ದಾನಿಯಲ್ ಖಾರ್ಮ್ಸ್ ನ ಮೂರು ಕತೆಗಳ ಭಾವಾನುವಾದ

ರಷಿಯಾದ ಕತೆಗಾರ ದಾನಿಯಲ್ ಖಾರ್ಮ್ಸ್ ನ ‘ ಟುಡೇ ಐ ರೋಟ್ ನಥಿ೦ಗ್ ‘ ಎನ್ನುವ ಕಥಾ ಸಂಕಲನದ  ಮೂರು ಕತೆಗಳನ್ನು ಕನ್ನಡಕ್ಕೆ ಭಾವಾನುವಾದ

ಮಾಡುವುದೇನು

ಒಂದು ದಿನ ಝೂಂಡ ಗುರುಗಳು ಏನನ್ನೂ ಮಾಡಲಿಲ್ಲ. ಗುರುಗಳನ್ನು ನೋಡಲು ಯಾವುದೇ ಶಿಸ್ಯರು ಬರಲಿಲ್ಲ . ಗುರುಗಳು ಸಹ ಶಿಸ್ಯರನ್ನು ನೋಡಲು ಹೋಗಲಿಲ್ಲ . ಗುರುಗಳಿಗೆ ಪೆನ್ನು ಹಾಳೆ ಮತ್ತು ಪುಸ್ತಕ ಸಿಗದೇ ಇದ್ದ ಕಾರಣ ಅವರು ಏನನ್ನೂ ಬರೆಯಲಿಲ್ಲ ಹಾಗೂ ಓದಲಿಲ್ಲ . ಮಾಡಲಿಕ್ಕೆ ಏನು ಇರದ ಕಾರಣ ಇನ್ಯಾವದನ್ನು ಮಾಡಲಿಲ್ಲ. ಏನನ್ನೂ ಮಾಡಲಿಕ್ಕಿರದ , ಯಾರೊಟ್ಟಿಗೂ ಇರದ ಕಾರಣ ಗುರುಗಳಿಗೆ ವಿಚಾರವನ್ನು ಮಾಡಬೇಕಾದ ಪ್ರಸಂಗ ಬರಲಿಲ್ಲ ಹಾಗೂ ಏನನ್ನು ವಿಚಾರ ಮಾಡದ ಕಾರಣದಿಂದ ಗುರುಗಳಿಗೆ ಸಂತೋಷವಾಗಲಿ ದುಃಖವಾಗಲಿ ಆಗಲಿಲ್ಲ.

ಗುರುಗಳು ಏನನ್ನು ಮಾಡದೆ ಇದ್ದುದರಿಂದ , ಗುರುಗಳು ಏನು ಮಾಡಿದರು ಎನ್ನುವದರ ಕುರಿತು ಝೂಂಡ ಶಿಸ್ಯರಲ್ಲಿ ಭಿನ್ನಭಿಪ್ರಾಯ ಹುಟ್ಟಿತು. ಗುರುಗಳು ಏನನ್ನು ಮಾಡಿರಬಹುದು ಎಂದು ಝೂಂಡ ಶಿಸ್ಯರು ಹಲವಾರು ವಿಧವಾಗಿ , ಹಲವಾರು ಕೋನಗಳಿಂದ ಚರ್ಚೆ ಮಾಡಿದರು . ಗುರುಗಳೊಟ್ಟಿಗೆ ಏನೂ ನಡೆಯದ ಕಾರಣ ಹಾಗೂ ಏನನ್ನೂ ಮಾಡದಿರುವುದರ ಚರ್ಚೆ ಮಾಡುತ್ತಿರುವದರಿಂದ ಕ್ರಮೇಣ ಶಿಸ್ಯರಿಗೆ ಯಾವ ವಿಷಯದ ಕುರಿತು ಚರ್ಚೆ ಮಾಡಬೇಕು ಎನ್ನುವದೇ ಮರೆತು ಹೋಯಿತು .

ದಯವಿಟ್ಟು ನಿಮಗೆ ಯಾರಾದರೂ ಒಂದಷ್ಟು ಜನ ವಿಷಯವಿಲ್ಲದೆ ಚರ್ಚೆ ಮಾಡುತ್ತಿದರೆ ಅವರಿಗೆ ಜ್ಞಾಪಿಸಿ ‘ ಗುರುಗಳು ಏನನ್ನು ಮಾಡದೆ ಇದ್ದುದರಿಂದ ಹಾಗೂ ಏನನ್ನು ಮಾಡದಿರುವ ಕಾರಣ ಏನು ಮಾಡಿದರು ಎಂದು ಚರ್ಚಿಸಲು ಕಾರಣವಿಲ್ಲ “

ವೇಷ

ಹದಿನಾರನೆಯ ಝೂಂಡ ಶಿಷ್ಯ ಬಡಗಿಯಾಗಿದ್ದರಿಂದ ಅವನಿಗೆ ಕಾರ್ಪೆಂಟರ್ ಶಿಷ್ಯ ಎಂದೂ ಕರೆಯುತ್ತಿದ್ದರು .
ಒಮ್ಮೆ ಹದಿನಾರನೆಯ ಝೂಂಡ ಶಿಷ್ಯ ಮರದ ಕೆಲಸಕ್ಕೆ ಪ್ಲಾಸ್ಟರ್ ತರಲು ಗಾಂಧಿ ಬಜಾರಿನ ಕಡೆಗೆ ಹೊರಟನು . ಗಾಂಧಿ ಬಜಾರಿನ ರಸ್ತೆಗಳು ಹಿಂದಿನ ದಿನ ಸುರಿದ ಅತಿಯಾದ ಮಳೆಯಿಂದ ಎಷ್ಟು ತೇವವಾಗಿದ್ದವು ಎಂದರೆ ಕಾರ್ಪೆಂಟರ್ ಶಿಷ್ಯ ಗಾಂಧಿ ಬಜಾರಿನ ಸರ್ಕಲ್ ಬಳಿ ಕಾಲು ಜಾರಿ ಬಿದ್ದು ಮೂಗಿಗೆ ಗಾಯ ಮಾಡಿಕೊಂಡನು . ತಥ್ ! ಎಂದು ಗೊಣಗುತ್ತ ಕಾರ್ಪೆಂಟರ್ ಶಿಷ್ಯ ಮೇಲೆದ್ದು ಮರದ ಕೆಲಸಕ್ಕೆ ಪ್ಲಾಸ್ಟರ್ ತರುವ ಅಂಗಡಿಯ ಬದಲು ಔಷಧ ಅಂಗಡಿಯಲ್ಲಿ ಪ್ಲಾಸ್ಟರ್ ತೆಗೆದುಕೊಂಡು ಮೂಗಿನ ತುದಿಗೆ ಹಚ್ಚಿಕೊಂಡು ಮರಳಿ ಹೊರಟನು . ಆದರೆ ಅಷ್ಟರಲ್ಲಾಗಲೇ ಮನೆಯ ಹತ್ತಿರ ಸುರಿದ ಭಾರಿ ಮಳೆಯಿಂದ ಮನೆಯ ರಸ್ತೆಗಳೆಲ್ಲ ಜಾರುತ್ತಿದ್ದವು ಹಾಗೂ ಹದಿನಾರನೆಯ ಝೂಂಡ ಶಿಷ್ಯ ಮತ್ತೆ ಕಾಲು ಜಾರಿ ಬಿದ್ದ . ಈ ಬಾರಿ ಕೆನ್ನೆಯ ಮೇಲೆಲ್ಲ ತರಚು ಗಾಯವಾದ್ದರಿಂದ ಒಹ್ ! ಎನ್ನುತ್ತಾ ಮೇಲೆದ್ದ ಶಿಷ್ಯ ಮತ್ತೆ ಮರದ ಕೆಲಸಕ್ಕೆ ಪ್ಲಾಸ್ಟರ್ ತರುವ ಅಂಗಡಿಯ ವಿಷಯವನ್ನೇ ಮರೆತು ಔಷಧ ಅಂಗಡಿಯಲ್ಲಿ ಪ್ಲಾಸ್ಟರ್ ತೆಗೆದು ಕೆನ್ನೆಯ ಮೇಲೆಲ್ಲ ಹಚ್ಚಿಕೊಂಡನು . ಆದರೆ ಇದೇ ಘಟನೆ ಹಲವಾರು ಸಲ ಪುನರಾವರ್ತನೆ ಆದುದರಿಂದ ಬೇಸರಗೊಂಡ ಔಷಧ ಅಂಗಡಿಯವನು ಶಿಷ್ಯ ಪದೇ ಪದೇ ಬೀಳುತ್ತಿರುದರಿಂದ ಅವನು ಒಂದು ದೊಡ್ಡ ಪ್ಲಾಸ್ಟರ್ ಸುರುಳಿಯನ್ನು ಕೊಳ್ಳಬೇಕೆಂದು ಆಗ್ರಹಿಸಿದ . ಆದರೆ ಇದು ಝೂಂಡ ಸಿಸ್ಯನನ್ನು ಎಷ್ಟು ಕೆರಳಿಸಿತು ಎಂದರೆ ಅವನು ಏರು ದನಿಯಲ್ಲಿ ತಾನು ಮರದ ಕೆಲಸಕ್ಕೆ ಪ್ಲಾಸ್ಟರ್ ತರುವ ಅಂಗಡಿಗೆ ಹೊರಟಿದ್ದಾಗಿಯೂ ಹಾಗೂ ಔಷಧ ಅಂಗಡಿಯ ವಿಚಾರ ಬಹು ಕ್ಷುಲ್ಲಕವೆಂದು ಕೂಗಾಡಿದನು. ಅಲ್ಲದೆ ಶಿಷ್ಯ ತಾನು ಇನ್ನು ಮುಂದೆ ಬೀಳುವದಕ್ಕೆ ಸಾಧ್ಯವೇ ಇಲ್ಲವೆಂದೂ ಅದನ್ನು ಔಷಧ ಅಂಗಡಿಯವನು ನಂಬಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ. ಇವೆಲ್ಲವುಗಳ ನಂತರ ಮರಳಿ ಹೊರಟ ಶಿಷ್ಯ ಸ್ವಲ್ಪ ದೂರ ಹೋಗುವಷ್ಟರಲ್ಲಿ ಮತ್ತೆ` ಜಾರಿ ಬಿದ್ದ. ಹೀಗಾಗಿ ಪುನ: ಔಷಧ ಅಂಗಡಿಯವನ ಬಳಿ ಪ್ಲಾಸ್ಟರ್ ತೆಗೆದುಕೊಂಡು ಹಚ್ಚಿ ಕೊಳ್ಳಬೇಕಾಯಿತು ಹಾಗೂ ತಾನು ಇನ್ನು ಮುಂದೆ ಬೀಳುವದಕ್ಕೆ ಸಾಧ್ಯವೇ ಇಲ್ಲವೆಂದೂ ಅದನ್ನು ಔಷಧ ಅಂಗಡಿಯವನು ನಂಬಬೇಕೆಂದು ಮತ್ತೆ ತನ್ನ ಅಭಿಪ್ರಾಯ ಮಂಡಿಸಿದ.

ಈ ಬಾರಿ ಝೂಂಡ ಶಿಷ್ಯ ಬೀಳುವದನ್ನು ತಪ್ಪಿಸಬೇಕೆಂದು ರಿಕ್ಷಾ ಹಿಡಿದು ಮನೆಗೆ ತಲುಪಿದ. ಆದರೆ ಮನೆಯಲ್ಲಿ ಅವನನ್ನು ಯಾರು ಗುರುತಿಸಲೇ ಇಲ್ಲ.
” ನಾನು ಬಡಗಿಯಾಗಿರುವ ಹದಿನಾರನೆಯ ಝೂಂಡ ಶಿಷ್ಯ ಹಾಗೂ ನನಗೆ ಕಾರ್ಪೆಂಟರ್ ಎನ್ನುತ್ತಾರೆ ” ಎಂದು ಶಿಷ್ಯ ಕೂಗಾಡಿದ
ಆದರೆ ಉಳಿದ ಶಿಷ್ಯರು ಅದನ್ನು ನಂಬಲೇ ಇಲ್ಲ ಹಾಗೂ ” ಬಡಗಿಯಾಗಿರುವ ಹದಿನಾರನೆಯ ಝೂಂಡ ಶಿಷ್ಯ ಮರಕ್ಕೆ ಪ್ಲಾಸ್ಟರ್ ಹಾಕುತ್ತಾನೆಯೆ ಹೊರತು ಮುಖಕ್ಕೆ ಅಲ್ಲ ” ಎಂದು ಬಾಗಿಲು ಹಾಕಿಕೊಂಡರು .

ಸಂಬಂಧ

೧. ಝೂಂಡ ಶಿಷ್ಯನಾದ ನಾನು ನಿನಗೆ ಬರೆದ ಪತ್ರಕ್ಕೆ ಉತ್ತರವಾಗಿ ನೀನು ನನಗೆ ಬರೆದ ಪತ್ರಕ್ಕೆ ಉತ್ತರವಾಗಿ ನಾನು ನಿನಗೆ ಈ ಪತ್ರವನ್ನು ಬರೆಯುತ್ತಿದ್ದೇನೆ .

೨. ಒಮ್ಮೆ ನಮ್ಮವನೇ ಆದ ಸಂಗೀತಗಾರ ಝೂಂಡ ಶಿಷ್ಯ ಒಂದು ಅಯಸ್ಕಾಂತದ ಜೊತೆಗೆ ಗಾಂಧೀ ಬಜಾರಿನಲ್ಲಿ ಬರುತ್ತಿರುವಾಗ ಕೆಲವು ಜನರು ಅವನ ಮೇಲೆ ಆಕ್ರಮಣ ಮಾಡಿ ಶಿಷ್ಯನ ಟೊಪ್ಪಿಯನ್ನು ಹಾರಿಸಿದರು. ಈ ಘಟನೆಯಲ್ಲಿ ಝೂಂಡ ಶಿಷ್ಯನ ಟೊಪ್ಪಿ ಎಷ್ಟು ಜೋರಾಗಿ ಹಾರಿತೆಂದರೆ ಶಿಷ್ಯ ಅದನ್ನು ಹಿಡಿಯಲು ಅಯಸ್ಕಾಂತವನ್ನು ಅಲ್ಲಿಯೇ ಬಿಟ್ಟು ಓಡ ಬೇಕಾಯಿತು

೩. ಜೋರಾಗಿ ಬೀಸಿದ ಗಾಳಿ ಶಿಷ್ಯನ ಟೊಪ್ಪಿಯನ್ನು ಆಸಿಡ್ ಮೇಲೆ ಬೀಳಿಸಿದ್ದರಿಂದ ಟೊಪ್ಪಿ ಅಲ್ಲಿಯೇ ಕರಗಿ ಹೋಯಿತು. ನಿರಾಶನಾದ ಝೂಂಡ ಶಿಷ್ಯ ವಾಪಸು ಬರುವಷ್ಟರಲ್ಲಿ , ಆಕ್ರಮಣಕಾರರು ಅವನ ಅಯಸ್ಕಾಂತದ ಜೊತೆ ಓಡಿ ಹೋಗಿದ್ದರು .

೪. ಇವೆಲ್ಲವುಗಳ ನಂತರ ಶಿಷ್ಯ ಟೊಪ್ಪಿ ಹಾಗೂ ಅಂಗಿ ಇಲ್ಲದೆ ಮನೆಗೆ ಬಂದನು , ಯಾಕೆಂದರೆ ಟೊಪ್ಪಿ ಕಳೆದು ಹೋದ ಚಿಂತೆ ಹಾಗೂ ಒತ್ತಡದಲ್ಲಿ ಅವನು ಅಂಗಿಯನ್ನು ಬಸ್ಸಿನಲ್ಲೇ ಮರೆತಿದ್ದನು .

೫. ಬಸ್ಸಿನ ಕಂಡಕ್ಟರ್ ಝೂಂಡ ಶಿಷ್ಯನ ಅಂಗಿಯನ್ನು ಮಾರ್ಕೆಟಿನಲ್ಲಿ ಅರ್ಧ ಬೆಲೆಗೆ ಮಾರಿ ,ಬಂದ ದುಡ್ಡಿನಲ್ಲಿ ಅರ್ಧ ಕಿಲೋ ಟೊಮೇಟೊ ,ಆಲುಗಡ್ಡೆ , ಈರುಳ್ಳಿ ಖರೀದಿಸಿದನು .

೬. ಕಂಡಕ್ಟರ್ ತಂದ ಟೊಮೇಟೊ ನುಂಗಿದ , ಅವನ ಮಾವ ಸ್ಥಳದಲ್ಲೇ ಮೃತಪಟ್ಟನು ಹಾಗೂ ಅವನ ಹೆಣವನ್ನು ತಕ್ಷಣ ಹರಿಶ್ಚ್ಂದ್ರ ಘಾಟಿಗೆ ಸಾಗಿಸಲಾಯಿತು . ಆದರೆ ಎಲೆಕ್ಷನ್ ಗಡಿಬಿಡಿಯಲ್ಲಿ ಕಂಡಕ್ಟರ್ ಮಾವನ ಬದಲು ಇನ್ನೊಬ್ಬ ಡ್ರೈವರ್ ನ ಮಾವನ ಸಂಸ್ಕಾರ ಮಾಡಲಾಯಿತು .

೭. ಅಷ್ಟಲ್ಲದೇ ಡ್ರೈವರ್ ನ ಮಾವನ ಶವ ಸಂಸ್ಕಾರವಾದ ಸ್ಥಳದಲ್ಲಿ ಕಂಡಕ್ಟರನ ಮಾವ ಎಂದು ಮರದ ಫಲಕ ಹೊಡೆಯಲಾಯಿತು .

೮. ಇದಾಗಿ ಹನ್ನೊಂದು ವರುಷ ಕಳೆದಂತೆ ಈ ಫಲಕಕ್ಕೆ ಗೆದ್ದಲು ಹಿಡಿದು , ಮತ್ತೆ ಮತ್ತೆ ಕಳಚಿ ಬೀಳತೊಡಗಿತು ; ಇದರಿಂದ ಬೇಸತ್ತ ಸ್ಮಶಾನದ ಕಾವಲುಗಾರ ಫಲಕವನ್ನು ಮುರಿದು ೪ ಚೂರುಗಳಾಗಿ ಒಲೆಗೆ ಹಾಕಿದನು . ಕಾವಲುಗಾರನ ಹೆಂಡತಿ ಒಲೆಯ ಮೇಲೆ ಟೊಮೇಟೊ , ಆಲುಗಡ್ಡೆ , ಈರುಳ್ಳಿ ಸಾಂಬಾರ್ ಮಾಡಿದಳು.

೯ ಆದರೆ ಇನ್ನೇನು ಒಲೆಯ ಮೇಲಿಂದ ಸಾಂಬಾರ್ ಕೆಳಗಿಳಿಸಬೇಕು ಎನ್ನುವಾಗ ಅಡುಗೆ ಮನೆಯ ಗಡಿಯಾರ ಸಾಂಬಾರ್ ಪಾತ್ರೆಗೆ ಬಿದ್ದಿತು . ಹೆಂಡತಿ ಗಡಿಯಾರವನ್ನು ಸಾಂಬಾರಿನಿಂದ ಹೊರಗೆ ತೆಗೆದಳು. ಆದರೆ ಗಡಿಯಾರದಲ್ಲಿದ್ದ ಕೆಲವು ತಿಗಣೆ ಪಾತ್ರೆಗೆ ಸೇರಿಕೊಂಡಿದ್ದರಿಂದ ಸಾಂಬಾರನ್ನು ತಿನ್ನದೆಯೇ ಅವರು ಎದುರು ರಸ್ತೆಯ ತಿಮೋತಿ ಎನ್ನುವ ಭಿಕ್ಷುಕನಿಗೆ ಕೊಟ್ಟಳು.

೧೦. ತಿಮೋತಿ ಎನ್ನುವ ಭಿಕ್ಷುಕ ಸಾಂಬಾರನ್ನು , ತಿಗಣೆಯ ಜೊತೆಗೆ ತಿಂದ ಹಾಗೂ ಅವನ ಭಿಕ್ಷುಕ ಗೆಳೆಯ ಮಹೋಮತಿಗೆ ಕಾವಲುಗಾರನ ಉದಾರತೆಯ ಬಗ್ಗೆ ಬಹುವಾಗಿ ಹೊಗಳಿದನು .

೧೧. ಇದರಿಂದ ಪ್ರಭಾವಿತನಾದ ಮಹೋಮತಿ ಮಾರನೆಯ ದಿನ ಕಾವಲುಗಾರನ ಮನೆಗೆ ಹೋಗಿ ಸಾಂಬಾರ್ ಕೊಡುವಂತೆ ಕೇಳಿದ . ಆದರೆ ಕಾವಲುಗಾರ ಅವನಿಗೆ ಏನನ್ನು ಕೊಡಲಿಲ್ಲ ಹಾಗೂ ಮಹೋಮತಿಯನ್ನು ಅಟ್ಟಿಸಿಕೊಂಡು ಹೋದನು.

೧೨. ಆದರೆ ಈ ಭಿಕ್ಷಾ ಭೇದ ಮಹೋಮತಿಯನ್ನು ಎಷ್ಟು ಕೆರಳಿಸಿತು ಎಂದರೆ , ಅವನು ಕಾವಲುಗಾರನ ಮನೆಗೆ ಬೆಂಕಿ ಹಚ್ಚಿದನು .

೧೩. ಮನೆಗೆ ಹಚ್ಚಿದ ಬೆಂಕಿ , ಕಿಂಡಿಯ ಮೂಲಕ ಪಕ್ಕದ ಚರ್ಚ್ ಗೆ ತಲುಪಿತು ಮತ್ತು ಚರ್ಚ್ ಸುಟ್ಟು ಹೋಯಿತು .

೧೪. ಮುಖ್ಯಮಂತ್ರಿಗಳು ಈ ಬೆಂಕಿ ಆಕಸ್ಮಿಕದ ಬಗ್ಗೆ ಸವಿಸ್ತಾರವಾದ ತನಿಖೆಗೆ ಆದೇಶಿಸಿದರು ಆದರೆ ಕೊನೆಗೂ ಕಾರಣ ತಿಳಿಯಲಿಲ್ಲ

೧೫. ಕೆಲವು ವರುಷಗಳ ನಂತರ ಚರ್ಚ್ ಸುಟ್ಟು ಹೋದ ಜಾಗದಲ್ಲಿ ಒಂದು ಕ್ಲಬ್ ತೆರೆಯಲಾಯಿತು ಹಾಗೂ ಕ್ಲಬ್ ನ ಉದ್ಘಾಟನಾ ಸಮಾರಂಭಕ್ಕೆ ಸಂಗೀತಗಾರನನ್ನು ಕರೆಯಲಾಗಿತ್ತು ಹಾಗೂ ಅವನು ಹದಿನಾಲ್ಕು ವರುಷಗಳ ಹಿಂದೆ ಅಂಗಿ ಕಳೆದುಕೊಂಡ ನಮ್ಮ ಝೂಂಡ ಶಿಷ್ಯನೇ ಆಗಿದ್ದ

೧೬. ಪ್ರೇಕ್ಷಕರ ನಡುವೆ ಕುಳಿತಿರುವವರಲ್ಲಿ ಒಬ್ಬ ಹುಡುಗ ಹದಿನಾಲ್ಕು ವರುಷಗಳ ಹಿಂದೆ ಝೂಂಡ ಶಿಷ್ಯನ ಮೇಲೆ ಆಕ್ರಮಣ ಮಾಡಿದ್ದ ಗುಂಪಿನವರಲ್ಲೊಬ್ಬನ ಮಗನಾಗಿದ್ದನು .

೧೭. ಕಾರ್ಯಕ್ರಮ ಮುಗಿಸಿದ ನಂತರ ಝೂಂಡ ಶಿಷ್ಯ ಮತ್ತು ಹುಡುಗ ಬಸ್ಸು ಹತ್ತಿ ಮನೆಗೆ ಹೊರಟರು ಹಾಗೂ ಅವರು ಹತ್ತಿದ ಬಸ್ಸಿನ ಕಂಡಕ್ಟರ್ ಹದಿನಾಲ್ಕು ವರುಷಗಳ ಹಿಂದೆ ಝೂಂಡ ಶಿಷ್ಯನ ಅಂಗಿಯನ್ನು ಮಾರ್ಕೆಟಿನಲ್ಲಿ ಮಾರಿದ್ದವನೆ ಆಗಿದ್ದನು ಹಾಗೂ ಕಂಡಕ್ಟರನ ಮಾವನ ಜಾಗದಲ್ಲಿ ಸಂಸ್ಕಾರ ಮಾಡಲಾಗಿದ್ದ ಹೆಣದ ಸಂಬಂಧಿ ಡ್ರೈವರ್ ಈ ಬಸ್ಸಿನ ಡ್ರೈವರ್ ಆಗಿದ್ದನು .

೧೮. ಇವರೆಲ್ಲರೂ ತಮ್ಮ ನಡುವಿನ ಯಾವುದೇ ಸಂಬಂಧದ ಅರಿವಿಲ್ಲದೆ ಬಸ್ಸಿನಲ್ಲಿ ಕುಳಿತಿದ್ದರು . ಬಸ್ಸು ಚಲಿಸುತ್ತಿತ್ತು ಮತ್ತು ಅವರಿಗೆ ಕೊನೆಯವರೆಗೂ ಅವರಿಗೆ ತಮ್ಮ ನಡುವಿನ ಪರಸ್ಪರ ಸಂಬಂದ ಗೊತ್ತಾಗಲೇ ಇಲ್ಲ

Leave a Reply

Your email address will not be published. Required fields are marked *

Related Post

ಹಿಮ ಮನುಷ್ಯಹಿಮ ಮನುಷ್ಯ

ನಾನು ಮದುವೆಯಾಗಿರುವದು ಹಿಮ ಮನುಷ್ಯನನ್ನು. ಮಂಜುಗಡ್ಡೆಯಲ್ಲಿ ಸ್ಕಾಯಿಂಗ್ ಮಾಡುವ ರೆಸಾರ್ಟಿನಲ್ಲಿ ಅವನನ್ನು ಮೊದಲ ಸಲ ಭೇಟಿಯಾಗಿದ್ದೆ. ಹಿಮ ಮನುಷ್ಯನನ್ನು ಇಂತಹ ಜಾಗದಲ್ಲೇ ಭೇಟಿಯಾಗುವದಲ್ಲವೇ ? ಹೋಟೆಲಿನ ಪಡಸಾಲೆಯಲ್ಲಿ ಕಿಚಪಿಚನೆ ಮಾತನಾಡುತ್ತ ಅಸಾಧ್ಯ ಗದ್ದಲ ಮಾಡುತ್ತಿದ್ದ ಯುವಕ ಯುವತಿಯರಿಂದಲೂ , ಉರಿಯುತ್ತಿರುವ ಅಗ್ಗಷ್ಟಿಕೆಯಿಂದಲೂ ಸಾಧ್ಯವಾದಷ್ಟು ದೂರದಲ್ಲಿ ಒಂದು ಮೂಲೆಯಲ್ಲಿ ಕುಳಿತು

Muppu

ಮುಪ್ಪುಮುಪ್ಪು

ಅಂದು ಬೆಳಿಗ್ಗೆ ಎಂದಿನಂತೆ ಮೊಮ್ಮಗನನ್ನು ಕರೆದುಕೊಂಡು ಪಾರ್ಕಿಗೆ ವಾಕಿಂಗ್ ಗೆಂದು ಬಂದು ಒಂದು ಸುತ್ತು ಹೊಡೆದು ಎರಡನೇ ಸುತ್ತಿಗೆ ಹೊರಡುವ ಮುನ್ನ ಒಂದು ಸ್ವಲ್ಪ ಹೊತ್ತು ಕೂತು ಹೊರಡೋಣ ಎ೦ದು ಕಲ್ಲು ಬೆಂಚಿನ ಮೇಲೆ ಕುಳಿತಿದ್ದೆ. ಪ್ರತಿ ದಿನ ಅದೇ ಪಾರ್ಕಿನಲ್ಲಿ ವಾಕ್ ಮಾಡುತ್ತಿದ್ದರಿಂದ ಅಲ್ಲಿಗೆ ಬರುವ ಹೆಚ್ಚು

ಧರ್ಮ ಸ೦ಸ್ಥಾಪನಾರ್ಥಾಯ… ( ಕಥೆ)ಧರ್ಮ ಸ೦ಸ್ಥಾಪನಾರ್ಥಾಯ… ( ಕಥೆ)

೧ ಅಶ್ವಥ್ಥನಗರದ ಮಕ್ಕಳು ಬೆಳೆದಿದ್ದೇ ಹಾಗೆ!ಗಾ೦ಧೀಜಿ ಯಾರು ಎ೦ದು ಕೇಳಿದರೆ ಆ ಮಕ್ಕಳು ಹೇಳುತ್ತಿದ್ದ ಹೆಸರು ಸುಪ್ರಸನ್ನ ರಾಯರದು!ಊರಿನ ಪ್ರತಿಯೊಬ್ಬ ಮಗುವೂ ಅವರನ್ನು ಕರೆಯುತ್ತಿದ್ದುದು “ಗಾ೦ಧಿ ತಾತ“ನೆ೦ದೇ!ಸ್ವಾತ೦ತ್ರ್ಯ ಚಳುವಳಿಯಲ್ಲಿ ಗಾ೦ಧಿಯವರ ಒಡನಾಡಿಗಳಾಗಿದ್ದಕ್ಕೆ ಮಾತ್ರವಲ್ಲ ಅವರಿಗೆ “ನಮ್ಮೂರ ಗಾ೦ಧಿ“ ಎ೦ಬ ಹೆಸರು ಬ೦ದಿದ್ದು, ಗಾ೦ಧೀವಾದ ವನ್ನು ಅಕ್ಷರಶ ಅನುಸರಿಸಿ, ಅವುಗಳನ್ನೇ ತಮ್ಮ