ಜಿಲೇಬಿ ಸೀನ

ಅಂತರ ವರ್ಗ, ಅಂತರ ಕಾಲೇಜು ನಾಟಕ ಸ್ಪರ್ಧೆಗಳು ಮುಗಿದು ಎಷ್ಟೋ ತಿಂಗಳುಗಳು ಕಳೆದಿದ್ದವು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಲ್ಲಿ ಏನೋ ಖಾಲಿ ಖಾಲಿ ಭಾವನೆ, ತರಗತಿಗಳು ಮುಗಿದ ಕೂಡಲೇ, ರಂಗ ಪ್ರಯೋಗ ಶಾಲೆಗೆ ಓಡಿ ಹೋಗಿ, ಕಲೆತು, ನಾಟಕಾಭಿನಯ,ಸಂಗೀತಾಭ್ಯಾಸ , ಸ್ನೇಹತರೊಂದಿಗೆ ತರಲೆ ತಮಾಷೆ ಮಾಡುವ ಅವಕಾಶ ತಪ್ಪಿ ಹೋಗಿರುವುದರ ದುಃಖ. ಅಂದು ಸಂಜೆ ಹೀಗೆ ಹುಡುಗರು ಕಾಲೇಜಿನ ಉಪಾಹಾರ ಮಂದಿರದಲ್ಲಿ ನಾಟಕದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಹುಡುಗರಾದ ಹೇಮಂತ, ಶ್ರೀಹರಿ, ನಾಗೇಶ ಸೇರಿದ್ದರು. ಅಲ್ಲಿಗೆ ಬಂದ ಸಂಸ್ಕೃತ ಮೇಸ್ಟ್ರು ಹುಡುಗರನ್ನ ಉದ್ದೇಶಿಸಿ “ನೋಡ್ರೋ, ಬೆಂಗಳೂರಿನ ಪ್ರಸಿದ್ಧ ಕಾಲೇಜ್ ಒಂದರಲ್ಲಿ ಪುಟ್ಟ ಬೀದಿ-ನಾಟಕ ಸ್ಪರ್ಧೆ ಏರ್ಪಡಿಸಿದ್ದಾರೆ, ನೀವು ಹುಡುಗರು ಕಲೆತು, ನಾಟಕ ತಯಾರು ಮಾಡಿ, ಭಾಗವಹಿಸುವುದಾದರೆ, ನಿಮ್ಮಗಳ ಹೆಸರನ್ನು ನಾನು ಪಟ್ಟಿ ಮಾಡಿ ಅವರಿಗೆ ಕಳುಹಿಸುವೆ. ” ಎಂದರು.

ಇಂತಹ ಅವಕಾಶಕ್ಕಾಗಿಯೇ ಕಾಯುತ್ತಿದ್ದ ಹುಡುಗರಿಗೆ, ಸಿಹಿ ಸುದ್ದಿಯನ್ನು ಉಣಬಡಿಸಿದ ಹಾಗಾಯಿತು.ಗುರುಗಳಿಗೆ ತಾವು ಭಾಗವಹಿಸುವುದಾಗಿ ಹೇಳಿ, ಸ್ಪರ್ಧೆಯ ನಿಯಮಾವಳಿಗಳನ್ನು ತಿಳಿದುಕೊಂಡರು. ಹೇಮಂತನು, ನಾಟಕದ ನಿರ್ದೇಶನದ ಚುಕ್ಕಾಣಿಯನ್ನು ಹಿಡಿದನು, ಅವನ ಸ್ನೇಹಿತರಾದ ಶ್ರೀ ಹರಿ, ನಾಗೇಶರು ಅವನಿಗೆ ಸಹಾಯ ಮಾಡುವುದಾಗಿ ಒಪ್ಪಿಕೊಂಡರು. ಬೀದಿ-ನಾಟಕದ ಸ್ಪರ್ಧೆಗೆ ಇನ್ನು ಒಂದು ವಾರ ಸಮಯವಿತ್ತು, ಒಂದು ವಾರದೊಳಗೆ, ನಾಟಕದ ಮಾತುಗಳನ್ನು ಕಲಿತು, ನೆನಪಿನಲ್ಲಿ ಇಟ್ಟುಕೊಂಡು, ಒಳ್ಳೆಯ ನಟನೆ ಮಾಡುವವರ ಹೆಸರುಗಳ ಪಟ್ಟಿ ಸಿದ್ಧಪಡಿಸಿ, ನಾಳೆಯಿಂದಲೇ ತಾಲಿಮನ್ನು ಶುರು ಮಾಡಲು ನಿರ್ಧರಿಸಿ ಮನೆಗೆ ಹೊರಟರು.

ಮಾರನೇ ದಿನ ವಿಷಯವನ್ನರಿತ ನಮ್ಮ ಸೀನ, ತ್ರಿಮೂರ್ತಿಗಳು ಕರೆಯುವ ಮುನ್ನವೇ, ಖುದ್ದಾಗಿ ಅವರನ್ನು ಭೇಟಿ ಮಾಡಿ, ತಾನು ತಂಡಕ್ಕೆ ಸೇರುವುದಾಗಿ, ತಾಲೀಮಿಗೆ ಬರುವುದಾಗಿ ಹೇಳಿದನು.ತ್ರಿಮೂರ್ತಿಗಳು ಇಕ್ಕಟ್ಟಿಗೆ ಸಿಲುಕಿಕೊಂಡರು, ಸೀನ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ, ಇದಕ್ಕೆ ಅವನು ಈ ಹಿಂದೆ ನಡೆದ ನಾಟಕ ಪ್ರದರ್ಶನಗಳಲ್ಲಿ ರಂಗದ ಮೇಲೆ “ಜಿಲೇಬಿ”ಗಳನ್ನು ಹಾಕುವುದರಲ್ಲಿ ನಿಸ್ಸಿಮನಾಗಿದ್ದ. “ಜಿಲೇಬಿ ಹಾಕುವುದು” ಎಂದರೆ, ರಂಗದ ಮೇಲೆ ತನ್ನ ಪಾತ್ರದ ಮಾತುಗಳನ್ನು ಮರೆತು ನಿಲ್ಲುವುದು, ಅಥವಾ ತೊದಲುವುದು. ಅಷ್ಟೇ ಆಗಿದ್ದರೆ ಇವರುಗಳು ಒಪ್ಪುತ್ತಿದರೊ ಏನೋ, ಆದರೆ ನಮ್ಮ ಸೀನ ಬಹಳ ತರಲೆ, ತಾಲೀಮಿನ ವೇಳೆ ಬೇರೆಯವರಿಗೆ ರೇಗಿಸುವುದು, ಅವರ ಸಂಭಾಷಣೆಯನ್ನು ಸಂದರ್ಭಕ್ಕೆ ತಕ್ಕಂತೆ ಬದಲಿಸಿ ಹಾಸ್ಯ ಮಾಡುವುದು, ಇವನ ಕಾಯಕ. ಅವನು ಜೊತೆಗೆ ಇದ್ದರೆ ಎಲ್ಲರೂ ಲವಲವಿಕೆ ಇಂದ ಇರುತ್ತಿದ್ದರು. ಆದರೆ, ಎಲ್ಲಾ ಸಮಯದಲ್ಲೂ ಇವನು ಗಂಭೀರವಾಗಿರದೆ, ಬರಿ ತಲಹರಟೆ ಮಾಡಿಕೊಂಡಿರುವುದು ಕೊಂಚ ಕಿರಿಕಿರಿಯ ವಿಷಯವಾಗಿತ್ತು.

ಸೀನನಿಗೆ “ಬೇಡ” ಎನ್ನಲು ಆಗದೆ, “ಹೋಗಲಿ ಯಾವುದಾದ್ರು ಸಣ್ಣ ಪಾತ್ರವನ್ನು ಕೊಟ್ಟು ನಿಭಾಯಿಸೋಣ” ಎಂದು ನಿರ್ಧರಿಸಿದರು. ನಾಟಕದ ತಾಲೀಮು ಶುರುವಾಯಿತು, ನಾಟಕದ ನಿರ್ದೇಶನದ ಭಾರ ಹೊತ್ತ ಹೇಮಂತ ಒಳ್ಳೆಯ ನಾಟಕವನ್ನು ಆರಿಸಿ, ನಟವರ್ಗವನ್ನು ಸಿದ್ಧಪಡಿಸಿದನು. ನಮ್ಮ ಸೀನ ತಾಲೀಮಿನ ಮೊದಲ ಮೂರು ದಿನ ಸಮಯಕ್ಕೆ ಮುಂಚೆಯೇ ಬಂದು ಕಾದಿರುತ್ತಿದ್ದ, ತಾಲೀಮು ಶುರುವಾದ ಮೇಲೆ, ತನ್ನ ತರಲೆಯನ್ನು ಶುರು ಮಾಡುತ್ತಿದ್ದ. ತ್ರಿಮೂರ್ತಿಗಳಿಗೆ ನುಂಗಲಾರದ ಬಿಸಿ ತುಪ್ಪವಾದನು ನಮ್ಮ ಸೀನ.ನಿರ್ದೇಶಕ ಹೇಮಂತನ ಪಿತ್ತ ಪದೇ ಪದೇ ನೆತ್ತಿಗೆ ಏರುತ್ತಿತ್ತು, ಶ್ರೀಹರಿ ನಾಗೇಶ ಅವನನ್ನು ಸಮಾಧಾನ ಪಡಿಸುತ್ತಿದ್ದರು. ನಮ್ಮ ಸೀನ ರಂಗದ ಮೇಲೆ ಅದು ಹೇಗೆ ಇದ್ದಕ್ಕಿದ್ದ ಹಾಗೆ ವಿಮುಖನಾಗುತ್ತಿದ್ದನೋ ತಿಳಿಯದು, ರಂಗದ ಹಿಂದೆ ಅವನ ಬಾಯಿ ಮುಚ್ಚಿಸುವುದು ಬಹಳ ಕಷ್ಟದ ಕೆಲಸವಾಯಿತು.
“ಥೋ!! ಇವನು ಗಂಭೀರವಾಗಿ ಇರೋ ಹಾಗಿ ಮಾಡಪ್ಪ ದೇವರೇ” ಎಂದು ಬೇಡಿಕೊಂಡನು ನಮ್ಮ ಹೇಮಂತ. ತ್ರಿಮೂರ್ತಿಗಳು ಬಹಳ ಶ್ರದ್ದೆವಹಿಸಿ ನಾಟಕದ ತಯಾರು ಮಾಡಿಸುವುದರಲ್ಲಿ ನಿರತರಾದರು. ಅದೇನೋ ತಿಳಿಯದು, ತಾಲೀಮಿನ ನಾಲ್ಕನೆಯ ದಿನ ನಮ್ಮ ಸೀನ, ಎಂದಿನಂತಿರಲಿಲ್ಲ, ಬಹಳ ಗಂಭೀರನಾಗಿದ್ದನು, ಯಾರೊಂದಿಗೂ ಮಾತನಾಡುತ್ತಿರಲಿಲ್ಲ, ತರಲೆ ತಮಾಷೆ ಮಾಡದೆ, ತನ್ನ ಪಾತ್ರವನ್ನು ನಿರ್ವಹಿಸಿ ಅಲ್ಲಿಂದ ಹೊರ ನಡೆದ. ತ್ರಿಮೂರ್ತಿಗಳಿಗೆ ಆಶ್ಚರ್ಯ ಹಾಗೂ ಸಂತಸ ತಂದ ವಿಷಯವಾಗಿತ್ತು. ಸೀನ ಗಂಭೀರನಾಗಿ, ಯಾರಿಗೂ ತೊಂದರೆ ಕೊಡದೆ ನಾಟಕದ ಸ್ಪರ್ಧೆಯ ದಿನದವರೆಗೂ ಹೀಗೆ ಇದ್ದರೆ ಎಷ್ಟು ಚಂದ ಎಂದು ಕೊಂಡರು.

ನಿರ್ದೇಶಕನಾದ ಹೇಮಂತ, ದೇವರು ಅವನ ಮೊರೆಯನ್ನು ಆಲಿಸಿದಕ್ಕೆ ಬಹಳ ಸಂತೋಷಪಟ್ಟನು.ಅವರು ಎಂದುಕೊಂಡ ಹಾಗೆ ಸೀನ ಮಿಕ್ಕ ತಾಲೀಮಿನ ದಿನಗಳಿಗೆ ಗಂಭೀರನಾಗೆ ಬಂದು-ಇದ್ದು ಹೊರಡುತ್ತಿದ್ದ. ಹಲವರು ಅವನನ್ನು ಕರೆದು ಕೇಳಬೇಕು ಎಂದುಕೊಂಡರು, ಆದರೆ ಸ್ಪರ್ಧೆಯ ಬಿಸಿ, ಅವರನ್ನು ಹಾಗೆ ಮಾಡಲು ಬಿಡಲಿಲ್ಲ. ಸ್ಪರ್ಧೆ ನಡೆಯುವ ದಿನ, ಸೀನ ಕೊಂಚ ತಡವಾಗಿಯೇ ಬಂದ, ಎಲ್ಲ ಹುಡುಗರು ಸ್ಪರ್ಧೆಯ ಗುಂಗಿನಲ್ಲಿದ್ದರು, ಎಲ್ಲರೂ ಸ್ಪರ್ಧೆಯಲ್ಲಿ ಗೆದ್ದು ತಮ್ಮ ಕಾಲೇಜಿನ ಕೀರ್ತಿ ಪತಾಕೆಯನ್ನು ಏರಿಸಬೇಕು ಎಂದು ಪಣ ತೊಟ್ಟುನಿಂತರು.

ನಾಟಕ ಶುರುವಾಯಿತು, ತ್ರಿಮೂರ್ತಿಗಳಿಗೂ ದಂಗುಬಡಿಸುವ ಹಾಗೆ ನಮ್ಮ ಸೀನ ತನ್ನ ಪಾತ್ರವನ್ನು ನಿರ್ವಹಿಸಿದ್ದ, ನಮ್ಮ ಸೀನ ಎಷ್ಟು “ಜಿಲೇಬಿ” ಹಾಕುತ್ತಾನೆ ಎಂದು ತಮ್ಮಲ್ಲೇ ಪಂದ್ಯ ಕಟ್ಟಿಕೊಂಡಿದ್ದ ಹುಡುಗರಿಗೆ ಕೊಂಚ ನಿರಾಶೆಯಾಯಿತು. ನಮ್ಮ ಸೀನನ ಪಾತ್ರ ಚಿಕ್ಕದಾಗಿದ್ದರು, ಅವನ ಅಭಿನಯದ ಮೋಡಿಯಿಂದಾಗಿ ಎಲ್ಲರ ಗಮನವನ್ನು ಸೆಳೆದಿದ್ದ. ನಮ್ಮ ಸೀನ, ತನ್ನ ಪಾತ್ರ ಮುಗಿದ ಕೂಡಲೇ, ಯಾರಿಗೂ ತಿಳಿಸದೆ ಅಲ್ಲಿಂದ ಹೊರ ನಡೆದಿದ್ದ. ತ್ರಿಮೂರ್ತಿಗಳಿಗೆ ಒಂದು ಕಡೆ ಸಂಶಯ, ಇನ್ನೊಂದು ಸಂತೋಷ.
ಸೀನ ಅಷ್ಟು ಚೆನ್ನಾಗಿ ಪಾತ್ರವನ್ನು ನಿರ್ವಹಿಸಬಲ್ಲ ಎಂದು ಅವರಿಗೆ ಅಂದೆ ತಿಳಿದದ್ದು. ಸ್ಪರ್ಧೆ ಮುಗಿದ ಕೂಡಲೇ, ಬಹುಮಾನ ವಿತರಣೆ ಕಾರ್ಯಕ್ರಮವು ನಡೆಯಿತು, ಬೀದಿ ನಾಟಕ ಸ್ಪರ್ಧೆಯಲ್ಲಿ, ತ್ರಿಮೂರ್ತಿಗಳ ತಂಡಕ್ಕೆ ಮೊದಲನೇ ಬಹುಮಾನ ದೊರೆತಿತ್ತು, ಅದರೊಂದಿಗೆ ಇನ್ನು ಆಶ್ಚರ್ಯ ಪಡಬೇಕಾದ ಘೋಷಣೆಯಾಯಿತು, ಪುಟ್ಟ ಪಾತ್ರವಹಿಸಿದ ನಮ್ಮ ಸೀನನಿಗೆ ಅತ್ಯುತ್ತಮ ನಟನ ಪ್ರಶಸ್ತಿಯು ದೊರೆತಿತ್ತು. ಆದರೆ ಅದನ್ನು ತನ್ನ ಕಿವಿಯಾರೆ ಕೇಳಿ, ಕೈಯ್ಯಾರೆ ಪಡೆಯಲು ಸೀನ ಅಲ್ಲಿ ಇರಲಿಲ್ಲ.

ಸೀನನ ಪರವಾಗಿ ತಂಡದ ನಾಯಕ ಹೇಮಂತನೆ ಹೋಗಿ ಸ್ವೀಕರಿಸಿದನು. ಕಾರ್ಯಕ್ರಮ ಮುಗಿದ ಮೇಲೆ, ಎಲ್ಲರಲ್ಲೂ ಉಳಿದ ಪ್ರಶ್ನೆ ನಮ್ಮ ಸೀನನಿಗೆ ಏನಾಗಿದೆ ಎಂದು, ಕಳೆದ ನಾಲ್ಕು ದಿನಗಳಿಂದ ಸೀನ ಎಂದಿನಂತಿರದೆ ಗಂಭೀರನಾಗಿದ್ದ , ಹಾಗೂ ತನ್ನ ಕೆಲಸವಲ್ಲದೆ ಬೇರೇನನ್ನೂ ಮಾಡುತ್ತಿರಲಿಲ್ಲ. ತ್ರಿಮೂರ್ತಿಗಳು, ಸೀನನನ್ನು ಹುಡುಕಿಕೊಂಡು ಅವನ ಮನೆಗೆ ಧಾವಿಸಿದರು.

ಬೆಂಗಳೂರಿನ ಯಾವುದೋ ಹಳೆಯ ವಠಾರದಲ್ಲಿ ಅವನ ಮನೆ, ಮನೆಯಲ್ಲಿ ಕತ್ತಲೆ ತುಂಬಿ ಸೂತಕದ ಛಾಯೆ ಆವರಿಸಿತ್ತು , ಬಾಗಿಲು ತೆರೆದೆ ಇದ್ದಿದ್ದರಿಂದ ತ್ರಿಮೂರ್ತಿಗಳು ಮನೆಯೊಳಗೆ ಕಾಲಿರಿಸಿದರು, ಸೀನ, ಒಂದು ಮೂಲೆಯಲ್ಲಿ ಕುಳಿತು ಅಳುತ್ತಿದ್ದ, ತ್ರಿಮೂರ್ತಿಗಳನ್ನ ನೋಡಿ ಕಣ್ಣೀರನ್ನು ಒರೆಸಿಕೊಂಡು, ಅವರನ್ನು ಕರೆದುಕೊಂಡು ಹೊರ ನಡೆದ.

“ಎನ್ರೋ ಹೇಗ್ ಆಯಿತು competition, ನೋಡ್ರಪ್ಪ ಒಂದು ಜಿಲೇಬಿನು ಹಾಕಿಲ್ಲ ಇವತ್ತು ಸರಿನಾ, ಹ್ಮ್ಮ್ ಏನಾಯಿತು, ಇಲ್ಲಿ ತನಕ ಬಂದ್ದಿದಿರ?” ಎಂದು ತನ್ನ ಎಂದಿನ ಶೈಲಿಯಲ್ಲಿ ಮಾತನಾಡಲು ಪ್ರಯತ್ನಿಸಿದ. ಅವನನ್ನು ಎಂದೂ ಅಳು ಮೊರೆಯಲ್ಲಿ ನೋಡಿರದ ತ್ರಿಮೂರ್ತಿಗಳು, ಬಂದ ಪ್ರಶಸ್ತಿಯನ್ನು ಅವನ ಕೈಯಲ್ಲಿ ಇರಿಸಿದರು, “ನಿನ್ನ ಜಿಲೇಬಿ-less ನಟನೆಗೆ ಪ್ರಶಸ್ತಿ ಬಂದಿದೆ ಕಣೋ” ಎಂದ ಹೇಮಂತ.

ಅದೇಕೋ ಸೀನ ಕಷ್ಟಪಟ್ಟು ತಡೆಹಿಡಿದ್ದಿದ್ದ ಕಣ್ಣೀರಿನ ಕಟ್ಟೆ ಒಡೆಯಿತು, ಕೈನಲ್ಲಿ ಇದ್ದ ಪ್ರಶಸ್ತಿ ಫಲಕವನ್ನು ಹಿಡಿದು, ಸೀದಾ ಮನೆಯೊಳಗೆ ಹೊಕ್ಕಿ, ಹಾಸಿಗೆಯ ಮೇಲೆ ಮಲಗಿದ್ದ ತನ್ನ ತಾಯಿಯ ಪಕ್ಕದಲ್ಲಿ ಇರಿಸಿ ನಿಂತನು.

ತ್ರಿಮೂರ್ತಿಗಳಿಗೆ ಏನು ಮಾಡಬೇಕು, ಏನು ಕೇಳಬೇಕು ಎಂದು ತಿಳಿಯಲಿಲ್ಲ. ಅಲ್ಲಿ ನಿಲ್ಲಬೇಕೋ, ಹೊರಡಬೇಕೋ, ಅವನಿಂದ ವಿಷಯವನ್ನು ತಿಳಿದುಕೊಳ್ಳಬೇಕೋ ಎನ್ನುವ ಸಂದಿಗ್ದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡರು.

ತನ್ನ ದುಃಖವನ್ನು ಅದುಮಿ, ಮತ್ತೆ ಅವರಿರುವಲ್ಲಿಗೆ ನಡೆದು ಬಂದ ಸೀನ, “ಮೊನ್ನೆ ದಿನ ನಮ್ಮ ತಾಯಿ ಕೆಲ್ಸ ಮಾಡೋ ಜಾಗದಲ್ಲಿ ಸಾಗಿಸುತ್ತಿದ್ದ ಯಂತ್ರ ಅದ್ಯಾರದೋ ಅಜಾಗರುಕತೆಯಿಂದಾಗಿ, ಇವರ ಮೇಲೆ ಬಿತ್ತು, ಯಾವಾಗಲೂ ಪಾದರಸದಂತೆ ಓಡಾಡಿಕೊಂಡಿದ್ದ ನಮ್ಮ ತಾಯಿಯ ಕಾಲು ಮುರಿಯಿತು, ಇನ್ನು ಒಂದು ಆರು ತಿಂಗಳಿಂದ ಒಂದು ವರುಷ ಹಿಡಿಯಬಹುದು ಇವರು ಹಿಂದಿನಂತಾಗಲು, ನನ್ನ ಗ್ರಹಚಾರ ಸರಿ ಇಲ್ಲ ಅಷ್ಟೇ, ನಾನು ಇನ್ನು ಒಂದಿಷ್ಟು ದಿನ ಕಾಲೇಜಿಗೆ ಬರೋದು ಕಷ್ಟ, ಮುಂದೆ ಬರ್ತಿನೋ ಇಲ್ವೋ ಅದು ಅನುಮಾನ, ನೋಡೋಣ ಏನಾಗತ್ತೆ ಅಂತ” ಎಂದು ಹೇಳಿ ಒತ್ತರಿಸಿ ಬರುತ್ತಿದ್ದ ಅಳುವನ್ನು ತಡೆ ಹಿಡಿದು ಮುಗುಳು ನಕ್ಕ. ತ್ರಿಮೂರ್ತಿಗಳಿಗೆ ಏನು ಹೇಳಬೇಕೋ ತಿಳಿಯಲಿಲ್ಲ, ಅವನ ಬೆನ್ನ ಮೇಲೆ ಕೈ ಇರಿಸಿ “ತಲೆ ಕೆಡಿಸಿಕೊಳ್ಳಬೇಡ, ಎಲ್ಲಾ ಒಳ್ಳೆಯದಾಗುತ್ತದೆ” ಎಂದು ಹೇಳಬಯಸಿದರು ಹೇಳಲಾಗದೆ, ಮೌನದಿಂದ ಹೊರನಡೆದರು.

ಸೀನನ ಮನೆಯಿಂದ ಕೊಂಚ ದೂರ ಬಂದಿರಬಹುದು, ಹೇಮಂತನಿಗೆ ಸೀನನ ಮುಗುಳು ನಗೆ ಕಾಡಲು ಶುರುವಾಯಿತು, ಧಿಡೀರನೆ ಅಳಲು ಶುರು ಮಾಡಿದನು “ಛೇ! ಯಾವ ಘಳಿಗೆಯಲ್ಲಿ ನಾನು ಆ ದೇವರಲ್ಲಿ ಕೇಳಿಕೊಂಡೆನೋ ಏನೋ ‘ಇವನು ಗಂಭೀರವಾಗಿ ಇರೋ ಹಾಗಿ ಮಾಡಪ್ಪ ದೇವರೇ’ ಅಂತ, ನಿಜಾನೆ ಮಾಡಿಬಿಟ್ಟ ಪಾಪಿ”.ಪಕ್ಕದಲ್ಲಿ ಇದ್ದ ಶ್ರೀ ಹರಿ ನಾಗೇಶರಲ್ಲೂ ಯಾವ ಮಾತುಗಳು ಹೊರಡಲಿಲ್ಲ, ಮೌನವಾಗಿಯೇ ಉಳಿದ ದಾರಿಯನ್ನು ಸವೆಸಿದರು.

Leave a Reply

Your email address will not be published. Required fields are marked *

Related Post

“ಬೆಂಕಿ-ಪ್ರತಾಪಿ”“ಬೆಂಕಿ-ಪ್ರತಾಪಿ”

ಹಳೆಯ ಘಟನೆ.ನಮಗೆ ಈ ನಾಟಕ, ನಾಟಕ ಸ್ಪರ್ಧೆ ಎಲ್ಲವೂ ಹೊಸತು. ನಮ್ಮ ಪ್ರಾಧ್ಯಾಪಕರು ನಮಗೆ ಆಸಕ್ತಿ ಇದ್ದಲ್ಲಿ, ದಯಮಾಡಿ ನಾಟಕದ ತಾಲಿಮಿನ ಕೊಠಡಿಗೆ ಬನ್ನಿ ಎಂದು ಕಾಲೇಜಿನಲ್ಲಿ ಪ್ರಕಟಣೆ ಹೊರಡಿಸಿದ್ದರು. ನಾವು ಕೂಡ ಕುತೂಹಲದಿಂದ ಹೋದೆವು, ನಮ್ಮೊಂದಿಗೆ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಸೇರಿದ್ದರು. ಕಿರಿಯರಲ್ಲಿ ಕುತೂಹಲ, ಹಿರಿಯ

ಆನೆ ಬಂತು ಆನೆಆನೆ ಬಂತು ಆನೆ

“ಭಕ್ತ ಪ್ರಹ್ಲಾದ”, ನಾಟಕದ ಭಾರಿ ತಾಲೀಮು ನಡಿಯುತ್ತಿತ್ತು, ನಟವರ್ಗ, ತಮ್ಮ ತಮ್ಮ ಸಂಭಾಷಣೆಯನ್ನ ಕಷ್ಟಪಟ್ಟು, ಶ್ರದ್ದೆಯಿಂದ ಕಲಿತಿದ್ದರು, ಪೌರಾಣಿಕ ನಾಟಕವಾದ್ದರಿಂದ, ಸಂಭಾಷಣೆಯೊಂದಿಗೆ ಮಟ್ಟುಗಳು (ಹಾಡುಗಳು) ಕೂಡ ಇದ್ದವು, ಆದರೂ ಕಲಾವಿದರು, ತಮ್ಮ ಶಕ್ತಿ ಮೀರಿ ಹಾಡುಗಳನ್ನ ಶ್ರುತಿಬದ್ಧವಾಗಿ ಹಾಡಲು ಕಲಿಯದಿದ್ದರು, ಹಾಡುಗಳನ್ನ ತಕ್ಕ ಮಟ್ಟಿಗೆ ಹಾಡುತ್ತಿದ್ದರು. ಈ ಎಲ್ಲದರ

ಎಲ್ಲದರ ಜವಾಬ್ದಾರಿ ನಿಮ್ಮದೇ….!ಎಲ್ಲದರ ಜವಾಬ್ದಾರಿ ನಿಮ್ಮದೇ….!

ಬಹಳ ದಿನಗಳ ನಂತರ, ಪರಸ್ಥಳದಲ್ಲಿ ಒಂದು ನಾಟಕ ಪ್ರದರ್ಶಿಸುವ ಯೋಗ ಕೂಡಿ ಬಂದಿತ್ತು, ಈ ಸರ್ತಿ ಗುಲ್ಬರ್ಗ ಕಡೆ ನಮ್ಮ ಪಯಣ ನಡೆಸಬೇಕಿತ್ತು.ಎಂದಿನಂತೆ ಬಸ್ನಲ್ಲಿ ಪ್ರಯಾಣ ಮಾಡುವುದು ಬೇಡ, ರೈಲಿನಲ್ಲಿ ಪ್ರಯಾಣ ಬೆಳೆಸೋಣ, ರೈಲಿನಲ್ಲಾದರೆ, ಹಾಡು, ಹರಟೆ, ತಮಾಷೆ, ತರಲೆ ಮಾಡಿಕೊಂಡು, ಸುಖವಾಗಿ ಪ್ರಯಾಣ ಮಾಡಬಹುದು ಎಂದು ಪರಿಗಣಿಸಿ