“ಗಾನ ಗಂಧರ್ವ ಬಸವ ..”

“ಮಕ್ಕಳೇ ಇವತ್ತಿನಿಂದ ನಾವು ನಮ್ಮ ನಾಟಕಕ್ಕೆ ಬೇಕಾದ ಹಾಡುಗಳನ್ನ, ಕಲಿಯಬೇಕಿದೆ, ಹಾಡುಗಳನ್ನ ಹಾಡುಡುವುದಕ್ಕೆ ಒಂದು ಮೇಳದ ತಂಡವನ್ನು ರೂಪಿಸಲಿದ್ದೇವೆ, ಇವತ್ತು ಮದ್ಯಾಹ್ನದ ಹೊತ್ತಿಗೆ ಸಂಗೀತದ ಮೇಷ್ಟ್ರು ಬರಲಿದ್ದಾರೆ, ನಿಮಲ್ಲಿ ಯಾರಿಗಾದರೂ ಹಾಡಲು ಇಷ್ಟವಿದ್ದರೆ ಅವರುಗಳು ಸಿದ್ಧವಾಗಿರಿ..” ಎಂದು ಹೇಳಿ ನಾಟಕದ ನಿರ್ದೇಶಕರು ಚಹಾ ವಿರಾಮವನ್ನು ಕೊಟ್ಟರು.

ಅಲ್ಲೇ ಮೂಲೆಯಲ್ಲಿ ತರಲೆ ಮಾಡಿಕೊಂಡಿದ್ದ ನಮ್ಮ ಬಸವನಿಗೆ, ನಿರ್ದೇಶಕರ ಮಾತು ಆಕರ್ಷಣೀಯವಾಗಿ ಕಾಣಿಸಿತು.ತಾನು ಕೂಡ ಶಾಲೆಯ ದಿನಗಳಲ್ಲಿ ಹಲವು ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸಿ ಕೆಲವು ಪ್ರಶಸ್ತಿಗಳನ್ನು ಗಳಿಸಿದ್ದುದನ್ನು ನೆನಪಿಸಿಕೊಂಡನು. ತನ್ನ ತರಗತಿಯ ಎಲ್ಲ ವಿದ್ಯಾರ್ಥಿಗಳಲ್ಲಿ ನಮ್ಮ ಬಸವನು ಪ್ರಖ್ಯಾತಿಯನ್ನುಗಳಿಸಿದ್ದನು. ಶಾಲೆಯ ಪ್ರತಿ ಶನಿವಾರದ ಕೊನೆಯ ತರಗತಿಯಲ್ಲಿ ಇವನು ಹಾಡಲೇಬೇಕು.ನಮ್ಮ ಬಸವನು ಏನು ಕಡಿಮೆ ಇಲ್ಲ, ಪ್ರತಿ ಶುಕ್ರವಾರದಂದು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಚಿತ್ರಮಂಜರಿ ಕಾರ್ಯಕ್ರಮವನ್ನು ತಪ್ಪದೆ ವೀಕ್ಷಿಸಿ ಅದರಲ್ಲಿ ಪ್ರಸಾರವಾಗುತ್ತಿದ್ದ ಹೊಸ ಹೊಸ ಚಿತ್ರ ಗೀತೆಗಳನ್ನು ಕೇಳಿಸಿಕೊಂಡು ರಾತ್ರಿ ಇಡೀ ಕಂಠಪಾಠ ಮಾಡುತ್ತಿದ್ದನು.

ಶನಿವಾರದಂದು, ಎಲ್ಲಾ ಹುಡುಗರು ಇವನ ಹಾಡುವಿಕೆಗೆ ಕಾಯುತ್ತಿದ್ದರು. ಇವನು ಹಾಡಿದ ನಂತರ, “ಮತ್ತೂಮ್ಮೆ ಹಾಡು, once more once more…” ಎಂದು ಇನ್ನೊಮ್ಮೆ ಹಾಡಿಸುತ್ತಿದ್ದರು, ನಮ್ಮ ಬಸವ, ಇಡೀ ಬಾಲಕರ ಶಾಲೆಯ ಹತ್ತನೇಯ ತರಗತಿಗೆ ಒಬ್ಬ ಜಗತ್ಪ್ರಸಿದ್ಧ ಗಾಯಕನಾಗಿದ್ದ.ಶಾಲೆಯಲ್ಲಿ ಮಾತ್ರ ಹಾಡುವ ಅವಕಾಶವಿದ್ದು, ಕಾಲೇಜು ಸೇರಿದ ಮೇಲೆ, ಪ್ರತಿ ಶನಿವಾರ ಹಾಡುವ ಯೋಗ ತಪ್ಪಿ ಹೋದದ್ದರಿಂದ ನಮ್ಮ ಬಸವನಿಗೆ ತುಂಬಾ ಬೇಸರ ಉಂಟಾಗಿತ್ತು.

ಆದರೆ ಹಾಡುವ ಅವಕಾಶ ಮತ್ತೊಮ್ಮೆ ಬೇರೆ ರೂಪದಲ್ಲಿ ದೊರೆತದ್ದು ಬಸವನಲ್ಲಿ ಹೊಸ ಸಂಚಲನವನ್ನು ಉಂಟುಮಾಡಿತ್ತು. ಸಂಗೀತ ನಿರ್ದೇಶಕರು ಯಾವಾಗ ಬರುವರೊ ಎಂದು ಕಾಯುತ್ತಿದ್ದ ನಮ್ಮ ಬಸವನಿಗೆ ನಿಮಿಷಗಳು ಘಂಟೆಗಳಾಗಿ, ಘಂಟೆಗಳು ದಿನಗಳಾಗಿ ಕಂಡವು.

ಕಡೆಗೂ ಸಂಗೀತ ನಿರ್ದೇಶಕರು ಬಂದರು, ಎಲ್ಲರಲ್ಲೂ ಹೊಸ ಭಾವ, ಹೊಸ ಉತ್ಸಾಹ ತುಂಬಿತ್ತು. ಸಂಗೀತ ನಿರ್ದೇಶಕರ ಕಿರು ಪರಿಚಯವಾದ ನಂತರ, ನಾಟಕ ನಿರ್ದೇಶಕರು “ಹಾಡಲು ಇಚ್ಛಿಸುವವರು ಇಲ್ಲೇ ಉಳಿಯಿರಿ, ಮತ್ತೆಲ್ಲರು ಪಕ್ಕದ ಕೊಠಡಿಗೆ ಬನ್ನಿ, ನಮ್ಮ ತಾಲೀಮನ್ನು ಮುಂದುವರೆಸೋಣ” ಎಂದು ಹೊರ ನಡೆದರು.

ಸಂಗೀತ ನಿರ್ದೇಶಕರು ತಡ ಮಾಡದೆ, ತಮ್ಮ ಕಾಯಕದಲ್ಲಿ ತೊಡಗಿಕೊಂಡರು, ಅವರ ಮುಂದೆ ಕುಳಿತ ಐದು ಜನ ಹುಡುಗಿಯರು, ಒಬ್ಬನೇ ಹುಡುಗನಿಗೆ ನಾಟಕದ ಹಾಡುಗಳನ್ನು ತಾವು ಸಂಯೋಜಿಸಿದ್ದ ರಾಗದಲ್ಲಿ ಹಾಡಲು ಶುರು ಮಾಡಿದರು, ಒಂದೆರಡು ಬಾರಿ ಅವರು ಹಾಡಿ, ಮಕ್ಕಳಿಗೆ ಗುಂಪಿನಲ್ಲಿ ಒಟ್ಟಿಗೆ ಹಾಡಲು ಹೇಳಿದರು.

ಸಿಕ್ಕಿದ್ದೇ ಅವಕಾಶ ಎಂದು ನಮ್ಮ ಬಸವನು ಹುಡುಗಿಯರೊಂದಿಗೆ ಹಾಡಲು ಶುರು ಮಾಡಿದನು.. ತನ್ನಲ್ಲಿ ಅವಿತು ಕುಳಿತ್ತಿದ್ದ ಗಾಯಕರುಗಳಾದ, ಎಸ್.ಪಿ. ಬಿ , ಸೋನು ನಿಗಮ್ ಅವರನ್ನು ಬಡಿದೆಬ್ಬಿಸಿದನು. ತನ್ನಲ್ಲಿರುವ ಎಲ್ಲ ಶಕ್ತಿ ಮೀರಿ ಹಾಡಿದನು.

ಗುರುಗಳು ಒಂದು ಸರ್ತಿ, ಎರಡನೇ ಸರ್ತಿ ಮಕ್ಕಳಿಂದ ಹಾಡಿಸಿ ಕೇಳಿದರು.. ಎಲ್ಲೋ ಏನೋ ಸರಿ ಹೋಗುತ್ತಿಲ್ಲ ಎಂದೆನಿಸಿತು… ಮತ್ತೊಮ್ಮೆ ಮಗದೊಮ್ಮೆ ಅವರು ಹಾಡಿ ತೋರಿಸಿದರು..

ಎಷ್ಟೇ ಸರಿಪಡಿಸಿದರು ಗುಂಪಿನಿಂದ ಶ್ರುತಿಬದ್ಧವಾಗಿ ಹಾಡು ಹೊರಹೊಮ್ಮಲಿಲ್ಲ.. ಗುರುಗಳಿಗೆ ತಮ್ಮ ತಾಳ್ಮೆಯ ಪರೀಕ್ಷೆ ನಾಡಿಯುತ್ತಿದೆ ಎಂದೆನಿಸಿತು. ಸ್ವಲ್ಪ ತಡೆದು, ಒಬ್ಬೊಬರಿಗೆ ಹಾಡಲು ಹೇಳಿದರು. ಮೊದಲಿಗೆ ಗುಂಪಿನಲ್ಲಿದ್ದ ಏಕೈಕ ಹುಡುಗನಾದ ಬಸವನ ಕಡೆ ಬೆರಳು ಮಾಡಿ ಹಾಡು ಎಂದರು.

ನಮ್ಮ ಬಸವನಲ್ಲಿದ್ದ ಎಸ್.ಪಿ. ಬಿ ಅವರು ಮೈಗೊಡವಿ ಎದ್ದು ನಿಂತು, ಹಾಡನ್ನು ಹಾಡಿಯೇ ಬಿಟ್ಟರು.. ಗುಂಪಿನಲ್ಲಿದ್ದ ಕಳ್ಳ ಬೆಕ್ಕು ಸಿಕ್ಕಿಬಿದ್ದಿತು, ಚಿತ್ರಮಂಜರಿಯನ್ನು ನೋಡಿ, ಗಾಯಕನಾಗಿದ್ದ ನಮ್ಮ ಬಸವ, ಶ್ರುತಿಬದ್ಧವಾಗಿ ಹಾಡುತ್ತಿದ್ದ ಗುಂಪಿನಲ್ಲಿ ಅಪಶ್ರುತಿಯನ್ನು ನುಡಿಸುತ್ತಿದ್ದನು.

ಸಂಗೀತ ಮೇಷ್ಟ್ರು, ಬಸವನಿಗೆ, “ನೋಡಪ್ಪ, ನಾನು ನಿನಗೆ ಹಾಡನ್ನು ಹಾಡಲು ಹೇಳಿಕೊಡಬಹುದು, ಆದರೆ ನಿನ್ನ ಗಂಟಲನ್ನು ನನ್ನಿಂದ ಸರಿಪಡಿಸಲು ಆಗೋದಿಲ್ಲ.. ಆದ್ದರಿಂದ, ನೀನು ನಾಟಕದ ಪಾತ್ರವನ್ನು ಮಾಡು ಹೋಗು, ಈ ಹುಡುಗಿಯರು ಹಾಡನ್ನು ಹಾಡಲಿ” ಎಂದು ವಿನಮ್ರವಾಗಿ ಹೇಳಿದರು.

ನಮ್ಮ ಬಸವನ ಕನಸು ನುಚ್ಚು ನೂರಾಯಿತು. “ರೀ ಮೇಷ್ಟ್ರೇ, ನಿಮಗೆ ನಾನು ಎಂತ ಗಾಯಕ ಅಂತ ಗೊತ್ತಿಲ್ಲ, ನಾನು ಒಮ್ಮೆ ಹಾಡಿದರೆ, ನನ್ನ ಗೆಳೆಯರೆಲ್ಲ ಮತ್ತೊಮ್ಮೆ ಹಾಡು ಅಂತ ದುಂಬಾಲು ಬೀಳ್ತಯಿದ್ರು , ನಾನು ಯಾವ ತಂಡದಲ್ಲಿ ಇರುತ್ತಿದೆನೋ, ಆ ತಂಡ ತಪ್ಪದೆ ಅಂತ್ಯಾಕ್ಷರಿಯಲ್ಲಿ ಗೆಲ್ಲುತ್ತಿತ್ತು ಗೊತ್ತಾ.. ” ಎಂದು ಹೇಳಬೇಕೆಂದೇನಿಸಿದರು ಹುಡುಗಿಯರ ಮುಂದೆ ಅವಮಾನವಾದಂತಾಗಿದ್ದ ನಮ್ಮ ಬಸವನಿಗೆ ಮಾತೇ ಹೊರಡಲಿಲ್ಲ.

ತಲೆ ತಗ್ಗಿಸಿ ಅಲ್ಲಿಂದ ಹೊರನಡೆದು, ಪಕ್ಕದ ಕೊಠಡಿಗು ಹೋಗದೆ, ಕಾಲೇಜಿನ ಕ್ಯಾಂಟೀನ್ನನ್ನು ಸೇರಿದನು. ಅಲ್ಲಿ ಅವನ ನೆಚ್ಚಿನ ಗುರುಗಳಾದ ಸಂಸ್ಕೃತದ ಮೇಷ್ಟ್ರು, ಅಕಾಲದಲ್ಲಿ ಕ್ಯಾಂಟೀನಿನಲ್ಲಿ ಕಂಡ ಬಸವನನ್ನು ಕರೆದು ವಿಚಾರಿಸಿದರು.

ನಮ್ಮ ಬಸವ, ಅಳುಮೊರೆಯಲ್ಲಿಯೇ ನಡೆದ ವಿಚಾರವನ್ನು ತಿಳಿಸಿದನು. ಮೇಷ್ಟ್ರು ತಮ್ಮಲ್ಲಿಯೇ ಒಮ್ಮೆ ನಕ್ಕು, “ನೋಡು ಬಸವ, ನೀನು ನಿನ್ನ ಸಂತೋಷಕ್ಕೆ ಹಾಡಿಕೊಳ್ಳುವುದು, ನಿನ್ನ ಶಾಲೆಯಲ್ಲಿ ನಿನ್ನ ಗೆಳೆಯರು ನಿನ್ನಿಂದ ಹಾಡಿಸಿ ಸಂತೋಷ ಪಡುವುದು ಬೇರೆ, ನಾಟಕ್ಕಕ್ಕೆ ಬೇಕಾದ ಧ್ವನಿ, ಏರಿಳಿತ, ಮಾಧುರ್ಯ ಬೇರೆ… ಅವರು ನಿನ್ನನ್ನು ಹೊರ ಹಾಕಿರಬಹುದು.. ಆದರೆ ನೀನು ಸದ್ಯಕ್ಕೆ ನಿನ್ನಲ್ಲಿ ಇರುವ ಗಾಯಕನಿಗೆ ಸರಿಯಾದ ತಾಲಿಮನ್ನು ಕೊಡು, ನಿನ್ನ ಧ್ವನಿಯನ್ನು ಸರಿಯಾಗಿ ರೂಪಿಸಿಕೊ, ಅದನ್ನು ಇಂಪಾಗಿಸಿಕೊಳ್ಳಲು ಏನು ಬೇಕೋ ಅದನ್ನು ಶ್ರದ್ದೆಯಿಂದ ಪಾಲಿಸು, ಆಗ ನೀನೊಬ್ಬ ಗಾಯಕನಾಗಲು ಸಾಧ್ಯ… ಕೇವಲ ಶಾಲೆಯಲ್ಲಿ ನೀನು ಹಾಡಿದೆ ಎಂದಾಕ್ಷಣ ನೀನು ದೊಡ್ಡ ಗಾಯಕನಾಗುವುದಿಲ್ಲ, ‘ಮೂಗು ಇರದೇ ಇರುವವರ ರಾಜ್ಯದಲ್ಲಿ, ಅರ್ಧ ಮೂಗು ಇರುವವನೆ ರಾಜ’ ಎಂಬಂತೆ ನೀನು ನಿನ್ನ ಶಾಲೆಯಲ್ಲಿ ಗಾಯಕನಾಗಿರಬಹುದು, ಆದರೆ ರಂಗಕ್ಕೆ ಬೇಕಾದ ಸತ್ವ ನಿನ್ನಲ್ಲಿ ಇನ್ನು ಬೆಳೆದಿಲ್ಲ, ಅದನ್ನ ಬೆಳೆಸಿಕೊಳ್ಳಬೇಕಾದದ್ದು ನಿನ್ನ ಕರ್ತವ್ಯ. ಸರಿ ನೀನು ಈ ವರುಷ ನಾಟಕದಲ್ಲಿ ಪಾತ್ರವನ್ನು ನಿರ್ವಹಿಸು, ಹಾಗೆ ನಾಟಕದ ನಿರ್ದೇಶಕರಿಂದ, ಸಂಗೀತ ನಿರ್ದೇಶಕರಿಂದ ನಿನ್ನ ಗಂಟಲನ್ನು ಹಾಡುಗಳಿಗೆ ಹೇಗೆ ಸರಿ ಹೊಂದಿಸಿಕೊಳ್ಳಬಹುದು , ಏನೇನನ್ನು ಅಭ್ಯಾಸ ಮಾಡಬೇಕು ಎಂದು ಕೇಳಿ ತಿಳಿದಿಕೊ, ಹೋಗು, ನಾನು ಬೇಕಾದರೆ ಅವರಲ್ಲಿ ಒಂದು ಮಾತನ್ನು ಹೇಳುತ್ತೇನೆ ” ಎಂದು ಅವನಿಗೆ ಉಪದೇಶವನ್ನು ಕೊಟ್ಟರು.

ನಮ್ಮ ಬಸವನಿಗೆ ಅವರ ಮಾತುಗಳು ಹಿಡಿಸಲಿಲ್ಲ, ತಾನು ಒಬ್ಬ ಒಳ್ಳೆಯ ಗಾಯಕನಾಗಿರದೆ, ತನ್ನ ಶಾಲೆಯ ಗೆಳೆಯರು ಹೇಗೆ ಅವನಿಂದ ಮತ್ತೊಮ್ಮೆ, ಮಗದೊಮ್ಮೆ ಹಾಡಿಸಿ ಕೇಳುತ್ತಿದ್ದರು, ಎನ್ನುವ ವಾದಕ್ಕೆ ಬಸವನ ಮನಸ್ಸು ಹೊರಳಿತು, ಅವನು ಕೇಳಿಯೇ ಬಿಟ್ಟ. “ಅಲ್ಲ ಸರ್, ನಾನು ಶಾಲೆಯಲ್ಲಿ ಅಷ್ಟೆಲ್ಲಾ ಹಾಡುತ್ತಿದ್ದೆ, ನನ್ನ ಗೆಳೆಯರು ಯಾರು ನನ್ನ ಧ್ವನಿಯ ಬಗ್ಗೆ ಚಕಾರ ಎತ್ತಿಲ್ಲ, ಇವರೊಬ್ಬರು ಬಂದು ಹೀಗೆ ಹೇಳಿದರೆ ಹೇಗೆ ಸರ್? ಅಂದ್ರೆ ನನ್ನ ಗೆಳೆಯರೆಲ್ಲ ಸುಳ್ಳರೋ ?”

“ಸರಿ, ಈಗ ನೀನೊಂದು ಹಾಡನ್ನು ಹಾಡು, ಭಟ್ಟರೇ, ಲೋ ಮಾಣಿ, ನಮ್ಮ ಬಸವ ಈಗ ಒಂದು ಹಾಡನ್ನ ಹಾಡ್ತಾನೆ ಎಲ್ರು ಕೇಳಿ” ಎಂದು ಮೇಷ್ಟ್ರು ಹೇಳಿದರು.

ನಮ್ಮ ಬಸವ ಯೋಚಿಸಿ, ಶಾಲೆಯಲ್ಲಿ ತನ್ನ ಯಾವ ಹಾಡಿಗೆ ಶಿಳ್ಳೆ, ಚಪ್ಪಾಳೆಗಳು ಬೀಳುತ್ತಿದ್ದವೋ ಆ ಹಾಡನ್ನು ಆಯ್ದುಕೊಂಡನು..

“ಕೆಂಚಾಲೋ ಮಂಚಾಲೂ ಎಂಗೌರ ನಿನ್ನ ಡೌಗಳು…. ” ಹಾಡನ್ನು ಜೋರಾಗಿ ಹಾಡಲು ಶುರು ಮಾಡಿಯೇ ಬಿಟ್ಟ.

ಅಲ್ಲೇ ಹಾಡನ್ನು ಆಲಿಸಿದ ಭಟ್ಟರು “ಹೋಯಿ ಮರಾಯರೆ, ಇದೆಂಥ, ನನ್ನ ಕ್ಯಾಂಟೀನಿನಲ್ಲಿ ಇರುವ ಎರಡು ಮೂರು ಗಿರಾಕಿಗಳನ್ನ ಓಡಿಸುವ ಯೋಚನೆಯೋ ಎಂತದೋ , ಓ ಬಸವಣ್ಣ ನೀನು ಹಾಡಬೇಕಿದ್ದರೆ ಬೇರೆ ಎಲ್ಲಿಯಾದರೂ ಹಾಡು ಮಾರಾಯ, ಇಲ್ಲಿ ಬೇಡ, ನಿನ್ನ ಗಂಟಲಿಗೆ ನನ್ನ ವ್ಯಾಪಾರ ಪಡ್ಚ ಅಷ್ಟೇ….” ಎಂದು ಬಸವನ ಹಾಡನ್ನು ಅರ್ಧಕ್ಕೆ ನಿಲ್ಲಿಸಿದರು.ಅಲ್ಲಿ ತನ್ನ ಕಿವಿಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡಿದ್ದ ಮಾಣಿಯು ತನ್ನ ಕಿವಿಗಳು ರಕ್ತಸ್ರಾವದಿಂದ ಬಚಾವಾದವು ಎಂದು ಖುಷಿಯಿಂದ ಅಲ್ಲಿಂದ ಕಂಬಿಯನ್ನು ಕಿತ್ತಿದನು.

ನಮ್ಮ ಬಸವನ ಪೊರೆಯುಕ್ತ ಕಣ್ಣುಗಳು ತಿಳಿಗೊಂಡವು, ತನ್ನ ಗಂಟಲಿನ ಸತ್ಯ ಅವನಿಗೆ ಅಂದೆ ತಿಳಿಯಿತು, ತನ್ನಲ್ಲಿ ಎಸ್.ಪಿ. ಬಿ, ಸೋನು ನಿಗಮ್ ಅವರು ಇರಬಹುದು, ಆದರೆ ಅವರು ಹಾಡಬೇಕಾದರೆ, ಅದು ತನ್ನ ಗಂಟಲಿನ ಮುಖಾಂತರವೇ, ಎನ್ನುವ ಸತ್ಯವನ್ನು ಅರಿತನು. ಬಾಲಕರ ಶಾಲೆಯಲ್ಲಿ ಓದಿದ ಅವನಿಗೆ ಅವನಲ್ಲಿರುವ ನ್ಯೂನತೆಗಳು ಎದ್ದು ಕಂಡವು, ಅವನ ಗೆಳೆಯರು ಅವನನ್ನು ಹೋಗಳಿ ಅಟ್ಟಕ್ಕೆ ಏರಿಸಿ, ಅವನಿಂದ ಹಾಡಿಸಿ ಮಜವನ್ನು ತೆಗೆದುಕೊಳ್ಳುತ್ತಿದ್ದರು ಎನ್ನುವ ಸತ್ಯವನ್ನು ಅರಿತನು.

ಸಂಸ್ಕೃತ ಮೇಷ್ಟ್ರು ಹೇಳಿದ ಮಾತುಗಳು ಸತ್ಯ ಎಂದೆನಿಸಿ, ಈ ವರುಷ ತಾನು ಪಾತ್ರ ಮಾಡುವುದಾಗಿ, ಮುಂದಿನ ವರುಷದ ಒಳೆಗೆ ತನ್ನ ಗಂಟಲನ್ನು ಹಾಡಿಗೆ ಸಿದ್ಧಪಡಿಸಿಕೊಳ್ಳಲು ಪ್ರಯತ್ನಿಸುವೆ ಎಂದು ನಿರ್ಧರಿಸಿ ಸಂಸ್ಕೃತ ಮೇಷ್ಟ್ರು ಗೆ ವಂದಿಸಿ ಮತ್ತೇನನ್ನು ಹೇಳದೆ , ನಾಟಕದ ತಾಲಿಮಿನ ಕೊಠಡಿಗೆ ಹೊರಟನು…

ಇಂದಿಗೆ ಹತ್ತು ವರುಷಗಳು ಸಂದಿವೆ, ನಮ್ಮ ಗಾನಯೋಗಿ, ಗಾನ ಗಂಧರ್ವ ’ಬಸವ’ರವರು ಹಾಡುವುದನ್ನು ಬಿಟ್ಟು, ಅಂದು ಅವನಿಗಾದ ಜ್ಞಾನೋದಯ, ಎಷ್ಟೋ ಜನರ ಕಿವಿಗಳನ್ನು ರಕ್ಷಿಸಿದೆ.

Leave a Reply

Your email address will not be published. Required fields are marked *

Related Post

ಬೀಡಿ ನಾಣಿಬೀಡಿ ನಾಣಿ

ಒಂದು ದೊಡ್ಡ ವೃತ್ತಾಕಾರವನ್ನು ಮಾಡಿ, ಒಬ್ಬರ ಕೈಯನ್ನು ಇನ್ನೊಬ್ಬರು ಹಿಡಿದುಕೊಂಡು ” ಆಂಗಿಕಂ ಭುವನಂ ಯಸ್ಯ ವಾಚಿಕಂ ಸರ್ವವಾಙ್ಮಯಮ್I ಆಹಾರ್ಯಂ ಚಂದ್ರತಾರಾದಿ ತಂ ನುಮಃ ಸಾತ್ವಿಕಂ ಶಿವಮ್” ಶ್ಲೋಕವನ್ನು ಎಲ್ಲರು ಘಂಟಾಘೋಷವಾಗಿ ಹೇಳಿದೆವು, ಆಚೆ ಕುಳಿತ ಪ್ರೇಕ್ಷಕರಿಗೂ ಕೇಳುವ ಹಾಗೆ.. ಶ್ಲೋಕದ ಕಡೆಯಲ್ಲಿ ಮೂರು ಬಾರಿ ಓಂ ಓಂ ಓಂ ಎಂದು

ಜಿಲೇಬಿ ಸೀನಜಿಲೇಬಿ ಸೀನ

ಅಂತರ ವರ್ಗ, ಅಂತರ ಕಾಲೇಜು ನಾಟಕ ಸ್ಪರ್ಧೆಗಳು ಮುಗಿದು ಎಷ್ಟೋ ತಿಂಗಳುಗಳು ಕಳೆದಿದ್ದವು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಲ್ಲಿ ಏನೋ ಖಾಲಿ ಖಾಲಿ ಭಾವನೆ, ತರಗತಿಗಳು ಮುಗಿದ ಕೂಡಲೇ, ರಂಗ ಪ್ರಯೋಗ ಶಾಲೆಗೆ ಓಡಿ ಹೋಗಿ, ಕಲೆತು, ನಾಟಕಾಭಿನಯ,ಸಂಗೀತಾಭ್ಯಾಸ , ಸ್ನೇಹತರೊಂದಿಗೆ ತರಲೆ ತಮಾಷೆ ಮಾಡುವ ಅವಕಾಶ ತಪ್ಪಿ

ಎಲ್ಲದರ ಜವಾಬ್ದಾರಿ ನಿಮ್ಮದೇ….!ಎಲ್ಲದರ ಜವಾಬ್ದಾರಿ ನಿಮ್ಮದೇ….!

ಬಹಳ ದಿನಗಳ ನಂತರ, ಪರಸ್ಥಳದಲ್ಲಿ ಒಂದು ನಾಟಕ ಪ್ರದರ್ಶಿಸುವ ಯೋಗ ಕೂಡಿ ಬಂದಿತ್ತು, ಈ ಸರ್ತಿ ಗುಲ್ಬರ್ಗ ಕಡೆ ನಮ್ಮ ಪಯಣ ನಡೆಸಬೇಕಿತ್ತು.ಎಂದಿನಂತೆ ಬಸ್ನಲ್ಲಿ ಪ್ರಯಾಣ ಮಾಡುವುದು ಬೇಡ, ರೈಲಿನಲ್ಲಿ ಪ್ರಯಾಣ ಬೆಳೆಸೋಣ, ರೈಲಿನಲ್ಲಾದರೆ, ಹಾಡು, ಹರಟೆ, ತಮಾಷೆ, ತರಲೆ ಮಾಡಿಕೊಂಡು, ಸುಖವಾಗಿ ಪ್ರಯಾಣ ಮಾಡಬಹುದು ಎಂದು ಪರಿಗಣಿಸಿ