ನಿಡಗುರುಕಿ ಜೀವೂಬಾಯಿಯವರ ಚರಿತ್ರೆ ಭಾಗ – 3

ಭಾಗ – 3

ಜೀವೂಬಾಯಿಯವರ ಮೊದಲನೆಯ ದೀರ್ಘಕೃತಿ “ಶ್ರೀಹರಿಲೀಲಾ” ರಚನೆಗೆ ಪ್ರೇರಣೆಯಾಗುವಂತೆ ಒಂದು ಸ್ವಪ್ನ ವೃತ್ತಾಂತವಿರುವುದು. ಇವರು ಅಧಿಕ ಚೈತ್ರಮಾಸದಲ್ಲಿ ಭಾಗವತ ಸಪ್ತಾಹ ಕೇಳಲು ಹೋಗುತ್ತಿದ್ದರು. ಅವರ ಮನಸ್ಸಿನಲ್ಲಿ ಯಾವುದೋ ಒಂದು ವಿಚಾರವು ಸುಳಿಯುತ್ತಲೇ ಇತ್ತು. ನಂತರ ಭಾಗವತದ ಹರಿಕಥೆ ಕೇಳಲು ಕುಳಿತಿದ್ದಾಗಲೂ ಅವರ ಮನಸ್ಸಿನಲ್ಲಿ ಇದೇ ವಿಚಾರದ ಸುಳಿವು ಇತ್ತು. ಅದೇ ಸಮಯಕ್ಕೆ ಸರಿಯಾಗಿ ಆ ದಿನ ಉದ್ಯೋಗಪರ್ವದ ಹರಿಕಥೆ ಪ್ರಾರಂಭವಾಯಿತು. ಹರಿಕಥೆ ನಡೆಸಿಕೊಡುತ್ತಿದ್ದ ದಾಸರು ’ಉದ್ಯೋಗ ಪರ್ವ’ ಕೇಳುವವರು ತಮ್ಮ ಮನಸ್ಸಿನಲ್ಲಿ ಏನನ್ನು ನೆನೆಸುತ್ತಾರೋ, ಆ ಕಾರ್ಯವನ್ನು ಹರಿವಾಯು ಗುರುಗಳು ಖಂಡಿತವಾಗಿಯೂ ನಡೆಸಿಕೊಡುವರು ಎಂದು ಹೇಳುತ್ತಾರೆ. ಅದನ್ನು ಕೇಳಿ ಜೀವಮ್ಮನವರಿಗೆ ಅತಿಯಾದ ಸಂತೋಷವಾಗುವುದು. ಈ ಘಟನೆಯ ಕೆಲವು ದಿನಗಳ ನಂತರ ಜೀವಮ್ಮನವರಿಗೆ ಒಂದು ಸ್ವಪ್ನವಾಯಿತು. ಅದೇನೆಂದರೆ ಬಾಳೆಗಾರ ಮಠದ ಶ್ರೀಶ್ರೀಗಳವರ ಸೇವೆ ಮಾಡತಕ್ಕ ವ್ಯಕ್ತಿಯೊಬ್ಬರು ತಲೆಯ ಮೇಲೆ ದೊಡ್ಡ ದೊಡ್ಡ ಪುಸ್ತಕಗಳ ಗಂಟನ್ನು ಹೊತ್ತುಕೊಂಡು ಇವರ ಮನೆಗೆ ಬರುತ್ತಾರೆ. ಇವರು ಬಹಳ ಸಂಭ್ರಮದಿಂದ ಮನೆಯ ಹಾಲಿನಲ್ಲಿ ಗೋಡೆಯ ಹತ್ತಿರ ಒಂದು ಮಣೆಯನ್ನು ಹಾಕಿ, ಪುಸ್ತಕಗಳನ್ನು ಅಲ್ಲಿಡಬಹುದು ಎನ್ನುವರು. ಆದರೆ ಆ ವ್ಯಕ್ತಿ ಹಾಗಾಗುವುದಿಲ್ಲ ಎಂದು ನಗುತ್ತಾ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತಿರುವಂತೆಯೇ, ಗೋಡೆ ಬದಿಯಿಂದ ಆ ಹಾಲಿನ ಪ್ರದಕ್ಷಿಣೆ ಮಾಡಿ, ಮತ್ತೆ ಅದರೊಳಗೊಂದು ಪ್ರದಕ್ಷಿಣೆ, ಮತ್ತೆ ಅದರೊಳಗಿನ್ನೊಂದು ಪ್ರದಕ್ಷಿಣೆ.. ಹೀಗೆ ಮಾಡುತ್ತಾ ಹಾಲಿನ ಮಧ್ಯಭಾಗಕ್ಕೆ ಬಂದು ಕೊನೆಗೆ ಅಲ್ಲಿ ಪುಸ್ತಕಗಳ ಗಂಟನ್ನಿಟ್ಟು ನಗುನಗುತ್ತಾ ಕುಳಿತುಕೊಳ್ಳುತ್ತಾರೆ. ಅಷ್ಟು ಹೊತ್ತಿಗೆ ಸರಿಯಾಗಿ ಬೆಳಗಿನ ಜಾವ ಕಳೆದು ಇವರಿಗೆ ಎಚ್ಚರಿಕೆಯಾಗುವುದು. ಈ ಸ್ವಪ್ನದ ನಂತರ, ಭಗವಂತನ ಪ್ರೇರಣೆಯಿಂದಲೂ, ತಮ್ಮ ಗುರುಗಳ ಕೃಪೆಯಿಂದಲೂ ’ಶ್ರೀ ಹರಿಲೀಲ’ ಎಂಬ ಮೊದಲನೆಯ ದೀರ್ಘಕೃತಿಯ ರಚನೆಯಾಗುವುದು.

ಶ್ರೀ ಹರಿಲೀಲಾದ ವಿಶೇಷತೆಯೆಂದರೆ ಇದು “ವಚನ” ಎಂಬ ಪಟ್ಟಿಯೊಡನೆ ಪ್ರಾರಂಭವಾಗುವುದು. “ಸಿರಿಯ ರಮಣನ ಚರಣಕ್ಕೆರಗಿ ವಂದನೆ ಮಾಡಿ” ಎಂಬ ಗದ್ಯದ ಶೈಲಿಯಲ್ಲಿ ಉದ್ದಕ್ಕೆ ರಚಿಸಲ್ಪಟ್ಟಿದೆ. ಮತ್ತು ಶುಕಮುನಿಗಳು ಪರೀಕ್ಷಿತ ರಾಜನಿಗೆ ತಿಳಿಸಿದುದನ್ನು ತಾನು ಬರೆಯಲು ಸರಸ್ವತೀದೇವಿಯನ್ನು, ತಾರತಮ್ಯದ ರೀತಿಯಲ್ಲಿ ಎಲ್ಲಾ ದೇವಾನು ದೇವತೆಗಳನ್ನೂ ಪ್ರಾರ್ಥಿಸಿ, ಹಿರಿಯರು ತಪ್ಪುಗಳನ್ನು ಸರಿಪಡಿಸಬೇಕೆಂದು ಬೇಡುವರು. ಶ್ರೀ ಹರಿಲೀಲಾ ಇಲ್ಲಿಂದ ಮುಂದೆ ದ್ವಾರಕಾ ಪಟ್ಟಣವನಾಳುವ… ಎಂದು ಆರಂಭವಾಗುವುದು. ಅರಮನೆಯ ವರ್ಣನೆ, ಸತಿಯರ ಮಂದಿರದ ವರ್ಣನೆ ಮಾಡಿ, ಶ್ರೀಕೃಷ್ಣನ ಓಲಗದಲ್ಲಿ ಕುಳಿತಿರುವ ಯಾದವರೆಲ್ಲರೂ ಕಂತುಪಿತನೇ ಸಲಹೆಂದು ಪ್ರಾರ್ಥಿಸುವರೆಂಬಲ್ಲಿಗೆ ಒಟ್ಟು ೯ ನುಡಿಗಳು, ನಾಲ್ಕು ನಾಲ್ಕು ಸಾಲಿನಂತೆ ರಚಿಸಲ್ಪಟ್ಟಿದೆ. ಮುಂದುವರೆಸುತ್ತಾ ಜೀವಮ್ಮನವರು ನಡುನಡುವೆ ’ವಚನ’, ಭಾಮಿನಿ ಷಟ್ಪದಿ, ಆರ್ಯ ಎಂಬ ಶೈಲಿಗಳಲ್ಲಿ ಶ್ರೀಕೃಷ್ಣನ ವೃತ್ತಾಂತವನ್ನು ವರ್ಣಿಸುತ್ತಾ ಕೊನೆಗೆ ’ಮಂಗಳ ಮದನಗೊಪಾಲ ಶ್ರೀಕೃಷ್ಣಗೆ, ಮಂಗಳ ಮಹಲಕ್ಷ್ಮಿ ರಮಣ ಶ್ರೀಹರಿಗೆ’ ಎಂದು ಮಂಗಳವನ್ನು ರಚಿಸಿ, ಮುಗಿಸಿರುವರು. ಹರಿಲೀಲೆಯ ಪೂರ್ಣ ವಿವರಣೆ ಸೊಗಸಾಗಿ ಮೂಡಿ ಬಂದಿರುವಂತಹ ಉತ್ತಮ ರಚನೆಯಾಗಿರುವುದು.

ಎರಡನೆಯ ದೀರ್ಘಕೃತಿಯಾದ “ಶ್ರೀರಾಮ ಜನನ ಮತ್ತು ಸೀತಾ ಕಲ್ಯಾಣ” ಕೂಡ, ಸಾಂಪ್ರದಾಯಿಕವಾಗಿ ಗಜವದನನನ್ನು ಸ್ತುತಿಸಿ, ಮೊದಲ ರಚನೆಯಂತೆಯೇ ಆರ್ಯ, ವಚನ, ಭಾಮಿನಿ ಷಟ್ಪದಿ, ಕಂದ ಶೈಲಿಗಳಲ್ಲಿ ರಚಿತವಾಗಿ ಕೊನೆಗೆ ’ಮಂಗಳಂ ರಘುರಾಮಗೆ ಜಯ ಜಯ”ವೆಂದು ಮುಕ್ತಾಯವಾಗುವುದು. ರಾಮಾಯಣದ ಕಥಾನುಸಾರವೇ ಇದೂ ಪ್ರಾರಂಭವಾಗುವುದು. ದೈತ್ಯರ ಕಿರುಕುಳಕ್ಕಂಜಿ ದೇವತೆಗಳು ಶ್ರೀಹರಿಯನ್ನು ಮೊರೆಯಿಡುವರು. ಸುಮ್ಮನೇ ಆಲಿಸುತ್ತಿರುವ ಭಗವಂತನಿಗೆ ದಶಶಿರನೆನ್ನುವ ಅಸುರನ ಉಪಟಳ ಸಹಿಸಲಸಾಧ್ಯವಾಗಿದೆ ಎಂದು ಮತ್ತೆ ಮತ್ತೆ ಪ್ರಾರ್ಥಿಸಲು, ಭಗವಂತನು ’ಪೊಡವಿಪನುದರದಿ ಜನಿಸುತ ನಿಮ್ಮನು ಕಡುಹರುಷದಿ ಪೊರೆಯುವೆನೆಂದು’ ಆಶ್ವಾಸನೆ ಕೊಡುವನು. ಇಲ್ಲಿಂದ ಮುಂದೆ ದಶರಥ ರಾಜನ ವೃತ್ತಾಂತವು ಶುರುವಾಗುವುದು. ಪುತ್ರಕಾಮೇಷ್ಠಿ ಯಾಗದ ವಿವರ, ಶ್ರೀರಾಮಚಂದ್ರನು ಅನುಜರೊಡನೆ ಜನ್ಮಿಸುವುದರ ಜೊತೆಗೆ, ಭಗವಂತನು ರಾಮನಾಗಿ ಧರೆಗಿಳಿದ ಸಮಯದಲ್ಲಿ ಪ್ರಕೃತಿಯಲ್ಲಾದ ಸುಂದರ ಬದಲಾವಣೆಗಳನ್ನೂ ತಿಳಿಸಿರುವರು. ಸುರರೆಲ್ಲರೂ ಹರುಷದಿ ಕುಣಿದಾಡುವರು. ಪುಟ್ಟ ಮಗು ರಾಮನಿಗೆ ಪ್ರೀತಿಯಿಂದ ಜೋ ಜೋ ಹಾಡುವುದು, ನಾಮಕರಣ, ಬಾಲಲೀಲೆಗಳ ನಂತರ, ವಿಶ್ವಾಮಿತ್ರರ ಆಗಮನವಾಗುವುದು. ವಿಶ್ವಾಮಿತ್ರರು ರಾಮನಿಗೆ ಆದರದಿಂದ ಬಾರಯ್ಯ ಶ್ರೀರಾಮಚಂದ್ರನೆಂದು ವಿಧವಿಧವಾಗಿ ಸ್ತುತಿಸಿ ಹಾಡುವರು. ತಾಟಕಿಯ ವಧೆ, ಸೀತಾ ಸ್ವಯಂವರದಲ್ಲಿ ರಾವಣನ ಗರ್ವಭಂಗ, ಸೀತಾ-ರಾಮ ಕಲ್ಯಾಣ ಎಲ್ಲವೂ ಅತ್ಯಂತ ಸುಂದರವಾಗಿ, ಸುಲಭವಾದ ಪದಗಳ ಜೋಡಣೆಯೊಂದಿಗೆ, ರಚಿಸಲ್ಪಟ್ಟಿದೆ. ವಿವಾಹದ ಸಂಭ್ರಮದ ನಂತರ ದಶರಥ ಮಹಾರಾಜನು, ಮಕ್ಕಳು ಸೊಸೆಯಂದಿರು, ಬಂಧು-ಬಳಗದವರೆಲ್ಲರ ಸಹಿತ ಅಯೋಧ್ಯಾ ಪಟ್ಟಣಕ್ಕೆ ವಾಪಸ್ಸು ಬರುವುದರಲ್ಲಿ, ಮುಕ್ತಾಯವಾಗುವುದು. ನಂತರ ೧೨ ನುಡಿಗಳ ಮಂಗಳ ರಚನೆಯಾಗಿದೆ.

ಈ ರಚನೆಯ ವೈಶಿಷ್ಟ್ಯವೆಂದರೆ, ಇದಕ್ಕೆ “ಫಲಶ್ರುತಿ”ಯನ್ನೂ ೭ ನುಡಿಗಳಲ್ಲಿ ಜೀವಮ್ಮನವರು ರಚಿಸಿರುವುದು. ಕೊನೆಗೆ ರಾಮಚಂದ್ರ ಮೂರುತಿಗೆ ಆರತಿಯ ೩ ನುಡಿಗಳ ರಚನೆಯೊಂದಿಗೆ ಮುಕ್ತಾಯವಾಗುವುದು. ಅಪರೂಪದ ವಿಶಿಷ್ಟ ರಚನೆಯಾಗಿರುವುದು. ಲಾವಣಿಯ ಶೈಲಿಯಲ್ಲಿ ಹಾಡಿಕೊಳ್ಳಬಹುದಾಗಿದೆ. ಈ ಕೃತಿಯು ಶ್ರೀ ಕೀಲಕನಾಮ ಸಂವತ್ಸರದ ಯುಗಾದಿ ಪ್ರಯುಕ್ತ ರಚಿಸಲ್ಪಟ್ಟಿದೆ.

ಮುಂದಿನ ಕೃತಿ “ಶ್ರೀಕೃಷ್ಣಲೀಲಾ”. ಗಣಪತಿಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುವ ಈ ಕೃತಿ ಗೋಪೀದೇವಿ ಹಾಗೂ ಬಾಲಕೃಷ್ಣನ ನಡುವಿನ ಪುಟ್ಟ ಪುಟ್ಟ ಸಂಭಾಷಣೆಗಳ ರೂಪದಲ್ಲಿ ರಚಿತವಾಗಿದೆ. ಬೆಣ್ಣೆ ಕದಿಯುವ ಕಳ್ಳ ಕೃಷ್ಣನ ತುಂಟುತನ, ಗೋಪಿಯ ಸಿಟ್ಟು, ಕೃಷ್ಣನನ್ನು ಒರಳಿಗೆ ಸೇರಿಸಿ ಬಿಗಿಯುವುದು, ಕೃಷ್ಣನು ಮನೆಯ ಮುಂದಿನ ಮರಗಳ ನಡುವೆ ಒರಳನ್ನು ಎಳೆಯುತ್ತಾ ಬರುವುದರಿಂದ ಯಮಳಾರ್ಜುನರ ಶಾಪ ವಿಮೋಚನೆಯಾಗುವಂತಹ ಘಟನೆಗಳಿಗಳಿಗಷ್ಟೇ ಸೀಮಿತವಾಗಿರುವುದು. ಬೆರಗಾಗುವ ಗೋಪೀದೇವಿಯು ಭಗವಂತನನ್ನು ಕೊಂಡಾಡುವಳು. ಅತಿ ಸಂತೋಷದಿಂದ ಬಾ ಬಾ ಬಾ ಹರಿ ಎಂದು ಕರೆದು ಮಗುವನ್ನು ಮುದ್ದುಗರೆಯುವಳು. “ಮಂಗಳವೆನ್ನಿ ಶ್ರೀ ಹರಿಗೆ” ಎಂದು ಹಾಡುವ ಮೂಲಕ ಈ ರಚನೆಯು ಮುಕ್ತಾಯವಾಗುವುದು.

ನಾಲ್ಕನೆಯ ದೀರ್ಘ ರಚನೆ “ಸಮುದ್ರ ಮಥನ”. ಮಂದರ ಗಿರಿಯನು ಬೇಗದಲಿ ಸಿಂಧುವಿನೊಳಗಿಟ್ಟು ಚಂದದಿ ಮಥಿಸಿದ ಕಥೆಯ ಪೇಳುವೆನು ಎನ್ನುತ್ತಾ ಸಮುದ್ರ ಮಥನದ ಕಥೆ ಪ್ರಾರಂಭವಾಗುವುದು. ದೇವಾನು ದೇವತೆಗಳೆಲ್ಲರೂ ವೈಕುಂಠಕ್ಕೆ ಆಗಮಿಸಿ, ಶ್ರೀಹರಿಯನ್ನು ಸ್ತುತಿಸುವರು. ಭಗವಂತನು ಈ ಪರಿಯಲಿ ಸ್ತುತಿಸಲೇನು ಕಾರಣವೆಂದು ಕೇಳಲು ದೇವತೆಗಳೆಲ್ಲರೂ ದಾನವರಿಂದ ಬಹುವಾಗಿ ನೊಂದಿಹೆವು, ಲಾಲಿಸು ಶ್ರೀಶನೆ ಎಂದು ಬಿನ್ನೈಸುವರು. ಮುಂದಿನ ೯ ಚರಣಗಳು ಶ್ರೀಹರಿಯನ್ನು ವಿಧವಿಧವಾಗಿ ಸ್ತುತಿಸುವುದಾಗಿದೆ. ಇವರ ಅಳಲನ್ನು ಕೇಳಿ ಶ್ರೀಹರಿಯು ಚಂದದ ಅಮೃತದ ಬಲದಿಂದ ನೀವೆಲ್ಲರೂ ಸುಖದಿಂದ ಇರುವಿರೆಂದು ಆಶ್ವಾಸನೆಯನ್ನು ಕೊಡುವನು. ನಂತರ ಮಂದರ ಪರ್ವತವನ್ನು ತಮ್ಮಿಂದ ತರಲಾಗದೆಂದು ದೇವತೆಗಳು ನುಡಿದಾಗ, ದಾನವರಿಂದಲೇ ಆ ಕೆಲಸವನ್ನು ಮಾಡಿಸುವಂತೆ ಭಗವಂತನು ದೇವತೆಗಳಿಗೆ ಉಪಾಯವನ್ನು ಸೂಚಿಸುವನು. ನಂತರ ಪೂರ್ತಿಯಾಗಿ ಸಮುದ್ರ ಮಥನದ ಸನ್ನಿವೇಶದ ಚಿತ್ರಣ, ಶ್ರೀಹರಿಯ ದಶಾವತಾರಗಳ ವರ್ಣನೆ. ಜೊತೆಗೆ ಮೋಹಿನಿ ರೂಪದ ವಿವರಣೆ ಎಲ್ಲಾ ತುಂಬಾ ಸುಂದರವಾಗಿ ಮೂಡಿ ಬಂದಿದೆ. ಈ ರಚನೆಯಲ್ಲಿಯ ಒಂದು ವಿಶೇಷವೆಂದರೆ ದೇನಾನು ದೇವತೆಗಳೆಲ್ಲಾ ಭಗವಂತನ್ನು ಪ್ರಾರ್ಥಿಸುತ್ತಿರಲು ಶ್ರೀಹರಿಯು ಮೌನದಲ್ಲಿರುವುದನ್ನು ಕಂಡು ದೇವತೆಗಳು ಆತನ ಚರಣಕ್ಕೆರಗಿ ಮತ್ತೆ ಸ್ತುತಿ ಮಾಡುವರು. ಭಗವಂತನ ಈ ಸ್ತುತಿಯು ೪ ಸಾಲುಗಳ ಒಟ್ಟು ೯ ನುಡಿಗಳಿಂದ ಕೂಡಿದೆ. ಇಷ್ಟರಲ್ಲಿ ಕೊನೆಯ ನುಡಿ ಬಿಟ್ಟು ೮ ನುಡಿಗಳಲ್ಲಿ ೩೨ ಬಾರಿ ’ಕಮಲಾಕ್ಷ’ ಎಂದೇ ಕೊನೆಗೊಳ್ಳುತ್ತದೆ. ಕೊನೆಯ ನುಡಿಯಂತೂ ಬಹಳ ಸುಂದರವಾಗಿದೆ……
“ಕಮಲ ನಾಯಕ ಕಮಲಾಕ್ಷ ಹೃ –
ತ್ಕಮಲದಿ ವಾಸ ಶ್ರೀ ಕಮಲಾಕ್ಷ
ಕಮಲ ಸಂಭವನಯ್ಯ ಕಮಲಾಕ್ಷ ಕಾಯೊ
ಕಮಲನಾಭ ವಿಠ್ಠಲ ಕಮಲಾಕ್ಷ……. ಭಜನೆ ಪ್ರಾಕಾರದಲ್ಲಿ ಉಪಯೋಗಿಸಲು ಪ್ರಶಸ್ತವಾಗಿದೆ. ಮೋಹಿನಿ ರೂಪದ ವರ್ಣನೆಯಲ್ಲಿ ’ಮೋಹನಾಕಾರ ಶೃಂಗಾರ ದಾನವರಿಗೆ ಮನೋವಿಕಾರ’……. ಏನೆಂದು ವರ್ಣಿಸಲಿ ಎಂಬ ಸುಂದರ ವಿವರಣೆಯಿದೆ. ಈ ರಚನೆಯೂ ಕೂಡ ಮಂಗಳದೊಂದಿಗೆ ಮುಕ್ತಾಯವಾಗುವುದು.

ಮುಂದಿನ ಐದನೆಯ ದೀರ್ಘಕೃತಿ ’ಪುರಂದರ ವಿಠಲದಾಸರ ಚರಿತ್ರೆ”. ಇದೂ ಅಷ್ಟೇ ಅನೇಕ ಪ್ರಾಕಾರಗಳಲ್ಲಿ ರಚಿಸಲ್ಪಟ್ಟ ಕೃತಿ. ಇದರಲ್ಲಿ ’ಸೀಸಪದ್ಯ’ದ ಶೈಲಿಯೂ ಸೇರಿಕೊಂಡಿದೆ. ಶ್ರೀನಿವಾಸನಾಯಕರ ಕಥೆ ವಿವರವಾಗಿ, ಹೆಣೆಯಲ್ಪಟ್ಟಿದೆ. ಭಗವಂತನ ಆಗಮನ, ಶ್ರೀನಿವಾಸ ನಾಯಕರು ಧನದ ಮದದಿಂದ ಬೀಗುವುದು ಸರಳವಾಗಿ ಮನಮುಟ್ಟುವಂತೆ ರಚಿಸಲ್ಪಟ್ಟಿದೆ. ಮತ್ತೆ ಮತ್ತೆ ಶ್ರೀಹರಿಯು ವಿಪ್ರನ ರೂಪದಲ್ಲಿ ಬಂದು ಧನಸಹಾಯಕ್ಕಾಗಿ ಯಾಚಿಸುವನು. ಕೊನೆಗೆ ಕೋಪದಿಂದ ನಾಯಕರು, ವಿಪ್ರ ರೂಪಿ ಭಗವಂತನನ್ನು ಹೊರಕ್ಕೆ ಹಾಕುವುದು… ಎಲ್ಲಾ ವಿವರಣೆಗಳನ್ನೂ ಚೆನ್ನಾಗಿ ತಿಳಿಸಿದ್ದಾರೆ. ಮುಂದೆ ಭಗವಂತ ನಾಯಕರ ಪತ್ನಿಯಿಂದ ಮೂಗುತಿ ದಾನವ ಸ್ವೀಕರಿಸುವುದು, ಮತ್ತೆ ಅದನ್ನು ನಾಯಕರ ಅಂಗಡಿಗೇ ತರುವುದು, ನಾಯಕರು ಮನೆಗೆ ಹೋಗಿ ಪತ್ನಿಯನ್ನು ಪ್ರಶ್ನಿಸುವುದು, ಭಗವಂತ ಆ ತಾಯಿಗೆ ವಿಷದ ಬಟ್ಟಲಲ್ಲಿ ಮೂಗುತಿ ಕರುಣಿಸುವುದು.. ಪ್ರತಿಯೊಂದು ಘಟನೆಗಳೂ ನವಿರಾಗಿ, ಸುಂದರವಾಗಿ ಸೇರಿಸಲ್ಪಟ್ಟಿದೆ. ನಾಯಕರು ಕೊನೆಗೆ ಬುದ್ಧಿ ತಿಳಿದು, ಶ್ರೀಹರಿಗೆ ಸಂಪೂರ್ಣವಾಗಿ ಶರಣಾಗಿ ದಾಸರಾಗುವವರೆಗೂ ಪೂರ್ಣ ಕಥೆ ವಿಸ್ತಾರವಾಗಿ ಹೆಣೆಯಲ್ಪಟ್ಟಿದೆ. ಭಗವಂತನನ್ನು ಸ್ತುತಿಸುತ್ತಾ ನಾಯಕರು ಹಾಡುವ ಭಾಗವಂತೂ ಪುಟ್ಟ ಪುಟ್ಟ ೪ ಸಾಲುಗಳ ರಚನೆಯಾಗಿದೆ. ಅದೆಷ್ಟು ಅದ್ಭುತವಾಗಿ ಪದಗಳ ಜೋಡಣೆಯಾಗಿದೆಯೆಂದರೆ, ಲಾವಣಿಯಂತೆ ಹಾಡಲು, ಓದಿದರೆ ಮನಸ್ಸು ಮುದಗೊಳ್ಳುತ್ತದೆ. ಜೀವಮ್ಮನವರು ಸುಮ್ಮನೇ ಪದಗಳನ್ನು ಸರಸರನೆ, ಆಟವಾಡುತ್ತಾ ಜೋಡಿಸಿರುವಂತಿದೆ. ಅದರ ಒಂದೊಂದು ತುಣುಕುಗಳು ಹೀಗಿವೆ…

ಸಪ್ತಸಾಗರ ನೀನೆ ವಿಶ್ವತೋಮುಖ ನೀನೆ ಅಕ್ಷರೇಢ್ಯನು ನೀನೆ
ಸಪ್ತಮೇರುವು ನೀನೆ ವಿಶ್ವರೂಪನು ನೀನೆ ಪಕ್ಷಿವಾಹನ ನೀನೆ
ಸಪ್ತಋಷಿಗಳು ನೀನೆ ವಿಶ್ವವ್ಯಾಪಕ ನೀನೆ ಶಿಕ್ಷಿಸುವ ದೊರೆ ನೀನೆ
ಸರ್ವತ್ರ ನೀನೆ… ವಿಶ್ವ ನೀನೆ…. ರಕ್ಷಿಸುವ ನೀನೆ….

ಕೊನೆಗೆ ಶ್ರೀನಿವಾಸ ನಾಯಕರು ಶ್ರೀ ವ್ಯಾಸರಾಯ ಗುರುಗಳಿಂದ ಪುರಂದರ ವಿಠಲನೆಂಬ ಅಂಕಿತ ಪಡೆಯುವರು. ಪುರಂದರ ವಿಠಲದಾಸರ ಚರಿತ್ರೆಯು ಜೀವಮ್ಮನವರ ದೀರ್ಘ ಕೃತಿಗಳಲ್ಲಿಯೇ ಅತೀ ದೀರ್ಘವಾದುದೆಂದು ಹೇಳಬಹುದು. ಸುಮಾರು ೭೦ – ೮೦ ಪುಟಗಳಷ್ಟು ದೀರ್ಘ ರಚನೆಯಾಗಿದೆ. ಕೊನೆಗೆ ಮಂಗಳದೊಂದಿಗೆ ಮುಕ್ತಾಯವಾಗಿದೆ. ಈ ಕೃತಿಯು ಶ್ರೀ ಪಾರ್ಥಿವ ಸಂವತ್ಸರ ಪುಷ್ಯ ಬಹುಳ ಅಮಾವಾಸ್ಯೆಯ ದಿನ – ೨೮/೦೧/೧೯೪೬ ರಂದು ಶ್ರೀ ಪುರಂದರ ದಾಸರ ಆರಾಧನೆಯಲ್ಲಿ ತಮ್ಮ ಪೂಜ್ಯ ಗುರುಗಳ ಪಾದಾರವಿಂದಗಳಲ್ಲಿ ಅರ್ಪಿಸಿರುವ ರಚನೆ ಎಂದು ಜೀವಮ್ಮನವರು ಉಲ್ಲೇಖಿಸಿರುವರು

2 thoughts on “ನಿಡಗುರುಕಿ ಜೀವೂಬಾಯಿಯವರ ಚರಿತ್ರೆ ಭಾಗ – 3”

  1. Bhavani Kulkarni says:

    ಹರಿದಾಸಿಯರ ಪರಿಚಯ ಮಾಡಿಸುತ್ತಿರುವ ನೀವೇ ಧನ್ಯರು, ವಿವರಣೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ.. ಜೀವುಬಾಯಿಯವರ ಚಿತ್ರ ಅಥವಾ ಅವರಿಗೆ ಸಂಬಂಧಿಸಿದ ಚಿತ್ರಗಳು ಇದ್ದರೆ ದಯವಿಟ್ಟು ನನ್ನ ಇಮೇಲ್ ಐಡಿ ಗೆ ಕಳುಹಿಸಿ.🙏

  2. ಸಂಬಂಧಿಸಿದ ಚಿತ್ರಗಳಿದ್ದರೆ/ಫೋಟೊಗಳಿದ್ದರೆ ಕಳಿಸಿ

Leave a Reply

Your email address will not be published. Required fields are marked *

Related Post

ದಾಸ ಸಾಹಿತ್ಯ – ಮಹಿಳೆಯರ ಕೊಡುಗೆ : – 2ದಾಸ ಸಾಹಿತ್ಯ – ಮಹಿಳೆಯರ ಕೊಡುಗೆ : – 2

ದಾಸ ಸಾಹಿತ್ಯವೆಂದರೇನೇ ನಮಗೆ ವಿಶಿಷ್ಟವಾಗಿ ಗೆಜ್ಜೆ ಕಟ್ಟಿಕೊಂಡು, ಕೈಯಲ್ಲಿ ತಂಬೂರಿ – ಎಕನಾದ ಮೊದಲಾದವುಗಳನ್ನು ಹಿಡಿದು ಅಥವಾ ತಾಳಗಳನ್ನು ಕುಟ್ಟುತ್ತಾ ಮೈ ಮರೆತು ವಿಠಲನ ಕುರಿತಾದ ಪದಗಳನ್ನು ಹಾಡುತ್ತಾ, ನೃತ್ಯ ಮಾಡುತ್ತಾ ಸಾಗುತ್ತಿದ್ದವರ ಚಿತ್ರ ಕಣ್ಣ ಮುಂದೆ ಬರುತ್ತದೆ. ಆದರೆ ತಾವಿರುವ ಜಾಗದಲ್ಲೇ, ತಮ್ಮ ಮನೆಯ ಎಲ್ಲೆಯ ಒಳಗೇ,

ಬದುಕಿನ ಪುಟಗಳು ಭಾಗ – ೨ಬದುಕಿನ ಪುಟಗಳು ಭಾಗ – ೨

ಸತ್ವವನ್ನು ಹಂಚುವ ಬಗ್ಗೆ ಆಲೋಚಿಸಿದ್ದೆವು. ಈಗ ಯಾರು ಸತ್ವವನ್ನು ಹಂಚಲು ಸಾಧ್ಯವೆಂದು ನೋಡೋಣ. ನಮ್ಮಲ್ಲಿ ಸಾಕಾಗುವಷ್ಟು ಇದ್ದರೆ ತಾನೇ ನಾವು ಬೇರೆಯವರಿಗೆ ಕೊಡುವ ಯೋಚನೆ ಮಾಡುವುದು? ಇದು ಕೇವಲ ಅನುಭವದ ಅಥವಾ ಬದುಕು ನನಗೆ ಕಲಿಸಿದ ಪಾಠಗಳ ಒಂದು ಪಕ್ಷಿನೋಟ ಅಷ್ಟೆ. ನಾನೇನೂ ದೊಡ್ಡ ತಿಳುವಳಿಕೆಯುಳ್ಳ ವ್ಯಕ್ತಿಯೋ ಅಥವಾ

ಬದುಕಿನ ಪುಟಗಳಿಂದ : ಭಾಗ – ೫ಬದುಕಿನ ಪುಟಗಳಿಂದ : ಭಾಗ – ೫

ಒಮ್ಮೆ ಬದುಕು ತಿರಸ್ಕಾರವನ್ನು ಪರಿಚಯಿಸಿದರೆ, ಅದೇ ಕೊನೆಯಾಗುವುದಿಲ್ಲ. ಅದು ಕೇವಲ ಪ್ರಾರಂಭವಾಗುವುದು. ಆತ್ಮ ವಿಶ್ವಾಸ ಚಿಗುರುವುದಕ್ಕೆ ಆರಂಭಿಸುವುದು. ಇದು ಯಾರೂ ಒಬ್ಬರಿಂದ ಕಲಿಯಬೇಕಾದ್ದೇನಲ್ಲ. ನಮಗೆ ತಿಳಿದೋ ಅಥವಾ ತಿಳಿಯದೆಯೋ ಬದುಕಿನ ಹಾದಿಯಲ್ಲಿ ಪ್ರತಿಯೊಬ್ಬರೂ, ನಿರಂತರ ಹೆಜ್ಜೆ ಹಾಕುತ್ತಲೇ ಇರಬೇಕು. ಎಡವುವುದು, ಮುಗ್ಗರಿಸುವುದು ಎಲ್ಲವೂ ಸಹಜ ಪ್ರಕ್ರಿಯೆಗಳೇ ಆಗಿವೆ. ಆದರೆ