ನಿಡಗುರಕಿ ಜೀವೂಬಾಯಿಯವರ ಚರಿತ್ರೆ – ಭಾಗ ೨

ದಾಸ ಸಾಹಿತ್ಯ

ಭಾಗ – ೨

ಜೀವೂಬಾಯಿಯವರು ಒಟ್ಟು ೧೭೦ ಕೀರ್ತನೆಗಳನ್ನೂ, ೧೦ ದೀರ್ಘ ಕೀರ್ತನೆಗಳನ್ನೂ ರಚಿಸಿದ್ದಾರೆ. ಹಾಡುಗಳನ್ನು ಉದ್ದಕ್ಕೆ ಬರೆಯಲಾಗಿದೆ. ಪಲ್ಲವಿ, ಅನುಪಲ್ಲವಿ, ಚರಣಗಳೆಂಬ ವಿಂಗಡನೆಯಾಗಿಲ್ಲ. ಅವರ ರಚನೆಗಳಲ್ಲಿ ಸಾಕಷ್ಟು ಸ್ವಾತಂತ್ರ್ಯ ವಹಿಸಿರುವುದು ತಿಳಿಯುತ್ತದೆ. ಪ್ರಾಸ ಕೂಡ ಸರಿಯಾಗಿ, ನಿಯಮಿತವಾಗಿ ಕಾಣುವುದಿಲ್ಲ. ಕೆಲವು ರಚನೆಗಳಿಗೆ ಹತ್ತು ನುಡಿಗಳೂ ಇವೆ. ಉದಾ.. “ಎಂತು ಶೋಭಿಸುತಿಹಳು ಈ ಕನ್ನಿಕೆ.. ಸಂತೋಷದಿಂದಲಿ ಸುರರು ಸ್ತುತಿಸುತಿರಲು” ಎಂಬ ಕೀರ್ತನೆ. ಆದರೆ ಎಲ್ಲಾ ನುಡಿಗಳಲ್ಲೂ ಎಂಟು ಸಾಲುಗಳ ಸಾಹಿತ್ಯವಿದೆ. ಕೆಲವು ರಚನೆಗಳಲ್ಲಿ ಅಂಕಿತದ ನುಡಿಯ ನಂತರವೂ ಎರಡು ಸಾಲುಗಳು ಬಂದಿವೆ. ಉದಾ.. “ರಾಜೀವದಳ ನೇತ್ರ”, “ಅಷ್ಟರೊಳಗೆ ಕೃಷ್ಣ ಬಂದನೆ”, ನಾನೆಲ್ಲೂ ಪೋಗಲಿಲ್ಲ ನಾರಿ ಎಂಬ ರಚನೆಗಳು.

ಜೀವೂಬಾಯಿಯವರ ರಚನೆಗಳಲ್ಲಿ ವೈವಿಧ್ಯತೆ ಇತ್ತು. ದ್ವೈತ ಸಿದ್ಧಾಂತದ ಪ್ರಕಾರ ತಾರತಮ್ಯಾನುಸಾರ ಎಲ್ಲಾ ದೇವಾನುದೇವತೆಗಳನ್ನೂ ಸ್ತುತಿ ಮಾಡಿರುವರು. ಗುರುಗಳನ್ನೂ ಸ್ತುತಿಸಿರುವರು. ಹಾಗೆಯೇ ದಶಾವತಾರದ ಉಲ್ಲೇಖವೂ ಅನೇಕ ರಚನೆಗಳಲ್ಲಿ ಬಂದಿವೆ. ಕೆಲವು ಸಲ ಪೂರ್ತಿ ೧೦ ನುಡಿಗಳನ್ನೂ, ಕೆಲವೊಮ್ಮೆ ಒಂದೇ ಒಂದು ನುಡಿಯಲ್ಲಿ ಹಲವು ಅವತಾರಗಳನ್ನು ವರ್ಣಿಸಿರುವುದೂ ಇದೆ. ಅದರ ಒಂದು ಉದಾ..
ವೇದ ತಂದು ಭಾರಪೊತ್ತೆ
ಕೋರೆ ತೋರಿ ಕರಾಳ ಬಗೆದು
ಬೇಡಿ ಭೂಮಿ ದೂಡಿ ನೃಪರ
ಸಾಗರವ ಬಂಧಿಸಿದ ಭಯವೋ…. ಇಲ್ಲಿ ಒಂದು ನುಡಿಯಲ್ಲಿ ಏಳು ಅವತಾರಗಳು ಬಂದಿವೆ. ಕೆಲವು ಕಡೆ ಐದು ನುಡಿಗಳಲ್ಲೂ ವರ್ಣಿಸಿದ್ದಾರೆ.

ಭಾಗವತದ ದಶಮಸ್ಕಂದದಲ್ಲಿ ಇರುವಂತೆ ಶ್ರೀಕೃಷ್ಣನ ಬಾಲಲೀಲೆಗಳನ್ನು ತುಂಬಾ ಶ್ರದ್ಧೆಯಿಂದ, ವಾತ್ಸಲ್ಯದಿಂದ ಜೀವೂಬಾಯಿಯವರು ವರ್ಣಿಸಿರುವರು. ಸರಸ ಸಲ್ಲಾಪದ ಮಾತುಗಳನ್ನು ಸುಂದರವಾಗಿ ಸಂವಾದದ ರೂಪದಲ್ಲಿ ರಚಿಸಿದ್ದಾರೆ. ಭಗವಂತನ ಮೋಹಿನಿ ರೂಪದ ವರ್ಣನೆಯೂ ಅನೇಕ ಕಡೆ ಬಂದಿದೆ. ಹಾಗೇ ತಿರುಪತಿಯ ತಿಮ್ಮಪ್ಪನ ವರ್ಣನೆ “ಬಾರಯ್ಯ ಶ್ರೀ ಶ್ರೀನಿವಾಸ ಭಕ್ತವತ್ಸಲ ಸ್ವಾಮಿ” ಮತ್ತು “ಶ್ರೀನಿವಾಸನೆ ಏಳು ಶ್ರೀನಿಕೇತನ ಏಳು” ಎಂಬ ಎರಡು ರಚನೆಗಳಲ್ಲಿ ಬಂದಿವೆ. ಶ್ರೀನಿವಾಸನೆ ಏಳು ಶ್ರೀನಿಕೇತನ ಎಂಬ ರಚನೆಯಲ್ಲಿ ನಾಲ್ಕು ನಾಲ್ಕು ಸಾಲುಗಳ ಒಟ್ಟು ೧೩ ನುಡಿಗಳಿವೆ. ಕೊನೆಯ ೧೪ನೆಯ ನುಡಿಯು ಅಂಕಿತದೊಂದಿಗೆ ಐದು ಸಾಲುಗಳನ್ನೊಳಗೊಂಡಿದೆ.

ಶ್ರೀ ಮಹಾಲಕ್ಷ್ಮಿಯ ಮೇಲೂ ಅನೇಕ ರಚನೆಗಳಿವೆ. ಮಹಾಭಾರತ ಕಥಾ ಪ್ರಸಂಗಗಳ ವಿಚಾರವೂ ಇವರ ಸಾಹಿತ್ಯದಲ್ಲಿ ಅನೇಕ ಬಾರಿ ಉಲ್ಲೇಖಗೊಂಡಿರುವುದು. ಜೀವಮ್ಮನವರು ಭಗವಂತನಾದ ಶ್ರೀಹರಿಗೆ ಸಂಪೂರ್ಣವಾಗಿ ತನ್ನನ್ನು ಸಮರ್ಪಿಸಿಕೊಂಡು, ಅನೇಕ ಆತ್ಮನಿವೇದನೆಯ ರಚನೆಗಳನ್ನು ಮಾಡಿದ್ದಾರೆ.

ಜೀವೂಬಾಯಿಯವರು ದಾಸಸಾಹಿತ್ಯ ರಚನೆಗೂ ತುಂಬಾ ಮೊದಲು ಕೆಲವು ಹಾಸ್ಯ ನಾಟಕಗಳನ್ನು ಬರೆದಿದ್ದರು ಎಂಬ ಮಾತು ಈ ಹಿಂದೆ ಬಂದಿದೆ. ಅವರ ಹಾಸ್ಯ ಪ್ರವೃತ್ತಿಗೆ ಕನ್ನಡಿ ಹಿಡಿಯುವಂತಹ ಎರಡು ವಿಶಿಷ್ಟ ರಚನೆಗಳನ್ನು ನಾವು ಕಾಣಬಹುದು. ಮೊದಲನೆಯದು ಶ್ರೀಕೃಷ್ಣ ಪರಮಾತ್ಮಬಂದು ಬಾಗಿಲಿನಲ್ಲಿ ನಿಂದು ರುಕ್ಮಿಣಿಯನ್ನು ಬಾಗಿಲು ತೆಗೆ ಎಂದು ಕೇಳುವುದು. ಅದು “ಕದವ ತೆಗೆಯೆ ಸುಂದರಿ, ವೈಯಾರಿ ಮುತ್ತಿನ” ಎಂದು ಪ್ರಾರಂಭವಾಗುತ್ತದೆ. ರುಕ್ಮಿಣಿ ಅಮಾಯಕಳಂತೆ ಘೋರ ರಾತ್ರಿಯ ವೇಳೆಯಲಿ ಬಂದಿರುವೆ ಯಾರೆಂದು ಹೆಸರು ಹೇಳದೆ ಹೇಗೆ ಬಾಗಿಲು ತೆಗೆಯಲಿ ಎಂದಾಗ, ಕೃಷ್ಣ ಪರಮಾತ್ಮ ತನ್ನ ಪರಿಚಯ ಹೇಳಿಕೊಳ್ಳಲು ಪ್ರಾರಂಭಿಸುತ್ತಾನೆ. ಎಲೇ ರುಕ್ಮಿಯ ಅನುಜೆಯೇ ಪೃಥ್ವಿಯೊಳು ಎನ್ನನು ’ಚಕ್ರಿ’ ಎನ್ನುವರು ಎಂದಾಗ, ರುಕ್ಮಿಣಿಯು ಮನಸಾರ ಮಾತುಗಳನ್ನಾಡಬೇಡ ಹೊರಡು ಎನ್ನುವಳು. ಪರಮಾತ್ಮನು ನಾಗವೇಣಿಯೆ ನನ್ನ ಇನ್ನೊಂದು ನಾಮವ ಕೇಳು ನಾನು ’ಧರಣಿಧರನು’ ಬಂದಿರುವೆ ಎನ್ನುವನು, ಉತ್ತರವಾಗಿ ರುಕ್ಮಿಣಿಯು ಏನು ಧರೆಯನೆಲ್ಲವ ಸಿರದ ಮೇಲಿರಿಸುವೆಯಾ, ಸರ್ವರನ್ನೂ ಹೆದರಿಸುವ ಉರಗರಾಜ ನೀನಿರಬೇಕು ಸಾಗು ಮುಂದಕೆ ಎಂದಳು. ಶ್ರೀಕೃಷ್ಣನು ಮತ್ತೆ ಹರಿಣಾಕ್ಷಿ ಕೇಳೆ ಎನ್ನನು ಜನರು ’ಹರಿ’ ಎಂದು ಕರೆಯುವರು ಎಂದಾಗ, ರುಕ್ಮಿಣಿಯು ಕೋತಿ ನೀನಾದರೆ ಜಾತಿ ಕಪಿಗಳ ಜೊತೆ ಪ್ರೀತಿಯಿಂದ ಮನಕೆ ಬಂದ ಕಡೆಗೆ ತೆರಳು ಎನ್ನುವಳು. ಬಾಗಿಲು ತೆಗೆಯದೇ ಸತಾಯಿಸುತ್ತಿರುವ ಸತಿಗೆ ಪತಿಯ ಸತಿಯೇ ಕೇಳೆ ನಾನು ನಿನ್ನ ಬಳಿ ನಿನ್ನ ಮೇಲಿನ ಅಪಾರ ಪ್ರೀತಿಯಿಂದ ಬಂದಿರುವೆನು ಎಂದಾಗ ಸತಿ ರುಕ್ಮಿಣಿಯು ಅತುರದಿ ಕದವ ತೆರೆದು ನಾಥ ಕಮಲನಾಭನಿಗೆ ವಂದಿಸುವಳು. ಆ ಕೃತಿ ಹೀಗೆ ಸಾಗುವುದು….

ಕದವ ತೆಗೆಯೆ ಸುಂದರಿ ವಯ್ಯಾರಿ ಮುತ್ತಿನ

ಕಡಲ ಶಯನನೆ ಮಡದಿ ಹರುಷದಿ
ಸಡಗರದಿ ಮುಂದಡಿ ಇಡುತ ನಿನ್ನ
ಒಡೆಯ ಬಂದಿಹನೆಂದು ಹರುಷದಿ
ಬೆಡಗು ಮಾಡದೆ ಬಿಡಿಯ ಮುತ್ತಿನ |೧|

ಯಾರು ನಿನ್ನಯ ಪೆಸರ ಏನೆಂದು ತಿಳಿಯದೆ
ಹೇಗೆ ತೆಗೆಯಲಿ ಕದವಾ
ಘೋರ ರಾತ್ರಿಯ ವೇಳೆಯಲಿ ಬಂ-
ದೀಗ ಬಾಗಿಲ ಬಡಿಯ ನಿಂದಿರೆ
ನಾರಿಯರು ಏನೆಂದು ಕೇಳ್ಪರು
ದ್ವಾರ ಬಿಡುಬಿಡುತಲಿ ಸಾಗು ಮುಂದಕೆ |೨|

ತೆಗೆಯಲೊಲ್ಲೆನು ಕದವ ಸಮರಾತ್ರಿ ವೇಳದಿ
ರುಕ್ಮನ ಅನುಜೆ ಕೇಳೆ ಪೃಥ್ವಿಯೊಳು ಎನ್ನನು
ಚಕ್ರಿ ಎನ್ನುತ ಪೇಳ್ವರೆ
ಅರ್ಥಿವಚನಗಳನ್ನು ಕೇಳುತ
ಸತ್ವರದಿ ನೀ ಬಂದು ಮುಂದಕೆ
ಮುತ್ತಿನ ಕದತೆಗೆದು ಬೇಗನೆ
ರತ್ನ ಪೀಠದಿ ಕುಳ್ಳಿರಿಸೆ ಹೊಸ
ಮುತ್ತಿನರಗಿಣಿ ಸತ್ಯವಾಣಿಯೆ |೩|

ಕೇಳಿ ಹರ್ಷಿತನಾದೆನು ನಿನ್ನಯ ಮಾತ
ಕೇಳಿ ನಗುವರು ಜನರು
ಹೇಳಿ ಕೇಳುವರಿಲ್ಲ ನಿನ್ನ ಮನಸಾರ
ಮಾತುಗಳಾಡಲೇತಕೆ ಕು-
ಲಾಲ ಭವನವಿದಲ್ಲ ಸುಮ್ಮನೆ
ಹೇಳ ಕೇಳದೆ ಹೊರಡು ಮುಂದಕೆ |೪|

ಹೀಗೆ ನುಡಿಯುವದೇತಕೆ ಈಗೆನ್ನ ಮಾತಿಗೆ
ಬೇಗದಿ ತೆಗೆ ಕದವ
ನಾಗವೇಣಿಯೆ ನಗುತ ಪೇಳುವೆ
ಬೇಗದಲಿ ಇನ್ನೊಂದು ನಾಮವ
ಈಗ ಧರಣಿಧರನು ಬಂದಿಹೆ
ಸಾಗರನ ಸುತೆ ಸರ್ಪವೇಣಿಯೆ |೫|

ಧರಣಿಧರ ನೀನಾದರೆ ಈ ಧರೆಯನೆಲ್ಲವ
ಸಿರದ ಮೇಲಿರಿಸುವೆಯ
ಸರ್ವ ಜನರಿಗೆ ಭಯವ ಪಡಿಸುವ
ಉರಗರಾಜ ನೀನೆಂದು ತಿಳಿದೆನು
ಇರುತ ಸರ್ಪಗಳೊಳಗೆ ನೀ ಬಲು
ಹರುಷದಿಂದಲಿ ಸಾಗುಮುಂದಕೆ |೬|

ಹರಿಣಾಕ್ಷಿ ಕೇಳೆ ನೀನು ಎನ್ನನು ಜನರು
ಹರಿಯೆಂದು ಕರೆಯುವರು
ಕರೆ ಕರೆಯ ಮಾಡದೆಲೆ ಬೇಗನೆ
ವರ ಕನಕ ಕದ ತೆಗೆದು ಸುಮ್ಮನೆ
ಇರಿಸು ಸುಖ ಸಾಮ್ರಾಜ್ಯ ಪೀಠವ
ಹರುಷದಿಂ ಕುಳಿತೆಲ್ಲ ಪೇಳುವೆ |೭|

ಕೋತಿ ನೀನಹುದಾದರೆ ಮಾತುಗಳ್ಯಾಕೆ
ಜಾತಿ ಕಪಿಗಳ ಕೂಡುತ
ಪ್ರೀತಿಯಿಂದಲಿ ಮನಕೆ ಬಂದೆಡೆ
ನೀತೆರಳುತಲಿ ಪೋಗು ಮುಂದಕೆ
ಕೋತಿಗಳ ಗುಂಪಿದಲ್ಲ ತಿಳಿಮಹ-
ರೂಪವತಿಯರಿರುವ ಸ್ಥಳವಿದು |೮|

ಪ್ರೀತಿ ಸತಿಯೆ ನೀ ಕೇಳೆ ನಿನ್ನೊಳು ಬಹು
ಪ್ರೀತಿಯಿಂದಲಿ ಬಂದೆನು
ಶ್ರೀಶನ ನುಡಿಕೇಳಿ ರುಕ್ಮಿಣಿ
ಆತುರದಿ ಬಾಗಿಲನೆ ತೆಗೆಯುತ
ನಾಥ ಕಮಲನಾಭ ವಿಠ್ಠಲನಿಗೆ
ತಾನಮಿಸಿ ವಂದಿಸುತ ಭಕುತಿಯಲಿ
ಬಾಗಿಲು ತೆಗೆದಳಾಗ ಭಕುತಿಯಲಿ ಶ್ರೀಶಗೆ
ಬಾಗಿಲು ತೆಗೆದಳಾಗ ||೯||

ಎರಡನೆಯ ಕೃತಿ ಶಿವ – ಪಾರ್ವತಿಯರ ಸಲ್ಲಾಪದ ಹಾಸ್ಯವಾಗಿದೆ. ಇಲ್ಲೂ ಪರಮೇಶ್ವರನು ಬಂದು “ಬಾಗಿಲು ತೆರೆಯಲೆ ಭಾಮಿನಿ ರನ್ನಳೆ” ಎಂದಾಗ ಪಾರ್ವತಿ ಕೂಡ ಪರಿಚಯ ಕೇಳುವಳು. ಶಿವ ತನ್ನನ್ನು ತಾನು ನೀಲಕಂಠ, ಪಶುಪತಿ, ಶೂಲಿ, ಸ್ಥಾಣು ಎಂದೆಲ್ಲಾ ಪರಿಚಯಿಸಿಕೊಂಡಾಗ ಎಲ್ಲದಕ್ಕೂ ಒಂದೊಂದು ಮಾತನ್ನು ಚಮತ್ಕಾರ ಪೂರ್ವಕವಾಗಿ ಪಾರ್ವತಿಯು ಉತ್ತರಿಸುವಳು. ಕೊನೆಗೆ ಮಡದಿಯನ್ನು ’ಕರಿಯ ಮುಖನ ಮಾತೆಯೆ.. ತಡಮಾಡದೆ ಕನಕಮಯದ ಕದ ತೆರೆ ಬೇಗ’ ಎಂದು ಕೇಳಿಕೊಂಡಾಗ, ಪಾರ್ವತಿ ಶಿವನಿಗೆ ನಮಿಸಿ ಬಾಗಿಲು ತೆರೆಯುವಳು. ಎರಡೂ ರಚನೆಗಳೂ ೯ – ೧೦ ನುಡಿಗಳಲ್ಲಿ ಸುಂದರವಾಗಿ ರಚಿಸಲ್ಪಟ್ಟಿರುವುದು. ಮೊದಲನೆಯ ಕೃತಿಯಂತಲ್ಲದೆ, ಈ ರಚನೆಯಲ್ಲಿ ಪಲ್ಲವಿ ಹಾಗೂ ಅನುಪಲ್ಲವಿಗಳೂ ಕೂಡ ಇವೆ. ಆ ಕೃತಿ ಹೀಗೆ ಸಾಗುವುದು….

ಬಾಗಿಲು ತೆಗೆಯಲೆ ಭಾಮತಿ ರನ್ನಳೆ
ಈಗ ನಾ ಬಂದೆನು ಇಂದುಮುಖಿ (ಪ)

ನಾಗವೇಣಿಯೆ ನಿನ್ನೀಗಲೆ ನೋಡಲು
ಬೇಗನೆ ಬಂದೆನು ತೆಗಿ ಕದವಾ (ಅ ಪ)

ಯಾರದು ಈ ಸಮರಾತ್ರಿಯ ವೇಳದಿ
ಬಾಗಿಲು ತೆಗೆ ಎಂದೆನುತಿಹರು
ತೋರದು ಎನಗೊಂದಾಲೋಚನೆ ನಿಮ್ಮ
ನಾಮವು ಪೇಳಲು ತೆಗೆಯುವೆನು |೧|

ನೀಲವೇಣಿಯೆ ಕೇಳೆನ್ನ ಮಾತನು
ಬಹಳ ಚಿಂತೆಯಾತಕೆ ಮನದಿ
ನೀಲಕಂಠನೆಂದೆನ್ನನು ಕರೆವರು
ಕೇಳು ಮನಸು ಚಂಚಲ ಬಿಟ್ಟು |೨|

ನೀಲಕಂಠನೆಂದರೆ ನೆನಪಾಯಿತು
ನವಿಲಿನ ಮರಿ ಬಂದಿಹುದೆಂದು
ನಾರಿಯರೆಲ್ಲರು ಹಾಸ್ಯವ ಮಾಳ್ಪರು
ಸಾರುತ ವನಗಳ ಚರಿಸೆಂದು |೩|

ಬೆದರದೆ ತೆರೆ ಕದ ಸುದತಿಮಣಿಯೆ ನಾ
ಬದಲೊಂದು ನಾಮವ ಪೇಳುವೆನು
ಬುಧ ಜನರೆಲ್ಲರು ಭಕುತಿಲಿ ಸ್ಥಾಣು-
ವೆನ್ನುತ ನಾಮವ ಕೊಂಡಾಡುವರು |೪|

ಬೂಟಾಟಿಕೆ ಮಾತುಗಳನ್ನ ಏತಕೆ
ಸಾಟಿಯಾರು ಜಗದೊಳಗಿನ್ನು
ಮೋಟುಮರಕೆ ಸ್ಥಾಣುವೆನ್ನುತ ಕರೆವರು
ಈ ಪೃಥ್ವಿಯ ಮೇಲಿನ ಜನರು |೫|

ಬಿಸುಜಮುಖಿಯೆ ಇನ್ನೊಂದು ಪೆಸರು ಕೇಳೆ
ಪಶುಪತಿಯೆಂದು ಕರೆವರೆನ್ನ
ವಸುಧೆಯ ಮೇಲಿನ ಪೆಸರುಗಳಿಗೆ ನೀ
ಪ್ರತಿಯಾಗರ್ಥವ ಕಲ್ಪಿಸುವಿ |೬|

ವೃಷಭರಾಜ ನೀನಾದರೆ ಮುಂದಕೆ
ಪಶುಗಳ ಮಂದೆಗೆ ತೆರಳುವುದು
ಕುಸುಮಗಂಧಿಯರ ಸದನದಿ ಕಾರ್ಯವು
ವೃಷಭರಾಜಗಿಲ್ಲವು ಕೇಳೌ |೭|

ಶೀಲವಾಣಿಯೆ ಸುಶೀಲೆಯೆ ಎನ್ನಯ
ವಾಣಿ ಕೇಳಿ ಕದವನು ತೆಗಿಯೆ
ಪೇಳುವೆ ಮತ್ತೊಂದು ನಾಮವ ಎನ್ನನು
ಶೂಲಿ ಎಂದು ಕರೆವರು ಜನರು |೮|

ಶೂಲಿಯಾದರೆ ನಿನ್ನ ಬಾಧೆಯ ಕಳೆಯಲು
ಯಾರಿಗೆ ಸಾಧ್ಯವು ಜಗದೊಳಗೆ
ನಾರಿಯರಿಗೆ ಹೇಳದೆ ಮುಂದಕೆ ನಡೆ
ಶೂರರಾದ ವೈದ್ಯರ ಬಳಿಗೆ |೯|

ಕರಿಯ ಮುಖನ ಮಾತೆಯೆ ತಡಮಾಡದೆ
ಕನಕಮಯದ ಕದ ತೆರೆ ಬೇಗ
ಕಮಲನಾಭ ವಿಠ್ಠಲನನು ಪಾಡುತ
ಶಿವನ ನಮಿಸಿ ತೆಗೆದಳು ಕದವ |೧೦|

ಮುಂದಿನ ಬಾರಿ ಜೀವಮ್ಮನವರ ದೀರ್ಘ ಕೃತಿಗಳ ವಿವರ ತಿಳಿಯೋಣ

2 thoughts on “ನಿಡಗುರಕಿ ಜೀವೂಬಾಯಿಯವರ ಚರಿತ್ರೆ – ಭಾಗ ೨”

 1. Bhavani Kulkarni says:

  Waiting for next post, please do it as soon as possible 🙏

  1. ksraghavendranavada says:

   HI ma,
   next part is added pls check and give feedback

Leave a Reply

Your email address will not be published. Required fields are marked *

Related Post

Badukina putagalu

ಬದುಕಿನ ಪುಟಗಳು ಭಾಗ – 3ಬದುಕಿನ ಪುಟಗಳು ಭಾಗ – 3

ನಮ್ಮ ಬದುಕು ಒಂದು ಪುಸ್ತಕವಿದ್ದಂತೆ. ಅದನ್ನು ಯಾರೆಲ್ಲಾ ಓದಬಹುದು ಎಂಬುದನ್ನು ನಾವೇ ನಿರ್ಧರಿಸಬೇಕಾಗುವುದು. ಪುಸ್ತಕದ ಪುಟಗಳು ಮಗುಚಿದಂತೆಲ್ಲಾ ಅನುಭವಗಳು ಬರೆಯಲ್ಪಡುತ್ತವೆ. ಒಳಮನಸ್ಸು ಎಲ್ಲವನ್ನೂ ದಾಖಲಿಸುತ್ತಾ ಹೋಗುತ್ತದೆ. ಕೆಲವು ಒಳ್ಳೆಯ ಹಾಗೂ ಸಂತೋಷದ ಸಂಗತಿಗಳು, ಘಟನೆಗಳು. ಕೆಲವು ಅಹಿತಕರವಾದ ದಾಖಲೆಗಳು. ಸಂತೋಷದ ಘಟನೆಗಳನ್ನು ನಮ್ಮ ಬದುಕಿನ ಪುಸ್ತಕದ ಪುಟಗಳನ್ನು ಮತ್ತೆ

ನಿಡಗುರಕಿ ಜೀವೂಬಾಯಿ – ಕೊನೆಯ ಅಧ್ಯಾಯನಿಡಗುರಕಿ ಜೀವೂಬಾಯಿ – ಕೊನೆಯ ಅಧ್ಯಾಯ

ನಿಡಗುರಕಿ ಜೀವೂಬಾಯಿ – ಕೊನೆಯ ಅಧ್ಯಾಯ ಜೀವಮ್ಮನವರ ಮುಂದಿನ ದೀರ್ಘಕೃತಿ “ಶ್ರೀ ಹರಿ ಮಾನಸ ಪೂಜ” ಎಂಬುದಾಗಿದೆ. ಹಿಂದಿನ ನಾಲ್ಕು ಕೃತಿಗಳಿಗಿಂತ ಭಿನ್ನವಾಗಿ ಈ ರಚನೆಯು ಉದ್ದುದ್ದ ಸಾಲುಗಳ ಸಾಹಿತ್ಯದಿಂದ ರಚಿತವಾಗಿದೆ. ಪ್ರಾರಂಭದಲ್ಲಿಯೇ ಪ್ರಾತಃ ವಿಧಿಗಳಾದ ವಿಧಿಪೂರ್ವಕ ಕರ್ಮಗಳನ್ನು ಮುಗಿಸಿ, ನದಿಯಲ್ಲಿ ಸ್ನಾನ ಮಾಡುತ್ತಾ, ಶ್ರೀಹರಿಯನ್ನು ನೆನೆಯುತ್ತಾ, ಸುರರು

ದಾಸ ಸಾಹಿತ್ಯ

ದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ :ದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ :

ಪ್ರವೇಶ ದಾಸರೆಂದರೆ ಭಗವಂತನ ಭಕ್ತರೆಂದರ್ಥವಾಗುವುದು. ದಾಸ ಸಾಹಿತ್ಯ ಯಾವ ಶತಮಾನದಲ್ಲಿ ಹೇಗೆ ಪ್ರಾರಂಭವಾಯಿತು ಎಂದು ಹೇಳುವುದು ಸ್ವಲ್ಪ ಕಷ್ಟವೇ. ಭಗವದ್ಗೀತೆಯಲ್ಲಿಯೇ ಶ್ರೀಕೃಷ್ಣನು ತನ್ನನ್ನು ಆರಾಧಿಸುತ್ತಾ, ಗಾಯನ ಮಾಡಿ ನರ್ತಿಸುವರು ಎಂದು ಉಲ್ಲೇಖಿಸಿರುವನು. ತುಂಬುರು, ನಾರದರು, ಯಕ್ಷರು, ಕಿನ್ನರರು, ಗಂಧರ್ವರು ಮುಂತಾದ ದೇವತಾವರ್ಗದವರೇ ಭಗವಂತನನ್ನು ಸ್ತುತಿಸಿ, ಪ್ರಾರ್ಥಿಸಿ, ಹಾಡಿ, ನರ್ತಿಸುತ್ತಿದ್ದರು.