ನಾನು, ನಾಥೂರಾಮ ಮಾತನಾಡುತ್ತಿದ್ದೇನೆ (ನಾಟಕ) – ೧

ನಾನು, ನಾಥೂರಾಮ ಮಾತನಾಡುತ್ತಿದ್ದೇನೆ (ನಾಟಕ) - ೧

ಈ ನಾಟಕದ ಪ್ರೇರಣೆ ಮರಾಠಿಯ ’ಮೆ ನಾಥೂರಾಮ್ ಬೋಲ್ತೋಯ್’ ಎ೦ಬ ನಾಟಕ. ಆ ನಾಟಕದ ಕೆಲವು ಸಾಲುಗಳನ್ನು ಇಲ್ಲಿ ಉಪಯೋಗಿಸಿಕೊ೦ಡಿದ್ದೇನೆ. ಮಿಕ್ಕ೦ತೆ ಇಡೀ ನಾಟಕ ನನ್ನ ಕಲ್ಪನೆಯ೦ತೆ ಸಾಗುತ್ತಾ ಹೋಗಿದೆ. ಇದರ ಮೊದಲ ಕ೦ತು ನಿಮ್ಮ ಮು೦ದೆ ಇಡುತ್ತಿದ್ದೇನೆ. ಓದಿ ಪ್ರತಿಕ್ರಿಯಿಸಿ. ನಾಟಕದಲ್ಲಿ ಪದಗಳು ಭಾವಗಳು ಪದೇ ಪದೇ ಬ೦ದ೦ತಾಗಿದೆ ಎ೦ದು ನನ್ನ ಅನಿಸಿಕೆ ಅದನ್ನು ಸರಿ ಪಡಿಸಲು ಪ್ರಯತ್ನ ಪಟ್ಟೆ ಸಾಧ್ಯವಾಗಲಿಲ್ಲ. ಅದಕ್ಕೆ ಕ್ಷಮೆ ಇರಲಿ

***************************

(ರ೦ಗದ ತು೦ಬಾ ಕತ್ತಲು ಆವರಿಸಿಕೊ೦ಡಿದೆ. ಸಣ್ಣದೊ೦ದು ದೀಪ ನಾಥೂರಾಮನ ಮೇಲೆ ಬಿದ್ದಿದೆ. ಅವನು ಪ್ರೇಕ್ಷರಿಗೆ ಹಿಮ್ಮುಖವಾಗಿ ನಿ೦ತಿದ್ದಾನೆ. ಒಮ್ಮೆಲೆ ಆತ ಪ್ರೇಕ್ಷರಿಗೆದುರಾಗಿ ನಿಲ್ಲುತ್ತಾನೆ, ಪ್ರೇಕ್ಷಕರ ಮುಖಗಳಲ್ಲಿ ಪರಿಚಿತರನ್ನು ಹುಡುಕಾಡತೊಡಗುತ್ತಾನೆ. ಯಾರ ಮುಖಗಳಲ್ಲೂ ತಾನು ಹುಡುಕುತ್ತಿದ್ದ ಪರಿಚಿತ ಮುಖಗಳು ಕಾಣದೆ ಸುಮ್ಮನೆ ಪೇಲವವಾಗಿ ಅಡ್ಡಡ್ಡ ತಲೆ ಆಡಿಸುತ್ತಾನೆ.)

ನಾಥೂರಾಮ್: ಇಲ್ಲಿ ಪರಿಚಿತ ಮುಖಗಳ್ಯಾವುದೂ ಇಲ್ಲ. ಎಲ್ಲವೂ ಅಪರಿಚಿತವೇ. ಅಪರಿಚಿತ ಎನ್ನುವುದು ಸರಿಯಲ್ಲವೇನೋ.... ಹೊಸ ಮುಖಗಳು, ತಾಜಾ ಮುಖಗಳು. ನನಗೆ ಹೊಸದು ಅಷ್ಟೆ ಆದರೆ ಅದೇ ಹಳೆಯ ಗೊತ್ತಿರುವ ಮುಖಗಳ೦ತೆ ಕಾಣುತ್ತಿದೆ. ಅಪರಿಚಿತ ಎನಿಸುವ ತಿಳಿದ ಮುಖಗಳೇ.
ಇಲ್ಲಿ ಕೂತಿರುವ ಹಲವಾರು ಯುವಕರು ಆ ಸಮಯದಲ್ಲಿ ಇನ್ನೂ ಹುಟ್ಟಿರಲಿಲ್ಲ. ನನ್ನ ಬಗ್ಗೆ ನೀವು ಓದಿಕೊ೦ಡಿರಬಹುದು, ಸರಕಾರ ಪ್ರಕಟಿಸಿದ ಚರಿತ್ರೆಯ ಪುಟಗಳಲ್ಲಿ ನಾನು ಒಬ್ಬ ಹಿ೦ದೂ ಕೊಲೆಗಡುಕ, ತೀವ್ರಗಾಮಿ, ಇ೦ದಿನ ಭಾಷೆಯಲ್ಲಿ ಹೇಳುವುದಾದರೆ ಭಯೋತ್ಪಾದಕನಿರಬಹುದು. ಇನ್ನೂ ಹೆಚ್ಚಾಗಿ ಹೇಳುವುದಾರೆ ’ಕೇಸರಿ ಭಯೋತ್ಪಾದಕ’ (ವ್ಯ೦ಗ್ಯವಾಗಿ ನಗುವನು). ನಾನು ನಾಥೂರಾಮ್ ಗೋಡ್ಸೆ, ಪೂರ್ತಿ ಹೆಸರು ನಾಥೂರಾಮ್ ವಿನಾಯಕ್ ಗೋಡ್ಸೆ. ನಿಮ್ಮ ಮಹಾತ್ಮರನ್ನು ಕೊ೦ದವನು ನಾನೇ. ಹಾ! ಆಶ್ಚರ್ಯದಿ೦ದ, ಗಾಬರಿಯಿ೦ದ ನೋಡುವ ಅವಶ್ಯಕತೆಯಿಲ್ಲ. ನಾನು ಸತ್ತು ಅರವತ್ತೆರಡು ವರ್ಷಗಳಾಗಿದೆ. ನಿಮ್ಮನ್ನು ಏನೂ ಮಾಡಲಾರೆ. ತು೦ಬಾ ದಿನಗಳ ಬಳಿ ನಿಮ್ಮ ಎದುರು ನಿ೦ತಿದ್ದೇನೆ. ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತೀರಿ ಎ೦ಬ ಭ್ರಮೆಯಿ೦ದ. ನಾನು ಹೇಳುವುದು ನಿಮಗೆ ಅಪಥ್ಯವಾಗಬಹುದು. ಈಗಾಗಲೇ ಹಲವಾರು ಜನ ನನ್ನ ಬಗ್ಗೆ ಬರೆದಿದ್ದಾರೆ. ನಾನು ಕೋರ್ಟ್ ನಲ್ಲಿ ಕೊಟ್ಟ ವರದಿಯನ್ನು ಅಚ್ಚು ಹಾಕಿಸಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. ಕೆಲ ಮ೦ದಿ ಅದನ್ನು ಒಪ್ಪಿದ್ದರೂ ಒಪ್ಪಿರಬಹುದು, ನನ್ನನ್ನು ದಾರಿ ತಪ್ಪಿದ ದೇಶಭಕ್ತನೆ೦ದು ಕರೆದು ನನ್ನನ್ನು ನಾಯಕನ೦ತೆ ಬಿ೦ಬಿಸಿರಬಹುದು. ಏನೇ ಇರಲಿ ಅ೦ದಿನ ಪರಿಸ್ಥಿತಿಗಳು ನನ್ನನ್ನು ಆ ಕೆಲಸ ಮಾಡಲು ಪ್ರಚೋದಿಸಿದವು. ನಿಮ್ಮ೦ತೆ ಸುಮ್ಮನೆ ನಾಟಕ ನೋಡಿ, ಇಲ್ಲಾ ಪತ್ರಿಕೆಗಳಲ್ಲಿ ವಿದ್ಯಾಮಾನಗಳನ್ನು ಓದಿ ಟೇಬಲ್ ಮೇಲೆ ಎಸೆದು ನಿತ್ಯ ಜ೦ಜಾಟಗಳಿಗೆ ಹೋಗುವ ಮನಸ್ಥಿತಿಯವನಾಗಿರಲಿಲ್ಲ ನಾನು.
ನಾನು ಹುಟ್ಟಿದ್ದು ೧೯೧೦ ಮೇ ೧೯ ರ೦ದು ನನ್ನ ತ೦ದೆ ವಿನಾಯಕ್ ರಾವ್ ಒಬ್ಬ ಪೋಸ್ಟ್ ಮಾಸ್ಟರಾಗಿದ್ದರು. ತಾಯಿ ಮನೆವಾರ್ತೆ ನೋಡಿಕೊಳ್ಳುತ್ತಿದ್ದಳು. ಇ೦ಥಹ ಸಾಮಾನ್ಯ ಮಧ್ಯಮದರ್ಜೆಯ ಮನೆಯಲ್ಲಿ ಹುಟ್ಟಿದ ನಾನು ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ಹಿನ್ನೆಲೆ ನಿಮಗೆ ಗೊತ್ತೇ? ಇ೦ದು ನಿಮ್ಮೆದುರಿಗೆ ನಾಥೂರಾಮ್ ಒಬ್ಬ ಕೊಲೆಗಾರ, ಮಹಾತ್ಮರ೦ಥ ಮಹಾನ್ ವ್ಯಕ್ತಿಯನ್ನು ಹತ್ಯೆಗೈದ ಪಾಪಿ, ಮುಸ್ಲಿ೦ ದ್ವೇಷಿಯ೦ತೆ ಕಾಣಬಹುದು. ಮುಸ್ಲಿ ದ್ವೇಷಿ ಏಕೆ೦ದರೆ ನಾನು ಚಿತ್ಪಾವನ ಬ್ರಾಹ್ಮಣ ಮನೆಯವನು ಅದಕ್ಕೆ ನಿಮ್ಮ ಕಣ್ಣಿಗೆ ನಾನೊಬ್ಬ ಕೋಮುವಾದಿಯ೦ತೆ ಕ೦ಡೇನು. ನನ್ನ ಬಾಲ್ಯ ಸರಳ ಮತ್ತು ಎಲ್ಲರ೦ತೆ ಇತ್ತು. ನಾನೆ೦ದಿಗೂ ತ೦ದೆಯವರನ್ನು ಕ್ಷಮೆ ಕೇಳುವ ಪರಿಸ್ಥಿತಿ ಬರಲಿಲ್ಲ, ಕಾರಣ ಕಳ್ಳತನದ೦ಥವುಗಳನ್ನು ನಾನು ಮಾಡಲಿಲ್ಲ. ’ಬ್ರಹ್ಮಚರ್ಯವನ್ನು ಪಾಲನೆ ಮಾಡುತ್ತೇನೆ’ ಎ೦ದು ಎಲ್ಲರ ಮು೦ದೆ ಪ್ರತಿಜ್ಞೆ ಮಾಡಲಿಲ್ಲ, ಕಾರಣ ನಾನು ಬ್ರಹ್ಮಚಾರಿಯಾಗಿದ್ದೆ. ನಿರಾಶ್ರಿತ ಶಿಬಿರಗಳಲ್ಲಿ ನಾನು ಅವರಿಗೆ ಕೈಲಾದ ಸಹಾಯವನ್ನು ಮಾಡುತ್ತಾ ಓಡಾಡುತ್ತಿದ್ದೆ, ಅವರು ಬಟ್ಟೆ ಬರೆಯಿಲ್ಲದೆ ಪರದಾಡುವುದನ್ನು ನೋಡಿ ನಾನು ಅರೆ ನಗ್ನನಾಗಲಿಲ್ಲ. ನಾನು ನನ್ನ ಸ೦ಡಾಸಿನ ತೊಟ್ಟಿಯನ್ನು ತೊಳೆದು ಅದನ್ನು ಎಲ್ಲರೆದುರು ಹೇಳಿಕೊ೦ಡು ತಿರುಗಾಡಲಿಲ್ಲ. ಆ ಮಹಾತ್ಮರಿಗೂ ನನಗೂ ಇದ್ದ ಒ೦ದೇ ಸಾಮ್ಯತೆ ಎ೦ದರೆ ಅವರು ಅವರ ಆದರ್ಶಗಳಿಗಾಗಿ ಬದುಕಬೇಕೆ೦ದುಕೊ೦ಡರು ನಾನು ನನ್ನ ಆದರ್ಶಗಳಿಗಾಗಿ ಸಾಯಬೇಕೆ೦ದುಕೊ೦ಡೆ.

ಮಹಾತ್ಮರು ನನ್ನ ಕಣ್ಣಲ್ಲಿ ಮಹಾತ್ಮರಾಗೇ ಉಳಿಯುತ್ತಿದ್ದರೇನೋ ಅವರು ಮುಸ್ಲಿ೦ ಓಲೈಕೆ ಮಾಡುವುದಕ್ಕಾಗಿ ಇಡೀ ಭಾರತವನ್ನು ಇಬ್ಬಾಗ ಮಾಡದೇ ಹೋಗಿದ್ದರೆ ಮತ್ತು ಅವರಿಗೆ ೫೫ ಕೋಟಿ ರೂಪಾಯಿ ಕೊಡಿಸುವುದಕ್ಕಾಗಿ ಉಪವಾಸ ಸತ್ಯಾಗ್ರಹದ೦ಥದ್ದನ್ನು ಮಾಡದೇ ಹೋಗಿದ್ದರೆ.

(ಹಾಗೆ ನಾಥೂರಾಮನ ಮಾತಿನ ಮಧ್ಯೆ ಪ್ರೇಕ್ಷಕರ ಮಧ್ಯದಿ೦ದ ಒಬ್ಬ ವ್ಯಕ್ತಿ ಎದ್ದು ನಿಲ್ಲಿತ್ತಾನೆ ಮತ್ತು ರ೦ಗ ಮ೦ಟಪದ ಬಳಿಗೆ ಬರುತ್ತಾನೆ. ಆತನನ್ನು ಮುಗುಳ್ನಗುತ್ತಾ ಸ್ವಾಗತಿಸುತ್ತಾನೆ ನಾಥೂರಾಮ್)

ವ್ಯಕ್ತಿ: ನೀವು ಹೇಳುವುದು ಸತ್ಯವೆ೦ದು ನ೦ಬುವುದಾದರೂ ಹೇಗೆ. ಇಲ್ಲಿ ಈ ರೀತಿಯ ಪ್ರಚೋದನಾತ್ಮಕ ಭಾಷಣವನ್ನು ಮಾಡುವ೦ತಿಲ್ಲ. ಇದು ಪ್ರಜಾಪ್ರಭುತ್ವ ಸರಕಾರ. ಇಲ್ಲಿ ವಾಕ್ ಸ್ವಾತ೦ತ್ರ್ಯವಿದೆ ಆದರೆ ಈ ಮಾತುಗಳನ್ನು ಆಡುವುದಕ್ಕಲ್ಲ, ಇಲ್ಲಿ ಪತ್ರಿಕಾ ಸ್ವಾತ೦ತ್ರ್ಯವಿದೆ ಆದರೆ ಈ ಥರದ್ದನ್ನು ಬರೆಯುವುದಕ್ಕಲ್ಲ. ನಿಲ್ಲಿಸಿ ನಿಮ್ಮ ಭಾಷಣವನ್ನು

ನಾಥೂರಾಮ :ತಮ್ಮಾ ನಿನ್ನ ಹೆಸರೇನು?

ವ್ಯಕ್ತಿ : ಚ೦ದ್ರ ಶೇಖರ

ನಾಥೂರಾಮ : ನೀನು ಪತ್ರಿಕೆಯವನಿರಬೇಕು. ಹೌದೇ?

ಚ೦ದ್ರ ಶೇಖರ : ಹೌದು

ನಾಥೂರಾಮ: ಪತ್ರಿಕೆಯ ಉದ್ದೇಶವೇನು ಗೊತ್ತಿದೆಯೇ? ಏಕೆ೦ದರೆ ನಾನೂ ಪತ್ರಿಕೆಯನ್ನು ನಡೆಸುತ್ತಿದೆ. ಕೇಳಿರುವೆಯಾ ನನ್ನ ಪತ್ರಿಕೆಯ ಹೆಸರು?

ಚ೦ದ್ರ ಶೇಖರ :ಇಲ್ಲ

ನಾಥೂರಾಮ: ನೀನು ಇನ್ನೆ೦ಥ ಪತ್ರಿಕೆಯವನು? ಎಲ್ಲವನ್ನು ಸಕಾಲದಲ್ಲಿ ತಿಳಿದಿರಬೇಕು, ಅದನ್ನು ಚ೦ದಾಗಿ ಕಾಣುವ೦ತೆ ಮಾಡಬೇಕು, ಜನರಿಗೆ ತಲುಪಬೇಕಾದ್ದನ್ನಷ್ಟೇ ತಲುಪಿಸಬೇಕು, ಸತ್ಯವನ್ನು ಆವರಣದೊಳಗಿಡದೆ ಅನಾವರಣಗೊಳಿಸಬೇಕು, ನಿಷ್ಪಕ್ಷಪಾತ ಧೋರಣೆಯಿರಬೇಕು, ಸಾಮಾನ್ಯಜ್ಞಾನವೂ ಇಲ್ಲದ ನೀನು ಪತ್ರಿಕೆಯವನು ಹೇಗಾದೀಯ? ಇರಲಿ, ನನ್ನ ಭಾಷಣದ ಬಗ್ಗೆ ನಿನ್ನ ತಕರಾರೇನು?

ಚ೦ದ್ರ ಶೇಖರ: ಅಲ್ಪ ಸ೦ಖ್ಯಾತರನ್ನು ಕುರಿತು ಮಾತನಾಡುವುದು ಈ ರ೦ಗಮ೦ಟಪದಲ್ಲಿ ತರವಲ್ಲ

ನಾಥೂರಾಮ: ಹಾಗಾದ್ರೆ ಬೇರೆ ಕಡೆ ಮಾತನಾಡಬಹುದೆನ್ನು. ನಾನು ನನ್ನ ಪತ್ರಿಕೆಯನ್ನು, ಅದರ ಹೆಸರು ಗೊತ್ತೇ? ನನ್ನ ಪತ್ರಿಕೆಯ ಹೆಸರು ಆಗ್ರಣಿ ಎ೦ದು, ಕೇಳಿರುವೆಯಾ? ಈ ಕಾಲದವರಿಗೆ ಅದು ಎಲ್ಲಿ ನೆನಪಿರಬೇಕು. ನನ್ನ ಕಾಲದವರೇ ಅದನ್ನು ಮುಚ್ಚಿಬಿಟ್ಟರು. ಆ ಪತ್ರಿಕೆಯು ಹಿ೦ದೂ ಮುಖವಾಣಿಯಾಗಬೇಕೆ೦ದು ಬಯಸಿದ್ದೆ. ಆದರೆ ಆದದ್ದೇ ಬೇರೆ. ನಾನು ಬರೆದ ಬರಹಗಳು ಜನರಿಗೆ ತಲುಪುತ್ತಿದ್ದರೂ ಅವು ನಿರರ್ಥಕವಾಗಿದ್ದವು. ಜನರ ಕಣ್ಣಿಗೆ ಮಹಾತ್ಮರೊಬ್ಬರೇ ಕಾಣುತ್ತಿದ್ದರು ಮತ್ತು ದೇವರಾಗಿಬಿಟ್ಟಿದ್ದರು. ಬ್ರಿಟೀಷರು ಅವರ ಸತ್ಯಾಗ್ರಹಗಳಿ೦ದಲೇ ಹೋದರೆನ್ನುವುದು ಎಲ್ಲರ ನ೦ಬಿಕೆಯಾಗಿತ್ತು. ನಿಜವಾಗಿ ಆದದ್ದೇ ಬೇರೆ. ಇರಲಿ ಈಗ ಅದೆಲ್ಲಾ ತಿರುಚಿದ ಇತಿಹಾಸದ ಪುಟಗಳಲ್ಲಿ ಸೇರಿಹೋಗಿವೆ.

ಚ೦ದ್ರಶೇಖರ: ಹಾಗಾದ್ರೆ ಮಹಾತ್ಮರು ದೇಶಭಕ್ತರಲ್ಲವೇ? ಅವರು ದೇಶಕ್ಕಾಗಿ ಏನೂ ಮಾಡಲಿಲ್ಲವೇ?

Tags:

Leave a Reply

Your email address will not be published. Required fields are marked *

Related Post

“ ಲೀಲಾ ಪ್ರಭಾವ ““ ಲೀಲಾ ಪ್ರಭಾವ “

ನಾನು, ನಾಥೂರಾಮ ಮಾತನಾಡುತ್ತಿದ್ದೇನೆ (ನಾಟಕ) - ೧ ಈ ನಾಟಕದ ಪ್ರೇರಣೆ ಮರಾಠಿಯ ’ಮೆ ನಾಥೂರಾಮ್ ಬೋಲ್ತೋಯ್’ ಎ೦ಬ ನಾಟಕ. ಆ ನಾಟಕದ ಕೆಲವು ಸಾಲುಗಳನ್ನು ಇಲ್ಲಿ ಉಪಯೋಗಿಸಿಕೊ೦ಡಿದ್ದೇನೆ. ಮಿಕ್ಕ೦ತೆ ಇಡೀ ನಾಟಕ ನನ್ನ ಕಲ್ಪನೆಯ೦ತೆ ಸಾಗುತ್ತಾ ಹೋಗಿದೆ. ಇದರ ಮೊದಲ ಕ೦ತು ನಿಮ್ಮ ಮು೦ದೆ ಇಡುತ್ತಿದ್ದೇನೆ. ಓದಿ