ದೇವನಿಗೆ, ನಮಃ = ನಮಸ್ಕಾರ.

ತಾತ್ಪರ್ಯ
ಬ್ರಹ್ಮ, ಇಂದ್ರ, ವರುಣ, ರುದ್ರ, ಮರುದ್ಗಣಗಳು ದಿವ್ಯ ಸ್ತೋತ್ರಗಳಿಂದ ಯಾರನ್ನು ಕೊಂಡಾಡುವರೋ, ಋಷಿಗಳು, ಅಂಗ, ಪದಕ್ರಮ, ಉಪನಿಷತ್ತುಗಳಿಂದ ಕೂಡಿದ, ಸಾಮ ವೇದ ಮಂತ್ರಗಳಿಂದ ಯಾರನ್ನು ಕೀರ್ತನೆ ಮಾಡುತ್ತಾರೋ, ಯೋಗಿಗಳು ನಿಶ್ಚಲ ಚಿತ್ತದಿಂದ ಯಾರನ್ನು ಕಾಣುತ್ತಾರೋ, ಸುರಾಸುರರು ಯಾರ ಅಂತ್ಯವನ್ನು ತಿಳಿಯಲಾರರೋ ಅಂತಹ ಪರಮಾತ್ಮನಿಗೆ ನಮಸ್ಕಾರ.
************************************************************************************************************************
ಇದುವರೆಗೂ ಧ್ಯಾನ ಶ್ಲೋಕಗಳನ್ನು ಕೇಳಿದಿರಿ. ಇನ್ನು ಭಗವದ್ಗೀತೆಯ ಪ್ರಥಮ ಅಧ್ಯಾಯವನ್ನು ಪ್ರಾರಂಭಿಸೋಣ. ಪ್ರಾರಂಭಿಸುವುದಕ್ಕೂ ಮುನ್ನ ಒಂದು ಚಿಕ್ಕ ಮುನ್ನುಡಿಯನ್ನು ತಮ್ಮ ಮುಂದೆ ಇಡಲು ಬಯಸುತ್ತೇನೆ. ಈ ಅಧ್ಯಾಯದಲ್ಲಿ ಅಂಧನಾದ ಧೃತರಾಷ್ಟ್ರನು, ಕೌರವರಿಗೂ ಪಾಂಡವರಿಗೂ ಯುದ್ಧ ಪ್ರಾರಂಭವಾಗುವ ಸನ್ನಿವೇಷದ ಕುರಿತು ಯುದ್ಧವನ್ನು ಅರಮನೆಯಲ್ಲಿಯೇ ಕುಳಿತು ನೋಡುವಂಥ ದಿವ್ಯ ದೃಷ್ಟಿಯನ್ನು ವ್ಯಾಸರ ಕೃಪ್ರೆಯಿಂದ ಪಡೆದಿರುವ ಸಂಜಯನನ್ನು ಕೇಳಿ ತಿಳಿದುಕೊಳ್ಳುತ್ತಾನೆ. ಪಾಂಡವರು ನ್ಯಾಯವಾಗಿ ತಮಗೆ ಬರಬೇಕಾದ ರಾಜ್ಯವನ್ನು ಪಡೆಯಲೋಸುಗ ೧೨ ವರ್ಷ ವನವಾಸ ಮಾಡಿ ೧ ವರ್ಷ ಅಜ್ಞಾತ ವಾಸವನ್ನು ಮಾಡಿದರು. ನಂತರ ಯುದ್ಧ ಶಾಂತಿಗಾಗಿ ಶ್ರೀ ಕೃಷ್ಣನ  ಮೂಲಕ ನಡೆದ ಪ್ರಯತ್ನ ವ್ಯರ್ಥವಾಗಲು ಪಾರ್ಥನು ಶ್ರೀ ಕೃಷ್ಣನು ತನ್ನ ರಥದ ಸಾರಥ್ಯವನ್ನು ವಹಿಸಿಕೊಳ್ಳಲು ಕೇಳಿಕೊಳ್ಳುತ್ತಾನೆ. ಜಗತ್ಪ್ರಭುವಾದ ಶ್ರೀ ಕೃಷ್ಣನಲ್ಲಿ ಅಚಲವಾದ ಭಕ್ತಿ ನಂಬಿಕೆ ಅರ್ಜುನನದು. ಹಾಗಾಗಿ ಕೃಷ್ಣನ ಕಡೆಯ ಅಷ್ಟೂ ಸೈನ್ಯವನ್ನು ನಿರಾಕರಿಸಿ ಶ್ರೀ ಕೃಷ್ಣನೊಬ್ಬನೇ ಸಾಕೆಂದು ಕೇಳಿಕೊಳ್ಳುತ್ತಾನೆ. ದುರ್ಯೋಧನನು ಎಲ್ಲ ಸೈನ್ಯವೂ ತನ್ನ ಕಡೆಗೆ ಇರಲಿ ಎಂದು ವಾಸುದೇವನನ್ನು ಕೇಳಿಕೊಳ್ಳುತ್ತಾನೆ. ಅಂತೆಯೇ ಪಾಂಡವರೂ, ಕೌರವರೂ ಯುದ್ಧಕ್ಕೆ ಸನ್ನದ್ಧರಾಗಿ ಕುರುಕ್ಷೇತ್ರದಲ್ಲಿ ಸೇರಿ ತಮ್ಮ ತಮ್ಮ ಶಂಖಗಳನ್ನೂ, ಭೇರಿ ನಗಾರಿಗಳನ್ನು, ರಣಕಹಳೆಗಳನ್ನು ಮೊಳಗಿಸಿತ್ತಾರೆ. ಆ ಶಬ್ಧ ನಭೋ ಮಂಡಲವನ್ನು ಮುಟ್ಟುವಂತೆ ಇರುತ್ತದೆ. ಏತನ್ಮಧ್ಯೆ, ಅರ್ಜುನನು ಏರಡೂ ಸೈನ್ಯಗಳನ್ನು ತಾನು ವೀಕ್ಷೀಸುತ್ತೇನೆ ಕೃಷ್ಣ, ನನ್ನ ರಥವನ್ನೂ ಎರಡೂ ಸೈನ್ಯಗಳ ಮಧ್ಯದಲ್ಲಿ ನಿಲ್ಲಿಸು ಎಂದು ಭಿನ್ನವಿಹಿಸಿದ ಮೇರೆಗೆ, ಶ್ರೀ ಕೃಷ್ಣ ರಥವನ್ನು ಸೈನ್ಯದ ಇಬ್ಭಾಗದಲ್ಲಿ ನಿಲ್ಲಿಸುತ್ತಾನೆ. ತನ್ನ ಕಡೆ, ಕೌರವರ ಕಡೆ ಸುತ್ತು ಮುತ್ತೂ ನೆರೆದವರಿಗೆ ತನ್ನ ಬಂಧು ಬಾಂಧವರನ್ನು ನೋಡುತ್ತಾ ಅರ್ಜುನನ ಮನಸ್ಸು ವ್ಯಾಕುಲಗೊಳ್ಳುತ್ತದೆ. ತನ್ನವರೆಂಬ ವ್ಯಾಮೋಹಕ್ಕೆ ಈಡಾಗಿ ತಾನು ಯುದ್ಧವನ್ನೇಕೆ ಮಾಡಬೇಕೆಂಬ ಆಲೋಚನೆಯನ್ನು ಶ್ರೀ ಕೃಷ್ಣನ ಬಳಿ ವ್ಯಕ್ತಪಡಿಸುತ್ತಾನೆ. ಆಗ ಈಗಿನ ಕಾಲದ ಮನೋವೈದ್ಯರು, ಆಪ್ತ ಸಮಾಲೋಚನೆ ಎಂದು ಇಂದು ಮಾಡುತ್ತಿದ್ದಾರೋ ಅದನ್ನು ಶ್ರೀ ಕೃಷ್ಣನು ಆಗಿನ ಕಾಲದಲ್ಲಿ ಅರ್ಜುನನನಿಗೆ ಮಾಡಿದ್ದ ಎಂಬ ಅಂಶವು ಮನಸ್ಸಿಗೆ ಬರುತ್ತದೆ. ಅರ್ಜುನನು ಶ್ರೀ ಕೃಷ್ಣನನ್ನು ಕುರಿತು, ಯಾರೆಲ್ಲರೊಡನೆ ರಾಜ್ಯ ಸುಖವನ್ನು ಅನುಭವಿಸಬೆಕೆಂದಿದ್ದೆವೋ ಅವರೆಲ್ಲರೂ ಯುದ್ಧದಲ್ಲಿ ಭಾಗವಹಿಸುತ್ತಿದ್ದಾರೆ. ಎಲ್ಲರನ್ನೂ ಕಳೆದುಕೊಂಡು ಈ ಭೋಗ ಭಾಗ್ಯಗಳು ನಮಗೆ ಬೇಕೆ? ಅಲ್ಲದೇ ಇವರೆಲ್ಲರನ್ನೂ ಕೊಂದು ರೌರವ ನರಕವನ್ನು ಸೇರಿ ಹಿಂಸೆಯನ್ನು ಅನುಭವಿಸುತ್ತೇವೆ. ನನ್ನ ಕೈ ಕಾಲು ಕುಸಿಯುತ್ತಿದೆ, ಗಂಟಲು ಒಣಗುತ್ತಿದೆ, ಕೃಷ್ಣ ನನ್ನನ್ನು ಯಾರೆಲ್ಲ ಕೊಂದರೂ ಪರವಾಗಿಲ್ಲ, ನನ್ನ ಸಾವು ಸಾರ್ಥಕ ಎಂದುಕೊಳ್ಳುತ್ತೇನೆ. ಈ ರೀತಿಯಾಗಿ ಶೋಕದಿಂದ ಉದ್ವೇಗಗೊಂಡ ಅರ್ಜುನನು ಬಾಣಗಳ ಸಹಿತ ಧನುಸ್ಸನ್ನು ತ್ಯಜಿಸಿ ರಥದ ಹಿಂಬದಿಯಲ್ಲಿ ಕುಳಿತುಕೊಳ್ಳುತ್ತಾನೆ. ಅಂದಿನ ಅರ್ಜುನನಂತೆ ದ್ವಂದಕ್ಕೆ ಸಿಲುಕಿರುವ ಅರ್ಜುನರನ್ನು ಇಂದು ನಾವು ನೋಡುತ್ತಿದ್ದೇವೆ. ಅಂದಿನ ಆ  ಗೀತ ಸಂದೇಶ ಅರ್ಜುನನಿಗೆ ಮಾತ್ರವಲ್ಲ, ಅದೊಂದು ಸಾರ್ವಕಾಲಿಕ ಸಂದೇಶ. ಅರ್ಜುನನು ತನ್ನ ದ್ವಂದ್ವವನ್ನು ಹೊರಗೆಡಹಿ, ತನ್ನ ಮಾನಸಿಕೆ ತುಮುಲವನ್ನೆಲ್ಲ ಹೊರಹಾಕುವವರೆಗೂ ಮೌನವನ್ನೆ ವಹಿಸಿದ್ದಾನೆ. ಇಂದಿನ ಆಪ್ತಸಮಾಲೋಚಕರಿಗೆ ಇದೊಂದು ನಿದರ್ಶನ, ಶ್ರೀ ಕೃಷ್ಣನ ಅಂದಿನ ನಡವಳಿಕೆ. ಎದುರಿಗಿರುವ ವ್ಯಕ್ತಿಯ ಮಾನಸಿಕ ವಿಪ್ಲವವನ್ನು ಹೊರತರುವಲ್ಲಿ ಅದು ಅತ್ಯಂತ ಅವಶ್ಯಕ ಎಂಬುದನ್ನು ಕೃಷ್ಣನು ಮನಗಾಣಿಸಿದ್ದಾನೆ.

Leave a Reply

Your email address will not be published. Required fields are marked *

Related Post

’ವಾಕ್’ ಸ್ವಾತಂತ್ರ್ಯ’ವಾಕ್’ ಸ್ವಾತಂತ್ರ್ಯ

ಲೇಖಕರ ಪರಿಚಯ ಶ್ರೀಮತಿ ಹೆಚ್ ಕೆ ಪ್ರಭಾರವರು ಸಂಸ್ಕೃತ ಕೋವಿದರು. ಅಭಿನಯದಲ್ಲಿ ಆಸಕ್ತಿ ಮತ್ತು ಸಾಹಿತ್ಯದ ಅಧ್ಯಯನದಲ್ಲಿ ನಿರತ ನಿರಂತರ ಓದುಗರು. ಬಿ ಎಸಿ ಪದವಿ ಮುಗಿಸಿದ ಪ್ರಭಾರವರಿಗೆ ಸಧ್ಯ ಅರವತ್ತೆರಡರ ಪ್ರಾಯ. ಮೂಲ ಹಾಸನದ ಹುಲುಗುಂಡಿ ಗ್ರಾಮದವರು, ತಂದೆ ಕೃಷ್ಣ ಅಯ್ಯಂಗಾರ್ ವೃತ್ತಿಯಲ್ಲಿ ಅಧ್ಯಾಪಕರಾಗಿದ್ದವರು. ತಾಯಿ ಸುಶೀಲಮ್ಮ.

ಸಮಾಜದ ದೃಷ್ಟಿಯಲ್ಲಿ ಸ್ತ್ರೀ, ಸ್ತ್ರೀವಾದ, ಸ್ತ್ರೀಧರ್ಮ.ಸಮಾಜದ ದೃಷ್ಟಿಯಲ್ಲಿ ಸ್ತ್ರೀ, ಸ್ತ್ರೀವಾದ, ಸ್ತ್ರೀಧರ್ಮ.

ಲೇಖಕರ ಪರಿಚಯ ಶ್ರೀಮತಿ ಹೆಚ್ ಕೆ ಪ್ರಭಾರವರು ಸಂಸ್ಕೃತ ಕೋವಿದರು. ಅಭಿನಯದಲ್ಲಿ ಆಸಕ್ತಿ ಮತ್ತು ಸಾಹಿತ್ಯದ ಅಧ್ಯಯನದಲ್ಲಿ ನಿರತ ನಿರಂತರ ಓದುಗರು. ಬಿ ಎಸಿ ಪದವಿ ಮುಗಿಸಿದ ಪ್ರಭಾರವರಿಗೆ ಸಧ್ಯ ಅರವತ್ತೆರಡರ ಪ್ರಾಯ. ಮೂಲ ಹಾಸನದ ಹುಲುಗುಂಡಿ ಗ್ರಾಮದವರು, ತಂದೆ ಕೃಷ್ಣ ಅಯ್ಯಂಗಾರ್ ವೃತ್ತಿಯಲ್ಲಿ ಅಧ್ಯಾಪಕರಾಗಿದ್ದವರು. ತಾಯಿ ಸುಶೀಲಮ್ಮ.

ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ… 3ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ… 3

ಲೇಖಕರ ಪರಿಚಯ ಶ್ರೀಮತಿ ಹೆಚ್ ಕೆ ಪ್ರಭಾರವರು ಸಂಸ್ಕೃತ ಕೋವಿದರು. ಅಭಿನಯದಲ್ಲಿ ಆಸಕ್ತಿ ಮತ್ತು ಸಾಹಿತ್ಯದ ಅಧ್ಯಯನದಲ್ಲಿ ನಿರತ ನಿರಂತರ ಓದುಗರು. ಬಿ ಎಸಿ ಪದವಿ ಮುಗಿಸಿದ ಪ್ರಭಾರವರಿಗೆ ಸಧ್ಯ ಅರವತ್ತೆರಡರ ಪ್ರಾಯ. ಮೂಲ ಹಾಸನದ ಹುಲುಗುಂಡಿ ಗ್ರಾಮದವರು, ತಂದೆ ಕೃಷ್ಣ ಅಯ್ಯಂಗಾರ್ ವೃತ್ತಿಯಲ್ಲಿ ಅಧ್ಯಾಪಕರಾಗಿದ್ದವರು. ತಾಯಿ ಸುಶೀಲಮ್ಮ.