“ಬೆಂಕಿ-ಪ್ರತಾಪಿ”

ಹಳೆಯ ಘಟನೆ.
ನಮಗೆ ಈ ನಾಟಕ, ನಾಟಕ ಸ್ಪರ್ಧೆ ಎಲ್ಲವೂ ಹೊಸತು. ನಮ್ಮ ಪ್ರಾಧ್ಯಾಪಕರು ನಮಗೆ ಆಸಕ್ತಿ ಇದ್ದಲ್ಲಿ, ದಯಮಾಡಿ ನಾಟಕದ ತಾಲಿಮಿನ ಕೊಠಡಿಗೆ ಬನ್ನಿ ಎಂದು ಕಾಲೇಜಿನಲ್ಲಿ ಪ್ರಕಟಣೆ ಹೊರಡಿಸಿದ್ದರು. ನಾವು ಕೂಡ ಕುತೂಹಲದಿಂದ ಹೋದೆವು, ನಮ್ಮೊಂದಿಗೆ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಸೇರಿದ್ದರು. ಕಿರಿಯರಲ್ಲಿ ಕುತೂಹಲ, ಹಿರಿಯ ವಿದ್ಯಾರ್ಥಿಗಳಲ್ಲಿ, ತಾವು ಈಗಾಗಲೇ ಒಂದೆರಡು ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನುಭವದ ಹೊಳಪು ಕಾಣುತಿತ್ತು. ನಮ್ಮ ಉಪಾಧ್ಯಾಯರು, ನಾಟಕದ ಬಗ್ಗೆ, ನಾಟಕದ ಸ್ಪರ್ಧೆಯ ಬಗ್ಗೆ ವಿವರಗಳನ್ನು ಕೊಟ್ಟು, ಇನ್ನು ಒಂದು ತಿಂಗಳು ನಾವು ನಾಟಕದ ತಾಲೀಮು ನಡೆಸುವುದಾಗಿಯೂ, ನಮಗೆ ಪರೀಕ್ಷೆ ಮುಗಿದು,ರಜೆ ಇರುವ ಕಾರಣ, ಎಲ್ಲರೂ ತಮ್ಮ ಪೂರ್ಣ ಪ್ರಮಾಣದ ಆಸಕ್ತಿಯನ್ನು ನಾಟಕ, ನಾಟಕದ ತಯಾರಿಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ವಿವರಿಸಿ, ನಾಳೆಯಿಂದ ಬನ್ನಿ ಎಂದು ನಮ್ಮನ್ನು ಕಳಿಸಿಕೊಟ್ಟರು. ನಾಟಕ… ಕೇರಳದ ಒಂದು ಹಳ್ಳಿಯಲ್ಲಿ ನಡೆಯುವ ಕಥೆ, ಜಮೀನ್ದಾರಿ ಪದ್ಧತಿಯ ವಿರುದ್ಧವಾಗಿ ಹಳ್ಳಿಯ ರೈತರು ಹೂಡುವ ಹೋರಾಟದ ಬಗೆಗಿನ ಕಥೆ.
ವಿದ್ಯಾರ್ಥಿಗಳು ಬಹಳ ಶ್ರದ್ದೆಯಿಂದ ತಾಲೀಮಿನಲ್ಲಿ ಭಾಗವಹಿಸಿದರು. ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳಿಗಿಂತ ದುಪ್ಪಟ್ಟು ಹುಮ್ಮಸ್ಸಿನಿಂದ ನಾಟಕದ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಕಡೆಗೂ ನಾಟಕ ಸ್ಪರ್ಧೆಗೆ ಕೆಲವೇ ಕೆಲವು ದಿನಗಳು ಇದ್ದವು, ನಾಟಕದ ವಸ್ತ್ರ, ಪರಿಕರಗಳನ್ನು ಸಿದ್ಧಪಡಿಸಿಕೊಂಡಿದ್ದೆವು, ಸ್ಪರ್ಧೆ ನಡೆಯುವ ಹಿಂದಿನ ದಿನ, ಒಂದು ಸಾರಿ ಇಡೀ ನಾಟಕವನ್ನು ನಮ್ಮ ಅಭ್ಯಾಸಕ್ಕೆ, ಹಾಗೂ ಇಡೀ ನಾಟಕ ಎಷ್ಟು ಹೊತ್ತು ಬರಬಹುದು, ಎಲ್ಲಿಯಾದರೂ ಸಣ್ಣ ಪುಟ್ಟ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ಒಂದು ತಾಂತ್ರಿಕ ಪ್ರಯೋಗ ನಡೆಸೋಣ ಎಂದು ನಮ್ಮ ನಿರ್ದೇಶಕರು ನಿರ್ಧರಿಸಿದರು.
“ರೀ ಬನ್ನಿ ಇಲ್ಲಿ , ನಿಮಗೆ ತಿಳಿದ ಹಾಗೆ, ನಾಟದ ಪ್ರಥಮ ದೃಶ್ಯ, ಪುಟ್ಟ ಮನೆದು ಅಲ್ವಾ, ನೀವು ಆ ಮನೆಯ ಸೆಟ್ ಇದೆಯಲ್ವಾ ಅದರ ಹಿಂದೆ ಕುಳಿತು, ಮೊದಲೇ ಕೆಂಡ ತಯಾರಿಸಿಕೊಂಡು ಬಂದು, ಸ್ವಲ್ಪವೇ ಸ್ವಲ್ಪ ಸಾಂಬ್ರಾಣಿಯನ್ನು ಹಾಕಿ. ಅದು ರಂಗದ ಮೇಲೆ ಒಂದು ವಿಭಿನ್ನ ಅನುಭವ ನೀಡುತ್ತೆ, ನಾಳೆ ಅದನ್ನು ತಯಾರು ಮಾಡಿಕೊಳ್ಳುವುದು ನಿಮ್ಮ ಜವಾಬ್ದಾರಿ, ನಿಮ್ಮ ಸಹಾಯಕ್ಕೆ… ಬಾರಮ್ಮ ಇಲ್ಲಿ, ನಿಮ್ಮ ದೃಶ್ಯ ಬರೋದು ನಾಟಕದ ಮಧ್ಯಭಾಗದಲ್ಲಿ, ಅಲ್ಲಿಯ ತನಕ ನಿಮಗೆ ಏನು ಕೆಲಸವಿಲ್ಲ, ನೀವು ಇವರಿಗೆ ಸಹಾಯ ಮಾಡಿ” ಎಂದು ನಿರ್ದೇಶಕರು ನಮ್ಮ ತಂಡದ ಮಹಾಭೂಪನಿಗೆ ಮತ್ತು ಒಬ್ಬಳು ಸುಂದರಿಗೆ ಜವಾಬ್ದಾರಿಯನ್ನು ಹೊರೆಸಿ, ಇನ್ನು ಹಲವರಿಗೆ ಅವರವರ ಕೆಲಸಗಳನ್ನು ಹಂಚಿ ಅವತ್ತಿಗೆ ನಮ್ಮನ್ನೆಲ್ಲ ಮನೆಗೆ ಕಳುಹಿಸಿದರು.

ನಮ್ಮ ಭೂಪನಿಗೆ ರಾತ್ರಿ ನಿದ್ದೆಯೇ ಇಲ್ಲ, ನಾಳೆ ಅಂತಹ “ಹೊಗೆ ಹಾಕುವ” ಮಹತ್ವದ ಕೆಲ್ಸ ಮಾಡಬೇಕು, ಎಂದಲ್ಲ, ತನ್ನೊಂದಿಗೆ ಇಡೀ ಕಾಲೇಜಿಗೆ ಸುಂದರಿ ಎಂದೆನಿಸಿಕೊಂಡ ಆ ಸುಂದರ ಹುಡುಗಿಯೊಂದಿಗೆ ಸ್ವಲ್ಪ ಕಾಲ ಕಳೆಯುವ ಸುವರ್ಣಾವಕಾಶ ಸಿಕ್ಕಿದೆ ಎಂದು. ನಮ್ಮ ಭೂಪ ನಮಗಿಂತಲು ಹಿರಿಯ, ಅವನು ಎರಡನೇ ಬಿ.ಸಿ.ಎ ಯಲ್ಲಿ ಓದುತ್ತಿದ್ದ, ಹಾಗೂ ಸುಂದರಿ ಮೊದಲನೆಯ ಬಿ.ಸಿ.ಎ-ನಲ್ಲಿ ಓದುತ್ತಿದ್ದಳು. ನಾಟಕದ ತಾಲಿಮಿನ ಮೊದಲನೆಯ ದಿನದಿಂದಲೂ ಅವನಿಗೆ ಸುಂದರಿಯ ಮೇಲೆ ವಿಶೇಷ ಆಸಕ್ತಿ, ಅವಳನ್ನು ಮಾತನಾಡಿಸಬೇಕು, ಸ್ವಲ್ಪ ಕಾಲ ಅವಳೊಂದಿಗೆ ಕಳೆಯಬೇಕು ಎನ್ನುವ ಮಹದಾಸೆ, ಈ ಆಸೆಯನ್ನು ಅವನು , ಅವಳನ್ನು ಹೊರೆತುಪಡೆಸಿ, ನಾಟಕ ತಂಡದ ಐವತ್ತಕ್ಕೂ ಹೆಚ್ಚು ಮಂದಿಗೆ ತಿಳಿಸಿದ್ದ. ಅವನಿಗೆ ಅವಳನ್ನು ಸಂದರ್ಶಿಸುವುದಕ್ಕೆ ಒಂದು ರೀತಿಯ ಭಯ, ಆದರೆ ಮನಸ್ಸಿನಲ್ಲಿ ಯಾವಾಗಲೂ ಅವಳದೇ ಜಪ.

ಈಗ “ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಹೇಳಿದ್ದು ಹಾಲು ಅನ್ನ” ಎಂಬಂತೆ, ಅವನಿಗೆ ಒಂದು ಒಳ್ಳೆಯ ಅವಕಾಶ ದೊರೆತಿತ್ತು, ಇದರ ಸಂಪೂರ್ಣ ಲಾಭವನ್ನು ಪಡೆಯಬೇಕು, ಅವಳೊಂದಿಗೆ, ಮಾತನಾಡಬೇಕು, ಅವಳಲ್ಲಿ ತನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಹಾಗೂ ಛಾಪನ್ನು ಮೂಡಿಸಬೇಕು, ಅದು ಏನು-ಎತ್ತ ಎಂದು ಯೋಚಿಸಿ ಯೋಚಿಸಿ,ಕಡೆಗೂ ಒಂದು ಉಪಾಯವನ್ನು ಮಾಡಿ, ಮಲಗಿದನು.ಅಂತೂ ಇಂತೂ ನಾಟಕದ ತಾಂತ್ರಿಕ ಪ್ರದರ್ಶನದ ದಿನ ಬಂದೇಬಿಟ್ಟಿತು, ನಮ್ಮ ಭೂಪತಿರಾಯ, ಎಲ್ಲರಿಗಿಂತಲೂ ಮೊದಲೇ, ಎಂಟು ಗಂಟೆಗೆ ಕಾಲೇಜಿಗೆ ಬಂದು, ಒಂದ್ ಐದು ತೆಂಗಿನ ಚಿಪ್ಪನು ಒಡೆದು, ಅದಕ್ಕೆ ಬೆಂಕಿ ಹಚ್ಚಿ, ಕೆಂಡವನ್ನು ತಯಾರಿಸಿ ಅದು ಆರದಿರಲು ಗಾಳಿಯನ್ನು ಬಿಸುತ್ತಲೇ ಕುಳಿತು ಕೊಂಡಿದ್ದನು, ಯಾರೆ ಅವನನ್ನು ತಿಂಡಿಗೆ-ಕಾಫಿಗೆ ಕರೆದರು , ಅವನು ಬರುತ್ತಿಲ್ಲ, “ಹೊಗ್ರೋ, ನಾನ್ ತಿಂಡಿಗೆ ಬಂದ್ರೆ ಇಲ್ಲಿ ಕೆಂಡನಾ ನೋಡಿಕೊಳ್ಳೋರು ಯಾರು?, ನಂದೇ ಮೊದಲನೆಯ ದೃಶ್ಯ ಹಾಳಾಗ್ ಬಿಡತ್ತೆ ಅಷ್ಟೇ, ನೀವ್ ಹೋಗಿ” ಅಂತ ಕರೆಯಲು ಬಂದ ನಮ್ಮನ್ನು ಓಡಿಸಿ, ಸುಂದರಿಯ ದಾರಿಯನ್ನೇ ಕಾಯುತ್ತಿದ್ದ .

ನಿರ್ದೇಶಕರು ಹೇಳಿದ ಸಮಯ, ಒಂಬತ್ತು ಗಂಟೆಗೆ ಸರಿಯಾಗಿ ಬಂದರು, ಅವರ ಹಿಂದೆಯೇ ನಮ್ಮ ಸುಂದರಿಯು ಬಂದಳು, ನಮ್ಮ ಭೂಪನ, ಹೊಟ್ಟೆಯಲ್ಲಿ ಎಂದಿಗಿಂತ ಹೆಚ್ಚು ಚಿಟ್ಟೆಗಳು ಹಾರಲು ಶುರುಮಾಡಿದವು. ಸುಂದರಿಯು ಅವನ ಹತ್ತಿರ ಹೋಗಿ, “ನಾನೆನಾದ್ರು ಸಹಾಯ ಮಾಡಬೇಕೆ?” ಎಂದು ಕೇಳಿದಳು, ಅವಳಾಗಿಯೇ ಬಂದು ಮಾತನಾಡಿಸಿದ್ದು, ನಮ್ಮ ಭೂಪತಿರಾಯನ ಸಂತೋಷಕ್ಕೆ ಪಾರವೇ ಇರಲಿಲ್ಲ.

“ಇ ಇ ಇಲ್ಲ ಇಲ್ಲ ನೀನು ನನ್ ಜೊತೆ ಇದ್ರೆ ಸಾಕು, ನಾನ್ ಎಲ್ಲಾ ನೋಡ್ಕೋತೀನಿ ಈ ಈ ಈ ಈ ” ಎಂದು ಹಲ್ಲನ್ನು ಕಿರಿಯುತ್ತ ನಿಂತನು.

ನಿರ್ದೇಶಕರು ತಾಂತ್ರಿಕ ಪ್ರದರ್ಶನವನ್ನು ಶುರು ಮಾಡಲು ಹಸಿರು ನಿಶಾನೆಯನ್ನು ಕೊಟ್ಟರು.ನಮ್ಮ ಭೂಪ, ಕೆಂಡವನ್ನು ಒಂದು ಬಾಂಡಲಿಗೆ ಹಾಕಿಕೊಂಡು, ರಂಗದ ಮೇಲೆ ಇರಿಸಿದ ಮನೆಯ ಸೆಟ್ ನ ಹಿಂದೆ ಹೋಗಿ ಇರಿಸಿದನು, ತನ್ನ ಪಾತ್ರಕ್ಕೆ ತಕ್ಕ ಉಡುಗೆಯಾದ ಪಂಚೆ, ಹಾಗೂ ಬಂಡಿಯನ್ನು (ಬನಿಯಾನ್) ತೊಟ್ಟು ಬಂದನು. ನಮ್ಮ ಸುಂದರಿಯು ಕೂಡ ತನ್ನ ಪಾತ್ರದ ಉಡುಗೆಯಾದ ಸೀರೆಯನ್ನು ಉಟ್ಟು ಬಂದಳು, ಅವಳು ಎಂದಿಗಿಂತ ಈವತ್ತು ಇನ್ನು ಸುಂದರವಾಗಿಯೇ ಕಾಣಿಸುತ್ತಿದಳು , ನಮ್ಮ ಭೂಪತಿರಾಯನ ಹೃದಯದ ಬಡಿತ ಏರಿತು, ಕುದುರೆಯ ವೇಗದಲ್ಲಿ ಓಡಲು ಶುರು ಮಾಡಿತು.

ಇಬ್ಬರು ಮನೆಯ ಸೆಟ್’ ನ ಹಿಂದೆ ಹೋಗಿ ಕುಳಿತರು, ನಮ್ಮ ಭೂಪ, ಸುಂದರಿಯನ್ನು ಮೆಚ್ಚಿಸಲು, ಅವಳನ್ನೇ ನೋಡುತ್ತ ಸ್ವಲ್ಪವೇ ಸ್ವಲ್ಪ ಹಾಕಬೇಕಿದ್ದ ಸಾಂಬ್ರಾಣಿಯ ಜಾಗದಲ್ಲಿ ಒಂದು ಇಡೀ ಪೊಟ್ಟಣವನ್ನೇ ಸುರಿದಿದ್ದ, ನಾಟಕ ಇನ್ನೇನು ಶುರುವಾಗಬೇಕು, ಇಡೀ ರಂಗಮಂದಿರ ಸಾಂಬ್ರಾಣಿಯ ಹೊಗೆಯಿಂದ ತುಂಬಿಕೊಂಡಿತು. ಎಲ್ಲರೂ ಒಂದು ಕಡೆಯಿಂದ ಕೆಮ್ಮಲು ಶುರು ಮಾಡಿದರು, ನಮ್ಮ ಭೂಪನಿಗೆ ತನ್ನ ತಪ್ಪಿನ ಅರಿವಾಯಿತು, ಪಾಪ ಸುಂದರಿಯ ಕಣ್ಣಲ್ಲಿ ಬಳ ಬಳನೆ ನೀರು ಸುರಿಯುತ್ತಿತ್ತು,”ಏನಾದ್ರು ಮಾಡಿ, ಕಣ್ಣು ಉರಿತಾ ಇದೆ” ಎಂದಳು.

ನಮ್ಮ ಭೂಪನ ಒಳಗಿದ್ದ ನಾಯಕ ಜಾಗೃತಗೊಂಡ, ಕೆಂಡವನ್ನು ನಂದಿಸಲು, ತನ್ನ ಪಂಚೆಯಿಂದಲೇ ಜೋರಾಗಿ ಗಾಳಿ ಹಾಕಲು ಶುರು ಮಾಡಿದ, ಆದರೆ ಅದೆಲ್ಲಿ ನಂದಬೇಕು, ಕೆಂಡವು ಇನ್ನು ಜೋರಾಗಿ ಉರಿದು, ಬೆಂಕಿಯ ರೂಪ ತಾಳಿತು. ಸುಂದರಿಯು ಅಲ್ಲಿಯ ಹೊಗೆಯ ಆರ್ಭಟ ತಾಳಲಾರದೆ, ಒಂದೇ ಓಟದಲ್ಲಿ ಓಡಿ ಹೋದಳು, ಅವಳು ಓಡಿ ಹೋದದನ್ನು ನೋಡುತ್ತಾ ಇದ್ದ ನಮ್ಮ ಭೂಪತಿರಾಯನ ಪಂಚೆಗೆ ಬೆಂಕಿ ಹೊತ್ತಿಕೊಂಡಿತು, ನೋಡನೋಡುತ್ತ ಅವನ ಪಂಚೆಗೆ ಹೊತ್ತಿಕೊಂಡ ಬೆಂಕಿ ಜೋರಾಯಿತು, ಅವನು ಮನೆಯ ಸೆಟ್ ಹಿಂದಿನಿಂದ “ಅಯ್ಯೋ ಬೆಂಕಿ, ಅಯ್ಯೋ ಬೆಂಕಿ” ಎಂದು ಕೂಗುತ್ತ ಓಡಿ ಹೊರಗೆ ಓಡಿ ಬಂದ.

ಅಲ್ಲೇ ಇದ್ದ ನಿರ್ದೇಶಕರು, ಅವನ ಪಂಚೆಯನ್ನು ಕಿತ್ತು ಎಸೆದು, ಬೆಂಕಿಯನ್ನು ನಂದಿಸಿದರು, ಇನ್ನು ಕೆಲವು ಹುಡುಗರು, ನೀರನ್ನು ತಂದು ಬಾಂಡಲಿಯಲ್ಲಿ ಉರಿಯುತ್ತಿದ್ದ ಬೆಂಕಿಯ ಮೇಲೆ ಹಾಕಿ ಬೆಂಕಿಯನ್ನು ನಂದಿಸಿದರು.

ನಮ್ಮ ಭೂಪತಿರಾಯ ಪಂಚೆ ಇಲ್ಲದೇ, ನಡೆದ ಅಚಾತುರ್ಯಕ್ಕೆ ಪರಿತಪಿಸುತ್ತ, ಹೆದರಿ ನಿಂತನು. ನಿರ್ದೇಶಕರು, ರಂಗದ ಕಿಟಕಿ ಬಾಗಿಲನ್ನು ತೆರೆಸಿ, ಹೊಗೆಯೆಲ್ಲ ಕಡಿಮೆಯಾದ ಮೇಲೆ, ಎಲ್ಲರನ್ನು ವೃತ್ತಾಕಾರದಲ್ಲಿ ನಿಲ್ಲಿಸಿ, ನಮ್ಮ “ಬೆಂಕಿ ಪ್ರತಾಪಿ” ಭೂಪನಿಗೆ ಹೊಗಳಲು ಅಂದರೆ ಬೈಯ್ಯಲು ಶುರು ಮಾಡಿದರು.

ಪಂಚೆ ಇಲ್ಲದೆ ನಿಂತಿದ್ದ ಭೂಪನಿಗೆ ಅವನ ಗೆಳೆಯರು ಅವನ ಬಟ್ಟೆ ತಂದು ಕೊಟ್ಟು ಮಾನ ಮುಚ್ಚಿದರು, ಆದರೆ ನಮ್ಮ ನಿರ್ದೇಶಕರು, ಕೋಪಾವೇಶದಿಂದ ಅವನ ಮಾನ ಹಾರಾಜು ಹಾಕುತ್ತಿದ್ದರು.

ಕೆಲವು ಸಮಯದ ನಂತರ, ನಿರ್ದೇಶಕರ ಕೋಪ ತಣ್ಣಗಾಯಿತು, ಭೂಪನನ್ನು ಕರೆದು, ನೋಡಪ್ಪ, ನಾಟಕಕ್ಕೆ ಬೇಕಾಗಿದ್ದುದು ಸ್ವಲ್ಪವೇ ಸ್ವಲ್ಪ ಹೊಗೆ, ನೀನು ಹೀಗೆ ಏನಾದರೂ ನಾಳೆ ಹೊಗೆ ಹಾಕಿದರೆ, ನಾಟಕವು ಪರ ಲೋಕವನ್ನು ಸೇರುತ್ತೆ,ಅದಕ್ಕೆ ದಯವಿಟ್ಟು ಈ ಹೊಗೆ ಹಾಕುವ ಕಾರ್ಯಕ್ರಮನ ನಾನು ರದ್ದು ಮಾಡ್ತಾ ಇದೀನಿ, ನೀವು ಹೋಗಿ ಈಗ ಸುಧಾರಿಸಿಕೊಳ್ಳಿ, ಆಮೇಲೆ ನಿಮ್ಮ ಪಾತ್ರವನ್ನು ನಿರ್ವಹಿಸಿ ಹೋಗಿ ಎಂದು ಕಳುಹಿಸಿದರು.

ನಮ್ಮ ಭೂಪ, ಪಾಪ ಸುಂದರಿಯನ್ನು ಅನುನಯಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದ. ಅವತ್ತಿನಿಂದ ಅವನಿಗೆ ನಾವು “ಬೆಂಕಿ-ಪ್ರತಾಪಿ” ಎಂದೇ ಕರೆಯಲು ಶುರು ಮಾಡಿದೆವು.

ಚಿತ್ರ ಕೃಪೆ – ಪರಮೇಶ್ವರ ಜೋಳದ್

6 thoughts on ““ಬೆಂಕಿ-ಪ್ರತಾಪಿ””

 1. M.S.Vidya says:

  ರಸವತ್ತಾದ ಸನ್ನಿವೇಶ,ಅಷ್ಟೇ ರಸಭರಿತ ವಿವರಣೆ😃👌

 2. Das says:

  ಧನ್ಯವಾದಗಳು mam 🙂

 3. Sowmya says:

  ತುಂಬಾ ರಸವತ್ತಾದ ನಿರೂಪಣಾ ಶೈಲಿಯೊಂದಿಗೆ ಕಥೆ ಸಾಗಿದೆ ತುಂಬಾ ಚೆನ್ನಾಗಿದೆ

  1. Durga das says:

   Dhanyavaadagalu

 4. Vaibhav says:

  Interesting situation described very well 👏🏻

  1. Durga das says:

   Thank you 😊

Leave a Reply

Your email address will not be published. Required fields are marked *

Related Post

ಜಿಲೇಬಿ ಸೀನಜಿಲೇಬಿ ಸೀನ

ಅಂತರ ವರ್ಗ, ಅಂತರ ಕಾಲೇಜು ನಾಟಕ ಸ್ಪರ್ಧೆಗಳು ಮುಗಿದು ಎಷ್ಟೋ ತಿಂಗಳುಗಳು ಕಳೆದಿದ್ದವು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಲ್ಲಿ ಏನೋ ಖಾಲಿ ಖಾಲಿ ಭಾವನೆ, ತರಗತಿಗಳು ಮುಗಿದ ಕೂಡಲೇ, ರಂಗ ಪ್ರಯೋಗ ಶಾಲೆಗೆ ಓಡಿ ಹೋಗಿ, ಕಲೆತು, ನಾಟಕಾಭಿನಯ,ಸಂಗೀತಾಭ್ಯಾಸ , ಸ್ನೇಹತರೊಂದಿಗೆ ತರಲೆ ತಮಾಷೆ ಮಾಡುವ ಅವಕಾಶ ತಪ್ಪಿ

ಎಲ್ಲದರ ಜವಾಬ್ದಾರಿ ನಿಮ್ಮದೇ….!ಎಲ್ಲದರ ಜವಾಬ್ದಾರಿ ನಿಮ್ಮದೇ….!

ಬಹಳ ದಿನಗಳ ನಂತರ, ಪರಸ್ಥಳದಲ್ಲಿ ಒಂದು ನಾಟಕ ಪ್ರದರ್ಶಿಸುವ ಯೋಗ ಕೂಡಿ ಬಂದಿತ್ತು, ಈ ಸರ್ತಿ ಗುಲ್ಬರ್ಗ ಕಡೆ ನಮ್ಮ ಪಯಣ ನಡೆಸಬೇಕಿತ್ತು.ಎಂದಿನಂತೆ ಬಸ್ನಲ್ಲಿ ಪ್ರಯಾಣ ಮಾಡುವುದು ಬೇಡ, ರೈಲಿನಲ್ಲಿ ಪ್ರಯಾಣ ಬೆಳೆಸೋಣ, ರೈಲಿನಲ್ಲಾದರೆ, ಹಾಡು, ಹರಟೆ, ತಮಾಷೆ, ತರಲೆ ಮಾಡಿಕೊಂಡು, ಸುಖವಾಗಿ ಪ್ರಯಾಣ ಮಾಡಬಹುದು ಎಂದು ಪರಿಗಣಿಸಿ

ಬೀಡಿ ನಾಣಿಬೀಡಿ ನಾಣಿ

ಒಂದು ದೊಡ್ಡ ವೃತ್ತಾಕಾರವನ್ನು ಮಾಡಿ, ಒಬ್ಬರ ಕೈಯನ್ನು ಇನ್ನೊಬ್ಬರು ಹಿಡಿದುಕೊಂಡು ” ಆಂಗಿಕಂ ಭುವನಂ ಯಸ್ಯ ವಾಚಿಕಂ ಸರ್ವವಾಙ್ಮಯಮ್I ಆಹಾರ್ಯಂ ಚಂದ್ರತಾರಾದಿ ತಂ ನುಮಃ ಸಾತ್ವಿಕಂ ಶಿವಮ್” ಶ್ಲೋಕವನ್ನು ಎಲ್ಲರು ಘಂಟಾಘೋಷವಾಗಿ ಹೇಳಿದೆವು, ಆಚೆ ಕುಳಿತ ಪ್ರೇಕ್ಷಕರಿಗೂ ಕೇಳುವ ಹಾಗೆ.. ಶ್ಲೋಕದ ಕಡೆಯಲ್ಲಿ ಮೂರು ಬಾರಿ ಓಂ ಓಂ ಓಂ ಎಂದು