ಓರಬಾಯಿ ಲಕ್ಷ್ಮೀದೇವಮ್ಮನವರು

ಓರಬಾಯಿ ಲಕ್ಷ್ಮೀದೇವಮ್ಮನವರು ಕ್ರಿ ಶ ೧೮೬೫ನೇ ಇಸವಿಯಲ್ಲಿ ಸೊಂಡೂರಿನ ದಿವಾನರಾಗಿದ್ದ ಲಕ್ಷ್ಮಣರಾಯರು ಮತ್ತು ಗೋದಾವರಿಬಾಯಿಯವರ ಏಕಮಾತ್ರ ಪುತ್ರಿಯಾಗಿ ಜನಿಸಿದರು. ಮಗುವಿನ ೫ನೆಯ ವರ್ಷದಲ್ಲಿಯೇ ತಂದೆ ತಾಯಿಯರು, ಮಗುವಿನ ೧೧ ವರ್ಷದ ಸೋದರಮಾವ, ಓರಬಾಯಿ ಮಧ್ವರಾಯರೊಂದಿಗೆ ಮದುವೆ ಮಾಡಿದ್ದರು. ಲಕ್ಷ್ಮೀದೇವಮ್ಮನವರು ಶಾಲೆಗೆ ಹೋಗಿ ಕಲಿಯಲಿಲ್ಲ, ಆದರೆ ತಂದೆಯವರೇ ಮನೆಯಲ್ಲಿ ಕನ್ನಡ ಹಾಗೂ ಸಂಸ್ಕೃತ ಪಾಠ ಮಾಡುತ್ತಿದರು. ತಾಯಿಯವರು ಸಂಪ್ರದಾಯದ ಹಾಡುಗಳು, ಮನೆಕೆಲಸ, ನೇಮ – ನಿಷ್ಠೆಗಳನ್ನು ಕಲಿಸುತ್ತಿದ್ದರು. ಈಕೆ ಇನ್ನೂ ಬಾಲಕಿಯಾಗಿದ್ದಾಗ ಹರಪನಹಳ್ಳಿ ಭೀಮವ್ವನವರು ಜೀವಿತವಿದ್ದರಂತೆ. ಹಾಗಾಗಿ ಭೀಮವ್ವನವರ ರಚನೆಗಳನ್ನು ಪುಟ್ಟ ಬಾಲಕಿ ಲಕ್ಷ್ಮೀದೇವಮ್ಮನವರು ಕಲಿಯುತ್ತಿದ್ದರಂತೆ. ಇವರ ಪತಿ ಮಧ್ವರಾಯರು ತಮ್ಮ ವಿದ್ಯಾಭ್ಯಾಸ ಮುಗಿಸಿ ವಕೀಲಿ ವೃತ್ತಿಯನ್ನು, ಗುತ್ತಿ ಎಂಬ ಊರಿನಲ್ಲಿ ಪ್ರಾರಂಭಿಸಿದರು. ಪ್ರಾಪ್ತ ವಯಸ್ಕರಾಗಿದ್ದ ಲಕ್ಷ್ಮೀದೇವಮ್ಮನವರು, ಪತಿ ಗೃಹಕ್ಕೆ ಬಂದರು. ಸ್ವಲ್ಪ ಕಾಲದ ನಂತರ ಅವರಿಗೊಂದು ಗಂಡು ಮಗುವಾಗಿ, ಒಂದು ವರ್ಷದ ನಂತರ ತೀರಿಹೋಯಿತು. ಬಹಳ ದುಃಖಿತರಾದ ದಂಪತಿಗಳೇಕೋ ಮತ್ತೊಂದು ಮಗುವಿನ ಬಗ್ಗೆ ಚಿಂತಿಸದೆ, ಮಧ್ವರಾಯರ ತಂಗಿ ಭಾಗಮ್ಮ ಮತ್ತು ಅವರ ಪತಿ ರಾಘವೇಂದ್ರ ರಾಯರ ೨ ಹೆಣ್ಣುಮಕ್ಕಳು, ೨ ಗಂಡುಮಕ್ಕಳಲ್ಲಿ ಕೊನೆಯ ಮಗನಾದ ಕೃಷ್ಣಮೂರ್ತಿಯನ್ನು ದತ್ತುಮಗನನ್ನಾಗಿ ಸ್ವೀಕರಿಸಿದರು.

ಗುತ್ತಿಯಲ್ಲಿ ನೆಲೆಸಿದ್ದರಿಂದ ಲಕ್ಷ್ಮೀದೇವಮ್ಮನವರನ್ನು ಗುತ್ತೆವ್ವ ಎಂದೇ ಕರೆಯುತ್ತಿದ್ದರು. ಮಧ್ವರಾಯರು ಸ್ವಲ್ಪ ಕಾಲದ ನಂತರ ತಮ್ಮ ವಾಸ್ತವ್ಯವನ್ನು ಆದವಾನಿಗೆ ಬದಲಾಯಿಸಿದರು. ಲಕ್ಷ್ಮೀದೇವಮ್ಮನವರು ಲಲಿತ ಕಲೆಗಳಲ್ಲಿಯೂ ನಿಷ್ಣಾತರಾಗಿದ್ದರು. ಅಲಂಕರಣ ಸಾಮಗ್ರಿಗಳನ್ನು ತಯಾರಿಸುವುದು, ಜೇಡಿಮಣ್ಣಿನಲ್ಲಿ ಬೊಂಬೆಗಳನ್ನು ಮಾಡುವುದು, ಬಳಪದ ಕಲ್ಲಿನಲ್ಲಿ ದೇವತಾ ವಿಗ್ರಹಗಳನ್ನು ತಯಾರಿಸುವುದು, ಹಸನಾದ ಮಣ್ಣಿನ ಮುದ್ದೆಯಲ್ಲಿ ಪಾರಿವಾಳಗಳನ್ನು ಮಾಡುವುದು, ಚಿತ್ರ-ವಿಚಿತ್ರ ರಂಗೋಲಿಗಳನ್ನು ಬಿಡಿಸುವುದೆಲ್ಲದರ ಜೊತೆಗೆ ಪಾಕಶಾಸ್ತ್ರ ಪ್ರವೀಣೆಯೂ ಆಗಿದ್ದರು. ಇಷ್ಟೆಲ್ಲಾ ಕಲೆಗಳ ಜೊತೆಗೆ ಲಕ್ಷ್ಮೀದೇವಮ್ಮನವರು ಮನೆವೈದ್ಯವನ್ನೂ ಮಾಡುತ್ತಿದ್ದರು. ಸನ್ನಿಪಾತ ಜ್ವರ, ಮಕ್ಕಳಿಗೆ ಬರುವ ವಾಯು, ಅಪಸ್ಮಾರ ಮುಂತಾದ ಖಾಯಿಲೆಗಳಿಗೆ ಮನೆಯಲ್ಲಿಯೇ ಗುಳಿಗೆಗಳನ್ನು ತಯಾರಿಸಿ ಕೇಳಿದವರಿಗೆ ಉಚಿತವಾಗಿ ಕೊಡುತ್ತಿದ್ದರು. ಇದು ಅವರಿಗೆ ಅವರ ತವರು ಮನೆಯಿಂದ ಬಂದ ಕೊಡುಗೆಯಾಗಿತ್ತು.

ಲಕ್ಷ್ಮೀದೇವಮ್ಮನವರು ಅತ್ಯಂತ ದೈವ ಭಕ್ತರಾಗಿದ್ದರು. ಆದರೆ ಮೂಢನಂಬಿಕೆಗೆ ಮಾತ್ರ ಬಗ್ಗುತ್ತಿರಲಿಲ್ಲ. ಅವರ ಮನೆಯಲ್ಲಿ ವರಮಹಾಲಕ್ಷ್ಮಿ ವ್ರತವನ್ನು ಮಾಡುವ, ಕಲಶ ಸ್ಥಾಪನೆ ಮಾಡುವ ಸಂಪ್ರದಾಯವಿರಲಿಲ್ಲ. ಬೇರೆಯವರ ಮನೆಗೆ ಹೋಗಿ ಪೂಜೆ ಮಾಡಿಕೊಂಡು ಬರುತ್ತಿದ್ದರು. ವ್ರತವನ್ನು ಹಿಡಿದಿರಲಿಲ್ಲ. ಕಲಶ ಸ್ಥಾಪನೆ ಮಾಡಿದರೆ ಏನಾಗುವುದೋ ಎಂಬ ಭಯವಿತ್ತು. ಆದರೆ ಜಗನ್ಮಾತೆಯಾದ ಮಹಾಲಕ್ಷ್ಮಿಯನ್ನು ಪೂಜಿಸುವುದರಿಂದ ಏನೂ ತೊಂದರೆ ಆಗುವುದಿಲ್ಲವೆಂದು ಯೋಚಿಸಿ, ಒಮ್ಮೆ ಧೈರ್ಯವಾಗಿ ಕಲಶ ಸ್ಥಾಪನೆಯನ್ನು ಮಾಡಿಯೇ ಬಿಟ್ಟರು. ವಿಜೃಂಭಣೆಯಿಂದ ಪೂಜೆ ಮುಗಿಸಿ, ಸುಧಾರಿಸಿಕೊಳ್ಳಲು ಹಾಗೇ ಮಗ್ಗುಲಾದಾಗ, ಏನೋ ಶಬ್ದ ಕೇಳಿಸಿದಂತಾಯಿತು. ಏನೆಂದು ನೋಡಿದರೆ, ಸರ್ವಾಲಂಕಾರಭೂಷಿತೆಯಾದ ಸುಮಂಗಲಿಯೊಬ್ಬರು ದೇವರ ಮನೆಯಿಂದ ಹೊರಗೆ ಹೋಗುತ್ತಿರುವಂತೆ ಕಾಣಿಸಿತು. ತಟ್ಟನೆ ಎದ್ದು, ಬಾಗಿಲಿಗೆ ಕೈ ಅಡ್ಡವಿಟ್ಟು ತಡೆದರು. ಯಾಕಮ್ಮಾ ಹೊರಟು ಹೋಗುತ್ತಿದ್ದೀಯ ಎಂದು ಕೇಳಿದಾಗ, ಸಾಂಗವಾಗಿ ಪೂಜೆ ನೆರವೇರಿತಲ್ಲಾ, ಅದಕ್ಕೇ ಹೊರಟೆ ಎಂದಳು ಆ ತಾಯಿ. ಲಕ್ಷ್ಮೀದೇವಮ್ಮನವರು ಸಾಧ್ಯವಿಲ್ಲ ತಾಯಿ, ನೀನು ನಮ್ಮಲ್ಲೇ ನೆಲೆಸಬೇಕು, ನಮ್ಮನ್ನೆಲ್ಲಾ ಅನುಗ್ರಹಿಸಬೇಕು. ಅದಕ್ಕೆಂದೇ ಅಲ್ಲವಾ ನಾನು ಪೂಜಿಸಿದ್ದು, ನಿನ್ನ ಕೃಪೆ, ಅನುಗ್ರಹ ನಮ್ಮ ಮನೆತನದ ಮೇಲೆ ಯಾವಾಗಲೂ ಇರಬೇಕೆಂದು ಕೇಳಿಕೊಂಡಾಗ, ತಾಯಿ ಆಗಲಿ ಎಂದು ಒಪ್ಪಿಕೊಂಡು ಮತ್ತೆ ವಾಪಸ್ಸು ಒಳಗೆ ಹೋದಂತಾಯಿತು.

ಅದೇ ತರಹ ಅನಂತ ಪದ್ಮನಾಭನ ವ್ರತದ ವಿಚಾರದಲ್ಲೂ ನಡೆಯಿತು. ಒಮ್ಮೆ ಅವರಿಗೆ ಹೊಸ ದಾರ ಮತ್ತು ಮಂತ್ರಾಕ್ಷತೆ ಸಿಕ್ಕಿತು. ತಮ್ಮ ದತ್ತಕ ಮಗನ ಹತ್ತಿರ ವ್ರತ ಮಾಡಿಸಬೇಕೆಂದು ಅಂದುಕೊಂಡರು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಆತನ ಅಣ್ಣ ರಾಮಚಂದ್ರರಾಯರು, ಆ ವ್ರತವನ್ನು ಅನೂಚಾನವಾಗಿ ನಡೆಸಿದರು.

ಅವ್ವನವರು ಅನೇಕ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದ್ದರು. ತಿರುಪತಿ, ಮಂಗಳಗಿರಿ, ಸಿಂಹಾಚಲ ಕ್ಷೇತ್ರದ ದೇವತೆಗಳನ್ನು ಸ್ತುತಿಸಿ ಸಾಹಿತ್ಯವನ್ನು ರಚಿಸಿರುವರು. ಅವ್ವನವರ ಮನೆಯು ಅನ್ನದಾನ ಹಾಗೂ ವಿದ್ಯಾದಾನದ ಕೇಂದ್ರವಾಗಿತ್ತು. ಅನೇಕರಿಗೆ ಅಶ್ರಯ ಕೊಟ್ಟಿದ್ದ ಸ್ಥಳವಾಗಿತ್ತು. ಅಮ್ಮನವರು ಭಗವಂತನ ಸೇವೆಗಾಗಿ ಸದಾ ದೇಹ – ಮನಸ್ಸನ್ನು ಮೀಸಲಾಗಿಟ್ಟಿದ್ದರು. ಇವರಿಗೆ ತಂದೆಯವರೇ ಮಣಿಮಂಜರಿ, ಮಧ್ವವಿಜಯ ಮುಂತಾದ ಗ್ರಂಥಗಳ ಪಾಠ ಮಾಡಿದ್ದರು. ಗುರೂಪದೇಶವೂ ಆಗಿತ್ತು. ಉತ್ತರಾದಿ ಮಠದ ಸ್ವಾಮಿಗಳಾದ ಶ್ರೀ ಶ್ರೀ ಸತ್ಯಧ್ಯಾನ ಸ್ವಾಮಿಗಳು ವಿಶೇಷವಾಗಿ ಅನುಗ್ರಹಿಸಿದ್ದರು. ರಾಯರ ಪರಮ ಭಕ್ತೆಯಾಗಿದ್ದ ಅವ್ವನವರಿಗೆ, ರಾಯರು ಸ್ವಪ್ನದಲ್ಲಿ ದರ್ಶನ ಕೊಡುತ್ತಿದ್ದರಂತೆ. ರಾಯರ ಮಠದ ಸ್ವಾಮಿಗಳಾದ ಶ್ರೀ ಸುಶೀಲೇಂದ್ರ ತೀರ್ಥರು ಹಾಗೂ ಶ್ರೀ ಸುಯಮೀಂದ್ರ ಶ್ರೀಗಳೂ ಅವ್ವನವರ ಮೇಲೆ ವಿಶೇಷ ಅನುಗ್ರಹ ಮಾಡಿದ್ದರಂತೆ. ಒಮ್ಮೆ ಅವ್ವನವರು ಸೋದೆ ಮಠಕ್ಕೆ ಹೋಗಿದ್ದಾಗ, ರಾಶಿ ರಾಶಿಯಾಗಿ ಬಿದ್ದಿದ್ದ ತರಕಾರಿಗಳನ್ನು ನೋಡಿ, ತರಕಾರಿಗಳ ಮೇಲೆಯೇ ಪದ ರಚಿಸಿದ್ದರಂತೆ. ಮತ್ತೊಮ್ಮೆ ಹಾಡಿಸಿ ಕೇಳಿ, ಆನಂದದಿಂದ ಸ್ವಾಮಿಗಳು ಮಂತ್ರಾಕ್ಷತೆಯನ್ನು ಕೊಟ್ಟು ಹರಸಿದರಂತೆ

Leave a Reply

Your email address will not be published. Required fields are marked *

Related Post

ನಂಜನಗೂಡು ತಿರುಮಲಾಂಬಾನಂಜನಗೂಡು ತಿರುಮಲಾಂಬಾ

ತಿರುಮಲಾಂಬಾ ಅವರು ಶ್ರೀವೈಷ್ಣವ ಮತಸ್ಥರಾದ ಶ್ರೀ ವೆಂಕಟಕೃಷ್ಣ ಅಯ್ಯಂಗಾರ್ ಹಾಗೂ ಅಲಮೇಲಮ್ಮನವರಿಗೆ ಪುತ್ರಿಯಾಗಿ ಜನಿಸಿದರು. ಇವರ ಜೀವಿತಾವಧಿ ೧೮೮೭ ರಿಂದ ೧೯೮೨ರವರೆಗಿದೆ. ತಿರುಮಲಾಂಬಾ ಅವರು ನಂಜನಗೂಡು ನಿವಾಸಿಗಳಾಗಿದ್ದರು. ಅವರೊಬ್ಬ ಕನ್ನಡದ ಲೇಖಕಿ, ಪತ್ರಕರ್ತೆ, ಸಂಪಾದಕಿ, ಪ್ರಕಾಶಕಿ ಹಾಗೂ ಸಮಾಜ ಸೇವಕಿಯಾಗಿದ್ದವರು. ಬಾಲ್ಯ ವಿವಾಹವಾಗಿ, ಈಕೆ ಪತಿಯನ್ನು ತಮ್ಮ ಚಿಕ್ಕ

ಬದುಕಿನ ಪುಟಗಳು ಭಾಗ – ೬ಬದುಕಿನ ಪುಟಗಳು ಭಾಗ – ೬

ನಮ್ಮ ನಾಯಕಿ ಹೊಸಾ ಕೆಲಸಕ್ಕೆ ಸೇರಿ, ಆತ್ಮವಿಶ್ವಾಸವನ್ನು ತಟ್ಟಿ ಎಬ್ಬಿಸಿಕೊಂಡಳಲ್ಲವೇ? ಆತ್ಮವಿಶ್ವಾಸ ಜಾಗೃತವಾದರೆ ಮಾತ್ರ ಸಾಲದು, ಕಷ್ಟ ಸಂದರ್ಭಗಳಲ್ಲಿ ಹೇಗೆ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಬೇಕೆಂಬುದನ್ನೂ ಬದುಕೇ ಕಲಿಸಿಕೊಡುವುದು. ನಾಯಕಿಗೆ ಪ್ರತೀ ಹೆಜ್ಜೆಯೂ ಅಲ್ಲಿ ಒಂದೊಂದು ಸವಾಲು, ಒಂದೊಂದು ದಿನವೂ ಒಂದೊಂದು ಸವಾಲು, ಒಂದೊಂದು ದಿನವೂ ಒಂದೊಂದು ಹೊಸ ಯುದ್ಧ. ಎದುರಾಳಿಗಳು

ಹೆಳವನಕಟ್ಟೆ ಗಿರಿಯಮ್ಮ – ೩ (ಕೊನೆಯ ಕಂತು)ಹೆಳವನಕಟ್ಟೆ ಗಿರಿಯಮ್ಮ – ೩ (ಕೊನೆಯ ಕಂತು)

ಗಿರಿಯಮ್ಮ ತನ್ನ ರಚನೆಗಳಲ್ಲಿ ಎಲ್ಲೂ ತನ್ನ ಸ್ವಂತ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟಿಲ್ಲ. ಎಲ್ಲೋ ಒಂದು ಕಡೆ “ತಂದೆತಾಯಿಯೆಂಬುದನು ನಾನೊಂದು.. ಗುರುತುವನರಿಯೆ ನಿಮ್ಮ ಕಂದಳೆನಿಸಿ.. ಕಡೆಹಾಯಿಸೋ ಹೆಳವನಕಟ್ಟೆ ರಂಗ..” ಎಂದು ಉಲ್ಲೇಖಿಸಿರುವುದನ್ನು ಕಂಡರೆ ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆ-ತಾಯಿಗಳನ್ನು ಕಳೆದುಕೊಂಡಿರುವುದು ತಿಳಿಯುವುದು. ಗಿರಿಯಮ್ಮ ತನ್ನ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದ ಹುಡುಗಿ.