ಬದುಕಿನ ಪುಟಗಳು ಭಾಗ – 3

Badukina putagalu

ನಮ್ಮ ಬದುಕು ಒಂದು ಪುಸ್ತಕವಿದ್ದಂತೆ. ಅದನ್ನು ಯಾರೆಲ್ಲಾ ಓದಬಹುದು ಎಂಬುದನ್ನು ನಾವೇ ನಿರ್ಧರಿಸಬೇಕಾಗುವುದು. ಪುಸ್ತಕದ ಪುಟಗಳು ಮಗುಚಿದಂತೆಲ್ಲಾ ಅನುಭವಗಳು ಬರೆಯಲ್ಪಡುತ್ತವೆ. ಒಳಮನಸ್ಸು ಎಲ್ಲವನ್ನೂ ದಾಖಲಿಸುತ್ತಾ ಹೋಗುತ್ತದೆ. ಕೆಲವು ಒಳ್ಳೆಯ ಹಾಗೂ ಸಂತೋಷದ ಸಂಗತಿಗಳು, ಘಟನೆಗಳು. ಕೆಲವು ಅಹಿತಕರವಾದ ದಾಖಲೆಗಳು. ಸಂತೋಷದ ಘಟನೆಗಳನ್ನು ನಮ್ಮ ಬದುಕಿನ ಪುಸ್ತಕದ ಪುಟಗಳನ್ನು ಮತ್ತೆ ಮತ್ತೆ ತಿರುವುತ್ತಾ, ಮೆಲುಕು ಹಾಕುತ್ತಾ ನೆನಪಿಸಿಕೊಳ್ಳಬಹುದಾದಂತಹವು. ಇದರಿಂದ ಏಲು ಲಾಭ ಅಂತೀರಾ? ಯಾವಾಗಲೋ ನಡೆದ ಸಂತಸದ ಘಟನೆ ಅಥವಾ ಸಂಗತಿಯನ್ನು ಮೆಲುಕು ಹಾಕಿದಾಗ, ಈಗಲೂ ಮನಸ್ಸು ಅರಳುತ್ತದೆ. ಒಂದು ಒಳ್ಳೆಯ ಸತ್ವದ ಬಿಂದು ಚಿಮ್ಮುತ್ತದೆ. ವರ್ತಮಾನದ ಸಮಯವನ್ನು ಕಳೆಯಲು ಅದು ನಮಗೊಂದು ತೀತೊಯ ಉತ್ಶ್ವನ್ನು ತುಂಬುತ್ತದೆ.

ಒಂದು ಪುಟ್ಟ ಘಟನೆ ನಡೆಯಿತು. ಒಮ್ಮೆ ತಾಯಿ ಕೆಲಸದಿಂದ ಸಂಜೆ ಸುಸ್ತಾಗಿ ಮನೆಗೆ ಬಂದಳು. ಮನೆಯಲ್ಲಿ ಕೆಲಸದ ಹುಡುಗಿಯ ಜೊತೆ ಆಡುತ್ತಿದ್ದ ೩ ವರ್ಷದ ಮಗ ತಾಯಿಯನ್ನು ಕಂಡ ಸಂತೋಷದಲ್ಲಿ ಓಡುತ್ತಾ ಬಂದು ಒಂದೇ ಸಮನೆ ಮಾತನಾಡತೊಡಗಿತು. ಇಡೀ ದಿನ ಒತ್ತಡದಲ್ಲಿ ಕೆಲಸ ಮಾಡಿ, ಬಸವಳಿದು ಬಂದ ತಾಯಿಗೆ ಉಸಿರು ತೆಗೆದುಕೊಳ್ಳಲೂ ಸಮಯ ಕೊಡದೆ, ಗಲಾಟೆ ಮಾಡಿದ ಮಗುವಿನ ಮೇಲೆ ಸಿಟ್ಟು ಬಂತು, ೫ ನಿಮಿಷ ಸುಮ್ಮನಿರ್ತೀಯಾ ಅಂತ ರೇಗಿದಳು. ಮಗು ಮಾತೇ ಆಡಲಿಲ್ಲ, ತಲೆ ತಗ್ಗಿಸಿ ಒಳಗೆ ಹೊರಟುಹೋಯಿತು. ಅದನ್ನು ಕಂಡು ತಾಯಿ ತುಂಬಾ ನೊಂದುಕೊಂಡಳು. ಛೇ ಹೀಗೇಕೆ ಮಾಡಿದೆ ಎಂದು ಪರಿತಪಿಸಿದಳು. ಆದರೆ ಅದೇ ಕ್ಷಣದಲ್ಲಿ ವಾಪಸ್ಸು ಬಂದ ಮಗು ಅಮ್ಮನ ಕೈಗೆ ಒಂದು ಲೋಟ ತಣ್ಣನೆಯ ಕುಡಿಯುವ ನೀರು ಕೊಟ್ಟು ಕುಡೀಮ್ಮಾ ಎಂದಿತು. ಮೊದಲೇ ಪಶ್ಚಾತ್ತಾಪದಿಂದ ಪರಿತಪಿಸುತ್ತಿದ್ದ ತಾಯಿ, ಮಗನನ್ನು ಬಾಚಿ ತಬ್ಬಿ ಮುದ್ದಾಡಿದಳು. ಅವಳ ಕಣ್ಣೀರು ಆನಂದಬಾಷ್ಪವಾಗಿ ಮಾರ್ಪಟ್ಟಿತ್ತು. ಅಂದು ಆ ತಯಿ ಜೀವನದ ಒಂದು ದೊಡ್ಡ ಪಾಠವನ್ನು ಕಲಿತಿದ್ದಳು.

ನಮ್ಮೊಳಗಿನ ಒತ್ತಡ ಎಷ್ಟೇ ಹೆಚ್ಚಾಗಿದ್ದರೂ, ನಾವು ವ್ಯವಹರಿಸುವ ರೀತಿ ಹೇಗಿರಬೇಕು ಎಂಬುದನ್ನು ಆ ಪುಟ್ಟ ಮಗು ಕಲಿಸಿತ್ತು. ತನ್ನ ಮೇಲೆ ಅಮ್ಮ ಕೋಪಿಸಿಕೊಂಡರೂ ಕೂಡ ಅಮ್ಮನಿಗೆ ಸುಸ್ತಾಗಿದೆ ಎಂದು ಪುಟ್ಟ ಮನಸ್ಸು ಅರಿಯಿತು. ಆ ಕ್ಷಣಕ್ಕೆ ತಾಯಿಗೆ ಅತ್ಯಂತ ಅವಶ್ಯಕತೆಯಿದ್ದ ಜೀವಜಲವನ್ನು ತಂದು ಕೊಟ್ಟಿತ್ತು. ಮುಗ್ಧ ಮಗು ಸತ್ವದ ಬಿಂದುವನ್ನು ತನ್ನ ಅಕ್ಕರೆಯ ಮೂಲಕ ಹಂಚಿತ್ತು. ಅಮ್ಮನ ಮನಸ್ಸನ್ನು ಮುದಗೊಳಿಸಿತ್ತು, ಇದೊಂದು ಅತ್ಯಂತ ಸುಂದರವಾದ ಘಟನೆಯಾಗಿದೆ. ಬದುಕಿನ ಪುಸ್ತಕದ ಹಾಳೆಗಳಲ್ಲಿ ಪ್ರಮುಖ ಪುಟವಾಗಿದೆ. ಯಾವಾಗ ತಿರುವಿ ಹಾಕಿದರೂ, ತಾಯಿಯ ಮುಖದಲ್ಲಿ ಒಂದು ನಸುನಗು ಮೂಡುತ್ತದೆ. ಹಾಗೇ ಯಾರೆಲ್ಲಾ ಈ ಪುಸ್ತಕವನ್ನು ಓದುವರೋ ಅವರ ಮುಖದಲ್ಲೂ ಒಂದು ನಸುನಗೆ ಮೂಡದೇ ಇರದು.

ಮುಗ್ಢ ಮನಸ್ಸಿನ ಪುಟ್ಟ ಮಕ್ಕಳು ಬರೀ ಸತ್ವವನ್ನು ಮಾತ್ರವೇ ಹಂಚುವುದಿಲ್ಲ. ಅವರು ನಮಗೆ ಅನೇಕ ಪಾಠಗಳನ್ನೂ ಕಲಿಸುತ್ತಾರೆ. ಎಷ್ಟೋ ಸಾರಿ ನಾವು ಅಷ್ತು ದೊಡ್ಡವರಾದರೂ, ಅದುವರೆಗೂ ಮಾಡದೇ ಇದ್ದಂತಹ ಕೆಲವನ್ನು ಮಕ್ಕಳಿಗೋಸ್ಕರ ಮಾಡುವಂತೆ ಮಾಡುತ್ತಾರೆ. ಏನೋ ಭಯ ಎಂದು ನಮ್ಮ ಬಾಲ್ಯದಿಂದಲೂ ನಾವು ಮಾಡದಿದ್ದ ಸಾಹಸವನ್ನು ಮಾಡುವಂತೆ ನಮ್ಮನ್ನು ಪ್ರೇರೇಪಿಸುತ್ತಾರೆ. ಮುನ್ನುಗ್ಗುವ ಧೈರ್ಯ ಕಲಿಸುತ್ತಾರೆ.

ಒಮ್ಮೆ ಹೀಗಾಯಿತು, ನಾವು ಮತ್ತೆ ತಾಯಿ ಮಗುವಿನ ಸಂಗತಿಯನ್ನೇ ನೋಡೋಣ. ಸುಮಾರು ೬ – ೭ ವರ್ಷದ ಪುಟ್ಟ ಹುಡುಗ, ಬಹುಶಃ ೨ನೇ ತರಗತಿಯಲ್ಲಿ ಓದುತ್ತಿದ್ದಿರಬಹುದು. ಒಮ್ಮೆ ಅವರ ಮನೆಯ ಹತ್ತಿರದ ಮೈದಾನದಲ್ಲಿ ಮಕ್ಕಳನ್ನು ಆಕರ್ಷಿಸುವಂತಹ ಮೆರ್ರಿಗೋರೌಂಡ್ ಅಂತಹ ಅನೇಕ ವಿಧದ ಆಟಗಳು ಯಾವುದೋ ಮೇಳದ ಪ್ರಯುಕ್ತ ಹಾಕಲ್ಪಟ್ಟಿತ್ತು. ಮಗು ಕೆಲಸದ ಹುಡುಗಿಯ ಜೊತೆ ಹೋಗಿ ಎಲ್ಲವನ್ನೂ ನೋಡಿ ಬಂದಿದ್ದ. ವಾರಾಂತ್ಯದಲ್ಲಿ ತಾಯಿಯ ಜೊತೆ ಮತ್ತೊಮ್ಮೆ ಹುಡುಗ ಮೈದಾನಕ್ಕೆ ಬಂದಿದ್ದ. ಅವನಿಗೆ ಆ ಎತ್ತರಕ್ಕೆ ಹೋಗುವ ತೂಗು ತೊಟ್ಟಿಲಲ್ಲಿ ಕುಳಿತುಕೊಳ್ಳುವ ಆಸೆ. ಆದರೆ ಮಕ್ಕಳು ಒಬ್ಬೊಬ್ಬರೇ ಹೋಗುವಂತಿಲ್ಲ. ತಾಯಿ ಅದುವರೆಗೂ ತನ್ನ ಜೀವನದಲ್ಲಿ ಎಂದೂ ಅಂತಹುದರಲ್ಲಿ ಕುಳಿತು ಆ ಎತ್ತರಕ್ಕೆ ಹೋಗಿರಲಿಲ್ಲ. ಅವಳಿಗೆ ಭಯ. ಸಪ್ಪೆ ಮುಖ ಮಾಡಿಕೊಂಡು ನಿರಾಸೆಯಿಂದ ಕಣ್ತುಂಬಿ ನಿಂತಿದ್ದಾನೆ ಮಗ. ತಾಯಿಗೂ ಏನೂ ತೋಚುತ್ತಿಲ್ಲ. ಇದ್ದಕ್ಕಿದ್ದಂತೆ ಮಗ ತಾಯಿಯ ಕೈ ಜಗ್ಗಿ ಅಮ್ಮಾ ಬಾಮ್ಮ, ನಾನಿದ್ದೇನೆ, ನಿನ್ನನ್ನು ಭದ್ರವಾಗಿ ಹಿಡಿದುಕೊಳ್ಳುತ್ತೇನೆ, ಏನೂ ಆಗೋಲ್ಲ. ತುಂಬಾ ಚೆನ್ನಾಗಿರುತ್ತೆ, ಹೋಗೋಣ ಬಾಮ್ಮ ಎಂದು ತನ್ನದೇ ಬಾಲ ಭಾಷೆಯಲ್ಲಿ ತೋಚಿದ್ದೆಲ್ಲಾ ಹೇಳಿ ಧೈರ್ಯ ತುಂಬತೊಡಗಿದ. ಈಗ ಬಿಟ್ಟರೆ ಇನ್ಯಾವಾಗ ನೀನು ಇದರಲ್ಲಿ ಕೂತ್ಕೊಳ್ಳೋದು, ಬಾರಮ್ಮಾ ಎಂದು, ತಾನೇನೋ ತುಂಬಾ ದೊಡ್ಡ ಜವಾಬ್ದಾರಿಯುತ ಮನುಷ್ಯ, ತನ್ನ ತಾಯಿಯನ್ನು ತಾನು ರಕ್ಷಿಸಬಲ್ಲೆ ಅನ್ನುವ ತುಂಬು ವಿಶ್ವಾಸದಿಂದ ಹುರಿದುಂಬಿಸಿದ. ಮಗನ ಮಾತುಗಳಿಂದಲೋ, ಅವನಿಗೆ ಬೇಸರವಾಗಬಾರದೆಂದೋ, ಅಂತೂ ಆ ತಾಯಿ ಸಾಹಸಕ್ಕೆ ಸಿದ್ಧಳಾಗೇ ಬಿಟ್ಟಳು. ಕೊನೆಗೆ ಆ ತೂಗು ತೊಟ್ಟಿಲು ಹತ್ತಿದಾಗಿನಿಂದ, ಇಳಿಯುವವರೆಗೂ, ಅವಳು ಮಗನಿಗೆ ಆತು, ಕಣ್ಣುಮುಚ್ಚಿ ಕುಳಿತು, ಮುಕ್ಕೋಟಿ ದೇವರುಗಳನ್ನೂ ಜಪಿಸುತ್ತಿದ್ದುಬಿಟ್ಟಳು. ಆದರೆ ಮಗು ಮಾತ್ರ ಅಮ್ಮನ ಕೈಯನ್ನು ಭದ್ರವಾಗಿ ತನ್ನ ಪುಟ್ಟ ಕೈಗಳಲ್ಲಿ ಹಿಡಿದು, ಭರವಸೆಕೊಡುತ್ತಾ, ಉತ್ಸಾಹದಿಂದ, ಅತ್ಯಂತ ಸಂತೋಷಪಟ್ಟಿತ್ತು.

ಈ ಘಟನೆಯಲ್ಲಿ ಆ ಪುಟ್ಟ ಹುಡುಗ, ಜೀವನದಲ್ಲಿ ಧೈರ್ಯದಿಂದ, ಮುನ್ನಡೆಯಬೇಕು, ಯಾವುದೇ ಸಂದರ್ಭದಲ್ಲೂ ಹೆದರಬಾರದೆಂಬ ಪಾಠ ತನ್ನ ತಾಯಿಗೆ ಕಲಿಸಿದ್ದ.

Leave a Reply

Your email address will not be published. Required fields are marked *

Related Post

ನೀಲ ಮೇಘ ಶ್ಯಾಮಲ ಶ್ಯಾಮಲನೀಲ ಮೇಘ ಶ್ಯಾಮಲ ಶ್ಯಾಮಲ

ಬದುಕಿನ ಪುಟಗಳಿಂದ – ಭಾಗ – ೧ ಎಲ್ಲದಕ್ಕಿಂತ ಮೊದಲು “ಬದುಕು” ಎಂದರೇನು ? ಬೇರೆ ಬೇರೆ ನಿಘಂಟುಗಳ ಪ್ರಕಾರ ಬದುಕು ಎಂದರೆ ಜೀವನ, ಬಾಳು, ಜೀವಿಸು, ಕಸುಬು, ಜೀವಿಸಿರು, ಬಾಳನ್ನು ಸಾಗಿಸು ಎಂದೆಲ್ಲಾ ಇದೆ. ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿರುವ ನಿಘಂಟಿನಲ್ಲಿ ಮೇಲಿನ ಎಲ್ಲಾ ಅರ್ಥಗಳ ಜೊತೆಗೆ

ಬದುಕಿನ ಪುಟಗಳು ಭಾಗ – ೪ಬದುಕಿನ ಪುಟಗಳು ಭಾಗ – ೪

ಬದುಕು ನಮಗೆ ನಮ್ಮ ಸ್ವಭಾವವನ್ನು ತಿದ್ದುತ್ತಾ, ತೀಡುತ್ತಾ ಬಾಳದಾರಿಯಲ್ಲಿ ಸಾಗಲು ಅನುವು ಮಾಡಿಕೊಡುತ್ತದೆ. ಯಾವುದೋ ಒಂದು ಊರಿನಲ್ಲಿ, ಯಾರ ಮನೆಯಲ್ಲೋ ಜನಿಸಿ, ಯಾವುದೇ ತರಹದ ಉನ್ನತ ಗುರಿ ಅಥವಾ ಗಮ್ಯ ಎಂಬ ಪದಗಳ ಪರಿಚಯವಿಲ್ಲದೇ ಬೆಳೆದಿರುತ್ತೇವೆ. ಇದು ಹೆಚ್ಚಾಗಿ ನಮ್ಮ ಸಮಕಾಲೀನರ ಬದುಕಿನಲ್ಲಿ ನಡೆದಿರಬಹುದಾದ ವಿಷಯಗಳು. ಏಕೆಂದರೆ ಈಗಿನ

ಬದುಕಿನ ಪುಟಗಳು ಭಾಗ – ೨ಬದುಕಿನ ಪುಟಗಳು ಭಾಗ – ೨

ಸತ್ವವನ್ನು ಹಂಚುವ ಬಗ್ಗೆ ಆಲೋಚಿಸಿದ್ದೆವು. ಈಗ ಯಾರು ಸತ್ವವನ್ನು ಹಂಚಲು ಸಾಧ್ಯವೆಂದು ನೋಡೋಣ. ನಮ್ಮಲ್ಲಿ ಸಾಕಾಗುವಷ್ಟು ಇದ್ದರೆ ತಾನೇ ನಾವು ಬೇರೆಯವರಿಗೆ ಕೊಡುವ ಯೋಚನೆ ಮಾಡುವುದು? ಇದು ಕೇವಲ ಅನುಭವದ ಅಥವಾ ಬದುಕು ನನಗೆ ಕಲಿಸಿದ ಪಾಠಗಳ ಒಂದು ಪಕ್ಷಿನೋಟ ಅಷ್ಟೆ. ನಾನೇನೂ ದೊಡ್ಡ ತಿಳುವಳಿಕೆಯುಳ್ಳ ವ್ಯಕ್ತಿಯೋ ಅಥವಾ