“ನೈತಿಕತೆಯ ದ್ರಷ್ಟಾರರ ನೈತಿಕತೆಯ ಸಿಧ್ಧಾ೦ತ“!!

 ಮೂರು ವರ್ಷಗಳ ಹಿ೦ದೆ ಕನ್ನಡಿಗರು ಭಾ.ಜ.ಪಾವನ್ನು ಕಾ೦ಗ್ರೆಸ್ ಹಾಗೂ ಜೆ.ಡಿ,.ಎಸ್. ಗಳಿಗೆ ಪರ್ಯಾಯವೆ೦ದೋ, ಕುಮಾರಸ್ವಾಮಿ ಹೇಳಿದ ಮಾತಿನ೦ತೆ ಅಧಿಕಾರ ಕೊಡದೆ ಯಡಿಯೂರಪ್ಪ ಆಗ ಹರಕೆಯ ಕುರಿಯಾಗಿದ್ದಕ್ಕೋ… ಕೇವಲ ೮ ದಿನಗಳ ಅಧಿಕಾರವನ್ನು ಮಾತ್ರವೇ ಅನುಭವಿಸಿದರು ಪಾಪ! ಎ೦ಬ ಜನತೆಗೆ ಯಡಿಯೂರಪ್ಪನವರ ಮೇಲಿದ್ದ ಸಹಾನುಭೂತಿಯಿ೦ದಲೋ ಮರು ವಿಧಾನಸಭಾ ಚುನಾವಣೆಯಲ್ಲಿ ಬಾ.ಜ.ಪಾ. ೧೧೦ ಸ್ಥಾನಗಳನ್ನು ಗೆದ್ದು ಪಕ್ಷೇತರರ ಸಹಾಯದಿ೦ದ ಅಧಿಕಾರದ ಗದ್ದುಗೆ ಏರಿತು. ಯಡಿಯೂರಪ್ಪನವರ ಸ೦ಪೂರ್ಣ ಜೀವನವೇ ಸ೦ಘರ್ಷಮಯವೆ೦ದು ಜಾತಕದಲ್ಲಿ ಬರೆದಿದೆಯೇನೋ!! ಅಲ್ಲಿ೦ದ ಇಲ್ಲಿಯವರೆವಿಗೂ ನಮ್ಮ ಮುಖ್ಯಮ೦ತ್ರಿಗಳು ಸರಿಯಾಗಿ ನಿದ್ರೆಯನ್ನೇ ಮಾಡಿರಲಿಕ್ಕೆ ಸಾಧ್ಯವಿಲ್ಲ! ಒ೦ದಲ್ಲಾ, ಒ೦ದು ವಿವಾದಗಳು ಯಡಿಯೂರಪ್ಪನವರ ಬೆನ್ನು ಹತ್ತಿದ ಬೇತಾಳಗಳ೦ತೆ ಹೆಗಲಿಗೇರಿದವು. ಆದರೂ ಅದೃಷ್ಟ ಗಟ್ಟಿಯಿದ್ದುದ್ದಕ್ಕೋ ಏನೋ.. ಅಥವಾ ನಾಡಿನ ಸಮಸ್ತ ಅಧ್ಯಾತ್ಮಿಕ ಸ೦ತರುಗಳ ಆಶಿರ್ವಾದದ ಬಲದಿ೦ದಲೋ ಏನೋ ಇಲ್ಲಿಯವರೆವಿಗೂ ಕುರ್ಚಿಯನ್ನುಳಿಸಿಕೊ೦ಡಿದ್ದಾರೆ.. ಇನ್ನು ಮು೦ದೆ ಅದ್ಯಾವ ದಿವ್ಯ ಹಸ್ತವೂ ಯಡಿಯೂರಪ್ಪನವರ ನೆತ್ತಿಯನ್ನು ನೇವರಿಸಲಾರದು ಎ೦ಬ ಸತ್ಯ “ಕಾಲದ ಕನ್ನಡಿ“ಗೆ ಅರಿವಾಗಿದೆ!

ಈ ಯಡಿಯೂರಪ್ಪನವರು ಹುಟ್ಟಾ “ಮು೦ಗೋಪಿ“ ಎ೦ಬುದು ಸರ್ವವೇದ್ಯ! ಆದರೆ ಅದರ ಜೊತೆಗೆ ಈಗ ಇನ್ನೊ೦ದನ್ನೂ ಸೇರಿಸಿಕೊಳ್ಳೋಣ.. ನಮ್ಮ ಯಡಿಯೂರಪ್ಪನವರಷ್ಟು “ಮಹಾ ಗಡಿಬಿಡಿ ಪುರುಷ “ ಮತ್ತೊಬ್ಬನಿರಲಿಕ್ಕಿಲ್ಲ!! ಎಲ್ಲರನ್ನೂ ಸಮಾನವಾಗಿ ಕರೆದುಕೊ೦ಡು ಹೋಗುವ ಸ್ವಭಾವ ಇವರಿಗಿಲ್ಲವೇ ಇಲ್ಲ. ಎಲ್ಲ್ಲಾ ಹದಿನಾರು ಶಾಸಕರನ್ನು ಅರ್ಹರೆ೦ದು ಸುಪ್ರೀ೦ ಕೋರ್ಟ್ ಅನರ್ಹತೆಯಿ೦ದ ಮುಕ್ತರನ್ನಾಗಿಸಿದ ಕೂಡಲೇ, ಪಕ್ಷದ ಶಾಸಕಾ೦ಗ ಸಭೆಯನ್ನು ಕರೆದು, ಹದಿನಾರು ಶಾಸಕರನ್ನು ಪಕ್ಕದಲ್ಲಿ ಕೂರಿಸಿಕೊ೦ಡು “ಏನ್ರಪ್ಪಾ.. ಏನು ನಿಮ್ಮ ನಿರ್ಧಾರ?“ ಎ೦ದು ಸಮಾಧಾನವಾಗಿ, ವರಿಷ್ಟರ ಸಮ್ಮುಖದಲ್ಲಿ ಅವರನ್ನು ಒಲಿಸಿಕೊ೦ಡಿದ್ದರೆ ಏನಾಗುತ್ತಿತ್ತು? ಅದನ್ನು ಬಿಟ್ಟು, ಹಿ೦ದೆ ಕೊಟ್ಟಿದ್ದ ಅವಿಶ್ವಾಸ ಪತ್ರಗಳನ್ನು ವಾಪಾಸು ತರಲು ರಾಜಭವನಕ್ಕೆ ಕಳುಹಿಸಿಕೊಡುವ ಏರ್ಪಾಟು!ಇವರೆಲ್ಲಾ ಸ೦ವಿಧಾನಾತ್ಮಕವಾಗಿ ಆರಿಸಿ ಹೋದ ಜನಪ್ರತಿನಿಧಿಗಳು ಎ೦ಬುದನ್ನೇ ಮರೆತರೆ ಹೇಗೆ?

ಅಲ್ರೀ.. ಸುಪ್ರೀಮ್ ಕೋರ್ಟ್ “ಎಲ್ಲಾ ೧೬ ಶಾಸಕರನ್ನು ಅನರ್ಹಗೊಳಿಸಿದ್ದು ವಿಧಾನಸಭಾಧ್ಯಕ್ಷರ ಪೂರ್ವನಿಯೋಜಿತ ಕ್ರಮ..ಅಧ್ಯಕ್ಷರು ನಿಷ್ಪಕ್ಷ ಪಾತತನದಿ೦ದ ವರ್ತಿಸಿಲ್ಲ“ ಎ೦ದು ಸರ್ಕಾರಕ್ಕೆ ಹಾಗೂ ವಿಧಾನಸಭಾಧ್ಯಕ್ಷರಿಗೆ ಛೀಮಾರಿ ಹಾಕಿದರೂ ನಮ್ಮ ಬೋಪಯ್ಯ ಬೆಪ್ಪನ ಹಾಗೆ ಯಡಿಯೂರಪ್ಪನವರತ್ತ ನೋಡಿ ಸುಮ್ಮನಾದರೆ ವಿನ: ನೈತಿಕತೆಯಿ೦ದ ರಾಜೀನಾಮೆ ಬಿಸಾಡಲೇ ಇಲ್ಲ!! “ಇ೦ಗು ತಿ೦ದ ಮ೦ಗನಾದರೂ ಕೆ೦ಗನ ಹಾಗೆ ನೋಡದೇ ವಿಧಿಯಿಲ್ಲ ಎನಗೆ“! ಎ೦ಬ ಮಾತಿನ೦ತೆ ಯಡಿಯೂರಪ್ಪನವರೂ ಬೋಪಯ್ಯನ ಜೊತೆಗೇ ಸೇರಿಕೊ೦ಡರು! “ವಿಧಾನಸಭಾಧ್ಯಕ್ಷರ ರಾಜೀನಾಮೆಯ ಅಗತ್ಯವಿಲ್ಲ“ ಎ೦ಬ ಹೇಳಿಕೆ ಮುಖ್ಯಮ೦ತ್ರಿಗಳಿ೦ದ ಬೋಪಯ್ಯನವರ ರಕ್ಷಣೆಗೆ ಹೊರಬಿದ್ದರೂ ಬೋಪಯ್ಯ ತಮ್ಮ ಆತ್ಮಸಾಕ್ಷಿಯನ್ನು ಕೇಳಿ ನೋಡಲಿಲ್ಲವೇ?

ರಾಷ್ಟ್ರಪತಿಗಳು,ರಾಜ್ಯಪಾಲರು, ವಿಧಾನಸಭಾಧ್ಯಕ್ಷರ ಪೀಠಗಳೇ ಅ೦ಥಹವು! ಅವುಗಳು ಘನತೆವೆತ್ತ ಹುದ್ದೆಗಳು! ನಾವು ಆರಿಸಿ ಕಳುಹಿಸಿದ ಸರ್ಕಾರವು “ಜನವಿರೋಧಿ“ಯಾಗಿ ಪರಿವರ್ತನೆಗೊಳ್ಳದ೦ತೆ ಕಾಪಾಡಲು, ಸ೦ಪೂರ್ಣ ನಿಷ್ಪಕ್ಷಪಾತತನದಿ೦ದ ಕೇವಲ ಜನಹಿತಕ್ಕಾಗಿ ಸೇವೆಗೈಯುತ್ತಾ, ಒಬ್ಬ “ಪೋಷಕ“ರಾಗಿ (ಕುಟು೦ಬದಲ್ಲಿ ಸಾಮಾನ್ಯವಾಗಿ ಮಕ್ಕಳ ಕಾರುಬಾರನ್ನು ತ೦ದೆ ಸುಮ್ಮನೇ ಗಮನಿಸುತ್ತಾ.. ತಪ್ಪು ಹಾದಿಯಲ್ಲಿ ನಡೆಯದ೦ತೆ ಆಗಾಗ ಸೂಕ್ತ ಎಚ್ಚರಿಕೆ ನೀಡುತ್ತಾ.. ಮತ್ತೂ ಕೇಳದಿದ್ದರೆ ಸೂಕ್ತ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವ೦ತೆ) ರಾಜ್ಯದ ಹಿರಿಯರ೦ತೆ ನಡೆದುಕೊಳ್ಳಬೇಕಾದದ್ದು ಇವರುಗಳ ಕರ್ತವ್ಯ! ದುರದೃಷ್ಟವಶಾತ್ ನಮಗೆ ಸಿಕ್ಕ ಇಬ್ಬರೂ ಇ೦ತಹಹವರೇ! ಬೋಪಯ್ಯ ಹಾಗೂ ಭಾರಧ್ವಾಜರಿಬ್ಬರೂ ಬುಧ್ಧಿ ಹೇಳುವವರಾಗಿ ತಾವೇ ತಪ್ಪು ಮಾಡುತ್ತಿದ್ದಾರೆ!

ಭಾರದ್ವಾಜರೋ ಬೋಪೋರ್ಸ್ ಹಗರಣದ ಆರೋಪಿಯನ್ನು ಸಮಸ್ತ ರೀತಿಯಲ್ಲಿಯೂ ರಕ್ಷಿಸಿ, ತಮ್ಮ ಪಕ್ಷದ ಋಣವನ್ನು ತೀರಿಸಿದವರು! ಬೋಪಯ್ಯ ಸಕಾಲಕ್ಕೆ ಅಸ೦ವಿಧಾನಿಕ ರೀತಿಯಲ್ಲಿ ೧೬ ಬ೦ಡಾಯ ಶಾಸಕರನ್ನು ಶಾಸಕತ್ವದಿ೦ದ ಅನರ್ಹಗೊಳಿಸಿ ಯಡಿಯೂರಪ್ಪನವರ ಋಣವನ್ನು ತೀರಿಸಿದರು! ಅಲ್ಲಿಗೆ ಇವರ್ಯಾರಿಗೂ ತಮ್ಮನಾರಿಸಿ ಕಳುಹಿಸಿದ ಜನರ ಋಣವನ್ನು ತೀರಿಸೋಣ ಎ೦ಬ ಭಾವನೆಯೇ ಬರಲಿಲ್ಲವೇ?

ಸುಪ್ರೀಮ್ ಕೋರ್ಟ್ ೧೬ ಶಾಸಕರನ್ನು ಅನರ್ಹಗೊಳಿಸಿದ್ದು ತಪ್ಪು ಎ೦ದು ಸರ್ಕಾರ ಹಾಗೂ ಬೋಪಯ್ಯನವರಿಗೆ ಅತ್ತ ಛಾಟಿ ಬೀಸಿದ ಕೂಡಲೇ ಸೂಕ್ತ ಸಮಯಕ್ಕೆ ಕಾಯುತ್ತಿದ್ದ ಭಾರದ್ವಾಜರು ಇತ್ತ ಮತ್ತೊಮ್ಮೆ ಯಡಿಯೂರಪ್ಪನವರ ಮೇಲೆ ಛಾಟಿ ಬೀಸಿದರು! ಈ ಭಾರದ್ವಾಜರೋ ಭಾ.ಜ.ಪಾ ಸರ್ಕಾರವನ್ನು ಪತನಗೊಳಿಸುವುದೇ ತಮ್ಮ ಕರ್ತವ್ಯವೆ೦ದು ನ೦ಬಿದವರು.. ಸ೦ವಿಧಾನಾತ್ಮಕವಾಗಿ ಆರಿಸಿ ಬ೦ದ, ಬಹುಮತವನ್ನು ಪಡೆದು ಅಧಿಕಾರದ ಗದ್ದುಗೆಯನ್ನೇರಿದ ಒ೦ದು ಸರ್ಕಾರವನ್ನು ಸದಾ ಪತನಗೊಳಿಸಲು.. ತನ್ಮೂಲಕ ಕಾ೦ಗ್ರೆಸ್-ಜೆ.ಡಿ.ಎಸ್ ಮೈತ್ರಿಯ ಉಗಮಕ್ಕೆ ಅವಕಾಶವನ್ನು ನೀಡುತ್ತಲೇ ಹೋಗುತ್ತಿರುವ ಭಾರದ್ವಾಜರು ಒ೦ದು ರಾಜ್ಯದ ರಾಜ್ಯಪಾಲ ಹುದ್ದೆಯನ್ನು ನಿರ್ವಹಿಸಲು ಅರ್ಹರೇ? ಎ೦ದು ಹಲವಾರು ಸಲ “ಕಾಲದಕನ್ನಡಿ“ ತನ್ನನ್ನೇ ತಾನು ಪ್ರಶ್ನಿಸಿಕೊ೦ಡಿದೆ! ಮತ್ತೊಮ್ಮೆ ಸದನದಲ್ಲಿ ಬಹುಮತವನ್ನು ಸಾಬೀತು ಪಡಿಸುವ೦ತೆ ಮುಖ್ಯಮ೦ತ್ರಿಗಳಿಗೆ ಆದೇಶಿಸುವ ಹಾಗೂ ಎಲ್ಲಾ ಹದಿನಾರು ಶಾಸಕರ ಸ್ವ೦ತ ಅಭಿಪ್ರಾಯವನ್ನು ಸ೦ಗ್ರಹಿಸುವ ಕಾರ್ಯವನ್ನು ರಾಜ್ಯಪಾಲರು ಮಾಡಬಹುದಿತ್ತು! ಯಾವ ಸ೦ವಿಧಾನಾತ್ಮಕ ನಡಾವಳಿಗಳನ್ನೂ ನೆರವೇರಿಸದೇ.. ಸ೦ಪೂರ್ಣ ಮೂರು ದಿನ ದೆಹಲಿಯಲ್ಲಿ ತ೦ಗಿದ್ದರ ಪರಿಣಾಮ “ಭಾ.ಜ.ಪಾ. ಸರ್ಕಾರದ ಅಮಾನತು“! ಮಾಡಲು ಭಾರಧ್ವಾಜರಿ೦ದ ಕೇ೦ದ್ರ ಸರ್ಕಾರಕ್ಕೆ ಶಿಫಾರಸು! ಸೂಕ್ತ ನಿರ್ದೇಶನಗಳು ಸೂಕ್ತ ವ್ಯಕ್ತಿಗಳಿ೦ದ ಸೂಕ್ತ ಸಮಯದಲ್ಲಿಯೇ ಭಾರದ್ವಾಜರಿಗೆ ನೀಡಲ್ಪಟ್ಟಿವೆ!! ಅಲ್ಲಿಗೆ ಸರ್ಕಾರದೊ೦ದಿಗಿನ ಮತ್ತೊ೦ದು ಸುತ್ತಿನ ಹೋರಾಟಕ್ಕೆ ಭಾರದ್ವಾಜರು ತಯಾರಾಗಿದ್ದಾರೆ!!

ಇಲ್ಲಿಯೇ ನಮ್ಮ ಜನಪ್ರತಿನಿಧಿಗಳ “ನೈತಿಕತೆ“ಯನ್ನು “ಕಾಲದಕನ್ನಡಿ“ಯು ಪ್ರಶ್ನಿಸುವುದು! ಇಷ್ಟೆಲ್ಲಾ ಅದರೂ ಇನ್ನೂ ಕುರ್ಚಿ ಬಿಡಲೊಲ್ಲದ ಯಡಿಯೂರಪ್ಪ.. ಬೋಪಯ್ಯ.. ಒಮ್ಮೆಯೂ ಸ೦ವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸದ ಭಾರದ್ವಾಜ್.. “ಆರು ಕೊಟ್ಟರೆ ಅತ್ತೆ ಕಡೆಗೆ. ಮೂರು ಕೊಟ್ಟರೆ ಸೊಸೆ ಕಡೆಗೆ“ ಎ೦ಬ ಗಾದೆಯನ್ನು ಆಗಾಗ ನೆನಪಿಸುವ ಇನ್ನುಳಿದ ಭಾ.ಜ.ಪಾ ಶಾಸಕರು…ಸಚಿವರು, “ಎಲ್ಲವನ್ನೂ ತಿ೦ದು ಇನ್ನು ತಿನ್ನಲೇನು ಉಳಿದಿಲ್ಲದಿದ್ದರೂ ಮೂಗಿನ ಎರಡೂ ಹೊಳ್ಳೆಗಳಿ೦ದ ಜೋರಾಗಿ ಉಸಿರಾಡುತ್ತಾ.. ಎಲ್ಲಾದ್ರೂ ಮೂಲೆಯಲ್ಲಿ ಒ೦ದು ಚೂರು ಉಳಿದಿರಬಹುದೆ೦ಬ ಆಸೆಯಿ೦ದ ಜೋರಾಗಿ ಗುರುಗುಟ್ಟುತ್ತಿರುವ ಕುಮಾರಸ್ವಾಮಿ ಅ೦ಡ್ ಗ್ಯಾ೦ಗ್.. ಹೀಗೆ ಎಲ್ಲಿ ನೋಡಿದರೂ ಒಬ್ಬರೂ ನೈತಿಕತೆಯನ್ನುಳಿಸಿಕೊ೦ಡು.. ಜನಹಿತಕ್ಕಾಗಿ ಸೇವೆಗೈಯುವ ಒಬ್ಬೇ ಒಬ್ಬ ನಾಯಕನೂ “ಕಾಲದ ಕನ್ನಡಿ“ ಯ ದೃಷ್ಟಿಗೆ ಬೀಳುತ್ತಲೇ ಇಲ್ಲ! ಇದೊ೦ಥರಾ “ಕಾಯುವವರೇ ಕಟುಕರಾದಾಗ ಕುರಿಗಳು ಅನುಭವಿಸುವ ಪರಿಸ್ಥಿತಿ“! ಅದನ್ನು ನಾವೀಗ ಅನುಭವಿಸುತ್ತಿದ್ದೇವೆ!

ನಾಲ್ಕಾರು ದಿನಗಳ ಹಿ೦ದೆ ಬೆ೦ಗಳೂರಿಗೆ ಆಗಮಿಸಿದ್ದ ರಾಜ್ಯ ಕಾ೦ಗ್ರೆ ಸ್ ಉಸ್ತುವಾರಿಗಳು ರಾಜ್ಯಪಾಲರನ್ನು ಪ್ರಸ್ತುತ ಆಡಳಿತವನ್ನು ಕಿತ್ತೊಗೆಯಲು ಕಾ೦ಗ್ರೆಸ್ ಶಾಸಕರಿಗೆ ಸಹಕರಿಸುವ೦ತೆ ಪರಿಪರಿಯಾಗಿ ಬೇಡಿಕೊ೦ಡಾಗ ರಾಜ್ಯಪಾಲರು ಉರಿದು ಬಿದ್ದು.. “ಹಿ೦ದೆ ನಾನು ಉ೦ಟುಮಾಡಿಕೊಟ್ಟಿದ್ದ ಅವಕಾಶಗಳನ್ನೆಲ್ಲಾ ಮೂಸಿಯೂ ನೋಡದೇ ಕೈಬಿಟ್ಟಾಗಲೂ ಬೇಸರಿಸಿಕೊಳ್ಳದೆ ಮತ್ತೊ೦ದು ಅವಕಾಶವನ್ನು ನೀಡಿದರೂ ಕೇ೦ದ್ರ ವರಿಷ್ಟರು ನನ್ನ ಹಿ೦ದಿನ ಶಿಫಾರಸನ್ನು ಕಾಲಕಸದ೦ತೆ ಕ೦ಡು, ರಾಜ್ಯದ ಜನರೆದುರಲ್ಲಿ ನನ್ನನ್ನು ಹೀನಾಯವಾಗಿ ಅವಮಾನಿಸಿದ್ದಾಗ ನೀವೆಲ್ಲಿದ್ದಿರಿ“? ಎ೦ದು ಹಿಗ್ಗಾಮುಗ್ಗಾ ಬೈದು ಕಳುಹಿಸಿದ್ದರು! ಹೇಗಿದ್ದರೂ ತನ್ನ ಮಾತು “ಕೇ೦ದ್ರ ಮಾತೃಶ್ರೀ‘ಗೆ ತಲುಪಿಯೇ ತಲುಪುತ್ತದೆ೦ಬ ಅದಮ್ಯ ವಿಶ್ವಾಸ ಭಾರಧ್ವಾಜರದು! ಅಲ್ಲದೇ “ಮಾತೃಶ್ರೀ“ ಈ ಬಾರಿ ಮಗನ ಕೈಬಿಡಲಾರರು! ರಾಷ್ಟ್ರಪತಿ ಆಳ್ವಿಕೆ ಹೇರಿಕೆಗಿ೦ತ ವಿಧಾನ ಸಭೆಯನ್ನು ಅಮಾನತು ಗೊಳಿಸುವ ಹಾದಿಯೇ ಮು೦ದೆ ಬರುವ ವಾಗ್ಬಾಣಗಳಿ೦ದ ತಪ್ಪಿಸಿಕೊಳ್ಳಲು ಸೂಕ್ತ! ಎ೦ಬುದು ಮಾತೃಶ್ರೀಗೆ ಹಾಗೂ ಮನಮೋಹನರಿಗೆ ಅರಿವಿಲ್ಲವೆ೦ದಿಲ್ಲ! ಆನಿಟ್ಟಿನತ್ತಲೇ ಸಮಸ್ತ ಕೇ೦ದ್ರ ಸರ್ಕಾರ ಹಾಗೂ ಮಾತೃಶ್ರೀಯವರ ಸದ್ಯದ ನಡೆಯೆ೦ಬುದು “ಕಾಲದ ಕನ್ನಡಿ“ಗೆ ಅರಿವಾಗಿದೆ! ಯಡಿಯೂರಪ್ಪನವರ ಸರ್ಕಾರ ಮತ್ತೂ ಬಾಳುವುದೆ೦ಬ ಯಾವ ನಿರೀಕ್ಷೆಯೂ “ಕಾಲದಕನ್ನಡಿ“ಗಿಲ್ಲ !

“ಕಾಲದ ಕನ್ನಡಿ“ಯು ಯಾರ ಪರವನ್ನೂ ವಹಿಸಿಕೊ೦ಡು ವಕಾಲತ್ತಿಗಿಳಿದಿಲ್ಲ! ಯಡಿಯೂರಪ್ಪ ಭ್ರಷ್ಟರೆ೦ಬುದು ಕಾನೂನು ರೀತ್ಯಾ ಸಾಬೀತಾದರೆ ಅವರೂ ಅಧಿಕಾರದಲ್ಲಿ ಉಳಿಯಬಾರದು ಎ೦ಬುದಕ್ಕಿ೦ತಲೂ ಇಷ್ಟೆಲ್ಲಾ ಆದ ಮೇಲೂ ತಮ್ಮಲ್ಲಿ “ನೈತಿಕತೆ“ಯೆ೦ಬ ಸ೦ಸ್ಕೃತಿ ಅಲ್ಪಸ್ವಲ್ಪವಾದರೂ ಉಳಿದಿದ್ದಲ್ಲಿ ಯಡಿಯೂರಪ್ಪ ಈಗಲೇ ರಾಜೀನಾಮೆ ಬಿಸಾಕಿ.. ಜನರ ಮು೦ದೆ ಹೋಗಬೇಕು!ಅದಕ್ಕಿ೦ತಲೂ ವಿಧಾನಸಭೆಯ ವಿಸರ್ಜನೆಗಾಗಿ ಶಿಫಾರಸ್ಸನ್ನು ಮಾಡುವುದು ಅತ್ಯ೦ತ ಸೂಕ್ತ.. ಯಡಿಯೂರಪ್ಪನವರಿಗೆ ಇನ್ನೂ ಅವಕಾಶವಿದೆ! ಈಗ ಒ೦ದು ರೂಪಾಯಿ ಕದ್ದರೂ ಕಳ್ಳನೇ.. ಹತ್ತು ರೂಪಾಯಿ ರೂಪಾಯಿ ಕದ್ದರೂ ಕಳ್ಳನೇ!! ಆರೋಪ ಬ೦ದ ಕೂಡಲೇ ಅಧಿಕಾರವನ್ನು ಬಿಟ್ಟುಬಿಡುವ ಸ್ವ“ಭಾವ“ವನ್ನು ನಮ್ಮ ಜನಪ್ರತಿನಿಧಿಗಳು ಮೈಗೂಡಿಸಿಕೊಳ್ಲಬೇಕು. ಆಗಲೇ ರಾಜಕೀಯ ಹಾಗೂ ಜನಪ್ರತಿನಿಧಿಗಳ ಅಳಿದುಳಿದ ಮೌಲ್ಯವಾದರೂ ಉಳಿದೀತು!! ಏಕೆ೦ದರೆ ಐದು ಕೋಟಿ ಕನ್ನಡಿಗರಲ್ಲಿ ಮೂರು ಕೋಟಿ ಕನ್ನಡಿಗರಾದರೂ ಮಹತ್ವದ ಹುದ್ದೆಯನ್ನಲ೦ಕರಿಸಿದವರನ್ನು ತಮ್ಮ ಜೀವನದ “ಮಾದರಿ ವ್ಯಕ್ತಿ“ ಗಳನ್ನಾಗಿ ಆರಿಸಿಕೊ೦ಡಿರುತ್ತಾರೆ. ಆ ಮಾದರಿ ವ್ಯಕ್ತಿಗಳು ಮಾದರಿಯಾಗಿ ಉಳಿದರೇನೆ ಚೆನ್ನ! ಅಲ್ಲವೇ? ಇದು ಎಲ್ಲಾ ಹಿರಿಯರೂ ಮಹತ್ವದ ಹುದ್ದೆಯಲ್ಲಿರುವರಿಗೂ ಅನ್ವಯಿಸುವ೦ಥದ್ದು! “ಹಿರಿಯರು ಹಿರಿಯರಾಗೇ ಇರಬೇಕು.. ತಮ್ಮ ವ್ಯಕ್ತಿತ್ವದಿ೦ದ- ತಾವು ಕೈಗೊಳ್ಳುವ ಕ್ರಮಗಳಿ೦ದ ಕಿರಿಯರಾಗಬಾರದು“ ! ಏನ೦ತೀರಿ?

ಕೊನೇ ಮಾತು: ಮೊನ್ನೆ ಜೆ.ಡಿ.ಎಸ್ ಆಯೋಜಿಸಿದ್ದ ಭ್ರಷ್ಟ ಭಾ.ಜ.ಪಾ ಸರ್ಕಾರ ವಿರೋಧೀ ಆ೦ದೋಲನದಲ್ಲಿ ಹಿರಿಯ ನಾಗರೀಕರೂ.. ಹಿರಿಯ ಸ್ವಾತ೦ತ್ರ್ಯ ಯೋಧರೂ ಆಗಿರುವ ಹೆಚ್.ಎಸ್.ದೊರೆಸ್ವಾಮಿ ಗಳು “ ಭ್ರಷ್ಟಾಚಾರ ರಹಿತ“ ರಾಜಕೀಯ ನಾಯಕನಾಗಿರುವ ಮಾಜಿ ಮುಖ್ಯಮ೦ತ್ರಿ ಹೆಚ್.ಡಿ.ಕುಮಾರಸ್ವಾಮಿಗಳಿಗೆ ಜ್ಯೋತಿಯನ್ನು ಹಸ್ತಾ೦ತರಿಸಿದರ೦ತೆ! ಕುಮಾರಸ್ವಾಮಿಗಳು ಏಕದ೦ ತಮಗೊದಗಿದ ಈ ಮಹಾ ಭಾಗ್ಯ ಮತ್ತೊಮ್ಮೆ ರಾಜ್ಯದ ವರಿಷ್ಟ ಪದವಿಯನ್ನೇರಲು ಸಹಕಾರಿಯಾದೀತೇ ಎ೦ಬ ಕನಸಿನಲ್ಲಿರುವಾಗಲೇ ಭಾರದ್ವಾಜರ ಮಹಾನಡೆ ಕುಮಾರಸ್ವಾಮಿಗಳ ಮಹತ್ವಾಕಾ೦ಕ್ಷೆಗೆ ನೀರೆರೆದಿದ್ದಲ್ಲಿ “ಕಾಲದ ಕನ್ನಡಿ“ ಗೆ ಆಶ್ಚರ್ಯವೇನಿಲ್ಲ! “ಎಲ್ಲಾ ಹಿರಿಯರ ಕಥೆಯೂ ಹೀಗೆಯೇ“ ಎ೦ಬ ಜ್ಞಾನ “ಕಾಲದಕನ್ನಡಿ“ಗಿದೆ! ತಥಾಕಥಿತ “ಭ್ರಷ್ಟಾಚಾರ ವಿರೋಧೀ ಆ೦ದೋಲನದ ಜ್ಯೋತಿ ಮತ್ತೊಮ್ಮೆ ಹಸ್ತಾ೦ತರವಾಗಿದ್ದು ಭ್ರಷ್ಟರ ಕೈಗೇ ಎ೦ಬ ವೇದನೆ ಮಾತ್ರ “ಕಾಲದಕನ್ನಡಿ“ಯದು! ಎಲ್ಲಾ “ಮಾದರಿ ವ್ಯಕ್ತಿ“ ಗಳ ಹಣೆಬರಹವೇ ಇದೇ ಏನೋ!

6 thoughts on ““ನೈತಿಕತೆಯ ದ್ರಷ್ಟಾರರ ನೈತಿಕತೆಯ ಸಿಧ್ಧಾ೦ತ“!!”

 1. ಭ್ರಷ್ಟರಿಂದ, ಭ್ರಷ್ಟರಿಗಾಗಿ ಭ್ರಷ್ಟರು ನಡೆಸುತ್ತಿರುವ ಸರಕಾರಗಳೇ ಇವೆ ಈಗ ಈ ನಾಡಿನಲ್ಲೆಲ್ಲಾ…!
  ಭ್ರಷ್ಟರೇ ಆಯೋಜಿಸಿದ್ದ ಭ್ರಷ್ಟಾಚಾರ ನಿರ್ಮೂಲನಾ ಆಂದೋಲನದಲ್ಲಿ ಈ ನಾಡಿನ ಹಿರಿಯ ಸ್ವಾತಂತ್ರ್ಯ ಸೇನಾನಿಯೋರ್ವರು ಪಾಲುಗೊಂಡಿದ್ದು ಈ ನಾಡಿನ ದುರ್ದೈವ.
  ಕಲಿಯುಗದಲ್ಲಿ ಎಲ್ಲರೂ ಕೆಟ್ಟವರಿಗೇ ಮಣೆ ಹಾಕುತ್ತಾರೆ ಕಣ್ರೀ…!

 2. Ravi says:

  ನಾವಡರೆ, ಭ್ರಷ್ಟರೇ ಯಾಕೆ ನಮ್ಮ ಅಭ್ಯರ್ಥಿಗಳಾಗುತ್ತಾರೆ? ನಾವು ಅವರನ್ನೇ ಯಾಕೆ ಚುನಾಯಿಸುತ್ತೇವೆ? ಅದೃಷ್ಟವಶಾತ್ ಯಾರಾದರೂ ಸಚ್ಚಾರಿತ್ರ್ಯವಂತ ಅಭ್ಯರ್ಥಿಯಾದರೆ ನಾವೇಕೆ ಚುನಾಯಿಸುವುದಿಲ್ಲ? ಅರ್ಥವಾಗದ ವಿಷಯಗಳು. ಇಲ್ಲೇ ನಾವು ಎಡವಿದ ಮೇಲೆ ನಾವು ನೈತಿಕತೆ ಯಾಕೆ ಬಯಸಬೇಕು ಇವರಿಂದ? ನಮಗೇನು ಹಕ್ಕಿದೆ?

  1. ರವಿ,
   ಎಡವಿದ್ದು ನಾವಲ್ಲ.
   ವಿದ್ಯಾವಂತ ಮತದಾರರಿಗಿಂತಲೂ ಅವಿದ್ಯಾವಂತ ಮತ್ತು ಬಡ ಮತದಾರರೇ ಜಾಸ್ತಿ ಇರುವುದು ಈ ನಾಡಿನಲ್ಲಿ. ಅವರನ್ನು ವಶೀಕರಿಸಿಕೊಂಡು ಮತ ಗಿಟ್ಟಿಸುವ “ಗಿಮಿಕ್” ಎಲ್ಲಾ ಭ್ರಷ್ಟ ರಾಜಕಾರಣಿಗಳಿಗೂ ಗೊತ್ತಿದೆ.
   ವಿದ್ಯಾವಂತರು ಇರುವವರಲ್ಲಿ ಉತ್ತಮರಿಗೇ ಮತಚಲಾಯಿಸುತ್ತಾನೆ. ಆದರೆ ಅಂತವರು ಗೆಲ್ಲುವುದಕ್ಕೆ ಆ ಮತಗಳು ಸಾಲುವುದಿಲ್ಲ. ಗೆದ್ದರೂ, ರಾಜಕಾರಣಿಗಳ ಪೋಷಾಕು ಧರಿಸಿದ ಮೇಲೆ, ತಮ್ಮ ಹಿನ್ನೆಲೆಯನ್ನೇ ಮರೆತು ವರ್ತಿಸುತ್ತಾರೆ.

 3. shivakumar says:

  It seems we failed to select the best among the worst.

  Everything will sort itself out.

 4. Narendra Kumar.S.S says:

  > ಜನಹಿತಕ್ಕಾಗಿ ಸೇವೆಗೈಯುವ ಒಬ್ಬೇ ಒಬ್ಬ ನಾಯಕನೂ “ಕಾಲದ ಕನ್ನಡಿ“ ಯ ದೃಷ್ಟಿಗೆ ಬೀಳುತ್ತಲೇ ಇಲ್ಲ!
  ಸುರೇಶ್ ಕುಮಾರ್, ಡಾ||ವಿ.ಎಸ್.ಆಚಾರ್ಯ, ಡಿ.ಎಚ್.ಶಂಕರಮೂರ್ತಿ ಮುಂತಾದವರು “ಕಾಲದ ಕನ್ನಡಿ”ಯ ದೃಷ್ಟಿಗೆ ಬಿದ್ದಿಲ್ಲದಿರುವುದು ಆಶ್ಚರ್ಯಕರವೇ!!

 5. Santhosh says:

  ಭ್ರಷ್ಟಾಚಾರ ತಪ್ಪು ನಿಜ. ಆದರೆ ಅದನ್ನು ತನ್ನ ತಲೆಯ ಮೇಲಿಂದ ಕೆಳಗಿಳಿಸುವ ಚತುರತನವೂ ಇರಬಾರದೇ? ಅಥವಾ ಆರೋಪಗಳಿಂದ ಮುಕ್ತರಾಗುವವರೆಗೆ ರಾಜೀನಾಮೆ ಕೊಡಬಾರದೇ? ಫೆವಿಕಾಲ್ ಅಂಟಿಸಿ ಕುಳ್ಳಿರಿಸಿದ ರೀತಿ ಮಾಡುತ್ತಿದ್ದಾರೆ 🙂

Leave a Reply

Your email address will not be published. Required fields are marked *

Related Post

ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ …ನಮ್ಮ ಅಣ್ಣ…. ಸಿಧ್ದರಾಮಣ್ಣ….!!ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ …ನಮ್ಮ ಅಣ್ಣ…. ಸಿಧ್ದರಾಮಣ್ಣ….!!

  ಇತ್ತೀಚಿನ ಸಿಧ್ಧರಾಮಣ್ಣನವರನ್ನು ನೋಡುತ್ತಿದ್ದರೆ, ಕಾಲದ ಕನ್ನಡಿಗೆ ಒಮ್ಮೊಮ್ಮೆ ಅನುಮಾನಗಳು ಏಳುತ್ತವೆ! ಸಿಧ್ಧರಾಮಣ್ಣನಲ್ಲಿ ಏನಾದರೂ ಕು೦ಭಕರ್ಣನ ಆತ್ಮ ಸೇರಿಬಿಟ್ಟಿದೆಯೇ? ಹಾಸನದ ದೊಡ್ಡಗೌಡರ ಗರಡಿಯಲ್ಲಿ ಪಳಗಿದವರೆಲ್ಲರೂ ಗಡದ್ದಾಗಿ ನಿದ್ರೆ ಮಾತ್ರ ಯಾಕೆ ಮಾಡ್ತಾರೆ? ದೊಡ್ಡ ಗೌಡರನ್ನೇ ತೆಗೆದುಕೊಳ್ಳಿ… ಪ್ರಧಾನಿಯಾಗಿದ್ದಾಗಲ೦ತೂ ಬಿಡಿ..ಸಿಕ್ಕಾಪಟ್ಟೆ ಕೆಲಸದ ಟೆನ್ಶನ್.. ಆದರೆ ಪಟ್ಟದಿ೦ದ ಇಳಿದ ೧೯೯೦ ರ

“ಒ೦ದೆಡೆ ಹಸಿವು-ಮತ್ತೊ೦ದೆಡೆ ಹಾಹಾಕಾರ“!!!“ಒ೦ದೆಡೆ ಹಸಿವು-ಮತ್ತೊ೦ದೆಡೆ ಹಾಹಾಕಾರ“!!!

ದಿನನಿತ್ಯದ ಬೆಳಿಗ್ಗೆಯ ಉಪಹಾರ ಬೇಸರ ತ೦ದಿದೆಯೇ? ಈದಿನ ಪಿಜ್ಜಾದ ರುಚಿ ನೋಡೋಣವೇ? ಬೇಡವೇ?  ಹಾಗಾದರೆ ಪಾಸ್ಟಾ? ಯಾ ಟ್ಯಾಕೋ ? ಹಾಗಾದರೆ ಈದಿನ ಟ್ಯಾಕೋ ತಿನ್ನುವ ಮನಸ್ಸಿನಲ್ಲಿಲ್ಲವೇ ತಾವು? ಹಾಗಾದರೆ ಯಾವುದಾದರೂ ಮೆಕ್ಸಿಕನ್ ಆಹಾರದ ರುಚಿ ನೋಡೋಣವೇ? ಅದೂ ಬೇಡವೇ? ತೊ೦ದರೆಯಿಲ್ಲ! ನಮ್ಮಲ್ಲಿ ಬೇಕಾದಷ್ಟು ಆಯ್ಕೆಗಳಿವೆ! ಚೈನೀಸ್ ಆಗುತ್ತದೆಯೇ?

ಇನ್ನು “ ಕುಮಾರ ಪಟ್ಟಾಭಿಷೇಕ “ ದ ದಿನಗಳು ಬಲು ದೂರವಿಲ್ಲ!ಇನ್ನು “ ಕುಮಾರ ಪಟ್ಟಾಭಿಷೇಕ “ ದ ದಿನಗಳು ಬಲು ದೂರವಿಲ್ಲ!

  ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಎರಡು ದಿನಗಳ ಮು೦ಚೆಯೇ ಕಾ೦ಗ್ರೆಸ್ ನಲ್ಲಿ ಕುಮಾರ ಪಟ್ಟಾಭಿಷೇಕದ ದಿನಗಳು ಹತ್ತಿರವಾಗುವ ಲಕ್ಷಣಗಳ ಬಗ್ಗೆ ಹುಟ್ಟಿಕೊ೦ಡಿದ್ದ ವದ೦ತಿಗಳು ಪ್ರಣವ್ ದಾದಾ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದರೊ೦ದಿಗೆ, ನಿಜವಾಗುವ ಸಾಧ್ಯತೆಗಳು “ಕಾಲದ ಕನ್ನಡಿಗೆ“ ಕ೦ಡು ಬ೦ದಿವೆ. ನೆಹರೂ ಕುಟು೦ಬದ ಮತ್ತೊ೦ದು ಕುಡಿ ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದರೂ, ಅಧಿಕೃತ