ಬೆಂಕಿ ಚಂಡು


“ಎಲ್ಲರೂ ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ”” ನಿಧಾಆ ಆ ಆ ಆ ಆ ನವಾಗಿ ಉಸಿರನ್ನು ತೆಗೆದುಕೊಳ್ಳಿ…. “”ನಿಧಾಆ ಆ ಆ ಆ ಆ ನವಾಗಿ ಉಸಿರನ್ನು ಬಿಡಿ….”
ಹೀಗೆ ಒಂದು ಐದು ನಿಮಿಷಗಳಾದ ನಂತರ..”ನೀವು ನಿಮ್ಮ ನೆಚ್ಚಿನ, ಅತಿ ಹೆಚ್ಚು ಪ್ರೀತಿಸುವ ಜಾಗವನ್ನು ನೆನಪಿಸಿಕೊಳ್ಳಿ, ಅದು ಮನೆಯಾಗಿರಬಹುದು, ಊರಾಗಿರಬಹುದು, ಕಾಡಾಗಿರಬಹುದು, ಅದರ ಚಿತ್ರವನ್ನು ಕಣ್ಣ್ ಮುಂದೆ ತಂದುಕೊಳ್ಳಿ, ನೀವ್ ಈಗ ಆ ಸ್ಥಳದಲ್ಲಿ ಇದ್ದಿರ ಎಂದು ಭಾವಿಸಿಕೊಳ್ಳಿ…. “
“ನಿಧಾನವಾಗಿ ಉಸಿರಾಡಿ, ಆ ಜಾಗದ ಪರಿಮಳವನ್ನು ಆಹ್ವಾದಿಸಿ, ಸುತ್ತಲೂ ಒಮ್ಮೆ ನೋಡಿ, ನೀವು ಈ ಹಿಂದೆ ನೋಡಿ ನೆನಪಿನಲ್ಲಿ ಇಟ್ಟು ಕೊಂಡಿರುವ ವಸ್ತುಗಳು ಹಾಗೆ ಇದೆ ಅಲ್ಲಿ,  ಆ ಸುಂದರ ಪರಿಸರವನ್ನು ಅನುಭವಿಸಿ.. ನಿಧಾನವಾಗಿ ಎಲ್ಲವನ್ನು ನೆನಪಿಸಿಕೊಳ್ಳಿ….”
ಇನ್ನು ಐದು ನಿಮಿಷಗಳು ಕಳೆದ ಮೇಲೆ”ನೀವಿರುವ ಆ ರಮ್ಯ ಪರಿಸರದಲ್ಲಿ, ಈಗ ನಿಮ್ಮೊಂದಿಗೆ ನೀವು ಇಷ್ಟ ಪಡುವ ವ್ಯಕ್ತಿ ಬಂದು ಜೊತೆಯಾಗಿದ್ದಾರೆ ಎಂದು ಕಲ್ಪಿಸಿಕೊಳ್ಳಿ, ಅವರೊಂದಿಗೆ ಹಿಂದೆ ಕಳೆದ ಸುಂದರ ಕ್ಷಣಗಳನ್ನು ನೆನಪಿಸಿಕೊಳ್ಳಿ…. ನಿಧಾನವಾಗಿ ಉಸಿರಾಡಿ.. ನೆನಪಿಸಿಕೊಳ್ಳಿ.. ಆ ಸುಂದರ ಕ್ಷಣವನ್ನು ಮತ್ತೆ ಮರುಕಳಿಸಿದ ಆನಂದವನ್ನು ಅನುಭವಿಸಿ… ಆನಂದಿಸಿ……”
ಇನ್ನು ಐದು ನಿಮಿಷಗಳಾದ ಮೇಲೆ..”ಈಗ ಹಠಾತ್ತನೆ ಆ ವ್ಯಕ್ತಿ ಅಲ್ಲಿಂದ ಎದ್ದು, ಅವರಿದ್ದ ಜಾಗಕ್ಕೆ ಮತ್ತೆ ಮರಳಿದ ಹಾಗೆ ಕಲ್ಪಿಸಿಕೊಳ್ಳಿ… ನಿಧಾನವಾಗಿ ಉಸಿರಾಡಿ….”
“ನಿಧಾನವಾಗಿ ಉಸಿರಾಡಿ….””ನಿಧಾನವಾಗಿ ಉಸಿರಾಡಿ….”
“ಅವರು ನಿಮ್ಮಿಂದ ದೂರವಾದ ನೋವನ್ನು ಅನುಭವಿಸಿ, ಅವರನ್ನು ಮತ್ತೆ ಭೇಟಿಯಾಗೋದು ಇನ್ನು ಎಷ್ಟು ದಿನಗಳ ನಂತರವೋ ಎಂದು ಕಲ್ಪಿಸಿಕೊಳ್ಳಿ.. ಆ ನೋವನ್ನು ಅನುಭವಿಸಿ… ನಿಮಗೇ ಆ ದುಃಖ ತಡೆಯಲು ಸಾಧ್ಯವಾಗದೇ ಅಳು ಬಂದರೆ, ತಡೆ ಹಿಡಿಯಬೇಡಿ… ಅತ್ತು ಬಿಡಿ… ಮನಸಾರೆ ಅತ್ತುಬಿಡಿ… ನಿಮ್ಮ ಭಾವನೆಗಳನ್ನು ತಡೆ ಹಿಡಿಯಬೇಡಿ, ಅತ್ತುಬಿಡಿ, ಆ ನೋವನ್ನು ಅನುಭವಿಸಿ.. “
ಇನ್ನು ಐದು ನಿಮಿಷಗಳು ಕಳೆದ ಮೇಲೆ “ನಿಧಾನವಾಗಿ ಉಸಿರಾಡಿ, ನೀವಿರುವ ಜಾಗದಿಂದ ಹೊರಬನ್ನಿ…” “ನಿಧಾನವಾಗಿ ಉಸಿರಾಡಿ..””ನಿಮ್ಮ ಕೈಗಳನ್ನು ಜೋರಾಗಿ ಉಜ್ಜಿ, ನಿಮ್ಮ ಕಣ್ಣುಗಳ ಮೇಲೆ ಇಡಿ, ಆದರ ಶಾಖ ನಿಮ್ಮ ಕಣ್ಣುಗಳು ಅನುಭವಿಸಲಿ””ನಿಧಾನವಾಗಿ ಕಣ್ಣುಗಳನ್ನು ಬಿಡಿ..”
ಹೀಗೆ ರಂಗ ಶಿಬಿರದ ಎರಡನೆಯ ದಿನ, ನಮ್ಮ ನಿರ್ದೇಶಕರು, ನಮ್ಮನ್ನು ವೃತ್ತಾಕಾರದಲ್ಲಿ ಕೂರಿಸಿ, ಈ ರೀತಿಯ ಪ್ರಯೋಗವನ್ನು ಮಾಡಿಸಿದರು. ಎಲ್ಲಾ ಹುಡುಗ ಹುಡುಗಿಯರು ಒಂದು ಹೊಸ ಆಹ್ಲಾದಕರ ಅನುಭವವನ್ನು ಅನುಭವಿಸಿದ್ದರು. 
ಶಿಬಿರದಲ್ಲಿ ಒಟ್ಟು ಐವತ್ತು ಮಂದಿ ವಿದ್ಯಾರ್ಥಿಗಳು ಇದ್ದರು, ಅದರಲ್ಲಿ ಹಲವರು ನಿರ್ದೇಶಕರು ಹೇಳಿದ ಮಾತುಗಳನ್ನ ಚಾಚು ತಪ್ಪದೆ ಪಾಲಿಸಿ, ಪ್ರಾಯೋಗದ ಅನುಭೂತಿಯನ್ನು ಪಡೆದ್ದಿದ್ದರು.. 
ಕೆಲವರಂತೂ ಅಳುತ್ತಿದ್ದರು, ತಮ್ಮ ಪ್ರೀತಿಪಾತ್ರರಾದ ಗೆಳೆಯರದೋ, ಹತ್ತಿರದ ಸಂಭಂದಿಯದೋ, ತಮ್ಮಿಂದ ದೂರವಿರುವ ತಮ್ಮ ತಂದೆ ತಾಯಿಯರ ಬಗ್ಗೆ ನೆನಪಿಸಿಕೊಂಡೊ ಆಳುತ್ತಿದ್ದರು…
ಪ್ರಯೋಗ ನಿಂತರು, ಕೆಲವರು ತಮ್ಮ  ದುಃಖ ತಡಿಯಲಾರದೆ ಆಳುತ್ತಿದ್ದರು. ಗುರುಗಳು ಹೇಳಿದ ಮಾತುಗಳನ್ನು ಶಿರಸಾವಹಿಸಿ ಪಾಲಿಸಿದವರು, ಅವರು ಹೇಳಿದ ಹಾಗೆ ಕಲ್ಪಿಸಿಕೊಂಡು, ಅನುಭವಿಸಿದ್ದರು. 
ನಿರ್ದೇಶಕರು “ನೋಡಿ ಮಕ್ಕಳೇ, ನಾವುಗಳು ಒಂದು ಪಾತ್ರವಾಗಬೇಕೆಂದರೆ, ಆ ಪಾತ್ರವನ್ನು ಚೆನ್ನಾಗಿ ಅಧ್ಯಯನ ಮಾಡಬೇಕು, ಆ ಪತ್ರವನ್ನು ತಿಳಿಯಬೇಕು, ಆ ಪಾತ್ರ ಯಾವ ಪರಿಸರದಲ್ಲಿ ಇದ್ದನೋ ಅದರ ಬಗ್ಗೆ ತಿಳಿದುಕೊಳ್ಳಬೇಕು, ಆ ಜಾಗದ ಸುತ್ತ ಮುತ್ತಲಿನ ವಸ್ತುಗಳ ಕುರಿತಾಗಿ ತಿಳಿದುಕೊಳ್ಳಬೇಕು, ಮನೆಯಾದರೆ ಮನೆ, ಕಾಡಾಗಿದ್ದರೆ ಕಾಡು ಹೀಗೆ ತಿಳಿದುಕೊಂಡಿರಬೇಕು ಆ ವಸ್ತುವನ್ನು ಬಳಸಿಕೊಳ್ಳುವ ಜಾಣ್ಮೆ ಇರಬೇಕು. ಆಗ ನೀವು ಮಾಡುವ ಪಾತ್ರಕ್ಕೆ ನೀವು ಜೀವ ತುಂಬಲು ಸಾಧ್ಯ..ಸರಿ, ಈಗ ಒಂದು ಸಣ್ಣ ವಿರಾಮ ತೆಗೆದುಕೊಳ್ಳೋಣ, ಆಮೇಲೆ ಇದರ ಮುಂದುವರೆದ ಭಾಗವಾಗಿ ಇನ್ನೊಂದು ಆಟವನ್ನು ಆಡೋಣ” ಎಂದು ಹೇಳಿ ಚಹಾ ಕುಡಿಯಲು ಹೋದರು.. 
ಇಡೀ ಕೊಠಡಿಯಲ್ಲಿ ನೀರವ ಮೌನವಿತ್ತು, ವಿದ್ಯಾರ್ಥಿಗಳು ಇನ್ನು ಭಾವನಾ ಪ್ರಪಂಚದಿಂದ ಹೊರ ಬಂದಿರಲಿಲ್ಲ, ಗುಂಪಿನಲ್ಲಿದ್ದ ಕೆಲವು  ತುಂಟರು ಭಾವನಾ ಲೋಕಕ್ಕೆ ಹೋಗಿರದೆ, ವಾಸ್ತವದಲ್ಲಿ ಇದ್ದವರು ಇದ್ದರು.
ನಿರ್ದೇಶಕರು ನಿರ್ದೇಶನ ಕೊಡುವಾಗ ಈ ತುಂಟರು, ಒಮ್ಮೊಮ್ಮೆ ಕಣ್ಣುಬಿಟ್ಟು, ಯಾರ್ ಯಾರು ಕಣ್ಣು ಮುಚ್ಚಿದ್ದಾರೆ, ಯಾವ ರೀತಿ ಮುಖ ಮಾಡಿಕೊಂಡಿದ್ದಾರೆ ಎಂದು ನೋಡಿಕೊಂಡು ತಮ್ಮಲ್ಲೇ ಖುಷಿಪಡುತ್ತಿದರು..
ನಿರ್ದೇಶಕರು ಹೊರ ನಡೆದ ಕೂಡಲೇ, ಕೆಲವರ ಹತ್ತಿರ ಹೋಗಿ, ಇವರ ಮುಖ ಹೀಗಿತ್ತು, ಹಾಗಿತ್ತು ಎಂದು ಅಣಕಿಸಿ, ಆ ಇನ್ನೊಬ್ಬ ಹುಡುಗಿ, ಈ ಇನ್ನೊಬ್ಬ ಹುಡುಗ ಯಾರನ್ನು ನೆನಪಿಸಿಕೊಂಡು ಅಳುತ್ತಿರಬಹುದು ಎಂದು ಊಹಿಸಿ ತಮಾಷೆ ಮಾಡಿಕೊಂಡು ನಗುತ್ತಿದ್ದರು. 
ಚಹಾ ಕುಡಿದು ಹಿಂತಿರುಗಿದ ನಿರ್ದೇಶಕರು ಎಲ್ಲರನ್ನು ಮತ್ತೆ ಒಂದುಗೂಡಿಸಿ, ವೃತ್ತಾಕಾರದಲ್ಲಿ ಎಲ್ಲರನ್ನು ಕುಳಿತುಕೊಳ್ಳಲು ಹೇಳಿದರು. 
“ಈಗ ನಾವಾಡಲಿರುವ ಆಟ “ಬೆಂಕಿ ಚೆಂಡು” ಅಂತ. ಈ ಹಿಂದೆ ನಾವು ಒಬ್ಬ ವ್ಯಕ್ತಿ, ವಸ್ತು, ಜಾಗ ನಮ್ಮ ಎದುರಿಗೆ ಇಲ್ಲದೆ ಹೋದರು, ಅದನ್ನ ಕಣ್ಣ್ ಮುಚ್ಚಿ ಕಲ್ಪಿಸಿಕೊಂಡು, ಅದನ್ನ ಅನುಭವಿಸುವುದನ್ನ ಹೇಗೆ ಅಂತ ತಿಳಿದುಕೊಂಡಿದ್ದೇವೆ.. ಈಗ ನಾವು ಕಣ್ ಬಿಟ್ಟು ಪ್ರಯತ್ನಿಸೋಣ. ” ಎಂದರು.
ಎಲ್ಲ ವಿದ್ಯಾರ್ಥಿಗಳಿಗೂ ಹೊಸ ಸವಾಲನ್ನು ಎದುರಿಸುವ ತವಕ, ಕಾತರ.
“ನೋಡಿ ಮಕ್ಕಳೇ, ನಮ್ಮ ವೃತ್ತದ ಮಧ್ಯದಲ್ಲಿ ಒಂದು ಕುಲುಮೆ ಇದೆ, ಕುಲುಮೆಗೆ ಬೇಕಾದ ಸಾಮಗ್ರಿಗಳು ಇವೆ, ಸುತ್ತಿಗೆ, ಇಕ್ಕಳ, ನೀರಿನ ಗಡಿಗೆ, ಬಟ್ಟೆ ಹೀಗೆ ಎಲ್ಲವೂ ಇದೆ.ಆ ಕುಲುಮೆಯಲ್ಲಿ, ಒಂದು ಕಾದ ಕಬ್ಬಿಣದ ಚೆಂಡನ್ನು ತಯಾರಿಸಿ ಇಟ್ಟಿದ್ದಾರೆ, ಅದರ ಬಿಸಿಯಾರದೆ  ಇನ್ನು ಬೆಂಕಿ ಚೆಂಡಿನ ಹಾಗೆ ಕೆಂಪಾಗಿದೆ.. ಕುಲುಮೆ ಮಾಡುವ ವ್ಯಕ್ತಿ ಊಟಕ್ಕೆ ಹೋಗಿದ್ದಾನೆ.
ನಿಮ್ಮಲ್ಲಿ ಒಬ್ಬರು ಅಲ್ಲಿಗೆ ಬರುತ್ತಿರ, ಯಾರು ಇಲ್ಲದ್ದನು ನೋಡಿ, ಆ ಬೆಂಕಿ ಚೆಂಡನ್ನು ಎತ್ತಿ ಹಿಡಿದು, ವೃತ್ತದಲ್ಲಿ ಇರುವವರಿಗೆ ಕೊಡಬೇಕು, ಅವರು ತಮ್ಮ ಪಕ್ಕದಲ್ಲಿ ಇರುವವರಿಗೆ ಕೊಟ್ಟು ಹಾಗೆ ಮುಂದುವರೆಸಿ, ಕೊನೆಗೆ ಮೊದಲು ಕುಲುಮೆ ಇಂದ ಯಾರು ತೆಗೆದು ಕೊಟ್ಟರೋ ಅವರಿಗೆ ಕೊಡಬೇಕು. ಎಲ್ಲರಿಗೂ ತಿಳೀತಾ ? ಏನಾದರೂ ಪ್ರಶ್ನೆ ಇದೆಯಾ ಕೇಳಿ…” ಎಂದರು.
ಎಲ್ಲರೂ ಒಬ್ಬರ ಮುಖವನ್ನು ಇನ್ನೊಬರು ನೋಡಿ, ಇಲ್ಲ ಎಂದರು. ತರಲೆ ಸಂಘದ ಅಧ್ಯಕ್ಷನಾದ ದುರ್ಗನನ್ನು ಬೆಟ್ಟು ಮಾಡಿ ನಿರ್ದೇಶಕರು ಕರೆದರು, 
“ದುರ್ಗ ಬಾರಪ್ಪ ಇಲ್ಲಿ, ನಿನ್ನಿಂದಲೇ ಶುರುವಾಗಲಿ, ಹೋಗು, ಕುಲುಮೆಗೆ ಹೋಗಿ ಕುತೂಹಲ ಪ್ರದರ್ಶಿಸಿ, ನಿನ್ನ ಗೆಳೆಯರಿಗೂ ಬೆಂಕಿ ಚೆಂಡನ್ನು ಕೊಟ್ಟು ತೋರಿಸು…”
ಈ ಹಿಂದೆ ಮಾಡಿದ ಪ್ರಯೋಗದಲ್ಲಿ ಸರಿಯಾಗಿ ಪಾಲ್ಗೊಳ್ಳದೆ, ಕದ್ದು ಮುಚ್ಚಿ ಕಣ್ಣ್ ಬಿಟ್ಟು ತರಲೆ ಮಾಡಿಕೊಂಡಿದ್ದ ದುರ್ಗ, ತನ್ನ ಪ್ರತಾಪ, ನಟನೆಯ ಕೌಶಲ್ಯವನ್ನು ಮೆರೆಯಲು ಮುಂದಾದ. 
ಕಾಲ್ಪನಿಕ ಕುಲುಮೆಯ ಹತ್ತಿರ ಹೋಗಿ ನಿಂತು, “ಅಬ್ಬಾ  ಎನ್ ಸಾರ್ ಇದು, ಈ ರೀತಿ ಬಿಸಿ ಬಿಸಿಯಾಗಿದೆ, ಅಬ್ಬಬ್ಬಾ ಎನ್ ಕೆಂಪಾಗಿದೆ, ಒಳ್ಳೆ ಸೂರ್ಯನ ಹಾಗೆ ಹೋಳಿತಾ ಇದ್ಯಲ್ಲಾ ಸರ್… ಇರಲಿ ಸರ್, ನಿಮ್ಮ ಸವಾಲನ್ನ ನಾನು ಸ್ವೀಕರಿಸಿದ್ದೇನೆ ಹ ಹ ಹ ಹಾ ” ಎಂದು ಜೋರಾಗಿ ನಗಲು ಶುರು ಮಾಡಿದನು. 
ಕುಲುಮೆಯನ್ನು ಒಂದು ಸರ್ತಿ ಬಲಬದಿಯಿಂದ ಸುತ್ತಲೂ ಶುರು ಮಾಡಿ, ಮತ್ತೊಮ್ಮೆ, ಎಡಬದಿಯಿಂದ ಸುತ್ತಿ, ಬೆಂಕಿಯ ಚೆಂಡಿನ ಮುಂದೆ ನಾಲ್ಕು ಸರ್ತಿ “ಬಸ್ಕಿ” ಹೊಡೆದು, ತೋಳುಗಳನ್ನ ತೋರಿಸಿ, ತೊಡೆ ತಟ್ಟಿ “ಹರ ಹರ ಮಹಾದೇವಾ” ಎಂದು ಕೂಗು ಹಾಕಿ. ಬೆಂಕಿ ಚೆಂಡನ್ನು ಎತ್ತಿ ಹಿಡಿದು, “ಹ ಹ ಹ ಹಾ” ಎಂದು ನಕ್ಕನು.
ಸರ್ಕಸ್ನ ಕೋಡಂಗಿಯ ಹಾಗೆ ಚೆಂಡನ್ನು ಮೇಲೆ ಎಸೆದು ಮತ್ತೆ ಹಿಡಿದ ಹಾಗೆ ನಟನೆ ಮಾಡಿ ವೃತ್ತದಲ್ಲಿ ಕುಳಿತ ಅವನ ಗೆಳೆಯನ ಕಡೆಗೆ ಎಸೆದನು.
ಇವನ ಕೊಂಡಂಗಿ ಅವತಾರವನ್ನು ನೋಡಿ ಎಲ್ಲರೂ ನಗುತ್ತಿದ್ದರು, ನಿರ್ದೇಶಕರು ಎಷ್ಟು ಗಂಭೀರವಾಗಿ ಸಭೆಯನ್ನು ಕುಳ್ಳರಿಸಿದ್ದರೋ, ಈ ದುರ್ಗ ಅದನ್ನು ಸಂಪೂರ್ಣವಾಗಿ ಹಾಳುಗೆಡವಿದ್ದ.. 
ತನ್ನ ಬಳಿಗೆ ದುರ್ಗ ಎಸೆದ ಕಾಲ್ಪನಿಕ  ಚೆಂಡನ್ನು, ತನ್ನ ಕೈಗೆ ಲಾಡು ಎಸೆದವರ ಹಾಗೆ ಉಲ್ಲಸಿತನಾಗಿ catch ಹಿಡಿದು , “ಅಬ್ಬಬ್ಬಾ ಎನ್ ಕೆಂಪಾಗಿದೆ ಇದು, ಒಳ್ಳೆ ಜಾಮೂನಿನ ಹಾಗೆ, ತಿಂದುಬಿಡಲಾ ? ಹ ಹ ಹ ಹ ! ” ಎಂದು ನಕ್ಕು  ತನ್ನ ಪಕ್ಕದಲ್ಲಿ ಇರುವವನಿಗೆ ಹಸ್ತಾಂತರಿಸಿದ.. ಹೀಗೆ ಎಲ್ಲರೂ ಆ ಬೆಂಕಿ ಚೆಂಡು ಎಷ್ಟು ಮುದ್ದಾಗಿದೆ ಎಂದು ವರ್ಣಿಸಿ, ಅದಕ್ಕೊಂದು ಹೆಸರಿಟ್ಟು  ತಮ್ಮ ಪಕ್ಕದಲ್ಲಿ ಇರುವವರಿಗೆ ಕೊಟ್ಟು ಮುಂದುವರೆಸಿದರು. ಅವರಲ್ಲಿ ಇದ್ದ ಒಂದಿಬ್ಬರು ಬುದ್ಧಿವಂತರು, ತಾವು ಮುಟ್ಟದೆ, ತಮ್ಮ ಪಕ್ಕದಲ್ಲಿ ಇರುವವರಿಗೆ ಕೊಡಲು ಹೇಳಿ ಕಡೆಗೆ ದುರ್ಗನ ಕೈಗೆ ತಲುಪಿಸಿದರು. 
“ಕಡೆಗೂ ನನ್ನ ಹತ್ತಿರವೇ ಬಂದೆಯ, ಬಾ ಬಾ ನಿನಗೆ ನಿನ್ನ ಮನೆಯನ್ನು ಸೇರಿಸುವೆ ಹ ಹ ಹ ಹಾ ” ಎಂದು ಆ ಬೆಂಕಿ ಚೆಂಡಿಗೆ ಹೇಳಿ ಮತ್ತೆ ಕಲ್ಪಿತ ಕುಲುಮೆಯ ಹತ್ತಿರ ಇಟ್ಟು, “ಹ ಹ ಹಾ ” ಎಂದು ಕೇಕೆ ಹಾಕಿ ತೊಡೆಯನ್ನು ತಟ್ಟಿ  ತನ್ನ ಜಾಗದಲ್ಲಿ ಬಂದು ಕುಳಿತನು.
ಈ ಮಂಗಾಟವನ್ನು ತಾಳ್ಮೆ ಇಂದ ವೀಕ್ಷಿಸಿದ ನಿರ್ದೇಶಕರು, ಒಂದು ದೀರ್ಘ ಉಸಿರನ್ನು ತೆಗೆದು.”ಅಲ್ಲಪ್ಪಾ ದುರ್ಗ ನಿನ್ನ ತಲೆಯಲ್ಲಿ ಸಗಣಿ ತುಂಬಿಕೊಂಡಿದೆಯ ? ” ಎಂದು ಕೇಳಿದರು.
ಕೊಠಡಿಯಲ್ಲಿ ನಗುತ್ತಿದ್ದ ಎಲ್ಲರೂ ನಗುವುದನ್ನು ನಿಲ್ಲಿಸಿ, ಗಂಭೀರವದನರಾದರು. 
“ಅಲ್ಲಯ್ಯ, ಮೊದಲೇ ಹೇಳಿದಿನಿ, ಬೆಂಕಿಯಿಂದ ಕಾದು ಅದು ಕೆಂಪಗಾಗಿದೆ ಅಂತ, ಅಷ್ಟು ಬಿಸಿ ಇರುವುದನ್ನ ಬರಿಗೈನಲ್ಲಿ ಎತ್ತೋದ್ ಇರಲಿ ಮುಟ್ಟೋದಕ್ಕೂ ಆಗತ್ತಾ ? ಅದನ್ನ ಬರಿಗೈನಲ್ಲಿ ಮುಟ್ಟಿದ್ರೆ ಕೈ ಸುಟ್ಟು ಹೋಗೋದಿಲ್ವಾ,  ಅಷ್ಟು ಹೇಳಿದಿನಿ, ಕುಲುಮೆನ ಕಲ್ಪಿಸಿಕೊಳ್ಳಿ, ಸುತ್ತಿಗೆ, ಇಕ್ಕಳ, ನೀರು, ಬಟ್ಟೆ ಇದೆ ಅಂತ, ಆ ಬೆಂಕಿ ಚೆಂಡನ್ನು ನೀರಿನಲ್ಲಿ ಮುಳುಗಿಸಿ, ತಂಪು ಮಾಡಿ, ಬಟ್ಟೆ, ಇಕ್ಕಳದ ಸಹಾಯದಿಂದ ಎತ್ತಿ, ಆಮೇಲೆ ಕೊಡಬೇಕು ತಾನೇ,ಅದನ್ನೆಲ್ಲಾ ಮರೆತು, ಹೋಗಿ ಪೈಲ್ವಾನನ ಹಾಗೆ ತೊಡೆತಟ್ಟಿ, ಬಡಾಯಿ ಕೊಚ್ಚಿಕೊಂಡು, ಎತ್ತಿ ಸರ್ಕಸ್ ಕೋಡಂಗಿಯ ಹಾಗೆ ನಟಿಸಿ, ಅವರಿಗೆ ಕೊಟ್ಟೆಯಲ್ಲೋ ದಡ್ಡ… ಇನ್ನು ನೀವ್ಗಳು ಅವನನ್ನೇ ಅನುಸರಿಸಿದಿರಲ್ಲಾ ನಿಮಗೆ ಏನು ಹೇಳಬೇಕು, ಒಂದು ಕುರಿ ಹಳ್ಳಕ್ಕೆ ಬಿದ್ದರೆ, ನೀವುಗಳು ಬಿದ್ದಿರಿ , ನನ್ನ ಕರ್ಮ. ಒಂದಿಬ್ಬರು ಮಾತ್ರ ಬುದ್ಧಿವಂತಿಕೆ ಮೆರೆದು ನನ್ನ ಮಾನ ಉಳಿಸಿದಿರಿ, ಅದಕ್ಕೆ ಹೇಳೋದು ಏಕಾಗ್ರತೆ ಇಟ್ಟು ಕೇಳಬೇಕು, ಅನುಭವಿಸಬೇಕು ಅಂತ.. ದುರ್ಗ ನಿನ್ನಂತೆ ಇರೋರ್ನ ಹೇಗಪ್ಪಾ ಸುಧಾರಿಸೋದು, ನಟನೆ ಅಂದ್ರೆ ಬರಿ ಸಂಭಾಷಣೆ ಅಲ್ಲ ಕಾಣಪ್ಪ” ಎಂದು ನಿರ್ದೇಶಕರು ತಮ್ಮ ತಡೆಹಿಡಿದ ಕೋಪವನ್ನು ದುರ್ಗನ  ಅಷ್ಟಾರ್ಚನೆಯ ಮೂಲಕ ಶಮನ ಮಾಡಿಕೊಂಡರು. 
ಇಷ್ಟು ಹೊತ್ತು ಎಲ್ಲರಿಗೂ ಮನೋರಂಜನೆಯನ್ನು ನೀಡಿ ನಾಯಕನಾಗಿದ್ದ ದುರ್ಗನ ಮುಖ ನಿರ್ದೇಶಕರ ಬೈಗುಳಕ್ಕೆ ಬಾಡಿ ಕಪ್ಪಗಾಗಿತ್ತು.  
ನಿರ್ದೇಶಕರು ಇನ್ನು ಬೈಯ್ಯುತ್ತಿದರೊ ಏನೋ, ಸಂಜೆ ಮನೆ ಹೊರಡುವ ಸಮಯವಾದ್ದರಿಂದ ಅಲ್ಲಿಗೆ ನಿಲ್ಲಿಸಿದರು.
ಹುಲಿಯಂತೆ ಗರ್ಜಿಸಿ, ಬೆಂಕಿಯ ಚೆಂಡನ್ನು ಎತ್ತಿ ಹಿಡಿದ ದುರ್ಗ, ಇಲಿಯಂತಾಗಿ  ನಾಟಕದ ಸಹವಾಸವೇ ಬೇಡವೆಂದು ಅಲ್ಲಿಂದ ಎಲ್ಲರಿಗೂ ಮೊದಲೇ  ಓಟ ಕಿತ್ತನು.(ಮುಂದುವರೆಯುವುದು…)

One thought on “ಬೆಂಕಿ ಚಂಡು”

  1. Shamala Janardhanan says:

    ಚೆನ್ನಾಗಿದೆ. ಇದು ಧ್ಯಾನದ ಒಂದು ಮುಖ. ಮೊಟ್ಟ ಮೊದಲು ಧ್ಯಾನ ಕಲಿಯುವವರಿಗೆ, ಹೀಗೆ ಅವರಿಗೆ ಬೇಕಾದ ಇಷ್ಟದ ಜಾಗಕ್ಕೆ ಕರೆದುಕೊಂಡು ಹೋಗುತ್ತಾರೆ…… 🙂

Leave a Reply

Your email address will not be published. Required fields are marked *

Related Post

ಮಗರಾಯನ ವಾಕಿಂಗ್ ಹಠ ಕ್ಕೆ ಬಂದ ಭಾಮಿನಿ ಪರದೆ ಮುಂಗಡೆ ಕಣ್ಣು ಕೀಲಿಸಿ ಭರದಿ ಕೆಲಸವ ಮಾಡುತಿರಲವ ತರಿಸಿ ಬಂದನು ರಚ್ಚೆ ಕೊರಮನು ಎತ್ತು ತಲಿಕೊರ ಳ ಹೊರಗೆ ತಿರುಗುವ ಸಮಯವಾದುದು ಭರದಿ ಕೆಲಸವ ಮುಗಿಸಿರೆಂದವ ಸರವ ಕಾಲಿಗೆ ತೊಡಿಸಿ ಪೋದನು ಒಲವಿನಲಿ ದುರುಳ 60 SHARES Share on Facebook Tweet Follow us

Shabda vargaShabda varga

ಅಮರ ಸಿಂಹನ ಅಮರಕೋಶ ಭಾರತೀಯ ಭಾಷೆಗಳನ್ನು ಮತ್ತಷ್ಟು ಹತ್ತಿರ ಮಾಡಿಕೊಳ್ಳುವುದಕ್ಕೆ ಮತ್ತು ಸಾಹಿತ್ಯವನ್ನು ಹತ್ತಿರವಾಗಿಸಿಕೊಳ್ಳುವುದಕ್ಕಿರುವ ಕೋಶ. ಅಮರಕೋಶ ಪ್ರಥಮ ಕಾಂಡ ಶಬ್ದ ವರ್ಗ ವಾಚನ ಡಿ ಕೆ ನಾರಾಯಣ ಮೂರ್ತಿ ನಿವೃತ್ತ ಕನ್ನಡ ಪ್ರಾಧ್ಯಾಪಕರು ದೊಡ್ಡ ಸಿದ್ದವ್ವನ ಹಳ್ಳಿ ಚಿತ್ರದುರ್ಗ (ಜಿ) https://youtu.be/a5cdMGASUYQ 60 SHARES Share on

BhogivargaBhogivarga

ಅಮರ ಸಿಂಹನ ಅಮರಕೋಶ ಭಾರತೀಯ ಭಾಷೆಗಳನ್ನು ಮತ್ತಷ್ಟು ಹತ್ತಿರ ಮಾಡಿಕೊಳ್ಳುವುದಕ್ಕೆ ಮತ್ತು ಸಾಹಿತ್ಯವನ್ನು ಹತ್ತಿರವಾಗಿಸಿಕೊಳ್ಳುವುದಕ್ಕಿರುವ ಕೋಶ. ಅಮರಕೋಶ ಪ್ರಥಮ ಕಾಂಡ ಭೋಗಿ ವರ್ಗ ವಾಚನ ಡಿ ಕೆ ನಾರಾಯಣ ಮೂರ್ತಿ ನಿವೃತ್ತ ಕನ್ನಡ ಪ್ರಾಧ್ಯಾಪಕರು ದೊಡ್ಡ ಸಿದ್ದವ್ವನ ಹಳ್ಳಿ ಚಿತ್ರದುರ್ಗ (ಜಿ) 60 SHARES Share on Facebook