ಬದುಕಿನ ಪುಟಗಳು ಭಾಗ – ೪

ಬದುಕು ನಮಗೆ ನಮ್ಮ ಸ್ವಭಾವವನ್ನು ತಿದ್ದುತ್ತಾ, ತೀಡುತ್ತಾ ಬಾಳದಾರಿಯಲ್ಲಿ ಸಾಗಲು ಅನುವು ಮಾಡಿಕೊಡುತ್ತದೆ. ಯಾವುದೋ ಒಂದು ಊರಿನಲ್ಲಿ, ಯಾರ ಮನೆಯಲ್ಲೋ ಜನಿಸಿ, ಯಾವುದೇ ತರಹದ ಉನ್ನತ ಗುರಿ ಅಥವಾ ಗಮ್ಯ ಎಂಬ ಪದಗಳ ಪರಿಚಯವಿಲ್ಲದೇ ಬೆಳೆದಿರುತ್ತೇವೆ. ಇದು ಹೆಚ್ಚಾಗಿ ನಮ್ಮ ಸಮಕಾಲೀನರ ಬದುಕಿನಲ್ಲಿ ನಡೆದಿರಬಹುದಾದ ವಿಷಯಗಳು. ಏಕೆಂದರೆ ಈಗಿನ ಪೀಳಿಗೆಯ ಮಕ್ಕಳಿಗೆ ತಮ್ಮ ಗುರಿ ತಿಳಿದಿರುತ್ತದೆ. ಅದಕ್ಕೆ ಪೂರಕವಾಗಿಯೇ, ಅಂತಹ ವಾತಾವರಣದಲ್ಲಿಯೇ ಬೆಳೆಯುತ್ತಾರೆ. ಎಲ್ಲರೂ ಅಲ್ಲ, ಆದರೂ ಸಾಕಷ್ಟು ಮಕ್ಕಳು ಅದರಲ್ಲೂ ದೊಡ್ಡ ನಗರಗಳಲ್ಲಿ ಇರುವಂತಹ, ಮೇಲ್ಮದ್ಯಮ ವರ್ಗದ ಮಕ್ಕಳು ಹೀಗೆ ಅವರಿಗೆ ಬೇಕಾದದ್ದು ಆಯ್ಕೆ ಮಾಡಿಕೊಂಡು, ಓದಿ ತಮ್ಮ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಿದೆ.

ನಾನು ನಮ್ಮ ಪೀಳಿಗೆಯವರು, ಅದರಲ್ಲೂ ಹೆಣ್ಣು ಮಕ್ಕಳ ವಿಚಾರವಾಗಿ ಮಾತನಾಡುತ್ತಿದ್ದೇನೆ. ದೊಡ್ಡ ನಗರವೂ ಅಲ್ಲ, ತೀರಾ ಚಿಕ್ಕ ಹಳ್ಳಿಯೂ ಅಲ್ಲದ ಒಂದು ತಾಲ್ಲೂಕು ಮಟ್ಟದ ಊರಿನಲ್ಲಿ ಹೆಣ್ಣು ಮಕ್ಕಳು ಹೇಗೆ ಬೆಳೆಯುತ್ತಿದ್ದರು ಎಂಬ ವಿಚಾರದ ವಿವರಣೆ ಕೊಡುತ್ತಿದ್ದೇನೆ. ಸ್ವಲ್ಪ ನಾಚಿಕೆ, ತಂದೆಯ ಬಗ್ಗೆ ಒಂದು ಸಣ್ಣ ಭಯ, ಅತಿಯಾದ ಗೌರವ, ಇಂತಹವರ ಮಗಳೆಂಬ ಚಿಕ್ಕ ಹಮ್ಮು, ಗಂಭೀರ ಸ್ವಭಾವದ, ಯಾವುದೂ ಅತಿಯಿಲ್ಲದಂತೆ, ಹಿತಮಿತವಾದ ನಡವಳಿಕೆಯ ಮಿಶ್ರಣವೇ ನಾವುಗಳು. ಇದ್ದ ಊರೇ ಒಂದು ದೊಡ್ಡ ಪ್ರಪಂಚ, ತನ್ನ ಮನೆ – ಮನೆಯವರೇ ತನಗೆಲ್ಲಾ ಎಂದು ಭಾವಿಸಿರುವಂತಹ ಮನಸ್ಥಿತಿ. ಇದು ಊರಿನಲ್ಲಿ ಮುಕ್ಕಾಲು ಭಾಗದ ಮನೆಗಳಲ್ಲಿನ ಹೆಣ್ಣು ಮಕ್ಕಳ ವಿವರಣೆ. ಹೊರಗೆ ಹೊರಟರೆ ತಲೆ ತಗ್ಗಿಸಿ ನಡೆಯುತ್ತಾ, ಪರಿಚಿತರನ್ನು ಕಂಡಾಗ ಒಂದು ಸಣ್ಣ ಮುಗುಳ್ನಗೆಯನ್ನು ಬೀರುತ್ತಾ, ತೀರಾ ನಿಧಾನವೂ ಅಲ್ಲದ, ವೇಗವೂ ಅಲ್ಲದ ಒಂದು ಗತ್ತಿನ ನಡಿಗೆ, ಸಾಂಪ್ರದಾಯಿಕ ತೊಡುಗೆಯ ಮುಗ್ಧ ಮನಸ್ಸುಗಳು.

ನಾನಿಲ್ಲಿ ಬದುಕು ಬಾಳದಾರಿಯಲ್ಲಿ ಕಲಿಸುವ ಪಾಠಗಳ ಬಗ್ಗೆ ಹಾಗೂ ಸ್ವಭಾವದ ಬಗ್ಗೆ ಹೇಳಲು ಹೊರಟಿರುವೆ. ಮೇಲೆ ಹೇಳಿದ ಎಲ್ಲಾ ಲಕ್ಷ್ಣಗಳೂ ಇದ್ದ ಒಂದು ಹುಡುಗಿ, ನಮ್ಮ ಈ ದಿನದ ನಾಯಕಿ. ಇಷ್ಟೆಲ್ಲಾ ಲಕ್ಷಣಗಳು ಇದ್ದಾಗಲೂ, ಅದು ಹೇಗೋ, ನಮ್ಮ ನಾಯಕಿ ಒಂದು ಪ್ರೇಮಪ್ರಸಂಗದಲ್ಲಿ ಸಿಲುಕಿದಳು. ಕಾಲೇಜಿ ಮುಗಿದ ಕೂದಲೇ ಮದುವೆಯಾಯಿತು, ೨ – ೩ ವರ್ಷಗಳ ನಂತರ ಬದುಕು ಅವಳನ್ನು ದೂರದ ಊರಿಗೆ ಒಗೆಯಿತು. ಎಲ್ಲರಿಂದಲೂ, ಊರಿನಿಂದಲೂ ೩೬ ಘಂಟೆಗಳ ರೈಲು ಪ್ರಯಾಣದಷ್ಟು ದೂರದ ಊರು. ತಿಳಿದವರು ಯಾರೂ ಇಲ್ಲದ, ಭಾಷೆ ತಿಳಿಯದ, ಪರಿಸರದ ಪರಿಚಯವೇ ಇಲ್ಲದ, ಎಂದೂ ಕಾಣದ ಜನಗಳ ಮಧ್ಯೆ ಅವಳ ಬದುಕಿನ ಹೊಸ ಹಾದಿ ತೆರೆದುಕೊಂಡಿತ್ತು.

ತುಂಬಾ ಭಯದಿಂದಲೇ ಹೊಸ ಜಾಗ ಸೇರಿದ ನಮ್ಮ ನಾಯಕಿ ಕೆಲವು ದಿನಗಳ ನಂತರ ಪತ್ರಿಕೆಯಲ್ಲಿ ಬರುವ ಕೆಲಸಗಳಿಗೆಲ್ಲಾ ತನ್ನ Bio-data ಕಳುಹಿಸಲು ಪ್ರಾರಂಭಿಸಿದಳು. ಅವಳಿಗೊಂದು ಸಂದರ್ಶನದ ಕರೆಯೂ ಬಂದು ಒಂದು ಚಿಕ್ಕ ಕೆಲಸವೂ ಸಿಕ್ಕಿತು. ಬಾಳಿನ ಹೊಸ ಅಧ್ಯಾಯ ಪ್ರಾರಂಭವಾಯಿತು. ಕೇವಲ ಎರಡೇ ಎರಡು ತಿಂಗಳ ನಂತರ, ಅವಳು ಅನಿವಾರ್ಯವಾಗಿ ರಜೆ ಪಡೆದು ಊರಿಗೆ ಬರಬೇಕಾಯಿತು. ಸಂತೋಷದಿಂದಲೇ ರಜೆ ಕೊಟ್ಟು ಕಳುಹಿಸಿದ್ದರು officeನವರು. ೧೫ ದಿನಗಳ ನಂತರ ಊರಿಂದ ವಾಪಸ್ಸು ಬಂದು ಸೋಮವಾರ ಉತ್ಸಾಹದಿಂದ ಊಟದ ಡಬ್ಬಿಯನ್ನೂ ತೆಗೆದುಕೊಂಡು ನಮ್ಮ ನಾಯಕಿ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಕಛೇರಿ ತಲುಪಿದಾಗ, ಅಲ್ಲಿ ತನ್ನ ಜಾಗದಲ್ಲಿ ಬೇರೊಬ್ಬರು ಕುಳಿತಿರುವುದನ್ನು ಕಂಡು ಆಘಾತಗೊಂಡಳು. ವಿಚಾರಿಸಿದಾಗ ತಿಳಿಯಿತು, ಅವಳು ರಜೆ ಪಡೆದಿದ್ದರಿಂದ ಕೆಲಸವನ್ನು ಕಳೆಕುಕೊಂಡಿದ್ದಳೆಂದು.

ದುಃಖ, ಅವಮಾನ, ಅಸಹಾಯಕತೆಯನ್ನು ಒಟ್ಟಿಗೇ ಮೆಟ್ಟಲು ಪ್ರಯತ್ನಿಸುತ್ತಾ ನಮ್ಮ ನಾಯಕಿ, ಅಲ್ಲಿಂದ ಹೊರಗೆ ಓಡಿಬಂದಿದ್ದಳು. ಬದುಕು ಅವಳಿಗೆ ಮೊದಲ ಬರಿಗೆ ತುಂಬಾ ಕ್ರೂರವಾಗಿ ಅವಮಾನ ಹಾಗೂ ತಿರಸ್ಕಾರಗಳ ಪರಿಚಯ ಮಾಡಿಕೊಟ್ಟಿತ್ತು. ಅಲ್ಲಿಯವರೆಗೆ ಬೇರೊಬ್ಬರಿಂದ ಎಂದೂ ಹೀಗೆ ಅವಮಾನಿತಳಾಗದ ನಮ್ಮ ನಾಯಕಿ ಅಂದು ಮೊದಲ ಬಾರಿಗೆ ಅವಮಾನ ಹಾಗೂ ತಿರಸ್ಕಾರಗಳನ್ನು ಅನುಭವಿಸಿದಳು. ದು ಅವಳಿಗೆ ಬದುಕು ಕಲಿಸಿದ ಅತಿ ದೊಡ್ಡ ಪಾಠವಾಗಿತ್ತು. ಅತ್ತು ಗೋಳಾಡಿ ದುಃಖ ಕಡಿಮೆಯಾದಾಗ, ಬಾಳು ಸದಾ ಮುನ್ನಡೆಯುವ ಗಾಲಿಯ ಹಾಗೆ ಎಂದು ತಿಳಿದುಕೊಂಡಳು. ಮತ್ತೆ ಬೇರೆ ಕಡೆ ಕೆಲಸಕ್ಕೆ ಸೇರುವ ಪ್ರಯತ್ನ ಮುಂದುವರೆಸಿದಳು…..

PC Vinuta Patil

One thought on “ಬದುಕಿನ ಪುಟಗಳು ಭಾಗ – ೪”

  1. WONDERFUL Post.thanks for share..more wait .. ?

Leave a Reply

Your email address will not be published. Required fields are marked *

Related Post

ದಾಸ ಸಾಹಿತ್ಯ – ಮಹಿಳೆಯರ ಕೊಡುಗೆ : – 2ದಾಸ ಸಾಹಿತ್ಯ – ಮಹಿಳೆಯರ ಕೊಡುಗೆ : – 2

ದಾಸ ಸಾಹಿತ್ಯವೆಂದರೇನೇ ನಮಗೆ ವಿಶಿಷ್ಟವಾಗಿ ಗೆಜ್ಜೆ ಕಟ್ಟಿಕೊಂಡು, ಕೈಯಲ್ಲಿ ತಂಬೂರಿ – ಎಕನಾದ ಮೊದಲಾದವುಗಳನ್ನು ಹಿಡಿದು ಅಥವಾ ತಾಳಗಳನ್ನು ಕುಟ್ಟುತ್ತಾ ಮೈ ಮರೆತು ವಿಠಲನ ಕುರಿತಾದ ಪದಗಳನ್ನು ಹಾಡುತ್ತಾ, ನೃತ್ಯ ಮಾಡುತ್ತಾ ಸಾಗುತ್ತಿದ್ದವರ ಚಿತ್ರ ಕಣ್ಣ ಮುಂದೆ ಬರುತ್ತದೆ. ಆದರೆ ತಾವಿರುವ ಜಾಗದಲ್ಲೇ, ತಮ್ಮ ಮನೆಯ ಎಲ್ಲೆಯ ಒಳಗೇ,

ನಿಡಗುರುಕಿ ಜೀವೂಬಾಯಿಯವರ ಚರಿತ್ರೆ ಭಾಗ – 3ನಿಡಗುರುಕಿ ಜೀವೂಬಾಯಿಯವರ ಚರಿತ್ರೆ ಭಾಗ – 3

ಭಾಗ – 3 ಜೀವೂಬಾಯಿಯವರ ಮೊದಲನೆಯ ದೀರ್ಘಕೃತಿ “ಶ್ರೀಹರಿಲೀಲಾ” ರಚನೆಗೆ ಪ್ರೇರಣೆಯಾಗುವಂತೆ ಒಂದು ಸ್ವಪ್ನ ವೃತ್ತಾಂತವಿರುವುದು. ಇವರು ಅಧಿಕ ಚೈತ್ರಮಾಸದಲ್ಲಿ ಭಾಗವತ ಸಪ್ತಾಹ ಕೇಳಲು ಹೋಗುತ್ತಿದ್ದರು. ಅವರ ಮನಸ್ಸಿನಲ್ಲಿ ಯಾವುದೋ ಒಂದು ವಿಚಾರವು ಸುಳಿಯುತ್ತಲೇ ಇತ್ತು. ನಂತರ ಭಾಗವತದ ಹರಿಕಥೆ ಕೇಳಲು ಕುಳಿತಿದ್ದಾಗಲೂ ಅವರ ಮನಸ್ಸಿನಲ್ಲಿ ಇದೇ ವಿಚಾರದ

ನಿಡಗುರಕಿ ಜೀವೂಬಾಯಿ – ಕೊನೆಯ ಅಧ್ಯಾಯನಿಡಗುರಕಿ ಜೀವೂಬಾಯಿ – ಕೊನೆಯ ಅಧ್ಯಾಯ

ನಿಡಗುರಕಿ ಜೀವೂಬಾಯಿ – ಕೊನೆಯ ಅಧ್ಯಾಯ ಜೀವಮ್ಮನವರ ಮುಂದಿನ ದೀರ್ಘಕೃತಿ “ಶ್ರೀ ಹರಿ ಮಾನಸ ಪೂಜ” ಎಂಬುದಾಗಿದೆ. ಹಿಂದಿನ ನಾಲ್ಕು ಕೃತಿಗಳಿಗಿಂತ ಭಿನ್ನವಾಗಿ ಈ ರಚನೆಯು ಉದ್ದುದ್ದ ಸಾಲುಗಳ ಸಾಹಿತ್ಯದಿಂದ ರಚಿತವಾಗಿದೆ. ಪ್ರಾರಂಭದಲ್ಲಿಯೇ ಪ್ರಾತಃ ವಿಧಿಗಳಾದ ವಿಧಿಪೂರ್ವಕ ಕರ್ಮಗಳನ್ನು ಮುಗಿಸಿ, ನದಿಯಲ್ಲಿ ಸ್ನಾನ ಮಾಡುತ್ತಾ, ಶ್ರೀಹರಿಯನ್ನು ನೆನೆಯುತ್ತಾ, ಸುರರು