ಆನ್ಲೈನ್ ವೈದ್ಯರು ಮತ್ತು ಚಿಕಿತ್ಸೆ

ಇಂಟರ್ನೆಟ್ಟೆಂಬ ಮಹಾ ಸಾಮ್ರಾಜ್ಯದಲ್ಲಿ ಎಲ್ಲ ಬಗೆಯ ಜನರಿದ್ದಾರೆ. ಶಿಕ್ಷಣ ತಜ್ಞರು, ಬ್ಯಾಂಕ್ ಕುಶಲಿಗಳು, ಅರ್ಥಶಾಸ್ತ್ರ ಪ್ರವೀಣರು, ರಾಜಕೀಯ ವಿಶ್ಲೇಷಕರು, ಸಿನಿಮಾ ವಿಮರ್ಶಕರು, ಎಲ್ಲರೂ ಸಿಗುವ ಪ್ರಪಂಚ ಈ ಫೇಸ್ ಬುಕ್. ಫೇಸ್ ಬುಕ್ಕೆಂದರೆ ಇದೊಂದೇ ಎಂದಲ್ಲವಲ್ಲ, ಇದರಂತೆಯೆ ಇರುವ ಹಲವಾರು ಸಾಮಾಜಿಕ ತಾಣಗಳು, ಒಟ್ಟಾರೆಯಾಗಿ ಹೇಳುವುದಾದರೆ ಆನ್ಲೈನ್ ಎಂಬಲ್ಲಿ ಎಲ್ಲ ಬಗೆಯ ಮಾಹಿತಿ, ಜನರು, ವಸ್ತುಗಳು ಸಿಗುತ್ತವೆ. ಮಾಹಿತಿಗೆ ಮಾತ್ರ ಸೀಮಿತವಾಗಬೇಕಿದ್ದ ಆನ್ಲೈನ್ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಹಿತಿಯನ್ನೂ ದಾಟಿ ಸೇವೆಯನ್ನೂ ಒದಗಿಸುತ್ತಿದೆ. ಅನೇಕ ಬಗೆಯ ಸೇವೆಗಳನ್ನು ದಯಪಾಲಿಸುತ್ತಿರುವುದು ಹೌದಾದರೂ ನಾವೀಗ ಮಾತನಾಡಬೇಕಿರುವುದು ವೈದ್ಯಸೇವೆಯನ್ನು. ವೈದ್ಯ ಸೇವೆಯ ಬಹುಮುಖ್ಯ ಅಂಗವೆಂದರೆ ರೋಗಿಯನ್ನು ಮುಖತಃ ನೋಡುವುದು. ಎಷ್ಟೇ ನುರಿತ ವೈದ್ಯನಾದರೂ ಒಮ್ಮೆ ರೋಗಿಯ ಮುಖವನ್ನು ನೋಡಿದರೆ ಆತನಿಗೆ ರೋಗಿಯ ರೋಗಲಕ್ಷಣದ ವಿವರಗಳು ರೋಗಿಯ ಹಾವಭಾವ , ಭಂಗಿ, ಮುಖ, ನೋವು ಕಂಡು ಚಿಕಿತ್ಸೆ ಕೊಡುವುದು ಸುಲಭವೂ ಮತ್ತು ಪರಿಣಾಮಕಾರಿಯೂ ಆಗಿರುತ್ತದೆ. ಆದರೆ ಆನ್ಲೈನಿನಲ್ಲಿ ಕೇಳಲಾಗುವ ಪರಿಹಾರಗಳು ಆ ರೋಗಿಯ ಪೂರ್ವಾಪರಗಳನ್ನು ಪರಿಗಣಿಸದೆ ಜೆನೆರಲ್ ಆದ ಚಿಕಿತ್ಸೆಯನ್ನು ಕೊಡುವುದಾಗಿರುತ್ತದೆ. ಸಾವಿರಾರು ತಾಣಗಳು ವೈದ್ಯಕೀಯ ಚಿಕಿತ್ಸೆಯನ್ನು ಆನ್ಲೈನ್ ನಲ್ಲಿ ಕೊಡುವಲ್ಲಿ ಸಕ್ರಿಯವಾಗಿದೆ. ನುರಿತ ಡಾಕ್ಟರ್ ಗಳಿಂದ ಸಲಹೆ ಸೂಚನೆ ಪಡೆಯಿರಿ ಎನ್ನುವ ಪಾಪ್ ಅಪ್ ಗಳೊಂದಿಗೆ ಅವು ಬಂದು ನಿಲ್ಲುತ್ತವೆ. ಆಚೆಯಿರುವ ವ್ಯಕ್ತಿ ಡಾಕ್ಟರ್ ಹೌದೋ ಅಲ್ಲವೋ ಕೂಡ ತಿಳಿಯದೆ ಚಾಟ್ ಮಾಡಿ ಅವನು ಕೊಟ್ಟ ಮಾತ್ರೆಗಳನ್ನೋ ಇನ್ನೇನ್ನೋ ತೆಗೆದುಕೊಳ್ಳುವ ಮೂರ್ಖರಿದ್ದಾರೆ. ವೈದ್ಯರಿಗೆ ರೋಗಿಯ ಪೂರ್ವಾಪರ ಹೇಗೆ ತಿಳಿಯಬೇಕೋ ಅದೇ ರೀತಿಯಲ್ಲಿ ರೋಗಿಗೂ ಸಹ ವೈದ್ಯರ ಪೂರ್ವಾಪರ ತಿಳಿಯಬೇಕಲ್ಲವೇ. ಅವೆಲ್ಲವನ್ನೂ ಬದಿಗೊತ್ತಿ ಅಂದದ ವೆಬ್ಸೈಟ್ ನ ಮೊರೆ ಹೋಗಿ ಅಲ್ಲಿಂದ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಅದೆಷ್ಟು ಆರೋಗ್ಯಕರ?

ವೈದ್ಯ ವೃತ್ತಿ, ಚಿಕಿತ್ಸೆ ಮತ್ತು ವ್ಯಾಪಾರ.

ಆನ್ಲೈನಿನಲ್ಲಿ ಎಲ್ಲವೂ ಬಿಕರಿಯಾಗುತ್ತವೆ. ಬಿಕರಿಯಾಗುವ ವಸ್ತುಗಳನ್ನು ಸೇವೆಗಳನ್ನು ಆನ್ಲೈನಿನಲ್ಲಿ ತೋರಿಸಲಾಗುತ್ತದೆ. ಮಾರ್ಕೆಟ್ ನಲ್ಲಿ ’ನಾವಿದ್ದೇವೆ’ ಎಂದು ತೋರಿಸಿಕೊಂಡು ವಸ್ತುಗಳನ್ನು ಕೊಳ್ಳುವಂತೆ ಮಾಡುವುದು ಡಿಜಿಟಲ್ ಮಾರ್ಕೆಟಿಂಗ್ ನ ರೀತಿ. ತೆಂಗಿನ ಕಾಯಿ ಚಿಪ್ಪಿನಿಂದಾದಿಯಾಗಿ ವಜ್ರ ವೈಢೂರ್ಯದವರೆಗೆ ಇಲ್ಲಿ ಎಲ್ಲವೂ ಲಭ್ಯ. ಊಟ, ತಿಂಡಿ ಬಟ್ಟೆ ಬರೆ , ಅಲಂಕಾರಿಕ ವಸ್ತುಗಳು ಇಲ್ಲಿ ಹೆಚ್ಚಾಗಿ ಬಿಕರಿಯಾಗುವ ವಸ್ತುಗಳು. ಡಿಜಿಟಲ್ ಮಾರ್ಕೆಟ್ ತನ್ನ ಬಾಹುಗಳನ್ನು ಚಾಚುತ್ತಾ ಹೋದಂತೆ, ಫ್ರೀಲಾನ್ಸ್ ಕೆಲಸ ಮಾಡುವವರು ’ನಾವೂ ಇಲ್ಲಿದ್ದೇವೆ’ ಎಂದು ಬೋರ್ಡ್ ಹಾಕಲು ಆರಂಭಿಸಿ ತಮ್ಮ ಇರುವಿಕೆಯನ್ನು ತೋರಿಸಿಕೊಂಡರು. ಪ್ಲಂಬಿಂಗ್, ಕಾರ್ಪೆಂಟ್ರಿ, ಸುಣ್ಣ ಬಳಿಯುವವರು, ಮನೆ ಕ್ಲೀನಿಂಗ್ ಮಾಡುವವರು , ಕೆಲಸ ಸಿಕ್ಕರೆ ಸಾಕು ಎನ್ನುವವರು ತಮ್ಮ ಅಸ್ತಿತ್ವವನ್ನು ಇಲ್ಲಿ ಗಳಿಸಿಕೊಳ್ಳುವ ಕ್ರಿಯೆಗೆ ಮುಂದಾದರು. ಕೆಲ ಸಣ್ಣ ಪುಟ್ಟ ಕನ್ಸಲ್ಟೆನ್ಸಿಯವರು ಇಂತಹ ಸೇವೆಗಳನ್ನು ಒದಗಿಸಲು ಆನೈನ್ ಪ್ಲಾಟ್ ಫಾರ್ಮ್ ಮೂಲಕ ಜಾಹೀರಾತನ್ನು ಕೊಡಲು ಆರಂಭಿಸಿದರು ಅಗತ್ಯ ಇರುವವರು ಸೇವೆಯನ್ನು ಕೊಂಡರು, ಬೇಡವಾದರು ಸುಮ್ಮನಿದ್ದರು. ಆದರೆ ದೇಹದ ಆರೋಗ್ಯ ಕಾಯುವ ವೈದ್ಯಕೀಯ ವೃತ್ತಿಯವರಿಗೆ ಆನ್ಲೈನ್ ಹೇಗೆ ಸರಿ ಹೊಂದೀತು? ಎಲ್ಲರೂ ಆನ್ಲೈನ್ ನಲ್ಲಿದ್ದಾಗ ತಾವೇಕೆ ಹಿಂದುಳಿಯಬೇಕೆನ್ನುವ ಮನೋಭಾವದಲ್ಲಿ ಮೊದಮೊದಲು ರೋಗ ವಿಧಾನದ ಬಗ್ಗೆ ಆರಂಭಿಸಿದ ಸೈಟ್ ಗಳು ಕ್ರಮೇಣ ಚಿಕಿತ್ಸೆಯನ್ನು ಕೊಡಲು ಆರಂಭಿಸಿದ್ದು ದುರಂತ. ಅಫ್ ಕೋರ್ಸ್, ಆನ್ಲೈನ್ ನಲ್ಲಿ ಸರ್ಜರಿಗಳು ಮಾಡಲಾಗುವುದಿಲ್ಲ ಬಿಡಿ. ಆದರೆ ಜ್ವರ ಸೀತ ಕೆಮ್ಮಿನಿಂದಾದಿಯಾಗಿ ಪೈಲ್ಸ್, ಹೃದಯ ರೋಗ ಬರದಂತೆ ತಡೆಯುವ ವಿಧಾನ, ಉಗ್ಗು, ಕೈಕಾಲಿಗೆ ಪೆಟ್ಟು, ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕೊಡುವ ವೆಬ್ ಸೈಟ್ ಗಳು ಹುಟ್ಟಿಕೊಂಡವು. ಫೇಸ್ ಬುಕ್ಕಿನ ಕಾಲದಲ್ಲಿ ಗ್ರೂಪ್ ಗಳು ಹುಟ್ಟಿಕೊಂಡಿವೆ. ಮನೆ ಮದ್ದು ತಿಳಿಸುವುದು, ರೋಗದ ವಿಧಾನವನ್ನು ತಿಳಿಸುವುದು , ಮಾತ್ರೆಗಳ ಹೆಸರನ್ನು ತಿಳಿಸುವುದು ಹೀಗೆ ಚಿಕಿತ್ಸೆಯನ್ನು ಉಚಿತವಾಗಿ ಹಂಚುವ ಕೆಲಸವನ್ನು ಡಾಕ್ಟರ್ ಗಳ ಸಹಾಯದಿಂದಲೋ ಅಥವಾ ಗ್ರೂಪಿನ ವ್ಯಕ್ತಿ ತಮ್ಮ ಫ್ಯಾಮಿಲಿ ಡಾಕ್ಟರ್ ನನ್ನು ಕೇಳಿ ಸಲಹೆಗಳನ್ನು ಕೊಡಲು ಆರಂಭಿಸಿದರು. ಮುಂದುವರೆದಂತೆ, ಕೆಲ ಡಾಕ್ಟರ್ ಗಳೇ ವೆಬ್ಸೈಟ್ ಗಳಿಗೆ ಸಲಹೆ ಸೂಚನೆಗಳನ್ನು ಕೊಟ್ಟು ನಡೆಸುವುದೂ ಆಯ್ತು. ದೊಡ್ಡ ಮಟ್ಟದಲ್ಲಿ ಆರಂಭವಾದದ್ದು ಫಾರ್ಮಾ ಕಂಪನಿಗಳವರು ಆನ್ಲೈನ್ ವ್ಯವಹಾರಕ್ಕಿಳಿದರಲ್ಲ ಆಗ ಆರಂಭವಾದದ್ದು ಆನ್ಲೈನ್ ಚಿಕಿತ್ಸೆ. ಮೊದಮೊದಲು ಗೊತ್ತಿರುವ ಡಾಕ್ಟರ್ ಗಳನ್ನು ಕೇಳಿ ಮಾತ್ರೆ ತೆಗೆದುಕೊಳ್ತಿದ್ದ (ಆ ಡಾಕ್ಟರ್ ಗಳಿಗೆ ರೋಗಿಯ ಮನೆಯವರೂ ಸಹ ಗೊತ್ತಿರುವಷ್ಟು ಹತ್ತಿರದವರಾಗಿರುತ್ತಿದ್ದುದರಿಂದ ಅವರು ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು) ಕೆಲವರಿಗೆ ಇಂಟರ್ನೆಟ್ ದೊಡ್ಡ ಪ್ರಮಾಣದಲ್ಲಿ ರೋಗ ಲಕ್ಷಣಗಳನ್ನು ತೋರಿಸುವ ಕನ್ನಡಿಯಾಗಿಬಿಟ್ಟಿತು. ಪಾಠ ಪ್ರವಚನಗಳ ಉದ್ದೇಶದಿಂದ ಮತ್ತು ಮಾಹಿತಿ ತುಂಬುವ ಉದ್ದೇಶದಿಂದ ಇಂಟರ್ನೆಟ್ಟಿನಲ್ಲಿ ರೋಗ, ರೋಗ ಲಕ್ಷಣಗಳನ್ನು ಪೇರಿಸಿಟ್ಟರೆ ಅದಕ್ಕೆ ಪರಿಹಾರವನ್ನು ಕೊಡುವ ಕೆಲಸವನ್ನು ಡಾಕ್ಟರ್ ಗಳ ಮತ್ತು ಫಾರ್ಮಾ ಗಳವರ ಸಹಾಯದಿಂದ ಮಾಡಲಾಗುತ್ತಿದೆ. ತಮ್ಮ ಕಂಪನಿಯ ಮಾತ್ರೆ ಹೆಚ್ಚು ಉಪಯೋಗ ಎನ್ನುವ ಹಾಗೆ ತೋರಿಸಲಾಗುತ್ತದೆ, ನೇರವಾಗಿ ಹೇಳಲು ಕಾನೂನಿನ ತೊಡಕಿರುವುದರಿಂದ ರೋಗಿಗಳ ವೇಷದಲ್ಲಿ ಅಥವಾ ರಿವ್ಯೂಗಳ ರೂಪದಲ್ಲಿ ಮಾತ್ರೆಗಳನ್ನು ಪ್ರಮೋಟ್ ಮಾಡುವ ಕೆಲಸವಿದು. ಈಗಾಗಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಕರ್ಮಕಾಂಡ ಮತ್ತು ವ್ಯಾಪಾರೀ ಬುದ್ಧಿಯನ್ನು ಹಲವರು ಬಯಲಿಗೆಳೆದಿದ್ದರೂ ಅದನ್ನು ಪೂರ್ತಿಯಾಗಿ ತೊಡೆದು ಹಾಕಲು ಅಸಾಧ್ಯ. ಅದೊಂದು ದಂಧೆಯಾಗಿ ನಿಂತುಬಿಟ್ಟಿದೆ. ಅಂತಹ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ವೆಬ್ ಸೈಟ್ ಗಳ ಕಡೆಗೆ ಕಣ್ಣು ಹಾಯಿಸಿದಾಗ ಅಲ್ಲಿ ಸೇವೆಗಳ ಪಟ್ಟಿ ಇರುವುದಷ್ಟೇ ಅಲ್ಲ ರೋಗ , ರೋಗ ಲಕ್ಷಣ, ಆನ್ಲೈನ್ ಚಾಟ್ ಗಳ ಮೂಲಕ ಪರಿಹಾರ ಎಲ್ಲವೂ ಸಿಗುವಂತಹ ಮಲ್ಟಿ ಪರ್ಪಸ್ ವೆಬ್ಸೈಟ್ ಗಳಾಗಿಬಿಟ್ಟಿವೆ.
ವೈದ್ಯ ವೃತ್ತಿ ಅತೀ ಪ್ರಾಚೀನ ಮತ್ತು ಪವಿತ್ರ ಎಂದೇ ಎಲ್ಲರೂ ಭಾವಿಸುವುದು. ವೈದ್ಯೋ ನಾರಾಯಣೋ ಹರಿಃ ಎನ್ನುವ ಮಾತಿನಂತೆಯೇ ವೈದ್ಯವೃತ್ತಿ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ. ಅವರು ಹೇಳಿದ್ದೇ ವೇದವಾಕ್ಯ. ಒಮ್ಮೆ ಆಸ್ಪತ್ರೆಗೆ ಹೋದರೆ ಮುಂದಿನದು ನಮ್ಮ ಕೈಯಲ್ಲಿರುವುದಿಲ್ಲ. ಅವರು ಹೇಳಿದಂತೆಯೇ ಎಲ್ಲ. ಕಾರಣ ಆ ಸನ್ನಿವೇಶ ಮತ್ತು ಅಲ್ಲಿ ನಡೆಯುವ ವಿಧಾನಗಳು ನಮಗೆ ಹೊಸದು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರಾಣವೇ ಹೋಗುತ್ತದೆಯಾದ್ದರಿಂದ ಅವರು ಹೇಳಿದಂತೆ ನಾವು ಕೇಳಲೇಬೇಕು. ಇವೆಲ್ಲದಕ್ಕೂ ಮೂಲವಿರುವುದು ನಂಬಿಕೆಯಲ್ಲಿ. ಆ ವೃತ್ತಿ ಮತ್ತು ವ್ಯಕ್ತಿಯನ್ನು ನಾವು ನಂಬುವುದು. ಮೊದ ಮೊದಲು ಪೂರ್ವದ ಪುರೋಹಿತರಂತೆ ಅತಿಯಾಸೆ ಪಡದೆ ಬಂದುದನ್ನು ನಿಸ್ವಾರ್ಥವಾಗಿ, ಕೊಟ್ಟು ಮತ್ತು ಬದುಕಿಗೆ ಅಗತ್ಯವಾದಷ್ಟು ಇಟ್ಟುಕೊಳ್ಳುತ್ತಿದ್ದವರು ಕ್ರಮೇಣ ಅವರ ಅನಿವಾರ್ಯತೆಯನ್ನು ದುಡ್ಡಿಗೆ ಪರಿವರ್ತಿಸಿಕೊಂಡರಲ್ಲ ಅಲ್ಲಿ ವೈದ್ಯವೃತ್ತಿ ವ್ಯಾಪಾರವಾದದ್ದು. ಇನ್ನು ರೋಗಿಗಳ ಮಾತಿಗೆ ಬರೋಣ. ರೋಗ ಬಂದರೆ ಅದನ್ನು ನಿವಾರಿಸಲು ವೈದ್ಯರನ್ನು ಕಾಣಬೇಕು ಅದನ್ನು ಬಿಟ್ಟು ಆನ್ಲೈನ್ ನಲ್ಲಿ ಆರೋಗದ ಬಗ್ಗೆ ತಿಳಿದುಕೊಂಡು ಅದಕ್ಕೆ ಪರಿಹಾರವನ್ನು ಹುಡುಕಿ ಪ್ರಯತ್ನಿಸಿ ನಂತರ ವೈದ್ಯರಲ್ಲಿಗೆ ಬರುವುದು. ಬಂದವರು ಅಲ್ಲಿಗೇ ನಿಲ್ಲುತ್ತಾರಾ ಎಂದರೆ ಇಲ್ಲ. ’ ಇಲ್ಲ ಸರ್ ಇಂಟರ್ನೆಟ್ ನಲ್ಲಿ ನೋಡಿದೆ ಈ ಥರದ್ದಕ್ಕೆ ಅದೇನೋ ಆ ಮಾತ್ರೆ ಇದೆಯಂತೆ, ಅದನ್ನ ಕೊಡಿ’ (ಡಾಕ್ಟರ್ ಪ್ರಿಸ್ಕ್ರಿಪ್ಷನ್ ಇಲ್ಲದೆ ಫಾರ್ಮಸಿಯವನು ಮಾತ್ರೆ ಕೊಡುವುದಿಲ್ಲವಲ್ಲ ಅದಕ್ಕಾಗಿ ಡಾಕ್ಟರ್ ಬೇಕು) ಅಲ್ಲಿಗೇನು, ರೋಗವೂ ನನಗೆ ಗೊತ್ತು, ಪರಿಹಾರವೂ ನನಗೆ ಗೊತ್ತು ನೀವು ನಾನು ಹೇಳಿದಂತೆ ಮಾತ್ರೆ ಬರೆದುಕೊಡಿ ಎಂದರ್ಥವಲ್ಲವೇ?. ಅದನ್ನೂ ನೀವೇ ಬರೆದುಕೊಂಡು ಬಿಡಿ ಎನ್ನಬೇಕಷ್ಟೆ. ವರ್ಷಗಳ ಕಾಲ ರೋಗ, ರೋಗವಿಧಾನ, ಚಿಕಿತ್ಸೆಯಲ್ಲೇ ಓದಿ ಮುಳುಗೆದ್ದ ವೈದ್ಯರಿಗೆ , ರೋಗಿಯೇ ಇಂಟರ್ನೆಟ್ಟಿನ ರೋಗವಿಧಾನ , ಚಿಕಿತ್ಸೆಯನ್ನು ಹೇಳಿದರೆ ಏನರ್ಥ. ಪ್ರತಿಯೊಂದು ರೋಗವೂ ರೋಗಿಯ ದೇಹ, ಮನಸ್ಸನ್ನವಲಂಬಿಸಿರುತ್ತದೆ. ಪ್ರತಿಯೊಬ್ಬ ರೋಗಿಯೋ ಭಿನ್ನನೇ ಆಗಿರುತ್ತಾನೆ. ಒಬ್ಬ ರೋಗಿಗೆ ಕೊಟ್ಟ ಚಿಕಿತ್ಸೆ ಮತ್ತೊಬ್ಬರಿಗೆ ಆಗದೆ ಹೋಗಬಹುದು. ಇದನ್ನು ಕಂಡುಹಿಡಿದು ಚಿಕಿತ್ಸೆ ನೀಡಬೇಕಾದದ್ದು ಮತ್ತು ಅರ್ಹತೆಯಿರುವುದು ವೈದ್ಯರಿಗೆ ಮಾತ್ರ. ಇಂಟರ್ನೆಟ್ಟಿನಲ್ಲಿ ಕೊಟ್ಟ ರೋಗ ಲಕ್ಷಣಗಳು ಜೆನೆರಲ್ ಆದ ರೋಗ ಲಕ್ಷಣಗಳು ಮಾತ್ರ, ಆದರೆ ರೋಗಿಗೆ ಆ ರೋಗ ಬೇರೊಂದು ರೀತಿಯಲ್ಲಿ ಬಂದಿರಬಹುದು ಅದನ್ನು ನಿರ್ಧರಿಸಬೇಕಾದರೆ ವೈದ್ಯರಲ್ಲಿಗೇ ನೇರವಾಗಿ ಭೇಟಿ ಕೊಡಬೇಕು.ಇಂಟರ್ನೆಟ್ ನಲ್ಲಿ ಸಿಗುವುದು ವಿವರಗಳು ಮಾತ್ರ. ವ್ಯಾಪಾರಿ ಬುದ್ಧಿಯ ಕಂಪನಿಗಳ ವೆಬ್ ಸೈಟ್ ಗಳು , ಆಟಿಕೆ ತಯಾರಿಸುವ ಕಂಪನಿಗಳ ವೆಬ್ ಸೈಟ್ ಗಳು, ವೈದ್ಯರ ಡೈರೆಕ್ಟ್ರಿಯನ್ನು ತೋರುವ ವೆಬ್ ಸೈಟ್ ಗಳು ಎಲ್ಲವೂ ಸಹ ಈಗ ಕಾಯಿಲೆಯ ವಿವರ ಮತ್ತು ಪರಿಹಾರಗಳನ್ನು ತೋರಿಸುತ್ತಿವೆ. ಇದೆಲ್ಲಾ ಒಂದೆಡೆಯಾದರೆ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮನೆ ಮದ್ದು, ನಿಮ್ಮ ಆರೋಗ್ಯ, ಆಯುರ್ವೇದ, ಎಂದೆಲ್ಲಾ ಗುಂಪುಗಳು ಹುಟ್ಟಿಕೊಂಡು ಅದರಲ್ಲಿ ಸಮಸ್ಯೆ ಮತ್ತು ಪರಿಹಾರಗಳನ್ನು ಹಾಕುವ ಕ್ರಿಯೆ ಆರಂಭವಾಗಿದೆ. ರೋಗಿಯ ರೋಗದ ಹಿಸ್ಟರಿ ತಿಳಿಯದೆ ಪರಿಹಾರವನ್ನು ಸೂಚಿಸುವುದು ಎಷ್ಟು ತಪ್ಪೋ ಅದನ್ನು ತೆಗೆದುಕೊಳ್ಳುವುದೂ ಅಷ್ಟೇ ತಪ್ಪು. ಯಾವ ವೈದ್ಯಕೀಯ ಪದ್ಧತಿಯೇ ಆಗಿರಲಿ ರೋಗಿಯನ್ನು ನೇರವಾಗಿ ನೋಡದೆ ಪರಿಹಾರ ತೆಗೆದುಕೊಳ್ಳಬಾರದೆಂಬ ಮುಖ್ಯ ನಿಯಮವನ್ನು ಮರೆದಿದ್ದರೆ ಒಳಿತು

ಮಾನಸಿಕ ಸಮಸ್ಯೆಗಳು ಮತ್ತು ಆನ್ಲೈನ್ ಪರಿಹಾರ

ಮೇಲೆ ಹೇಳಿದ ಎಲ್ಲ ವಿಷಯಗಳು ಫಿಸಿಯಲಾಜಿಕಲ್ ಸಮಸ್ಯೆಗೆ ಸಂಬಂಧಿಸಿದ್ದಾದರೆ ಈಗ ಸೈಕಲಾಜಿಕಲ್ ಸಮಸ್ಯೆಗಳನ್ನು ಆನ್ಲೈನ್ ಗಳಲ್ಲಿ ಹೇಗೆಲ್ಲಾ ಪರಿಹರಿಸುತ್ತಾರೆ ನೋಡೋಣ. ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ತನ್ನ ಸಮಸ್ಯೆಯನ್ನು ತಾನೇ ಸ್ವತಃ ಅಥವಾ ಇನ್ನೊಬ್ಬರ ಮೂಲಕ ಹಾಕಿಸಿ ಪರಿಹಾರ ತಿಳಿಸಿ ಎನ್ನುತ್ತಾನೆ. ಅದಕ್ಕೆ ಉತ್ತರವಾಗಿ ಫೋನ್ ಕಾಲ್ ಮೂಲಕ ಅಥವಾ ಅಂತರ್ಜಾಲದ ಚಾಟ್ ಮೂಲಕ ಪರಿಹಾರ ಸೂಚಿಸುವುದು. ವ್ಯಕ್ತಿಯ ಮುಖಭಾವ, ಅವನ ಕಣ್ಣುಗಳು, ಅವನ ಡೆವೆಲಪ್ಮೆಂಟ್ ಹಿಸ್ಟರಿ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಪರಿಹಾರವನ್ನು ಸೂಚಿಸಿಬಿಡುತ್ತಾರೆ. ಕೆಲವರಂತೂ ಫೋನ್ ಕಾಲ್ ನಲ್ಲಿ ಪರಿಹಾರ ಕೊಡುವುದನ್ನು ನೋಡಬೇಕು. ’ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸುತ್ತಿದೆ ಮೇಡಂ’ , ಎಂದಾಗ ಇತ್ತಲಿಂದ ’ ’ ನೀವು ಹಾಗೆಲ್ಲಾ ಮಾತಾಡಬೇಡಿ, ನನಗೆ ಬೇಜಾರಾಗುತ್ತದೆ’ ಎಂದು ಹೇಳಿದ ಕೌನ್ಸಿಲರ್ ನ್ನು ನೋಡಿದ್ದೇನೆ. ಒಂದು ಟೆಲಿ ಕಾಲಿಂಗ್ ಕೌನ್ಸೆಲಿಂಗ್ ಗುಂಪಿಗೆ ಪಾಠ ಮಾಡಲು ಹೋದಾಗ ಅವರ ಕೌನ್ಸೆಲಿಂಗ್ ರೀತಿ ಕಂಡು ಅಚ್ಚರಿಗೊಂಡಿದ್ದೆ. ಅವನು ಅತ್ತರೆ ಇವರೂ ಅಳುವ, ತಮ್ಮ ಸಮಸ್ಯೆಗಳೊಂದಿಗೆ ಸಮೀಕರಿಸಿಕೊಂಡು ಪರಿಹಾರವನ್ನು ಕೊಡುವ ಅಥವಾ ತಮಗೆ ತಿಳಿದ ಇನ್ನಾರಿಗೋ ಇದೇ ರೀತಿಯ ಸಮಸ್ಯೆ ಬಂದಾಗ ಅದಕ್ಕೆ ಸಿಕ್ಕ ಪರಿಹಾರವನ್ನು ಇವರಿಗೂ ಹೇಳುವ ಬಗೆ ಕೌನ್ಸೆಲಿಂಗ್ ನ ಪ್ರಾಥಮಿಕ ಪಾಠವನ್ನೇ ನಾಶಮಾಡಿದಂತೆ ಎನಿಸಿತು. ಕರೋನದಂತಹ ಕಾಲದಲ್ಲಿ ಭೇಟಿಗಳು ಹೆಚ್ಚು ಸಾಧ್ಯವಿಲ್ಲದಿದ್ದಾಗ ಡಿಪ್ರೆಷನ್ ಅಥವಾ ಮತ್ತೊಂದೋ ಆದವರಿಗೆ ಕಾಲ್ ನಲ್ಲೇ ಕೌನ್ಸೆಲಿಂಗ್ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಕಾಲ್ ನಲ್ಲಾದರೂ ಅಹ ಅವರ ಪೂರ್ವಾಪರಗಳನ್ನು ತಿಳಿದು ಅವರೊಂದಿಗೆ ವ್ಯವಹರಿಸುವ ರೀತಿಯನ್ನು ಅರಿಯಬೇಕು. ಎಷ್ಟೇ ಆದರೂ ಫೋನ್ ಕಾಲ್ ನಲ್ಲಿ/ಆನ್ಲೈನ್ ನಲ್ಲಿ ಕೌನ್ಸೆಲಿಂಗ್ ಪರಿಣಾಮಕಾರಿಯಲ್ಲ. ಇನ್ನು ಮಾನಸಿಕ ಸಮಸ್ಯೆಗಳನ್ನು ಆನ್ಲೈನ್ ನಲ್ಲಿ ಹಾಕುವುದು ಎಷ್ಟು ಅಪಾಯಕಾರಿಯೆಂದರೆ ವಿವರಗಳು ಒಂದೆಡೆಯಾದರೆ, ಸಮಸ್ಯೆಯನ್ನು ಪದರ ಪದರವಾಗಿ ಬಿಡಿಸಿ, ಈ ಸಮಸ್ಯೆಯೊಂದಿಗೆ ನಮ್ಮಲ್ಲಿಗೆ ಬಂದಿದ್ದರು ನಾವಿದಕ್ಕೆ ಈ ಪರಿಹಾರವನ್ನು ಕೊಟ್ಟೆವು ಎಂದು ಹಾಕುವುದು ಮತ್ತೂ ದುರಂತ. ಇಂತಹ ವಿವರಗಳನ್ನು ಓದಿಕೊಂಡ ಒಬ್ಬರು ಸ್ವತಃ ಕೌನ್ಸೆಲಿಂಗ್ ಅಂಗಡಿ ತೆರೆದು ಪರಿಹಾರಗಳನ್ನು ಕೊಡುತ್ತಾರೆ. ತುಂಬಾ ಸುಲಭ, ಫೇಸ್ ಬುಕ್ ನಲ್ಲಿ ಯಾರದೋ ಹೆಸರಿನಲ್ಲಿ ಸಮಸ್ಯೆಯನ್ನು ಹಾಕಿ, ದೂರಶಿಕ್ಷಣದಲ್ಲೋ ಅಥವಾ ಅರೆಬರೆ ಕೌನ್ಸೆಲಿಂಗ್ ಕಲಿತವರು ಅತ್ಯಂತ ಉತ್ಸಾಹದಿಂದ ತಮಗೆ ತೋಚಿದ ಪರಿಹಾರವನ್ನು ಕೊಡುತ್ತಾರೆ. ಅದನ್ನೇ ಆ ವ್ಯಕ್ತಿಗೆ ಸೂಚಿಸಿದರೆ ಆಯ್ತು. ಸರಿಯಾದರೆ ಇವರಿಗೆ ಲಾಭ, ಆಗಲಿಲ್ಲವೆಂದರೆ ಇನ್ನೊಬ್ಬರಲ್ಲಿಗೆ ಕಳುಹಿಸುವುದು ಅಷ್ಟೆ.
ಮಾನಸಿಕ ಸಮಸ್ಯೆಯ ವಿವರಗಳನ್ನು ಹಾಕುವುದರ ಮತ್ತೊಂದು ಅಡ್ಡಪರಿಣಾಮವನ್ನು ಹೇಳುತ್ತೇನೆ, ಸಮಸ್ಯೆಯ ವಿವರಗಳನ್ನು ನೋಡಿ ತಮಗೆ ಆ ಸಮಸ್ಯೆ ಇದೆಯೇ ಎಂದು ಲಿಂಕ್/ಮ್ಯಾಪ್ ಮಾಡಿಕೊಳ್ಳುವ ಜನರಿದ್ದಾರೆ. ನನ್ನಲ್ಲಿಗೆ ಬಂದ ವ್ಯಕ್ತಿ ಹೇಳಿದ್ದೇ ಹೀಗೆ, ’ನನಗೆ ಈ ಈ ಸಮಸ್ಯೆ ಇದೆ ಆದ ಕಾರಣ ನನಗೆ ಈ ಮಾನಸಿಕ ವ್ಯಾಧಿ ಇದೆ’. ಮುಗಿಯಿತಲ್ಲ. ಎಲ್ಲವೂ ಆತನ ಕೈಯಲ್ಲೇ ಇದೆ. ಕೌನ್ಸೆಲಿಂಗ್ (ಆಪ್ತಸಲಹೆ)ನ ಪ್ರಥಮ ಲಕ್ಷಣ ವ್ಯಕ್ತಿಯನ್ನು ನೇರಾ ನೇರ ಕೂರಿಸಿಕೊಂಡು ಮಾತಾಡುವುದಾಗಿದೆ. ಆನ್ಲೈನ್ ನಲ್ಲಿ ಪರಿಹಾರಗಳನ್ನು ಕೊಡುವುದು ಅಥವಾ ಸಮಸ್ಯೆಯ ವಿವರಗಳನ್ನು ಕೊಡುವುದರ ಅಪಾಯದ ಅರಿವು ತಿಳಿಯಬೇಕಾಗಿದೆ. ಆನ್ಲೈನ್ ಸೈಕಾಲಜಿ ಡಾಕ್ಟರ್ ಗಳು ಪುಟಗಟ್ಟಲೆ ಮಾನಸಿಕ ಕಾಯಿಲೆಯ ಬಗ್ಗೆ ಬರೆದು ಅದಕ್ಕೆ ಅವರು ಕೊಟ್ಟ ಪರಿಹಾರವನ್ನು ಓದಿ ಅದನ್ನೇ ಪಾಠಿಸಲು ಹೋಗಿ ಕುತ್ತಿಗೆಗೆ ತಂದುಕೊಂಡವರಿದ್ದಾರೆ. ಉದಾಹರಣೆಗೆ ಗಂಡ ಹೆಂಡತಿ ಜಗಳದ ವಿಷಯವನ್ನು ಬರೆಯುತ್ತಾ ಗಂಡನ ಲೋಪವಿದ್ದುದು ಕಂಡುಬಂದು ಅದರ ವಿವರಗಳನ್ನು ಬರೆದು ಪರಿಹಾರ ಮಾಡಿದ ಬಗೆಯನ್ನು ಬರೆದ ಲೇಖನವನ್ನು ಓದಿದ ಮಹಿಳೆಯೊಬ್ಬಳು ತನ್ನ ಗಂಡನಲ್ಲೂ ಅದೇ ಬಗೆಯ ಗುಣಗಳಿವೆಯೇ ಎಂದು ಪರೀಕ್ಷಿಸಿದ್ದಾಳೆ. ಸುಮಾರು ಪಾಲು ಅದೇ ಬಗೆಯ ಗುಣಗಳನ್ನು ಕಂಡು ’ಓ ಇಲ್ಲೂ ಸಮಸ್ಯೆಯಿದೆ’ ಎನಿಸಿ ಮನೆಯಲ್ಲಿ ಅತೀ ಕಾಳಜಿ ತೆಗೆದುಕೊಂಡಿದ್ದಾಳೆ. ಗಂಡನಿಗೆ ಅನುಮಾನ ಬಂದು ಆಪ್ತಸಲಹೆಗೆ ಬಂದಿದ್ದಾನೆ . ಮಾತನಾಡುತ್ತಾ ಆಕೆ ಬಿಚ್ಚಿಟ್ಟ ವಿವರಗಳು ಇವೇ ಆಗಿದೆ. ಆನ್ಲೈನ್ ಡಾಕ್ಟರ್ ಗಳು ಸೂಚಿಸಿದ ಮತ್ತು ಬರೆದಿಟ್ಟ ವಿವರಗಳು ತನ್ನ ಗಂಡನಿಗೆ ಹೊಂದಿಕೆಯಾಗಿದೆ ಆ ಕಾರಣಕ್ಕೆ ಭಯ ಎಂದಳಲ್ಲ. ಇದು ಆನ್ಲೈನ್ ಚಮತ್ಕಾರ.
ದೊಡ್ಡವರ ಸಮಸ್ಯೆಗಳನ್ನು ಒಂದೆಡೆಯಿಟ್ಟರೆ ಮಕ್ಕಳಿಗೆ ಸಲಹೆ ,ಸೂಚನೆ, ವರ್ಕ್ ಶಾಪ್ ಮುಂತಾದ ಹೆಸರಿನಲ್ಲಿ ನಡೆಯುವ ಆನ್ಲೈನ್ ಕೋಚಿಂಗ್ ಮತ್ತು ವಿಷಯಗಳು ಇನ್ನೂ ವಿಚಿತ್ರವಾಗಿರುತ್ತವೆ. ಎಲ್ಲ ಮಕ್ಕಳನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಿದಂತೆ ಎಲ್ಲರಿಗೂ ಒಂದೇ ಬಗೆಯ ಥೆರಪಿಗಳ ತರಹದ್ದನ್ನು ಹೇಳುವುದು. ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಮಗುವಿಗೆ ಓದುವಲ್ಲಿ ಸಮಸ್ಯೆಯಿದ್ದರೆ ಅದಕ್ಕೆ ಸಿದ್ಧ ರೂಪದ ಪರಿಹಾರ. ಮಗುವೊಂದು ಅತಿಯಾಗಿ ಹಠ ಮಾಡುತ್ತಿದೆಯೆಂದರೆ ಅದಕ್ಕೊಂದು ಬ್ರಾಂಡ್ ನ್ನು ಕೊಟ್ಟು ಅದಕ್ಕೆ ಪರಿಹಾರವನ್ನು ಕೊಡುವುದು. ಮಗುವಿನ ನಿಜವಾದ ಸಮಸ್ಯೆಯೇನು ಎನ್ನುವುದನ್ನು ಮಗುವನ್ನು ನೇರವಾಗಿ ನೋಡದೆ ಪರಿಹಾರವನ್ನು ಹೇಗೆ ಕೊಡಲು ಸಾಧ್ಯ? ಸಮಸ್ಯೆಯ ಲಕ್ಷಣಗಳನ್ನು ಲೇಖನ ರೂಪದಲ್ಲಿ ಬರೆದು ಜನರ ಮುಂದಿಟ್ಟರೆ ಇತ್ತೀಚಿನ ಅತೀ ಬುದ್ದಿವಂತ ಪೋಷಕರು ಫೇಸ್ ಬುಕ್ಕಿನಲ್ಲಿ ಬಂದ ಸಮಸ್ಯೆಯನ್ನು ತಮ್ಮ ಮಗುವಿಗೆ ಮ್ಯಾಪ್ ಮಾಡಿ ತಮ್ಮ ಮಗುವಿಗೂ ಇದೇ ಸಮಸ್ಯೆಯಿದೆಯೆಂದು ತೀರ್ಮಾನಿಸಿ ಕ್ಲಿನಿಕ್ ಗಳಿಗೆ ಕರೆತರುತ್ತಿದ್ದಾರೆ.

ಉಪಸಂಹಾರ
ಆನ್ಲೈನ್ ಅಥವಾ ಇಂಟರ್ ನೆಟ್ ಇರುವುದು ಪಠ್ಯವನ್ನು ತೋರಿಸುವುದಕ್ಕೆ ಮಾತ್ರ ಎಂಬ ಅರಿವು ಪೋಷಕರಿಗೆ ಮತ್ತು ಓದುಗರಿಗೆ ಇರಬೇಕಾಗಿದೆ. ಅದನ್ನು ಹೇಳುವ ಕೆಲಸ ಸ್ವತಃ ಡಾಕ್ಟರ್ ಗಳು, ವೆಬ್ ಸೈಟ್ ನಿರ್ವಹಣಾಕಾರರು ಮಾಡಬೇಕಾಗಿರುತ್ತದೆ. ಮಾತ್ರೆಗಳ ಥೆರಪಿಗಳ ವಿವರಗಳನ್ನು ಕೊಡದೆ ಇರುವುದು ಮತ್ತೊಂದು ನಿಲುವು. ನಿಮಗೆ ತಿಳಿದಿದೆಯೆಂತಲೋ ಅಥವಾ ನಿಮ್ಮ ಗಂಡ, ಹೆಂಡತಿ, ಭಾವ ಮೈದುನ ಇನ್ಯಾರೋ ಡಾಕ್ಟರ್ ಗಳಿಂದ ತಿಳಿದುಕೊಂಡ ಫಾರ್ಮಾ ಟ್ಯಾಬ್ಲೆಟ್ ಗಳನ್ನು ಸೂಚಿಸಬೇಡಿ. ಕರೋನ ಕಾಲದಲ್ಲಿ ಅದೆಷ್ಟು ಮಾತ್ರೆಗಳ ಹೆಸರುಗಳುಇದೇ ಫೇಸ್ ಬುಕ್ ಪೋಸ್ಟ್ ಗಳಲ್ಲಿ ರಾರಾಜಿಸಿವೆ. ಡಾಕ್ಟರೇ ಹೇಳಿದರಂತೆ ಎಂಬಂತಹ ಪೋಸ್ಟ್ ಗಳು ಕೂಡ ಬಂದಿವೆ. ಅದೂ ಅಲ್ಲದೆ ನನ್ನ ಗಂಡ/ಹೆಂಡತಿ ಡಾಕ್ಟರ್ ಹಾಗಾಗಿ ’ನಾನು ಆ ಕರೋನ ರೋಗಿಗೆ ನಮ್ಮ ಮನೆಯವರು ಕೊಟ್ಟ ಮಾತ್ರೆ ಇದು ’ ಎಂದು ಧೈರ್ಯವಾಗಿ ಹೇಳಿದ ನಿದರ್ಶನಗಳು ಇವೆ. ನೀವು ಜೆನೆರಲ್ ಆಗಿ ಹೇಳಿದ ಮಾತ್ರೆಗಳನ್ನು ಮತ್ತೊಬ್ಬನು ಓದಿ ಆತನೂ ತೆಗೆದುಕೊಂಡರೆ… ಆತನ ದೇಹಕ್ಕೆ ಆ ಮಾತ್ರೆ ಒಗ್ಗುತ್ತದೆಯೋ ಇಲ್ಲವೋ ತಿಳಿಯದೆ ಆತ ತೆಗೆದುಕೊಂಡು ತೊಂದರೆಗೊಳಗಾದರೆ ಯಾರು ಹೊಣೆ. ಇನ್ನು ಮಾನಸಿಕ ಸಮಸ್ಯೆಗಳನ್ನು ವಿವರಿಸುವ ಮಹಾನುಭಾವರಿಗೆ. ದೇಹಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಹೇಗೋ ಸರಿಮಾಡಬಹುದೇನೋ (ತಪ್ಪು) ಆದರೆ ಮಾನಸಿಕ ಸಮಸ್ಯೆಯನ್ನು ಜೀವನ ಪೂರ್ತಿ ನಿರ್ವಹಿಸಬೇಕಾಗುತ್ತದೆ. ನಿಮ್ಮ ಒಂದು ಪೋಸ್ಟ್, ಮಾನಸಿಕ ಸಮಸ್ಯೆಯನ್ನು ಕಡಿಮೆಗೊಳಿಸುವ ಬದಲು ಹೆಚ್ಚಿಸಿದರೆ ಏನುಪಯೋಗ. ಹಾಗೆಂದ ಮಾತ್ರಕ್ಕೆ ಲೇಖನ ಬರೆಯ ಬಾರದೆಂದಲ್ಲ, ಆದರೆ ವಿವರಗಳನ್ನು ಹಾಕುವಾಗ ಎಚ್ಚರವಿರಲಿ. ರೋಗದ ಹೆಸರುಗಳನ್ನು ದಯಮಾಡಿ ತಿಳಿಸಬೇಡಿ. ಆ ಹೆಸರನ್ನು ಜನರು ತಿಳಿಯದೇ ಇನ್ನೊಬ್ಬರಿಗೆ ಬ್ರಾಂಡ್ ಮಾಡಿಬಿಡುತ್ತಾರೆ. ಲೇಖನದ ಸಾರಾಂಶದಲ್ಲಿ ಸಾಮಾನ್ಯೀಕರಿಸಿ ಬರೆದ ವಾಕ್ಯಗಳಿದ್ದರೆ ಕೊನೆಯಲ್ಲಿ ಪರಿಹಾರಗಳನ್ನು ಅನುಭವಸ್ಥ ಅರ್ಹತೆಯುಳ್ಳ ಡಾಕ್ಟರ್ ಬಳಿ ಕೇಳಿ ಪಡೆದುಕೊಳ್ಳಿ ಎಂದು ಬರೆದರೆ ಉತ್ತಮ. ಅರೆಬರೆ ಜ್ಞಾನದ ಮೂಲಕ/ಕುತೂಹಲ ಹುಟ್ಟಿಸುವಂತೆ ಬರೆಯುತ್ತೇನೆ ಎಂಬ ಹುಂಬತನದಲ್ಲಿ ಮತ್ತೊಬ್ಬರ ಪ್ರಾಣ/ಮನಸ್ಸಿನ ಮೇಲೆ ಚಲ್ಲಾಟವಾದುವುದು ಸರ್ವಥಾ ಅಕ್ಷಮ್ಯ

Leave a Reply

Your email address will not be published. Required fields are marked *

Related Post

ಏಕರೂಪ ನಾಗರೀಕ ಸಂಹಿತೆ (Uniform civil code )ಏಕರೂಪ ನಾಗರೀಕ ಸಂಹಿತೆ (Uniform civil code )

“ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಯಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಪ್ರಜೆಗಳಿಗೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರಕಿಸಿ ವೈಯಕ್ತಿಕ ಘನತೆ, ದೇಶದ ಒಗ್ಗಟ್ಟು

ವೃತ್ತಿ ಮತ್ತು ವ್ಯಕ್ತಿಗತ ಬದುಕಿನ ಸಮತೋಲನವೃತ್ತಿ ಮತ್ತು ವ್ಯಕ್ತಿಗತ ಬದುಕಿನ ಸಮತೋಲನ

“ಉದ್ಯೋಗಂ ಪುರುಷ ಲಕ್ಷಣ” ಎನ್ನುತ್ತಾರೆ. ಆದರೆ ಈಗಿನ ಕಾಲದಲ್ಲಿ ಆ ನುಡಿ ಸ್ವಲ್ಪ ಬದಲಾಗಿದೆ. ಪುರುಷರಷ್ಟೇ ಮಹಿಳೆಯರು ಕೂಡ ಉದ್ಯೋಗ ರಂಗದಲ್ಲಿ ತಮ್ಮ ಪಾದಾರ್ಪಣೆಯನ್ನು ಮಾಡಿ ಬಹಳ ಕಾಲವಾಗಿದೆ . ತುಂಬ ಚೆನ್ನಾದ ಅಭಿವೃದ್ಧಿಯನ್ನು ತೋರಿಸುತ್ತಲೂ ಇದ್ದಾರೆ. ಹಿಂದಿನ ಕಾಲದಲ್ಲಿದ್ದ ಹಾಗೆ ಪುರುಷರು ಕೆಲಸಕ್ಕೆ ಹೋಗೋದು, ಹೆಂಗಸರು ಅಡುಗೆ

ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ… ೧ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ… ೧

ಡಿಸೆ೦ಬರ್ ಒ೦ದು ಹಾಗೂ   ೨-೧೨-೨೦೧೨ ಶ್ರೀಕ್ಷೇತ್ರದಲ್ಲಿ  ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನ ಜರುಗಿತು. ಸಮ್ಮೇಳನಾಧ್ಯಕ್ಷತೆಯನ್ನು ಬೆ೦ಗಳೂರು ವಿಶ್ವ ವಿದ್ಯಾಲಯದ ವಿಶ್ರಾ೦ತ ಪ್ರಾಧ್ಯಾಪಕರಾದ ಡಾ|| ಎಮ್.ಶಿವಕುಮಾರ ಸ್ವಾಮಿಯವರು ವಹಿಸಿಕೊ೦ಡಿದ್ದರೆ ಉದ್ಘಾಟನಾ ಸಭಾಧ್ಯಕ್ಷತೆಯನ್ನು ಡಾ|| ಜಿ. ಭೀಮೇಶ್ವರ ಜೋಷಿಯವರು ವಹಿಸಿದ್ದರು. ಎರಡು ದಿನಗಳ ಪರ್ಯ೦ತ ಉದ್ಘಾಟನೆ ಹಾಗೂ ಸಮಾರೋಪಗಳಲ್ಲಿ ದಿವ್ಯ