ಆನೆ ಬಂತು ಆನೆ

“ಭಕ್ತ ಪ್ರಹ್ಲಾದ”, ನಾಟಕದ ಭಾರಿ ತಾಲೀಮು ನಡಿಯುತ್ತಿತ್ತು, ನಟವರ್ಗ, ತಮ್ಮ ತಮ್ಮ ಸಂಭಾಷಣೆಯನ್ನ ಕಷ್ಟಪಟ್ಟು, ಶ್ರದ್ದೆಯಿಂದ ಕಲಿತಿದ್ದರು, ಪೌರಾಣಿಕ ನಾಟಕವಾದ್ದರಿಂದ, ಸಂಭಾಷಣೆಯೊಂದಿಗೆ ಮಟ್ಟುಗಳು (ಹಾಡುಗಳು) ಕೂಡ ಇದ್ದವು, ಆದರೂ ಕಲಾವಿದರು, ತಮ್ಮ ಶಕ್ತಿ ಮೀರಿ ಹಾಡುಗಳನ್ನ ಶ್ರುತಿಬದ್ಧವಾಗಿ ಹಾಡಲು ಕಲಿಯದಿದ್ದರು, ಹಾಡುಗಳನ್ನ ತಕ್ಕ ಮಟ್ಟಿಗೆ ಹಾಡುತ್ತಿದ್ದರು. ಈ ಎಲ್ಲದರ ಜೊತೆಗೆ, ಬಾಡಿಗೆಗೆ ಕೊಂಡು ತಂದ ಬಟ್ಟೆಗಳು, ರಾಜನ ಆಸ್ಥಾನ, ಹಿರಣ್ಯ ಕಶ್ಯಪ ತನ್ನ ಮಗನನ್ನ ಬೆಂಕಿಗೆ ತಳ್ಳಬೇಕಿದ್ದ ಅಗ್ನಿಕುಂಡ, ವಿಷ ಸರ್ಪ, ಅವನು ಹೊಡೆದು ಉರುಳಿಸಬೇಕಿದ್ದ ಕಂಬಗಳು, ನರಸಿಂಹ ಅವತಾರಕ್ಕೆ ಬೇಕಿದ್ದ ಮುಖವಾಡ, ಎಲ್ಲವೂ ಸಿದ್ದಗೊಂಡಿತ್ತು.ಆದರೆ, ನಮ್ಮ ನಾಟಕದ ಮುಖ್ಯ ಬಿಂದು, “ಆನೆಯ” ಬಗ್ಗೆ ತಿಳಿಸದೆ ಹೋದರೆ ತಪ್ಪಾದೀತು. ನಮ್ಮ ನಾಟಕ, ಹೊಸದಾಗಿ ನಿರ್ಮಿಸಿದ “ಶ್ರೀ ಗುಬ್ಬಿ ವೀರಣ್ಣ” ರಂಗಮಂದಿರದಲ್ಲಿ ಪ್ರದರ್ಶನ ಏರ್ಪಾಡಾಗಿತ್ತು. ಒಂದು ಪ್ರತಿಷ್ಠಿತ ರಂಗಮಂದಿರದಲ್ಲಿ, ನಾಟಕ ಮಾಡುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾದ್ದರಿಂದ, ನಮ್ಮ ನಿರ್ದೇಶಕರು ನಾಟಕ ರಂಗದ ಮೇಲೆ ಹೊಸ ಮುನ್ನಡಿಯನ್ನು ಬರಿಯಬೇಕು, ಜನರ ನೀರೀಕ್ಷೆಯನ್ನು ಮೀರಿಸುವ ಹೊಸ ಅನುಭವ ನೀಡಬೇಕೆಂದು, ಯಥೇಚ್ಛವಾಗಿ ಹಣ ಸುರಿದು ಎಲ್ಲ ವ್ಯವಸ್ಥೆಯನ್ನು ಮಾಡಿದ್ದರು.ಆ ವ್ಯವಸ್ಥೆಗಳಲ್ಲಿ ನಮ್ಮ ಆನೆಯೂ ಒಂದು. ಬೃಹದಾಕಾರದ ಆನೆ, ಕಬ್ಬಿಣದ ಸಲಾಕೆ ಗಳಿಂದ ಮಾಡಿಸಿದ್ದರು, ಆನೆಯ “frame”ನ ಒಳಗಡೆ 4 ಜನ ಹುಡುಗರು ಹೊಕ್ಕಿ, ಅದನ್ನು ಎತ್ತಿ ರಂಗದ ಮೇಲೆ ತರಬೇಕು, 4 ಜನ ಹುಡುಗರು ಆನೆಯ ಒಳಗಡೆ ಹಾಗೂ ಆನೆಗೆ, ಅಂದರೆ ಆ 4 ಜನರಿಗೆ ದಾರಿ ಹೇಳಲು ಒಬ್ಬ ಮಾವುತನನ್ನು ನಿಯೋಜಿಸಿದ್ದರು. ಆನೆಯ ಮೇಲುಭಾಗದ ಫ್ರೇಮನ್ನು, ಝರಿ ಬಟ್ಟೆಯಿಂದ ಹೊದ್ದಿಸುವುದು, ಆ ಬಟ್ಟೆಯು ಮೇಲಿನಿಂದ ಕೆಳಗಿನವರೆಗೂ ಇಳಿ ಬಿಡುವುದು ಎಂದು, ಹಾಗೂ ಅದನ್ನು ಹೊತ್ತು ತರುವ ಹುಡುಗರು, ಕಪ್ಪುಬಟ್ಟೆಯನ್ನು ಉಟ್ಟು, ಆನೆಯ ಮುಂಭಾಗವನ್ನು ಮಾತ್ರ ಪ್ರೇಕ್ಷಕರಿಗೆ ತೋರಿಸುವುದು ಎಂದು ನಮ್ಮ ನಿರ್ದೇಶಕರು ಯೋಜಿಸಿದ್ದರು.

ಇಲ್ಲಿ ತಮಾಷೆಯ ವಿಷಯವೆಂದರೆ, ನಮ್ಮ ಆನೆ ತಯಾರಾಗಿದ್ದುದು ನಾಟಕದ ಹಿಂದಿನ ದಿವಸವೆ. ಆದ್ದರಿಂದ ಯಾವ ಹುಡುಗರಿಗೂ ಆನೆ ಎಷ್ಟು ಭಾರವಿರಬಹುದು, ಅದರ ನಿರ್ವಹಣೆಯ ಬಗ್ಗೆ ಯಾವುದೇ ಕಲ್ಪನೆಯು ಇರಲಿಲ್ಲ ಪಾಪ.”ನೋಡ್ರಪ್ಪ, ನಿಮ್ಮ ಆನೆಯ ದೃಶ್ಯ ಬಂದಾಗ, 4 ಜನ ಈ ಆನೆಯನ್ನು ತರಬೇಕು, ಮಾವುತನಾದ ಹೇಮಂತ ನಿಮಗೆ ಸೂಚನೆಗಳನ್ನ ಕೊಡ್ತಾ ಇರ್ತಾನೆ, ರಾಜೇಶ ಆನೆಯ ಶಬ್ದಾನ ಸ್ಪೀಕರ್ನಲ್ಲಿ ಹಾಕ್ತಾನೆ, ಆಗ ಆನೆಯ ಮುಂಭಾಗವನ್ನು ಪ್ರೇಕ್ಷರಿಗೆ ತೋರಿಸಿ ಸೊಂಡಿಲನ್ನ ಆಡಿಸಿಬಿಡಿ.. ಸರಿತಾನೆ, “ಲೇ ದುರ್ಗಾ ಬಾ ಇಲ್ಲಿ, ಇವರಿಗೆ ಹೇಗೆ ಬರಬೇಕು, ಆನೆ ಫ್ರೇಮ್ ನ ಹಿಡಿಕೆ ಎಲ್ಲಿದೆ, ಸ್ವಲ್ಪ ತೋರಿಸಿಕೊಡು” ಅಂತ ಹೇಳಿ ನಿರ್ದೇಶಕು ಹೊರಟೇಬಿಟ್ಟರು.
ಅಲ್ಲಿ ಎಲ್ಲೋ ಮೊಳೆ ಹೊಡಿಯುತ್ತಿದ್ದವನು ಬಂದು ಆ ಹುಡುಗರಿಗೆ ಆನೆಯ frame ಅನ್ನು ತೋರಿಸಿದೆ, “ನೋಡ್ರಪ್ಪ ಇದೆ ಆನೆ, ಸರಿಯಾಗಿ ನೋಡಿಕೊಳ್ಳಿ, ಒಮ್ಮೆ ತಾಲೀಮು ಮಾಡಿಕೊಳ್ಳಿ ” ಎಂದು ಹುಡುಗರಿಗೆ ಹೇಳಲು. “ಅಯ್ಯೋ ಹೋಗಿ ಅಣ್ಣ ನಾವೆಲ್ಲ ನೋಡ್ಕೋತಿವಿ, ನೋಡಿ ಆನೆ stage ಮೇಲೆ ಧೂಳ್ ಎಬ್ಬಿಸಿ ಬಿಡತ್ತೆ” ಅಂತ ಆ ಹುಡುಗರು ನನ್ನನ್ನು ಅಲ್ಲಿಂದ ಕಳಿಸಿಬಿಟ್ಟರು.ನಾಟಕ ಶುರುವಾಯಿತು, ಎಲ್ಲವೂ ಹೂ ಎತ್ತಿದ ಹಾಗೆ ಸುಸೂತ್ರವಾಗಿಯೇ ನಡೀತಾ ಇತ್ತು,ಪ್ರೇಕ್ಷಕರು ಪ್ರತಿ ಮಟ್ಟಿಗೂ/ಹಾಡಿಗೂ) , ಪ್ರತಿ ಸಂಭಾಷಣೆಗೂ ಶಿಳ್ಳೆ ಚಪ್ಪಾಳೆಗಳ ಸುರಿಮಳೆಗೈಯುತ್ತಿದರು. ಹಿರಣ್ಯ ಕಶ್ಯಪನ ಪಾತ್ರವನ್ನು ನಮ್ಮ ನಿರ್ದೇಶಕರೇ ನಿರ್ವಹಿಸುತ್ತಿದ್ದರು, ಕಡೆಗೂ, ಪ್ರಹ್ಲಾದನನ್ನು ಆನೆಯ ಕಾಲಿಗೆ ಒಡ್ಡುವ ಸನ್ನಿವೇಶ ಬಂದೇಬಿಟ್ಟಿತು.ಅಲ್ಲಿ 10 ಜನ ರಾಕ್ಷಸರ ವೇಷ ಧರಿಸಿದ್ದ ಹುಡುಗರಲ್ಲಿ, 5 ಜನ ಓಡಿ ಬಂದರು, “ದುರ್ಗಣ್ಣ ದುರ್ಗಣ್ಣ ಬನ್ನಿ ಬನ್ನಿ ಆನೆ ದೃಶ್ಯ ಬಂತು ” ಅಂತ ಗಡಿಬಿಡಿ ಮಾಡಲು ಶುರು ಮಾಡಿ, ಒಬ್ಬರ ಹಿಂದೆ ಒಬ್ಬರು ಆನೆಯ ಫ್ರೇಮ್ ಒಳಗೆ ಸೇರಿದರು.
ಮಾವುತನೆಂದು ನೇಮಿಸಿದ್ದ ಹೇಮಂತ ಮುಂದೆ ನಿಂತು “ಧಿಕ್ ಧಿಕ್ ” ಎಂದು ಶಬ್ದ ಮಾಡುತ್ತಾ ಆನೆಯ ಸೊಂಡಿಲನ್ನ ಹಿಡಿದು ಎಳೆಯಲು ಆರಂಭಿಸಿದ, ರಂಗದ ಮೇಲೆ ಗರ್ಜಿಸಿದ ಹಿರಣ್ಯ ಕಶ್ಯಪ ನೇಪಥ್ಯಕ್ಕೆ ಸರಿದು ಸ್ವಲ್ಪ ಸಮಯ ಸಂದಿತ್ತು, ” ತಡಿ ನಿನ್ನನ್ನು ಆನೆಯ ಕಾಲಿನ ಅಡಿಗೆ ತಳ್ಳುವೆವು ” ಎಂದು ಹೇಳಿದ್ದ ವಾಕ್ಯವನ್ನೇ 10 ಬಾರಿ ಹೇಳಿದರು, ಆನೆಯ ಸುಳಿವೇ ಇಲ್ಲ. ಅಲ್ಲಿ ಮಾವುತನಾದ ಹೇಮಂತ “ದಿಕ್ ದಿಕ್” ಎಂದು ಆನೆಯನ್ನು ರಂಗದ ಹಿಂಬದಿ ಇಂದ ರಂಗದ ಮೇಲೆ ತರಲು ಹರಸಾಹಸ ಪಡುತ್ತಿದ್ದ. ಆನೆಯ ಗಾತ್ರ ಆನೆಯಷ್ಟೇ ದೊಡ್ಡದಾಗಿತ್ತು, ಮೊದಲೇ ಹೇಳಿದ ಹಾಗೆ ಆನೆ ತಯಾರಾಗಿದ್ದೇ ಪ್ರದರ್ಶನದ ಹಿಂದಿನ ದಿನ, ಹುಡುಗರಿಗೂ ಅದರ ಗಾತ್ರದ ಸುಳಿವು ಇರಲಿಲ್ಲ, ಪ್ರದರ್ಶನದ ಮೊದಲು, ಹುಡುಗರು ನೋಡಿಕೊಂಡಿರಲಿಲ್ಲ, ರಂಗದ ಪಕ್ಕ ಇರುವ ಬಾಗಿಲ ಅಳತೆಯನ್ನು ಅಂದಾಜಿಸಿರಲಿಲ್ಲ.

ಆನೆಯನ್ನು ಸೊಟ್ಟ ಮಾಡಿ, ಆಕಡೆ, ಈಕಡೆ ಎಳೆದು, ಹಾಗೂ ಹೀಗೂ ಮಾಡಿ, ಆನೆಯನ್ನು ರಂಗದ ಮೇಲೆ ತರುವಲ್ಲಿ ಯಶಸ್ವಿಯಾದೆವು, ಇಷ್ಟು ಹೊತ್ತು ನಾಟಕದ ಸವಿಯನ್ನ ಆಸ್ವಾದಿಸಿದ, ಪ್ರಕ್ಷಕ ವರ್ಗ ಇದ್ದಕ್ಕಿದ್ದ ಹಾಗೆ “ಗೊಳ್”ಎಂದು ನಗಲು ಶುರು ಮಾಡಿದರು. ಇದೇನಪ್ಪಾ ಆಯಿತು ಅಂತ ರಂಗದ ಪಕ್ಕ ಹೋಗಿ ನೋಡಿದರೆ ನಮ್ಮ ಆನೆಗೆ ಎಂಟು ಕಾಲುಗಳು, ಕಾಣಿಸುತ್ತಿದ್ದವು.ನಮ್ಮ ಹುಡುಗರು, ಗಡಿಬಿಡಿಯಲ್ಲಿ , ನಿರ್ದೇಶಕರು ಹೇಳಿದ ಹಾಗೆ ನಿಲ್ಲದೆ, ನಮ್ಮ ಕಾಲುಗಳನ್ನು ತೋರಿಸುತ್ತ ನಿಂತುಕೊಂಡಿದ್ದರು, ಹಿಂದಿನ ಸನ್ನಿವೇಶದಲ್ಲಿ ರಾಕ್ಷಸರಾದ ಇವರೇ ಆನೆಯ ಫ್ರೇಮಿನ ಒಳಗೆ ನುಗ್ಗಿದರು , ರಂಗದ ಮೇಲೆ ಧೂಳನ್ನು ಎಬ್ಬಿಸುವ ಹುಮ್ಮಸ್ಸಿನಲ್ಲಿ ತಾವು ಏನು ಮಾಡುತ್ತಿದ್ದಾರೆ ಎನ್ನುವ ಪರಿವೆ ಇಲ್ಲದೆ ತಮ್ಮ ಕಾಲುಗಳನ್ನು ಪ್ರೇಕ್ಷಕರಿಗೆ ತೋರಿಸಿಕೊಂಡು ನಿಂತ್ತಿದ್ದರು, ಅಷ್ಟೇ ಅಲ್ಲದೆ, ತಮ್ಮ ರಾಕ್ಷಸರ ವಸ್ತ್ರಗಳು ಕಾಣುವ ಹಾಗೆ ನಿಂತಿದ್ದರು. ರಂಗದ ಮತ್ತೊಂದು ಕಡೆ, ಹಿರಣ್ಯ ಕಶಿಪು ಪಾತ್ರದಲ್ಲಿ ಇದ್ದ ನಮ್ಮ ನಿರ್ದೇಶಕರು ಉಗ್ರ ನರಸಿಂಹನ ಅವತಾರ ತಾಳಿದ್ದರು.

ರಂಗದ ಮೇಲೆ ಬೆಳಕು ಚೆಲ್ಲುತ್ತಿದ್ದ , ಮಂಜು ಸರ್, ಎಲ್ಲ ಬೆಳಕನ್ನು ಒಮ್ಮೆಲೇ ನಂದಿಸಿದರು. ನಮ್ಮ ಎಲ್ಲ ಹುಡುಗರು, ರಂಗದ ಮೇಲೆ ಓದಿ ಹೋಗಿ ಆನೆಯನ್ನು ಪಕ್ಕಕ್ಕೆ ತಂದು ಇಟ್ಟೆವು.ಜನರ ಕೇಕೆ ಮುಗಿಲು ಮುಟ್ಟಿತ್ತು. ನಮ್ಮ ನಿರ್ದೇಶಕರು, ಬಂದು ನಮ್ಮನ್ನು ನರಸಿಂಹನ ಹಾಗೆ ಬಗೆಯುವುದರಲ್ಲಿ ಇದ್ದರು, ಆದ್ರೆ ನಾಟಕ ಮುಂದುವರೆಯಬೇಕಲ್ಲ, ಅವರು ನಾಟಕದ ಉಳಿದ ಭಾಗವನ್ನು ಮುಂದುವರೆಸಲು ಹೊರಟರು, ನಾನು ಮತ್ತು ಆನೆಗೆ ಎಂಟು ಕಾಲುಗಳನ್ನು ದಯಪಾಲಿಸಿದ ಹುಡುಗರು ಅಲ್ಲಿಂದ ದಿಕ್ಕಾಪಾಲಾಗಿ ಓಟಹೊಡೆದೆವು.

4 thoughts on “ಆನೆ ಬಂತು ಆನೆ”

 1. Chandan says:

  ಬಹಳ ಚೆನ್ನಾಗಿತ್ತು👌.

  1. ದುರ್ಗ ದಾಸ್ says:

   ಧನ್ಯವಾದಗಳು 🙂

 2. M.S.Vidya says:

  ರಸವತ್ತಾಗಿದೆ,ದುರ್ಗಣ್ಣ

  1. Durga says:

   ಧನ್ಯವಾದಗಳು mam 🙂

Leave a Reply

Your email address will not be published. Required fields are marked *

Related Post

“ಬೆಂಕಿ-ಪ್ರತಾಪಿ”“ಬೆಂಕಿ-ಪ್ರತಾಪಿ”

ಹಳೆಯ ಘಟನೆ.ನಮಗೆ ಈ ನಾಟಕ, ನಾಟಕ ಸ್ಪರ್ಧೆ ಎಲ್ಲವೂ ಹೊಸತು. ನಮ್ಮ ಪ್ರಾಧ್ಯಾಪಕರು ನಮಗೆ ಆಸಕ್ತಿ ಇದ್ದಲ್ಲಿ, ದಯಮಾಡಿ ನಾಟಕದ ತಾಲಿಮಿನ ಕೊಠಡಿಗೆ ಬನ್ನಿ ಎಂದು ಕಾಲೇಜಿನಲ್ಲಿ ಪ್ರಕಟಣೆ ಹೊರಡಿಸಿದ್ದರು. ನಾವು ಕೂಡ ಕುತೂಹಲದಿಂದ ಹೋದೆವು, ನಮ್ಮೊಂದಿಗೆ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಸೇರಿದ್ದರು. ಕಿರಿಯರಲ್ಲಿ ಕುತೂಹಲ, ಹಿರಿಯ

ಎಲ್ಲದರ ಜವಾಬ್ದಾರಿ ನಿಮ್ಮದೇ….!ಎಲ್ಲದರ ಜವಾಬ್ದಾರಿ ನಿಮ್ಮದೇ….!

ಬಹಳ ದಿನಗಳ ನಂತರ, ಪರಸ್ಥಳದಲ್ಲಿ ಒಂದು ನಾಟಕ ಪ್ರದರ್ಶಿಸುವ ಯೋಗ ಕೂಡಿ ಬಂದಿತ್ತು, ಈ ಸರ್ತಿ ಗುಲ್ಬರ್ಗ ಕಡೆ ನಮ್ಮ ಪಯಣ ನಡೆಸಬೇಕಿತ್ತು.ಎಂದಿನಂತೆ ಬಸ್ನಲ್ಲಿ ಪ್ರಯಾಣ ಮಾಡುವುದು ಬೇಡ, ರೈಲಿನಲ್ಲಿ ಪ್ರಯಾಣ ಬೆಳೆಸೋಣ, ರೈಲಿನಲ್ಲಾದರೆ, ಹಾಡು, ಹರಟೆ, ತಮಾಷೆ, ತರಲೆ ಮಾಡಿಕೊಂಡು, ಸುಖವಾಗಿ ಪ್ರಯಾಣ ಮಾಡಬಹುದು ಎಂದು ಪರಿಗಣಿಸಿ

ಬೀಡಿ ನಾಣಿಬೀಡಿ ನಾಣಿ

ಒಂದು ದೊಡ್ಡ ವೃತ್ತಾಕಾರವನ್ನು ಮಾಡಿ, ಒಬ್ಬರ ಕೈಯನ್ನು ಇನ್ನೊಬ್ಬರು ಹಿಡಿದುಕೊಂಡು ” ಆಂಗಿಕಂ ಭುವನಂ ಯಸ್ಯ ವಾಚಿಕಂ ಸರ್ವವಾಙ್ಮಯಮ್I ಆಹಾರ್ಯಂ ಚಂದ್ರತಾರಾದಿ ತಂ ನುಮಃ ಸಾತ್ವಿಕಂ ಶಿವಮ್” ಶ್ಲೋಕವನ್ನು ಎಲ್ಲರು ಘಂಟಾಘೋಷವಾಗಿ ಹೇಳಿದೆವು, ಆಚೆ ಕುಳಿತ ಪ್ರೇಕ್ಷಕರಿಗೂ ಕೇಳುವ ಹಾಗೆ.. ಶ್ಲೋಕದ ಕಡೆಯಲ್ಲಿ ಮೂರು ಬಾರಿ ಓಂ ಓಂ ಓಂ ಎಂದು