ಬದುಕಿನ ಪುಟಗಳು ಭಾಗ – ೨

ಸತ್ವವನ್ನು ಹಂಚುವ ಬಗ್ಗೆ ಆಲೋಚಿಸಿದ್ದೆವು. ಈಗ ಯಾರು ಸತ್ವವನ್ನು ಹಂಚಲು ಸಾಧ್ಯವೆಂದು ನೋಡೋಣ. ನಮ್ಮಲ್ಲಿ ಸಾಕಾಗುವಷ್ಟು ಇದ್ದರೆ ತಾನೇ ನಾವು ಬೇರೆಯವರಿಗೆ ಕೊಡುವ ಯೋಚನೆ ಮಾಡುವುದು? ಇದು ಕೇವಲ ಅನುಭವದ ಅಥವಾ ಬದುಕು ನನಗೆ ಕಲಿಸಿದ ಪಾಠಗಳ ಒಂದು ಪಕ್ಷಿನೋಟ ಅಷ್ಟೆ. ನಾನೇನೂ ದೊಡ್ಡ ತಿಳುವಳಿಕೆಯುಳ್ಳ ವ್ಯಕ್ತಿಯೋ ಅಥವಾ ನಾನೇನೋ motivational talker ಖಂಡಿತಾ ಅಲ್ಲ.

ಬದುಕು ಒಂದೊಂದು ದಿನದಲ್ಲೂ, ಒಂದೊಂದು ಕ್ಷಣದಲ್ಲೂ ಚಿಕ್ಕ ಚಿಕ್ಕ ಪಾಠವನ್ನು ಕಲಿಸುತ್ತಲೇ ಇರುತ್ತದೆ. ಗಮನಿಸುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಅವರದ್ದೇ ಆದ, ಅವರಿಗೆ ಮಾತ್ರವೇ ಸ್ವಂತವಾಗುವಂತಹ ಅನುಭವಗಳಾಗುತ್ತವೆ. ಏಕೆಂದರೆ ಪ್ರತೀ ವ್ಯಕ್ತಿಯ ಆಲೋಚನೆಗಳು, ಬದುಕುವ ರೀತಿ, ಕುಟುಂಬ, ಪರಿಸರ, ಸ್ನೇಹಿತರು, ಎಲ್ಲವೂ ಬೇರೆ ಬೇರೆಯೇ ಆಗಿದೆ. ಸಂತೋಷವಾದಾಗ ಹಿಗ್ಗದೇ, ದುಃಖವಾದಾಗ ಕುಗ್ಗದೇ ಇರುವ ಮನಸ್ಥಿತಿ ಸುಮ್ಮನೆ, ಏನನ್ನೋ ಓದುವುದರಿಂದಲೋ, ಪ್ರಸಿದ್ಧ ಜನರ ಮಾತುಗಳನ್ನು ಕೇಳಿದಾಗಲೋ ಬರುವುದಿಲ್ಲ. ಅವರು ತಮ್ಮಲ್ಲಿರುವ ಸತ್ವದ ಬಿಂದುವನ್ನು ನಮಗೆ ಕೊಡುತ್ತಾರೆ. ಆದರೆ ನಾವು ಅದನ್ನು ಹೇಗೆ ಅಳವಡಿಸಿಕೊಳ್ಳುತ್ತೇವೆ ಎನ್ನುವುದು ನಮ್ಮನ್ನೇ ಅವಲಂಬಿಸಿದೆ.

ನಿದ್ದೆ ಕಳೆದು ಬೆಳಿಗ್ಗೆ ಎದ್ದಾಗ ನಮಗೆ ಇಡೀ ದಿನದಲ್ಲಿ ಯಾವ ಘಟನೆ, ವಸ್ತು, ಮಾತು, ಭೇಟಿ… ಹೀಗೆ ಯಾವುದು ನಮ್ಮ ಸ್ಫೂರ್ತಿಯ ಸೆಲೆಯನ್ನು ಉಕ್ಕಿಸುತ್ತದೆಂಬ ವಿಷಯ ತಿಳಿದಿರುವುದಿಲ್ಲ. ಬೆಳಗಿನ ಬಾಲರವಿಯ ದರ್ಶನವೇ ಪುಳಕಗೊಳಿಸಬಹುದು. ಅಥವಾ ಇನ್ನೇನೋ ಒಂದು ಕಾರಣ ನಮ್ಮನ್ನು ಉತ್ತೇಜಿಸಬಹುದು. ಸದ್ಗುರು ಜಗ್ಗಿ ವಾಸುದೇವ್ ಅವರು ನಿದ್ದೆ ಕಳೆದು ಬದುಕಿ ಎದ್ದಿರುವುದೇ ನಿಮ್ಮನ್ನು ಹುರಿದುಂಬಿಸಬೇಕು ಎನ್ನುತ್ತಾರೆ. ಏಕೆಂದರೆ ಸಾವು ನಿದ್ದೆಯಲ್ಲೂ, ನಮಗೆ ಅರಿವಿಲ್ಲದಂತೆಯೂ ಬರಬಹುದು.

ಪ್ರತಿದಿನವೂ ಹೊಸ ಹುಟ್ಟು ಪಡೆಯುವ ನಾವು ಬೆಳಿಗ್ಗೆ ಎದ್ದಾಗಿನಿಂದಲೂ ಎಲ್ಲವನ್ನೂ, ನಮ್ಮ ಜೊತೆಗೇ ಮರುಹುಟ್ಟು ಪಡೆದಿದೆ ಎಂಬ ಭಾವನೆಯಿಂದ ನೋಡುವುದನ್ನು ಬೆಳೆಸಿಕೊಂಡರೆ ಚಿಕ್ಕ ಚಿಕ್ಕ ವಿಷಯಗಳೂ ನಮ್ಮಲ್ಲಿರುವ ಸ್ಫೂರ್ತಿಯ ಸೆಲೆಯನ್ನು ಸದಾ ಉಕ್ಕಿಸುತ್ತಲೇ ಇರಬಹುದಾಗಿದೆ.

ಒಂದು ಚಿಕ್ಕ ಉದಾಹರಣೆ ತೆಗೆದುಕೊಳ್ಳುವುದಾದರೆ ಮನೆಯಲ್ಲಿ ಅಮ್ಮ ಬೆಳಗಿನ ತಿಂಡಿಗಾಗಿ ರುಬ್ಬಿಟ್ಟಿರುವ ಇಡ್ಲಿಯ ಹಿಟ್ಟು. ಅದು ಹುದುಗು ಬಂದರೆ ಇಡ್ಲಿ ಮೆತ್ತಗೆ ಚೆನ್ನಾಗಿ ಆಗುವುದು. ರಾತ್ರಿ ರುಬ್ಬಿ ಮುಚ್ಚಿಟ್ಟ ಹಿಟ್ಟಿನ ಪಾತ್ರೆಯನ್ನು ನೋಡಿದರೆ ಬೇಸಿಗೆ ಕಾಲದಲ್ಲಂತೂ, ಹುದುಗಿ, ಉಕ್ಕಿ ಮುಚ್ಚಿದ ತಟ್ಟೆಯನ್ನೂ ಲೆಕ್ಕಿಸದೇ ತಳ್ಳಿಕೊಂಡು, ಹೊರಗೆಲ್ಲಾ ಬಂದು ಚೆಲ್ಲಿರುತ್ತದೆ. ತನ್ನ ಸುತ್ತಲೂ ಇದ್ದ ಎಲ್ಲಾ ಕಟ್ಟುಪಾಡುಗಳನ್ನೂ, ಬೇಲಿಯನ್ನೂ ಮೀರಿ ಅದು ಅರಳಿ ವಿಕಸಿಸಿರುತ್ತದೆ. ಅಲ್ಲೊಂದು ಸತ್ವದ ಕಣ ವಿಕಾಸವಾಗಿದೆ ಎಂದುಕೊಂಡರೆ, ನಾವೇಕೆ ಹಾಗೆ ವಿಕಸಿಸಬಾರದು ಎನ್ನಿಸದಿರುವುದೇ ? ಅಬ್ಬಬ್ಬಾ… ಇಡ್ಲಿ ತಟ್ಟೆಯಲ್ಲಿ ಕುಳಿತು, ಆವಿಯಲ್ಲಿ ಬೆಂದು, ಇನ್ನೊಬ್ಬರ ಹೊಟ್ಟೆಗೆ ಆಹಾರವಾಗಿ, ತನ್ನ ಇರುವಿಕೆಯನ್ನು ಮುಗಿಸಿಕೊಳ್ಳಲು ಇಡ್ಲಿ ಹಿಟ್ಟಿಗೇಕೋ ಅಷ್ಟು ಸಂಭ್ರಮ? ಅದೇನು ನಲಿದು, ಅರಳಿ, ನರ್ತಿಸಿ, ಹಿಗ್ಗುವುದೋ ?

ಸ್ನೇಹಿತರೇ ನಾವು ಇಲ್ಲಿ ಇದನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ, ಇಡ್ಲಿ ಹಿಟ್ಟಿನ ಬದುಕಿನ ಸಾರ್ಥಕತೆ ಕಾಣಸಿಗುವುದು. ಇನ್ನೊಬ್ಬರಿಗೆ ಸಂತೋಷ ಹಂಚಿದ ತೃಪ್ತಿ, ಹಸಿವು ನೀಗಿಸಿದ ತೃಪ್ತಿ, ತಿಂದವರ ಮನಕಾನಂದ ನೀಡಿದ ತೃಪ್ತಿ… ಇದಲ್ಲವೇ ಸತ್ವದ ಬಿಂದುವನ್ನು ಹಂಚುವಿಕೆ ! ಯಾರು ಹೀಗೆ ಪ್ರತೀ ಚಿಕ್ಕ ವಿಷಯವನ್ನೂ ನೋಡಿ ಮುದಗೊಳ್ಳುವರೋ, ಸಂಭ್ರಮಿಸಬಲ್ಲರೋ, ಅವರೇ ಸತ್ವವನ್ನು ಹಂಚಬಲ್ಲವರು.

Leave a Reply

Your email address will not be published. Required fields are marked *

Related Post

ನೀಲ ಮೇಘ ಶ್ಯಾಮಲ ಶ್ಯಾಮಲನೀಲ ಮೇಘ ಶ್ಯಾಮಲ ಶ್ಯಾಮಲ

ಬದುಕಿನ ಪುಟಗಳಿಂದ – ಭಾಗ – ೧ ಎಲ್ಲದಕ್ಕಿಂತ ಮೊದಲು “ಬದುಕು” ಎಂದರೇನು ? ಬೇರೆ ಬೇರೆ ನಿಘಂಟುಗಳ ಪ್ರಕಾರ ಬದುಕು ಎಂದರೆ ಜೀವನ, ಬಾಳು, ಜೀವಿಸು, ಕಸುಬು, ಜೀವಿಸಿರು, ಬಾಳನ್ನು ಸಾಗಿಸು ಎಂದೆಲ್ಲಾ ಇದೆ. ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿರುವ ನಿಘಂಟಿನಲ್ಲಿ ಮೇಲಿನ ಎಲ್ಲಾ ಅರ್ಥಗಳ ಜೊತೆಗೆ

Badukina putagalu

ಬದುಕಿನ ಪುಟಗಳು ಭಾಗ – 3ಬದುಕಿನ ಪುಟಗಳು ಭಾಗ – 3

ನಮ್ಮ ಬದುಕು ಒಂದು ಪುಸ್ತಕವಿದ್ದಂತೆ. ಅದನ್ನು ಯಾರೆಲ್ಲಾ ಓದಬಹುದು ಎಂಬುದನ್ನು ನಾವೇ ನಿರ್ಧರಿಸಬೇಕಾಗುವುದು. ಪುಸ್ತಕದ ಪುಟಗಳು ಮಗುಚಿದಂತೆಲ್ಲಾ ಅನುಭವಗಳು ಬರೆಯಲ್ಪಡುತ್ತವೆ. ಒಳಮನಸ್ಸು ಎಲ್ಲವನ್ನೂ ದಾಖಲಿಸುತ್ತಾ ಹೋಗುತ್ತದೆ. ಕೆಲವು ಒಳ್ಳೆಯ ಹಾಗೂ ಸಂತೋಷದ ಸಂಗತಿಗಳು, ಘಟನೆಗಳು. ಕೆಲವು ಅಹಿತಕರವಾದ ದಾಖಲೆಗಳು. ಸಂತೋಷದ ಘಟನೆಗಳನ್ನು ನಮ್ಮ ಬದುಕಿನ ಪುಸ್ತಕದ ಪುಟಗಳನ್ನು ಮತ್ತೆ

ಬದುಕಿನ ಪುಟಗಳು ಭಾಗ – ೪ಬದುಕಿನ ಪುಟಗಳು ಭಾಗ – ೪

ಬದುಕು ನಮಗೆ ನಮ್ಮ ಸ್ವಭಾವವನ್ನು ತಿದ್ದುತ್ತಾ, ತೀಡುತ್ತಾ ಬಾಳದಾರಿಯಲ್ಲಿ ಸಾಗಲು ಅನುವು ಮಾಡಿಕೊಡುತ್ತದೆ. ಯಾವುದೋ ಒಂದು ಊರಿನಲ್ಲಿ, ಯಾರ ಮನೆಯಲ್ಲೋ ಜನಿಸಿ, ಯಾವುದೇ ತರಹದ ಉನ್ನತ ಗುರಿ ಅಥವಾ ಗಮ್ಯ ಎಂಬ ಪದಗಳ ಪರಿಚಯವಿಲ್ಲದೇ ಬೆಳೆದಿರುತ್ತೇವೆ. ಇದು ಹೆಚ್ಚಾಗಿ ನಮ್ಮ ಸಮಕಾಲೀನರ ಬದುಕಿನಲ್ಲಿ ನಡೆದಿರಬಹುದಾದ ವಿಷಯಗಳು. ಏಕೆಂದರೆ ಈಗಿನ